ದ್ರಾಸ್ ನಲ್ಲಿ ನಿಂತ ಘಳಿಗೆ ಮತ್ತು ಕಾರ್ಗಿಲ್ ವಾರ್ ಮೆಮೊರಿಯಲ್ ನಲ್ಲಿ ಒಂದು ಸುತ್ತು!!
ಇವತ್ತಿಗೆ 19 ವರ್ಷ. 1999 ರಲ್ಲಿ ಕಳ್ಳಹೆಜ್ಜೆಗಳನ್ನು ಇಟ್ಟು ಭಾರತದೊಳಗೆ ಬಂದ ಪಾಪಿ ಪಾಕಿಗಳನ್ನು ಹೊಡೆದುರುಳಿಸಿ ವಿಜಯ ಪತಾಕೆಯನ್ನು ಹಾರಿಸಿದಂತಹ ದಿನ. ಸುಮಾರು ಮೂರು ತಿಂಗಳು ನಡೆದ ಯುದ್ಧದಲ್ಲಿ ನಾವು ಕಳೆದುಕೊಂಡದ್ದು ಸುಮಾರು 530 ಕ್ಕೂ ಹೆಚ್ಚಿನ ವೀರಯೋಧರನ್ನು. ತನ್ನ ಪಕ್ಕದಲ್ಲಿದ್ದ ವ್ಯಕ್ತಿ ಬಾಂಬ್ ಸ್ಫೋಟದಿಂದಾಗಿ ಕೈಯೋ, ಕಾಲೋ ತುಂಡಾಗಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದರೆ ಅವನ ಜೀವ ರಕ್ಷಣೆಗೆ ಮುಂದಾಗುವುದೋ ಅಥವಾ ಎದುರಿನಿಂದ ಶತ್ರು ನುಗ್ಗಿ ಬರುತ್ತಿರುವುದನ್ನು ತಡೆದು ದೇಶವನ್ನು ರಕ್ಷಿಸುವುದು ಮುಖ್ಯವೋ ಎನ್ನುವ ದ್ವಂದ್ವ ಸಾಮಾನ್ಯ ಮನುಷ್ಯರಿಗಾದರೆ ಆಗಬಹುದು. ಆದರೆ ಒಬ್ಬ ಸೈನಿಕನ ಮುಂದೆ ಇರುವ ಗುರಿ ಎಂದರೆ ಶತ್ರುವನ್ನು ಸಂಹರಿಸಿ ದೇಶದ ಸಾರ್ವಭೌಮತೆಯನ್ನು ಉಳಿಸುವುದು ಮಾತ್ರ. ನಮ್ಮ ದೇಶ ವಿಶ್ವ ಗುರು ಎಂದು ಪ್ರಪಂಚದಲ್ಲಿ ಹೆಮ್ಮೆಯಿಂದ ಸಾರಬೇಕಾದರೆ ಅದಕ್ಕೆ ಕಾರಣ ನಾವು ಅನುಭವಿಸುತ್ತಿರುವ ಸ್ವಾತಂತ್ರ್ಯ. ಆ ಸ್ವಾತಂತ್ರ್ಯಕ್ಕೆ ಕಾರಣ ಸೈನಿಕರು.
ಆ ನಸೀಬು ಎಲ್ಲರಿಗೂ ಇಲ್ಲ…
ಅದರಲ್ಲಿಯೂ ಜಮ್ಮು-ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿರುವ ಸೈನಿಕರು ಏಕಕಾಲಕ್ಕೆ ಹೊರದೇಶದ ಶತ್ರುಗಳಿಂದ ಮತ್ತು ಒಳದೇಶದ ಶತ್ರುಗಳಿಂದ ಹೋರಾಡಬೇಕಾಗುತ್ತದೆ. 2012, ನವೆಂಬರ್ ನಲ್ಲಿ ಆಗಿನ ರಕ್ಷಣಾ ಸಚಿವ ಎಕೆ ಆಂಟೋನಿಯವರು ಲೋಕಸಭೆಯಲ್ಲಿ ಒಂದು ವರದಿ ಕೊಡುತ್ತಾರೆ, ಅದೇನೆಂದರೆ 1999 ರ ಕಾರ್ಗಿಲ್ ಯುದ್ಧದ ಬಳಿಕ 12 ವರ್ಷಗಳಲ್ಲಿ ದೇಶದ ಸುಮಾರು 4000 ಯೋಧರು ಹುತಾತ್ಮರಾಗಿದ್ದಾರೆ. ಅದರ್ಥ ದೇಶಕ್ಕಾಗಿ ಹೋರಾಡುವುದು ಅಷ್ಟು ಸುಲಭವಲ್ಲ. ಕಾರ್ಗಿಲ್ ಯುದ್ಧ ಏಕೆ ಅಷ್ಟು ರೋಮಾಂಚನವನ್ನು ಉಂಟು ಮಾಡುತ್ತದೆ ಎಂದರೆ ಅಲ್ಲಿನ ಪರಿಸರ. ಮೈನಸ್ 40 ರಿಂದ 50 ಡಿಗ್ರಿ ಚಳಿಯಲ್ಲಿ ಹೋರಾಡುವುದೆಂದರೆ ಅದು ಸಾಮಾನ್ಯ ಮನುಷ್ಯರಿಗೆ ಸಾಧ್ಯವೇ ಇಲ್ಲ. ಇಲ್ಲಿ ನಮಗೆ ಪ್ಲಸ್ 25 ಇದ್ದರೆ ಚಳಿ ಚಳಿ ಎಂದು ಹೇಳುತ್ತೇವೆ. ಹರಿದ್ವಾರದಲ್ಲಿ ಐದು ಡಿಗ್ರಿ ಸೆಲ್ಸಿಯಸ್ ಇದ್ದರೆ ಯಾವೆಲ್ಲ ಎಕ್ಸಟ್ರಾ ಕ್ಯಾರ್ ತೆಗೆದುಕೊಳ್ಳಬೇಕು ಎಂದು ಯೋಚಿಸುತ್ತಾ ಇರುತ್ತೇವೆ. ಯಾಕೆಂದರೆ ಶೀತ, ಜ್ವರ ಬರಬಹುದು ಎನ್ನುವ ಆತಂಕ. ಹಾಗಿರುವಾಗ ಮೈನಸ್ 40 ಡಿಗ್ರಿ ಚಳಿಯಲ್ಲಿ ಯಮಭಾರದ ಆಯುಧಗಳನ್ನು, ಒಂದಿಷ್ಟು ಅಗತ್ಯದ ಆಹಾರ, ಮದ್ದು ಹೊತ್ತುಕೊಂಡು ಏರುಮುಖವಾಗಿ ಬೆಟ್ಟವನ್ನು ಏರುವುದು ಸೈನಿಕರಿಗೆ ಬಿಟ್ಟರೆ ಮತ್ಯಾರಿಗೆ ಸಾಧ್ಯ. ಅಂತಹ ಪರಿಸ್ಥಿತಿಯಲ್ಲಿ ದೇಶಕ್ಕಾಗಿ ಹೋರಾಡಿ ಭಾರತಾಂಬೆಯ ಚರಣಕಮಲಗಳಲ್ಲಿ ಚಿರನಿದ್ರೆಯ ಜಾಗ ಪಡೆದ ಸುಮಾರು 530 ಯೋಧರ ಸ್ಮಾರಕವನ್ನು ತುಂಬಾ ಹತ್ತಿರದಿಂದ ನೋಡುವ ಭಾಗ್ಯ ಇತ್ತೀಚೆಗೆ ನನಗೆ ಸಿಕ್ಕಿತ್ತು
ನೀವು ಹೋಗಿ ಬನ್ನಿ…
ಕಾರ್ಗಿಲ್ ವಾರ್ ಮೆಮೊರಿಯಲ್ ನಲ್ಲಿ ಹಾಗೆ ಹತ್ತಿರ ಹತ್ತಿರ ಅಷ್ಟೂ ಜನ ವೀರ ಮಹಾನ್ ಪುರುಷರ ಸ್ಮಾರಕ ನಿರ್ಮಿಸಲಾಗಿದೆ. ಅಲ್ಲಲ್ಲಿ ನಮ್ಮ ದೇಶದ ಧ್ವಜ. ಅಲ್ಲಿಯೇ ಒಂದು ಪಾಕಿಸ್ತಾನದ ಬಾವುಟವನ್ನು ತಲೆಕೆಳಗಾಗಿ ಹಾರಿಸಲಾಗಿದೆ. ಅದರ್ಥ ನಿಮಗೆ ಆಗಿರಬಹುದು. ಅಂದರೆ ಪಾಕಿಸ್ತಾನವನ್ನು ತಲೆ ಕೆಳಗೆ ಮಾಡಿ ಭಾರತಾಂಬೆಯ ಪಾದಕ್ಕೆ ಪಾಕಿಸ್ತಾನದ ಶಿರ ತಾಗಿಸಿದ ನಮ್ಮ ಹೆಮ್ಮೆ ಎನ್ನುವ ಖುಷಿ ನಮಗೆ ಆಗುತ್ತದೆ. ಅದೇ ರೀತಿಯಲ್ಲಿ ಈ ಗೆಲುವಿಗೆ ಸಾಕ್ಷಿ ಎನ್ನುವಂತೆ ಪಾಕಿಸ್ತಾನದ ಸೈನಿಕರಿಂದ ವಶಪಡಿಸಿಕೊಂಡ ಬಂಕರ್ ಗಳು, ವಿವಿಧ ಗನ್ ಗಳನ್ನು ಅಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಇದೆಲ್ಲಾ ನೋಡುವುದೇ ಒಂದು ಚೆಂದ. ಎಲ್ಲಕ್ಕಿಂತ ಹೆಚ್ಚಾಗಿ ಈ ವಾರ್ ಮೆಮೊರಿಯಲ್ ಇರುವ ಶ್ರೀನಗರ ಸಮೀಪದ ದ್ರಾಸ್ ನಲ್ಲಿ ಓಡಾಡುವುದೇ ಒಂದು ಹೆಮ್ಮೆ. ಅಂತಹ ಅವಕಾಶ ನನಗೆ ಕಳೆದ ತಿಂಗಳು ಒದಗಿ ಬಂತು. ನೀವು ಅಲ್ಲಿ ಪ್ರದರ್ಶನಕ್ಕೆ ಇಟ್ಟಿರುವ ಮದ್ದುಗುಂಡಗಳನ್ನು ಹತ್ತಿರದಿಂದ ನೋಡುವಾಗ ಆ ಕಗ್ಗತ್ತಲಿನ ರಾತ್ರಿಗಳಲ್ಲಿ ಮೇಲಿನಿಂದ ಬರುತ್ತಿದ್ದ ಬುಲೆಟ್ ಗಳನ್ನು ತಪ್ಪಿಸಿ ಆ ತುದಿಯನ್ನು ತಲುಪಿ ಪಾಕಿಗಳನ್ನು ಕೊಂದು ನಮ್ಮ ತ್ರಿವರ್ಣ ಧ್ವಜವನ್ನು ಹಾರಾಡಿಸುವಾಗ ಆ ಸೈನಿಕರು ಅನುಭವಿಸಿದ ಸಂಭ್ರಮದ ಅನುಭವ ಒಂದು ಕ್ಷಣ ಭಾಸವಾದಂತೆ ಆಗುತ್ತದೆ. ಅಲ್ಲಿ ಪಾಕಿಸ್ತಾನದ ಸೈನಿಕರಿಂದ ವಶಪಡಿಸಿಕೊಂಡ ರೈಫಲ್ಸ್ ಗಳನ್ನು ನೋಡಿದರೆ ನಿಮಗೆ ಅದರ ಭಾರ, ಗುರಿ ಮತ್ತು ಮಹತ್ವ ತಿಳಿಯಬೇಕಾದರೆ ಕಾರ್ಗಿಲ್ ನಲ್ಲಿ ಪಾಕಿಗಳ ಅಂತಹ ಆಯುಧಗಳಿಗೆ ಎದೆಯೊಡ್ಡಿ ದೇಶವನ್ನು ರಕ್ಷಿಸಿದ ಒಬ್ಬ ಭಾರತೀಯ ಸೈನಿಕನ ಬಳಿ ಮಾತಿಗೆ ಕುಳಿತುಕೊಳ್ಳಬೇಕು. ದ್ರಾಸ್ ನ ಆ ಪ್ರದೇಶದಲ್ಲಿ ನಿಂತರೆ ನಿಮಗೆ ಕಾರ್ಗಿಲ್ ಯುದ್ಧ ನಡೆದ ಜಾಗದ ರಣಭಯಂಕರತೆ ಅಂದಾಜು ಆಗಬಹುದು. ಆದರೆ ಯಾವತ್ತೂ 1999 ರ ಆ ಜೂನ್, ಜುಲೈನಲ್ಲಿ ನಡೆದ ಯುದ್ಧದ ಅಂದಾಜು ಆಗಲಿಕ್ಕಿಲ್ಲ. ಯಾಕೆಂದರೆ ನಾವು ಬರಿ ಸಾಮಾನ್ಯ ಮನುಷ್ಯರು, ನಮ್ಮ ಸೈನಿಕರು ದೇವತಾ ಸ್ವರೂಪಿಗಳು!
Leave A Reply