ಟ್ರಾಫಿಕ್ ರೂಲ್ಸ್ ಗಳ ಬಗ್ಗೆ ಶಾಲೆಗಳಿಗೆ ಹೋಗಿ ಪಾಠ ಮಾಡುವ ಅಧಿಕಾರಿ!
ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೇ ಎನ್ನುವ ಗಾದೆ ಮಾತಿದೆ. ಅದನ್ನು ಮಂಗಳೂರಿನ ಉತ್ತರ ಸಂಚಾರಿ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಮಂಜನಾಥ್ ಅವರು ಅತ್ಯುತ್ತಮವಾಗಿ ಪಾಲಿಸಿಕೊಂಡು ಬರುತ್ತಿದ್ದಾರೆ. ಸಾಮಾನ್ಯವಾಗಿ ಪೊಲೀಸರು ಎಂದರೆ ಹೆದರುವವರೇ ಜಾಸ್ತಿ. ಪೊಲೀಸರನ್ನು ಕಂಡರೆ ಮಕ್ಕಳಿಗಂತೂ ಒಂದು ಹಿಡಿ ಹೆಚ್ಚೇ ಭಯ ಇರುತ್ತದೆ. ಯಾಕೆಂದರೆ ಸಿನೆಮಾಗಳಲ್ಲಿ ಪೊಲೀಸರನ್ನು ಅನೇಕ ಬಾರಿ ರಫ್ ಎಂಡ್ ಟಫ್ ರೂಪದಲ್ಲಿಯೇ ತೋರಿಸಿರುತ್ತಾರೆ. ಆದ್ದರಿಂದ ಪೊಲೀಸರು ಎಂದರೆ ಹೀಗೆ ಎಂದು ಸಣ್ಣ ವಯಸ್ಸಿನ ಮಕ್ಕಳಲ್ಲಿ ಒಂದು ಪೂರ್ವಾಗ್ರಹವನ್ನು ಸಿನೆಮಾದವರು ಮೂಡಿಸಿರುತ್ತಾರೆ. ಆದರೆ ಇನ್ಸಪೆಕ್ಟರ್ ಮಂಜುನಾಥ್ ಅವರನ್ನು ಕಂಡರೆ ಮಾತ್ರ ಮಕ್ಕಳು ಅವರಿಂದ ಹಸ್ತಲಾಘವ ತೆಗೆದುಕೊಳ್ಳಲು ಮುಗಿಬೀಳುತ್ತಾರೆ. ಅದು ಈ ಪೊಲೀಸ್ ಅಧಿಕಾರಿ ಮಕ್ಕಳಲ್ಲಿ ಹುಟ್ಟಿಸಿರುವ ಕ್ರೇಜ್. ಅಷ್ಟಕ್ಕೂ ಮಂಜುನಾಥ್ ಅವರ ಬಗ್ಗೆ ಶಾಲೆ, ಕಾಲೇಜುಗಳ ಮಕ್ಕಳಲ್ಲಿ ವಿಶೇಷ ಅಕ್ಕರೆ ಯಾಕೆ?
ದೇಶದ ಅರ್ಧ ಟ್ರಾಫಿಕ್ ಸಮಸ್ಯೆಗಳಿಗೆ ಮೂಲ ಕಾರಣ ನಮಗೆ ರಸ್ತೆಯಲ್ಲಿ ವಾಹನಗಳನ್ನು ಚಲಾಯಿಸುವಾಗ ಸಭ್ಯತೆ ಎನ್ನುವುದು ಇಲ್ಲದಿರುವುದು. 18 ವರ್ಷ ಆಗಲು ಕಾಯುವ ಯುವಕ, ಯುವತಿಯರು ಮೊದಲು ರೊಯ್ಯನೆ ಕಾರು, ಬೈಕ್ ಗಳಲ್ಲಿ ಓಡಾಡಲು ಕನಸು ಕಾಣುತ್ತಿರುತ್ತಾರೆ ವಿನ: ತಾವು ಚಲಾಯಿಸುವ ವಾಹನ ರಸ್ತೆಯ ಎಲ್ಲಾ ನಿಯಮಗಳನ್ನು ಸರಿಯಾಗಿ ಪಾಲಿಸುತ್ತಿವೆಯಾ ಎಂದು ನೋಡಲು ಹೋಗುವುದಿಲ್ಲ. ಅದಕ್ಕೆ ಸರಿಯಾಗಿ ನಮ್ಮ ಡ್ರೈವಿಂಗ್ ಸ್ಕೂಲ್ ನವರು ಕೂಡ ತಮ್ಮ ಕ್ಲಾಸಿನಲ್ಲಿ ಡ್ರೈವಿಂಗ್ ಕಲಿಯುವವರಿಗೆ ಕಾಟಾಚಾರಕ್ಕೆ ರೂಲ್ಸ್ ಹೇಳಿ ಕೊಟ್ಟ ಹಾಗೆ ಮಾಡುತ್ತಾರೆ. ಇದರಿಂದ ಇಲ್ಲಿಯ ತನಕ ಯಾವುದೇ ರಸ್ತೆ ಸುರಕ್ಷತೆಯ ಬಗ್ಗೆ ಇದರಿಂದ ಪ್ರಯೋಜನವಾಗಿಲ್ಲ. ಇದನ್ನೆಲ್ಲ ನೋಡಿ ಮಂಜುನಾಥ್ ಅವರು ಏನು ಮಾಡಿದರು ಎಂದರೆ ಮೂಲದಲ್ಲಿಯೇ ಈ ಸಮಸ್ಯೆಯನ್ನು ಪರಿಹರಿಸಬೇಕು ಎಂದು ನಿಶ್ಚಯಿಸಿದರು. ಅದಕ್ಕೆ ಸರಿಯಾಗಿ ಇವರಿಗೆ ಸುರತ್ಕಲ್ ರೋಟರಿ ಸಂಸ್ಥೆ ಮತ್ತು ಮೆಸ್ಬಾ ಶಿಕ್ಷಣ ಸಂಸ್ಥೆ ಜೊತೆಯಾಯಿತು. ಇಲ್ಲಿಯ ತನಕ ಇನ್ಸಪೆಕ್ಟರ್ ಮಂಜುನಾಥ್ ಅವರು ಸುಮಾರು ನೂರಕ್ಕು ಹೆಚ್ಚು ಶಾಲೆ, ಕಾಲೇಜುಗಳಿಗೆ ಭೇಟಿ ಕೊಟ್ಟು ಮಕ್ಕಳಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.
ಇದೇ ವರ್ಷದ ಜನವರಿಯಲ್ಲಿ “ರಸ್ತೆ ಸುರಕ್ಷತಾ ಸಪ್ತಾಹ” ದ ಮೂಲಕ ಆರಂಭವಾದ ಇವರ ಅಭಿಯಾನ ಅಲ್ಲಿಗೆ ನಿಲ್ಲಲಿಲ್ಲ. ಆಯಾಯ ಶಾಲೆಗಳ ಮುಖ್ಯೋಪಾಧ್ಯಾಯರನ್ನು ವಿನಂತಿಸಿ ಒಂದೆರಡು ಗಂಟೆಯನ್ನು ತೆಗೆದುಕೊಂಡು ಮಕ್ಕಳಿಗೆ ಡ್ರೈವಿಂಗ್ ಲೆಸನ್ಸ್ ನಿಂದ ಹಿಡಿದು ಜೀಬ್ರಾ ಕ್ರಾಸ್ ತನಕ ಪ್ರತಿಯೊಂದು ವಿಷಯದ ಬಗ್ಗೆ ಮಾಹಿತಿ ಕೊಟ್ಟು ನಂತರ ಅದೇ ಮಕ್ಕಳಿಗೆ ಈ ವಿಷಯಗಳು ಮನಸ್ಸಿನ ಆಳದಲ್ಲಿ ಇಳಿಯಬೇಕೆಂದು ಅವರಲ್ಲಿಯೇ ಡ್ರಾಯಿಂಗ್ ಮತ್ತು ರಸಪ್ರಶ್ನೆ ಸ್ಪರ್ಧೆ ಮಾಡಿಸಿ ಬಹುಮಾನ ಕೊಡುವ ಸಂಪ್ರದಾಯವನ್ನು ಮಂಜುನಾಥ್ ಅವರು ಪಾಲಿಸಿಕೊಂಡು ಬರುತ್ತಿದ್ದಾರೆ. ಐದನೆ ತರಗತಿಯಿಂದ ಡಿಗ್ರಿವರೆಗಿನ ವಿರ್ಧಾಥಿಗಳಲ್ಲಿಯೂ ಜಾಗೃತಿ ಮೂಡಿಸುವ ಇವರು ದೃಶ್ಯ (ಪಿಪಿಟಿ) ಗಳನ್ನು ಬಳಸಿ ಕೂಡ ಮನಮುಟ್ಟುವ ಹಾಗೆ ಹೇಳಬಲ್ಲರು. ಒಂದು ವಾಟ್ಸ್ ಅಪ್ ಗ್ರೂಪ್ ಮಾಡಿರುವ ಮಂಜುನಾಥ್ ಅವರು ಅದರಲ್ಲಿ ಅನೇಕ ಸಮಾನ ಮನಸ್ಕರನ್ನು ಸೇರಿಸಿ ಅವರ ಸಲಹೆಗಳನ್ನು ಪಡೆದುಕೊಂಡು ಈ ಕಾರ್ಯದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದ್ದಾರೆ. ಮಂಜುನಾಥ ಅವರಂತಹ ಪೊಲೀಸ್ ಅಧಿಕಾರಿಗಳು ನಮ್ಮ ಜಿಲ್ಲೆಗೆ ಹೆಮ್ಮೆ ತರುವಂತಹ ಕಾರ್ಯ ಮಾಡುತ್ತಿದ್ದಾರೆ ಎಂದರೆ ಅತಿಶಯೋಕ್ತಿಯೇನಲ್ಲ.
Leave A Reply