ಪೊಲೀಸರೇ ಶಹಬ್ಬಾಶ್, ರಸ್ತೆಯಲ್ಲಿ ಕಾರ್ ಇಟ್ಟು ಒಳಗೆ ಹೋಗುವವರನ್ನು ಬಿಡಬೇಡಿ!!
ಹಾಸಿಗೆ ಇದ್ದಷ್ಟೇ ಕಾಲು ಚಾಚು ಎನ್ನುವ ಗಾದೆ ಮಾತಿದೆ. ಅದನ್ನು ಇವತ್ತಿನ ದಿನಗಳಲ್ಲಿ ಹೇಳುವುದಾದರೆ ಪಾರ್ಕಿಂಗ್ ಜಾಗ ಇದ್ದಷ್ಟೇ ಕಾರು ಇರುವ ಗೆಸ್ಟ್ ಗಳನ್ನು ಕರಿ ಎಂದು ಹೇಳಬಹುದು. ಅದು ಏನು ಎನ್ನುವುದನ್ನು ಈಗ ವಿವರಿಸುತ್ತೇನೆ.
ಶನಿವಾರ ಟ್ರಾಫಿಕ್ಸ್ ಡಿಸಿಪಿ ಉಮಾ ಪ್ರಶಾಂತ್ ಅವರು ಮಂಗಳೂರಿನ ಟ್ರಾಫಿಕ್ ಸುಧಾರಣೆಯ ಬಗ್ಗೆ ಮಹತ್ತರ ಮೀಟಿಂಗ್ ಒಂದನ್ನು ಕರೆದಿದ್ದಾರೆ. ಅದರಲ್ಲಿ ಶುಭ ಮತ್ತು ಬೇರೆ ಸಮಾರಂಭ ನಡೆಯುವ ಸಭಾಂಗಣ ಮತ್ತು ಹಾಲ್ ಗಳ ವ್ಯವಸ್ಥಾಪಕರನ್ನು, ದೇವಸ್ಥಾನಗಳ ಪ್ರಮುಖರನ್ನು ಕರೆಸಿದ್ದರು. ವಿಷಯ ಇದ್ದದ್ದು ಏನೆಂದರೆ ಸಭಾಂಗಣ, ಹಾಲ್ ಗಳಲ್ಲಿ ಒಳಗೆ ಯಾವುದಾದರೂ ಮದುವೆ, ರಿಸೆಪ್ಷನ್ ನಡೆಯುತ್ತಿದ್ದರೆ ಅಲ್ಲಿ ಹೊರಗೆ ರಸ್ತೆಯ ಎರಡೂ ಇಕ್ಕೆಲಗಳಲ್ಲಿ ಸಾಲು ಸಾಲು ಕಾರುಗಳು ನಿಲ್ಲುತ್ತವೆ. ಈ ಮೂಲಕ ಆ ರಸ್ತೆಯಲ್ಲಿ ಬೇರೆ ದಿನಗಳಲ್ಲಿ ಒಂದು ವಾಹನ ಗಂಟೆಗೆ 40 ಕಿಲೋ ಮೀಟರ್ ವೇಗದಲ್ಲಿ ಹೋಗುತ್ತಿದ್ದರೆ ಆವತ್ತು ಐದು ಕಿಲೋ ಮೀಟರ್ ವೇಗದಲ್ಲಿ ತೆವಳಿಕೊಂಡು ಚಲಿಸುತ್ತವೆ. ಅದರ ನಡುವೆ ಆ ರಸ್ತೆಯಲ್ಲಿ ಅಲ್ಲಿಂದ ಇಲ್ಲಿಯವರೆಗೆ ಬ್ಲಾಕ್. ನೀವು ಈ ಸೀಸನ್ ಸಮಯದಲ್ಲಿ ಸಂಜೆ ಆರು ಗಂಟೆಯಿಂದ ರಾತ್ರಿ 10 ಗಂಟೆಯ ತನಕ ಟಿಎಂಎ ಪೈ ಹಾಲ್ ಎದುರಿನ ರಸ್ತೆಯಲ್ಲಿ ನೋಡಬೇಕು. ಬಳ್ಳಾಲ್ ಭಾಗ್ ವೃತ್ತದಿಂದ ಎಂಪೈರ್ ಮಾಲ್ ತನಕ ಹೋಗಲು ಇನ್ನೂರು ಮೀಟರ್ ಅಥವಾ ಸ್ವಲ್ಪ ಹೆಚ್ಚು ಕಡಿಮೆ ದೂರ ಇರುವ ರಸ್ತೆಯನ್ನು ಕ್ರಮಿಸಲು ಹತ್ತು ನಿಮಿಷ ಬೇಕು. ಉಳಿದ ದಿನಗಳಲ್ಲಿ ಅಷ್ಟೇ ದೂರಕ್ಕೆ ಮೂವತ್ತು ಸೆಕೆಂಡುಗಳು ಕೂಡ ಬೇಡಾ. ಇದು ಕೇವಲ ಎಂಜಿ ರಸ್ತೆಯ ಸಮಸ್ಯೆ ಅಲ್ಲ.
ಪಾರ್ಕಿಂಗ್ ಜಾಗದಲ್ಲಿ ಅಡುಗೆ ಕೋಣೆ..
ಸಭೆಯಲ್ಲಿದ್ದ ಸಭಾಂಗಣದ ಪ್ರಮುಖರು ತಮ್ಮ ಹಾಲ್ ಗಳಿಂದಾಗಿ ಏನೂ ತೊಂದರೆ ಇಲ್ಲ ಎನ್ನುವ ಅರ್ಥದಲ್ಲಿಯೇ ಮಾತನಾಡುತ್ತಿದ್ದರು. ಸಭೆಯಲ್ಲಿ ಭಾಗವಹಿಸಿದ್ದ ನಾನು ಈ ಸಮಸ್ಯೆಗೆ ಇರುವ ಕಾರಣ ಮತ್ತು ಒಂದಿಷ್ಟರ ಮಟ್ಟಿಗೆ ಪರಿಹಾರ ಸೂಚಿಸುವುದಕ್ಕಾಗಿ ಮಾತನಾಡಿದೆ. ಮೊದಲನೇಯದಾಗಿ ಅನೇಕ ಸಭಾಂಗಣಗಳು ಮತ್ತು ಹಾಲ್ ಗಳು ತಮ್ಮ ಪಾರ್ಕಿಂಗ್ ಜಾಗದಲ್ಲಿ ವಿಶಾಲವಾದ ಅಡುಗೆ ಕೋಣೆಯನ್ನೋ, ಎಕ್ಸಟ್ರಾ ಕೋಣೆಗಳನ್ನೋ, ಸಾಮಾನು ಸರಂಜಾಮು ಇಡುವ ಗೋಡೌನ್ ಗಳನ್ನೋ ನಿರ್ಮಿಸಿರುತ್ತಾರೆ. ಇದರಿಂದ ಏನಾಗುತ್ತದೆ ಎಂದರೆ ವಾಹನಗಳನ್ನು ಎಲ್ಲಿ ನಿಲ್ಲಿಸಬೇಕೋ ಅಲ್ಲಿ ನಿಲ್ಲಿಸಲು ಆಗುವುದಿಲ್ಲ ಎಂದೆ. ಇನ್ನು ಮಿಲಾಗ್ರಿಸ್ ಹಾಲ್ ನಲ್ಲಿ ಏನಾದರೂ ಸಮಾರಂಭ ಇದ್ದಾಗ ಅಲ್ಲಿ ಪಳ್ನೀರ್ ನಲ್ಲಿ ರಸ್ತೆ ಫುಲ್ ಬ್ಲಾಕ್. ಅದರ ಬದಲಿಗೆ ಮಿಲಾಗ್ರಿಸ್ ಹಾಲ್ ಇರುವುದು ಮಿಲಾಗ್ರಿಸ್ ಚರ್ಚ್ ಅಧೀನದಲ್ಲಿ. ಚರ್ಚ್ ನಲ್ಲಿ ಪ್ರಾರ್ಥನೆ ಇಲ್ಲದ ಸಮಯದಲ್ಲಿ ಅಲ್ಲಿ ಚರ್ಚ್ ಹೊರಗೆ ಸಾಕಷ್ಟು ವಾಹನಗಳನ್ನು ನಿಲ್ಲಿಸಲು ಸ್ಥಳಾವಕಾಶ ಇದೆ. ಅಲ್ಲಿ ನಿಲ್ಲಿಸಬಹುದು. ಅದು ಬಿಟ್ಟು ಮುಖ್ಯ ರಸ್ತೆಯ ಎರಡೂ ಬದಿ ನಿಲ್ಲಿಸಿದರೆ ಅದರಿಂದ ಬೇರೆ ವಾಹನಗಳಿಗೆ ಸಂಚರಿಸಲು ಅಡಚಣೆ. ಅಷ್ಟೇ ಅಲ್ಲ, ಪಾದಚಾರಿಗಳು ಎಲ್ಲಿ ನಡೆಯುವುದು. ಇದನ್ನು ಯಾರು ಗಮನಿಸಿದ್ದಾರೆ.
ಪ್ರತಿಭಟನೆ ಮಾಡುವುದು ಎಷ್ಟು ಸರಿ…
ಹಿಂದೆ ನೋ ಪಾರ್ಕಿಂಗ್ ಜಾಗದಲ್ಲಿ ವಾಹನಗಳು ನಿಂತಿದ್ದರೆ ಪೊಲೀಸರು ಬಂದು ಲಾಕ್ ಹಾಕಿ ಹೋಗುತ್ತಿದ್ದರು. ನಂತರ ಹೊಸ ಪದ್ಧತಿ ಬಂತು. ಅದೇನೆಂದರೆ ನೋ ಪಾರ್ಕಿಂಗ್ ನಲ್ಲಿ ನಿಲ್ಲಿಸಿದ ಗಾಡಿಯ ಫೋಟೋ ತೆಗೆದು ನೋಟಿಸ್ ಕೊಡುವುದು. ಆದರೆ ಮೊನ್ನೆ ಪೊಲೀಸರು ಒಳ್ಳೆಯ ಕೆಲಸ ಮಾಡಿದ್ದಾರೆ. ಪಳ್ನೀರ್ ರಸ್ತೆಯಲ್ಲಿ ನೋ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿದ ಹದಿನೆಂಟು ವಾಹನಗಳಿಗೆ ಲಾಕ್ ಮಾಡಿದ್ದಾರೆ. ವಾಹನವನ್ನು ನೋ ಪಾರ್ಕಿಂಗ್ ನಲ್ಲಿಟ್ಟು ಹೋದ ಮಾಲೀಕರು, ಚಾಲಕರು ನಂತರ ಬಂದು ಪ್ರತಿಭಟನೆ ಮಾಡಿದ್ದಾರೆ. ನಾನು ಹೇಳುವುದು “ಪ್ರತಿಭಟನೆ ಮಾಡುವುದೇ ತಪ್ಪು” ರಸ್ತೆಯ ಬದಿ ಇರುವುದು ಕಾರುಗಳನ್ನು ನಿಲ್ಲಿಸಿ ಎಲ್ಲಿಯೋ ಹೋಗುವುದಕ್ಕಲ್ಲ. ಒಬ್ಬ ವ್ಯಕ್ತಿ ಒಂದು ಮದುವೆ ಹಾಲ್ ಹೊರಗೆ ವಾಹನ ಇಟ್ಟು ಒಳಗೆ ಹೋಗಿ ಹೊರಗೆ ಬರಲು ಕನಿಷ್ಟ ಒಂದು ಗಂಟೆ ಬೇಕು. ಹಾಗಿರುವಾಗ ಇಷ್ಟು ಹೊತ್ತು ಅಲ್ಲಿ ಆಗುವ ಟ್ರಾಫಿಕ್ ಜಾಮ್ ಗೆ ಹೊಣೆಗಾರ ಯಾರು? ಪೊಲೀಸರು ಕಾನೂನು ಪ್ರಕಾರ ಕ್ರಮ ತೆಗೆದುಕೊಂಡರೆ ವಿರೋಧಿಸುವುದು ಎಷ್ಟು ಸರಿ?
ನಾನು ಅಂತಿಮವಾಗಿ ಹೇಳುವುದೇನೆಂದರೆ ಪೊಲೀಸ್ ಅಧಿಕಾರಿಗಳೇ ಯಾರೋ ನಾಲ್ಕು ಜನ ತಪ್ಪು ಮಾಡಿ ನಿಮ್ಮ ವಿರುದ್ಧ ಹಾರಾಡಿದರೆ ನೀವು ಅಂಜುವ ಅಗತ್ಯ ಇಲ್ಲ. ನೀವು ನಿಮ್ಮ ಕೆಲಸ ಧೈರ್ಯದಿಂದ ಮಾಡಿ. ನಿಮ್ಮೊಂದಿಗೆ ಪ್ರಜ್ಞಾವಂತ ನಾಗರಿಕರು ಇದ್ದಾರೆ. ಪೊಲೀಸರು ಕೇವಲ ಪಾಪದ ರಿಕ್ಷಾ ಚಾಲಕರ ಮೇಲೆ ಮಾತ್ರ ಕೇಸ್ ದಾಖಲಿಸುತ್ತಾರೆ ಎಂದು ಜನ ಹಿಂದೆ ಹೇಳುತ್ತಿದ್ದರು. ಈಗ ಅದೇ ಪೊಲೀಸರು ದೊಡ್ಡ ದೊಡ್ಡ ಕಾರಿನವರ ಮೇಲೆಯೂ ತಪ್ಪು ಮಾಡಿದರೆ ಕ್ರಮ ತೆಗೆದುಕೊಳ್ಳುತ್ತಾರೆ ಎಂದರೆ ಶಹಬ್ಬಾಶ್ ಎನ್ನದೇ ಬೇರೆನೂ ಹೇಳಲಿ!
Leave A Reply