ಬೀದಿದೀಪ ಸರಿಯಾಗಿ ನಿರ್ವಹಿಸದ ಗುತ್ತಿಗೆದಾರರ ಮೇಲೆ ಕ್ರಮ ಕೈಗೊಂಡ ಅಧಿಕಾರಿಗೆ ಏನಾಯಿತು?
ನಿಮ್ಮ ಮನೆಗೆ ಹೋಗುವ ರಸ್ತೆಯಲ್ಲಿ ಮೂರು ಅಥವಾ ನಾಲ್ಕು ಬೀದಿದೀಪಗಳು ಇವೆ ಎಂದು ಇಟ್ಟುಕೊಳ್ಳೋಣ. ಅದರಲ್ಲಿ ಒಂದು ಹಾಳಾಗಿರುತ್ತದೆ. ಅದರಿಂದ ನೀವು ರಾತ್ರಿ ಹೊತ್ತು ಆ ರಸ್ತೆಯಲ್ಲಿ ಹೋಗುವಾಗ ತುಂಬಾ ಕಿರಿಕಿರಿ ಅನುಭವಿಸುತ್ತೀರಿ. ಅದರ ಬಗ್ಗೆ ನಿಮ್ಮ ಏರಿಯಾದ ಕಾರ್ಪೋರೇಟರ್ ಅವರಿಗೆ ನೀವು ದೂರು ಕೊಡುತ್ತೀರಿ. ಅವರು ಪಾಲಿಕೆಯಲ್ಲಿ ಅದಕ್ಕೆಂದೇ ಇರುವ ದಾರಿದೀಪ ನಿರ್ವಹಣೆ ಮಾಡುವ ಜವಾಬ್ದಾರಿ ತೆಗೆದುಕೊಂಡಿರುವ ಗುತ್ತಿಗೆದಾರರಿಗೆ ಹೇಳುತ್ತೇನೆ ಎನ್ನುತ್ತಾರೆ. ಒಂದು ವಾರ ಕಳೆಯುತ್ತದೆ. ಆ ದಾರಿದೀಪ ರಿಪೇರಿಯಾಗುವುದಿಲ್ಲ. ನಂತರ ಯಾವತ್ತೋ ಒಂದು ದಿನ ಸರಿ ಮಾಡುವವರು ಬರುತ್ತಾರೆ. ಅವರು ಅಲ್ಲಿದ್ದ ಸೋಡಿಯಂ ಲೈಟ್ ತೆಗೆದು ಅದರ ಬದಲಿಗೆ ಅಲ್ಲೊಂದು ಟ್ಯೂಬ್ ಲೈಟ್ ಹಾಕುತ್ತಾರೆ. ಅದರಿಂದ ಅಲ್ಲಿ ಹಿಂದಿನಷ್ಟು ಬೆಳಕು ಕಾಣಿಸುವುದಿಲ್ಲ. ಆದ್ರೆ ಏನು ಮಾಡುವುದು, ಏನೂ ಇಲ್ಲದಕ್ಕಿಂತ ಸ್ವಲ್ಪ ಲೈಟಾದರೂ ಬೀಳುತ್ತಾ ಇದೆಯಲ್ಲ ಎನ್ನುವ ಅರ್ಧ ಸಮಾಧಾನದಿಂದ ನೀವು ಅದನ್ನು ಅಲ್ಲಿಗೆ ಬಿಡುತ್ತೀರಿ. ಆದರೆ ನಿಮಗೆ ಒಂದು ಜಾಗೃತಿ ಮೂಡಿಸುವ ಕೆಲಸ ಆಗಬೇಕು ಎನ್ನುವ ಕಾರಣದಿಂದ ಇವತ್ತಿನ ಸಂಚಿಕೆಯಲ್ಲಿ ಈ ದಾರಿದೀಪದ ವಿಷಯವನ್ನು ಬರೆಯುತ್ತಿದ್ದೇನೆ.
ದೀಪಕ್ಕೆ ದೀಪ ಅಲ್ಲ, ಅದೇ ದೀಪ ಬೇಕು…
ಮಂಗಳೂರು ಮಹಾನಗರ ಪಾಲಿಕೆಯಲ್ಲಿ ದಾರಿದೀಪ ನಿರ್ವಹಣೆಗೆಂದೇ ಗುತ್ತಿಗೆ ನೀಡಲಾಗಿದೆ. ಗುತ್ತಿಗೆ ನೀಡುವಾಗ ಒಪ್ಪಿಗೆ ಹೇಗಿದೆಯೆಂದರೆ ಪಾಲಿಕೆ ವ್ಯಾಪ್ತಿಯಲ್ಲಿರುವ ರಸ್ತೆಗಳ ಬೀದಿದೀಪಗಳು ಹೋದರೆ ಅದನ್ನು ನಾಲ್ವತ್ತೆಂಟು ಗಂಟೆಯೊಳಗೆ ಸರಿ ಮಾಡಬೇಕು. ಸರಿ ಮಾಡುವುದು ಎಂದರೆ ನಿಮ್ಮ ರಸ್ತೆಯಲ್ಲಿ ಸಿಎಫ್ ಎಲ್ ಬಲ್ಬ್ ಇರುವ ದಾರಿದೀಪ ಹೋಗಿದೆ ಎಂದು ಇಟ್ಟುಕೊಳ್ಳೋಣ. ಗುತ್ತಿಗೆದಾರರ ಸಿಬ್ಬಂದಿ ಬಂದು ಸಿಎಫ್ ಎಲ್ ಅಳವಡಿಸಿರುವ ಸಂಪೂರ್ಣ ಸೆಟ್ ತೆಗೆದು ಆ ಜಾಗದಲ್ಲಿ ಟ್ಯೂಬ್ ಲೈಟ್ ಹಾಕಿ ಆನ್ ಮಾಡಿ ಹೋದರೆ ಆಗುವುದಿಲ್ಲ. ದೀಪಕ್ಕೆ ದೀಪ ಕೊಟ್ಟಿದ್ದೇವೆ ಎಂದು ಹೇಳಿ ದುಬಾರಿಯ ಸೋಡಿಯಂ ಲೈಟ್ ಜಾಗದಲ್ಲಿ ಕಡಿಮೆ ಬೆಲೆಯ ಟ್ಯೂಬ್ ಲೈಟ್ ಹಾಕಿದ್ರೆ ಅವರ ಕೆಲಸ ಮುಗಿಯುವುದಿಲ್ಲ. ಹೀಗೆ ಮಾಡುವುದು ಅಕ್ಷರಶ: ತಪ್ಪು. ಹೀಗೆ ಎಲ್ಲಾ ಕಡೆ ಮಾಡಿದ್ರೆ ಅದು ದೊಡ್ಡ ಗೋಲ್ ಮಾಲ್ ಆಗುತ್ತದೆ. ದುಬಾರಿ ಬೀದಿದೀಪವನ್ನು ಕಳಚಿ ಕಡಿಮೆ ಬೆಲೆಯ ಟ್ಯೂಬ್ ಲೈಟ್ ಹಾಕಿದ್ರೆ ಅದನ್ನು ಕೇಳುವ ಹಕ್ಕು ಪಾಲಿಕೆಯ ಅಧಿಕಾರಿಗಳಿಗೆ ಇರುತ್ತದೆ. ಹಾಗೆ ಕೇಳುವ ಧೈರ್ಯ ಮಾಡಿದ್ದವರು ಯಶವಂತ ಕಾಮತ್. ಇವರು ಇಂಜಿನಿಯರಿಂಗ್ ವಿಭಾಗದ ಇಲೆಕ್ಟ್ರಿಕಲ್ ವ್ಯವಸ್ಥೆ ನೋಡಿಕೊಳ್ಳುವ ಸಹಾಯಕ ಕಾರ್ಯಪಾಲಕ ಅಭಿಯಂತರರಾಗಿದ್ದರು. ಇವರ ಗಮನಕ್ಕೆ ದಾರಿದೀಪ ನಿರ್ವಹಣೆಯ ಗುತ್ತಿಗೆದಾರರು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎನ್ನುವ ದೂರುಗಳು ಬರಲಾರಂಭಿಸಿದವು. ಸಾಮಾನ್ಯವಾಗಿ ಗುತ್ತಿಗೆದಾರರೊಂದಿಗೆ ಅಪವಿತ್ರ ಮೈತ್ರಿ ಮಾಡಿಕೊಳ್ಳುವ ಅಧಿಕಾರಿಯಾಗಿದ್ದರೆ ಯಾವುದೇ ದೂರು ಬರಲಿ, ಅದನ್ನು ಕಿವಿಗೆ ಹಾಕಿಕೊಳ್ಳದೆ ಗುತ್ತಿಗೆದಾರರಿಗೆ ಯಾವುದೇ ತೊಂದರೆಯಾಗದ ಹಾಗೆ ಬಿಲ್ ಪಾಸ್ ಮಾಡುತ್ತಾ ಇರುತ್ತಾರೆ. ಆದರೆ ಯಶವಂತ ಕಾಮತ್ ಹಾಗೇ ಅಲ್ಲ. ಅವರು ಹಾಗೆ ಎಡ್ಜೆರ್ಟ್ ಮೆಂಟ್ ಮಾಡುವ ಅಧಿಕಾರಿ ಅಲ್ಲ. ಅವರು ಕರ್ತವ್ಯದಲ್ಲಿ ನಿರ್ಲಕ್ಷ್ಯ ಮಾಡುವ ಬೀದಿದೀಪ ಗುತ್ತಿಗೆದಾರರ ವಿರುದ್ಧ ಕ್ರಮ ತೆಗೆದುಕೊಳ್ಳಲು ಮುಂದಾದರು.
ಬಂದ ಒತ್ತಡ ಕಡಿಮೆ ಏನಲ್ಲ…
ಮೊನ್ನೆ ಎಪ್ರಿಲ್ ನಲ್ಲಿ ಈ ಗುತ್ತಿಗೆಯನ್ನು ಟೆಂಡರ್ ಮೂಲಕ ಗುತ್ತಿಗೆದಾರರಿಗೆ ವಹಿಸಲಾಗಿತ್ತು. ಆದರೆ ಯಾವುದೇ ಕೆಲಸ ಎರಡು ದಿನಗಳ ಒಳಗೆ ಆಗಲ್ಲ, ಟ್ಯೂಬ್ ಲೈಟ್ ಹಾಕಿ ಸುಧಾರಿಸುತ್ತಾರೆ ಎನ್ನುವ ಆರೋಪ ಇತ್ತಲ್ಲ, ನಾಲ್ಕು ತಿಂಗಳ ಬಿಲ್ ಅನ್ನು ಯಶವಂತ ಕಾಮತ್ ತಡೆಹಿಡಿದರು. ನಮ್ಮ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕರ್ತವ್ಯಲೋಪ ಮಾಡುವ ಗುತ್ತಿಗೆದಾರರನ್ನು ಸರಿ ಮಾಡಲು ಮುಂದಾಗುವವರು ಕಡಿಮೆ, ಅದೇ ಸರಿಯಾಗಿ ಕೆಲಸ ಮಾಡದ ಗುತ್ತಿಗೆದಾರರಿಗೆ ಬಿಲ್ ಪಾಸಾಗದಿದ್ದರೆ ಬಿಲ್ ನಲ್ಲಿ ಪಾಲು ಸಿಗುವ ಫಲಾನುಭವಿಗಳು ಎಲ್ಲಾ ಒಟ್ಟಾಗುತ್ತಾರೆ. ಹೀಗೆ ಸರಿಯಾಗಿ ಕೆಲಸ ಮಾಡದೇ ಇದ್ದಾಗ ಬಿಲ್ ತಡೆ ಹಿಡಿದ ಅಧಿಕಾರಿ ಯಶವಂತ ಕಾಮತ್ ಅವರ ಮೇಲೆ ಬಿಲ್ ಪಾಸ್ ಮಾಡಲು ಒತ್ತಡ ಜಾಸ್ತಿ ಆಯಿತು. ಅದನ್ನು ಅವರು ತಮ್ಮ ಮೇಲಾಧಿಕಾರಿಗಳಾದ ಕಾರ್ಯಪಾಲಕ ಅಭಿಯಂತರ ಹಾಗೂ ಪಾಲಿಕೆ ಕಮೀಷನರ್ ಅವರ ಗಮನಕ್ಕೆ ತಂದರು. ಏನು ಮಾಡಿದರೂ ಏನು ಆಗದಿದ್ದಾಗ ಯಶವಂತ ಕಾಮತ್ ಇಲ್ಲಿಂದಲೇ ವರ್ಗಾವಣೆಯಾಗುವ ನಿರ್ಧಾರ ಕೈಗೊಂಡರು. ಒಬ್ಬ ಪ್ರಾಮಾಣಿಕ ಅಧಿಕಾರಿಯ ವರ್ಗಾವಣೆಯಿಂದ ಆಗುವ ನಷ್ಟ ಜನಸಾಮಾನ್ಯರಿಗೆ ಗೊತ್ತು. ನಂತರ ಏನಾಯಿತು? ಯಶವಂತ ಕಾಮತ್ ವರ್ಗಾವಣೆ ಆದರಾ? ಸರಿಯಾಗಿ ಕೆಲಸ ನಿರ್ವಹಿಸದ ಗುತ್ತಿಗೆದಾರರಿಗೆ ಬಿಲ್ ಪಾಸಾಯಿತಾ? ಎಲ್ಲವನ್ನು ಹೇಳುತ್ತೇನೆ, ಮಂಗಳವಾರದ ಜಾಗೃತ ಅಂಕಣದಲ್ಲಿ!
Leave A Reply