ಕುಮಾರಸ್ವಾಮಿ ಈಸ್ ಮೈ ಸಿಎಂ ಬಟ್ ಕಂಡಿಷನ್ ಅಪ್ಲೈ!
ಪ್ರಾರಂಭದಲ್ಲಿಯೇ ಹೇಳುತ್ತಿದ್ದೇನೆ. ರೈತರ ಸಾಲಮನ್ನಾಕ್ಕೆ ನನ್ನ ಆಕ್ಷೇಪ ಇಲ್ಲ. ನಾನು ಅಂತ ಅಲ್ಲ ಯಾರೂ ಕೂಡ ರೈತರ ಸಾಲಮನ್ನಾವನ್ನು ಆಕ್ಷೇಪ ಮಾಡಲು ಸಾಧ್ಯವಿಲ್ಲ. ಆದರೆ ಅದನ್ನು ನಮ್ಮ ರಾಜಕೀಯ ಪಕ್ಷಗಳು ತಮ್ಮ ವೋಟ್ ಬ್ಯಾಂಕಿಗಾಗಿ ಬಳಸಿಕೊಂಡದ್ದ ರೀತಿಯ ಬಗ್ಗೆ ನನ್ನ ವಿರೋಧ ಇದೆ. ಯಾವ ಸ್ವಾಭಿಮಾನಿ ವ್ಯಕ್ತಿ ಕೂಡ ಆತ ರೈತ ಆಗಿರಲಿ, ಮೀನುಗಾರ ಆಗಲಿ, ನೇಕಾರ ಆಗಲಿ, ರಿಕ್ಷಾ ಚಾಲಕನಾಗಿರಲಿ, ಕೂಲಿಯವನಾಗಿರಲಿ ಅಥವಾ ಒಬ್ಬ ನಿರುದ್ಯೋಗಿಯಾಗಿರಲಿ ತಾನು ತೆಗೆದುಕೊಂಡ ಸಾಲವನ್ನು ವಾಪಾಸು ಕೊಡುವುದಿಲ್ಲವೆಂದು ಮನತುಂಬಿ ಹೇಳುವುದಿಲ್ಲ. ಅವನಿಗೆ ಹಾಗೆ ಹೇಳುವುದಕ್ಕೆ ಅವನ ಸ್ವಾಭಿಮಾನ ಬಿಡುವುದಿಲ್ಲ. ಆದರೆ ನಮ್ಮ ರಾಜಕೀಯ ಪಕ್ಷಗಳು ಹಾಗಲ್ಲ. ಅವರು ಒಬ್ಬ ರೈತನ ಸ್ವಾಭಿಮಾನವನ್ನು ಚುನಾವಣೆಗೆ ಆರು ತಿಂಗಳು ಇರುವಾಗ ಪ್ರತಿ ದಿನ ಎನ್ನುವಂತೆ ಕೆಣಕಿಬಿಟ್ಟವು. ನೀವು ಸಾಲ ಕಟ್ಟಬೇಡಿ, ನಾವು ಅಧಿಕಾರಕ್ಕೆ ಬಂದ ತಕ್ಷಣ ಅದನ್ನು ಮನ್ನಾ ಮಾಡಿಬಿಡ್ತೇವೆ ಎಂದವು. ಮೊದಲಿಗೆ ಯಾವ ರಾಜಕೀಯ ಪಕ್ಷದ ಮಹಾತ್ಮ ಹಾಗೆ ಹೇಳಿದನೋ ಗೊತ್ತಿಲ್ಲ, ಆದರೆ ಒಂದು ಪಕ್ಷ ಹೇಳಿದ ಬಳಿಕ ಬೇರೆಯವು ಸುಮ್ಮನೆ ಕುಳಿತುಕೊಳ್ಳಕ್ಕೆ ಆಗುತ್ತಾ? ಸ್ಪರ್ಧೆಗೆ ಬಿದ್ದವರಂತೆ ಒಬ್ಬರು ಒಂದು ವಾರದೊಳಗೆ ಮನ್ನಾ ಎಂದರೆ ಇನ್ನೊಬ್ಬರು 24 ಗಂಟೆಯೊಳಗೆ ಮನ್ನಾ ಎಂದರು. ಇನ್ನೆರಡು ಪಕ್ಷಗಳು ಕರ್ನಾಟಕದಲ್ಲಿದ್ದರೆ ಅಧಿಕಾರಕ್ಕೆ ಬಂದ ಒಂದು ಗಂಟೆಯೊಳಗೆ ಮನ್ನಾ ಮಾಡಿಬಿಡುತ್ತೇವೆ ಎನ್ನುತ್ತಿದ್ದವೋ ಏನೋ. ಯಾವಾಗ ನೀವು ಕಟ್ಟಬೇಡಿ ಎನ್ನುವ ಪ್ರೇರಣೆ ಮತ್ತು ಮನ್ನಾ ಮಾಡುತ್ತೇವೆ ಎನ್ನುವ ಆಮಿಷ ತೋರಿಸಿದರೆ ಯಾರಿಗೆ ತಾನೆ ಖುಷಿಯಾಗಲ್ಲ. ಒಟ್ಟಿನಲ್ಲಿ ಎಲ್ಲಾ ರಾಜಕೀಯ ಪಕ್ಷಗಳಿಗೂ ರೈತರ ಮತಗಳ ಮೇಲೆ ಇದ್ದ ಕಣ್ಣು ರಾಜ್ಯದ ಆರ್ಥಿಕ ಸ್ಥಿತಿಯ ಮೇಲೆ ಇದ್ದ ನಿರ್ಲಕ್ಷ್ಯತನ ಇಂತಹ ಭರವಸೆ ಕೊಡುವಂತಾಯಿತು.
ಸಾಲಮನ್ನಾ ಎಂದರೆ ವೋಟ್ ಬ್ಯಾಂಕ್ ತುಂಬಿಸುವುದು ಅಲ್ಲ…
ಹಾಗಾದರೆ ನಮ್ಮ ರಾಜ್ಯದಲ್ಲಿ ರೈತರು ನಷ್ಟ ಅನುಭವಿಸಿ ದಾಖಲೆಯ ಪ್ರಮಾಣದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದನ್ನು ನೋಡಿ ಹಾಗೆ ಸುಮ್ಮನೆ ಕುಳಿತುಕೊಳ್ಳಬೇಕಿತ್ತಾ ಎಂದು ಯಾರಾದರೂ ಕೇಳಬಹುದು. ವಿಷಯ ಇರುವುದು ಸಾಲಮನ್ನಾದ ಕಾನ್ಸೆಪ್ಟ್ನಲ್ಲಿ. ಹೀಗೆ ಸಾರಾಸಗಟಾಗಿ ಘೋಷಣೆ ಮಾಡಿ ರೈತರ ಮೊಣಕೈಗೆ ಬೆಣ್ಣೆ ಹಚ್ಚುವ ಬದಲು ಅದಕ್ಕೆ ಬೇರೆ ಸ್ವರೂಪ ಕೊಡಬಹುದಿತ್ತು. ಸಾಲಮನ್ನಾ ಆದ ನಂತರವೂ ರೈತರ ಆತ್ಮಹತ್ಯೆ ನಿಂತಿಲ್ಲ. ಹಾಗೆ ಪ್ರತಿಭಟನೆಗಳು ಕೂಡ ನಿಂತಿಲ್ಲ. ಅದೇ ರೀತಿಯಲ್ಲಿ ಸಮರ್ಪಕವಾಗಿ ಕಟ್ಟಿದ ರೈತನಿಗೂ ಹೇಳುವಷ್ಟು ರೀತಿಯಲ್ಲಿ ಶಹಬ್ಬಾಶ್ ಗಿರಿ ದೊರೆತಿಲ್ಲ. ಇದರ ಬದಲು ಏನು ಮಾಡಬಹುದಿತ್ತು ಎಂದರೆ ಯಾವ ರೈತನಿಗೆ ಲಾಸ್ ಆಯಿತು, ಯಾವ ಪ್ರಮಾಣದಲ್ಲಿ ನಷ್ಟವಾಯಿತು, ಆತ ಅದಕ್ಕಾಗಿ ಮಾಡಿದ ಶ್ರಮ ಎಷ್ಟು? ಅವನಿಗೆ ಆದ ನಷ್ಟವನ್ನು ಎಷ್ಟು ಪ್ರಮಾಣದಲ್ಲಿ ಅಥವಾ ಪೂರ್ಣವಾಗಿ ತುಂಬಿಸಿಕೊಡಬಹುದೇ? ಅವನಲ್ಲಿ ಸ್ಥೈರ್ಯ ತುಂಬುವುದು ಹೇಗೆ, ಇದನ್ನು ಸರಕಾರಗಳು ನೋಡಬೇಕು. ಒಬ್ಬ ರೈತ ತಾನು ಅನುಭವಿಸಿದ ನಷ್ಟಕ್ಕೆ ಆತ್ಮಹತ್ಯೆ ಮಾಡುವುದೊಂದೇ ದಾರಿ ಎಂದು ಯಾವಾಗ ಅಂದುಕೊಳ್ಳುತ್ತಾನೆ ಎಂದರೆ ಅವನಿಗೆ ಸಾಲ ಕಟ್ಟಲು ಮೇಲಿನಿಂದ ಮೇಲೆ ಒತ್ತಡ ಬಿದ್ದಾಗ. ಅದರ ಬದಲು ಅವನನ್ನು ಕರೆಯಿಸಿ ಆದ ನಷ್ಟವನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಾ, ನೀನು ಪ್ರಾಮಾಣಿಕತೆಯಿಂದ ದುಡಿದಿದ್ದಿಯಾ, ಆದರೆ ಪ್ರಕೃತಿ, ರೋಗದಿಂದ ಫಸಲು ಬರದೇ ಅಥವಾ ಯೋಗ್ಯ ಬೆಲೆ ಸಿಗದೇ ನೀನು ಅನುಭವಿಸಿದ ನಷ್ಟವನ್ನು ನಾವು ತುಂಬಿಕೊಳ್ಳುತ್ತೇವೆ ಎಂದು ಯಾರಾದರೂ ಪಕ್ಕದಲ್ಲಿ ಕುಳಿತು ಹೇಳಲಿ, ಯಾವ ರೈತ ತಾನೆ ಆತ್ಮಹತ್ಯೆ ಮಾಡುತ್ತಾನೆ. ಮರು ವಾರವೇ ಯಾರಾದರೂ ಸರಕಾರದಿಂದ ಬಂದು ಆ ಗ್ರಾಮದಲ್ಲಿ ಯಾರ್ಯಾರು ಎಷ್ಟು ಬೆಳೆ ನಾಶ ಅನುಭವಿಸಿದ್ದಾರೆ ಅಥವಾ ಯೋಗ್ಯ ಬೆಲೆ ಸಿಗದೇ ನಷ್ಟ ಅನುಭವಿಸಿಬಿಟ್ಟಿದ್ದಾರೆ ಎಂದು ನೋಡಿ ಅಲ್ಲಿಗಲ್ಲಿಗೆ ಸರಿ ಮಾಡಿಕೊಟ್ಟರೆ ಆಗ ಈ ವಿಷಯ ಅಲ್ಲಿಗೆ ಮುಗಿಯಲ್ವಾ?
ಮೀನುಗಾರರು ಕೇಳಿಲ್ಲ ಎಂದರೆ ಸಮಸ್ಯೆ ಇಲ್ಲ ಎಂದಲ್ಲ…
ಹಾಗೆ ನೋಡಿದರೆ ನಮ್ಮ ಕರಾವಳಿಯ ಮೀನುಗಾರರು ಅನುಭವಿಸುತ್ತಿರುವ ನೋವು ಸಣ್ಣದ್ದಲ್ಲ. ಕಳೆದ ಏಳೆಂಟು ವರ್ಷಗಳಿಂದ ಅವರು ಲಾಭದ ಮುಖ ನೋಡಿದ್ದೇ ಕಡಿಮೆ. ಆದರೆ ಇಲ್ಲಿಯ ತನಕ ಅವರು ಆತ್ಮಹತ್ಯೆ ಮಾಡಿ ಮಾಧ್ಯಮಗಳಲ್ಲಿ ಸುದ್ದಿ ಅಥವಾ ಚರ್ಚೆಗೆ ಬಂದಿಲ್ಲ ಎನ್ನುವ ಒಂದೇ ಕಾರಣಕ್ಕೆ ಅವರದ್ದು ಸಮಸ್ಯೆ ಚಿಕ್ಕದು ಎನ್ನುವಂತಿಲ್ಲ. ಆದರೆ ಅವರ ಕಣ್ಣೀರಿಗೆ ಕುಮಾರಸ್ವಾಮಿ ಈ ಬಾರಿ ಹೆಚ್ಚುವರಿ ಅನುದಾನ ನೀಡಲಿಲ್ಲ. ಅಷ್ಟೇ ಅಲ್ಲ ಫೆಬ್ರವರಿ ಬಜೆಟಿನಲ್ಲಿ ಇಟ್ಟ ಅನುದಾನವನ್ನೇ ಕಡಿತಗೊಳಿಸಿದ್ದಾರೆ. ಅದನ್ನು ವಿರೋಧಿಸಿ ಮೀನುಗಾರ ಮಹಿಳೆಯರು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ, ಅದೇ “ಕುಮಾರಸ್ವಾಮಿ ನಾಟ್ ಮೈ ಸಿಎಂ” ಈಗ ಉಳಿದಿರುವುದು ಒಂದೇ ಪ್ರಶ್ನೆ, ಕುಮಾರಸ್ವಾಮಿ ಇಡೀ ರಾಜ್ಯಕ್ಕೆ ಮುಖ್ಯಮಂತ್ರಿಯಾಗಿ ಮುಂದುವರೆಯಲು ತಯಾರಾಗುತ್ತಾರಾ ಅಥವಾ ಹೇಗೂ ಕರಾವಳಿಯಲ್ಲಿ ನಾವು ಬರುವುದಿಲ್ಲ, ಕಾಂಗ್ರೆಸ್ಸನ್ನು ಕೂಡ ಬರದ ಹಾಗೆ ಅಲ್ಲಿ ಮಾಡುತ್ತೇವೆ ಎಂದು ಹೊರಡುತ್ತಾರಾ? ಕುಮಾರಸ್ವಾಮಿ ಹೂಡಿರುವ ಈ ತಂತ್ರಕ್ಕೆ ಕರಾವಳಿಯ ಕಾಂಗ್ರೆಸ್ಸಿಗರು ಚಪ್ಪಾಳೆ ತಟ್ಟಬೇಕೋ, ತಲೆ ಗೋಡೆಗೆ ಬಡಿದು ಅಳಬೇಕೋ ಗೊತ್ತಾಗದೇ ಗೊಂದಲಕ್ಕೆ ಬಿದ್ದಿದ್ದಾರೆ. ಹೇಗೂ ತಿಂಗಳಾಂತ್ಯಕ್ಕೆ ಅಥವಾ ಮುಂದಿನ ತಿಂಗಳ ಆರಂಭದಲ್ಲಿ ಕರಾವಳಿಗೆ ಬರುತ್ತೇನೆ, ನಿಮ್ಮ ಸಮಸ್ಯೆ ಕೇಳುತ್ತೇನೆ ಎಂದು ಸಿಎಂ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ. ಬರದಿದ್ದರೆ ಅಥವಾ ಬಂದು ಏನೂ ಮಾಡದಿದ್ದರೆ ಆಗ ಅವರು ನಮ್ಮ ಮುಖ್ಯಮಂತ್ರಿ ಅಲ್ಲ ಎನ್ನುವ ಭಾವನೆ ದಟ್ಟವಾಗುತ್ತದೆ. ಅಲ್ಲಿಯ ತನಕ ಅವರಿಗೆ ಅವಕಾಶ ಕೊಡೋಣ!
Leave A Reply