ಗುಜ್ಜರಕೆರೆಗೆ ಹಿಡಿದಿರುವ ಗ್ರಹಣ ನವೆಂಬರ್ ನಲ್ಲಿ ಬಿಡಲಿದೆಯಂತೆ!!
ಇವತ್ತು ಶತಮಾನದ ಅತೀ ದೊಡ್ಡ ಚಂದ್ರಗ್ರಹಣ. ಅದು ಬೆಳಗ್ಗಿನ ಜಾವ 3.49 ಕ್ಕೆ ಬಿಡಲಿದೆ. ಆದರೆ ಗುಜ್ಜರಕೆರೆ ಎನ್ನುವ ಮಂಗಳೂರಿನ ಇತಿಹಾಸ ಪ್ರಸಿದ್ಧ ಕೆರೆಗೆ ದಶಕಗಳಿಂದಲೂ ಹಿಡಿದಿರುವ ಗ್ರಹಣ ಯಾವಾಗ ಬಿಡುತ್ತೆ ಎನ್ನುವುದು ಸದ್ಯದ ಪ್ರಶ್ನೆ. ಇವತ್ತು ಅಲ್ಲಿ ಮತ್ತೊಮ್ಮೆ ಪರಿಶೀಲನೆಗೆ ಬಂದ ಮಂಗಳೂರು ನಗರ ದಕ್ಷಿಣದ ಈಗಿನ ಶಾಸಕರಾಗಿರುವ ಡಿ ವೇದವ್ಯಾಸ ಕಾಮತ್ ಅವರು ನವೆಂಬರ್ 15ರ ಒಳಗೆ ಗುಜ್ಜರಕೆರೆಯನ್ನು ಅಭಿವೃದ್ಧಿಗೊಳಿಸಿ ಸಮಸ್ಯೆಯನ್ನು ಪರಿಹರಿಸುವುದಾಗಿ ಹೇಳಿದ್ದಾರೆ. ಅಲ್ಲಿಗೆ ಗುಜ್ಜರಕೆರೆಗೆ ಹಿಡಿದಿರುವ ಗ್ರಹಣ ಬಿಡುವುದಕ್ಕೆ ಕಾಲ ಸನ್ನಿಹಿತವಾಗಿದೆ ಎಂದು ಅಂದುಕೊಳ್ಳಬಹುದು.
ಒಂದು ಕಾಲದಲ್ಲಿ ಗುಜ್ಜರಕೆರೆ ಎಂದರೆ ಅದರ ವೈಭವವೇ ಬೇರೆ. ಮಂಗಳಾದೇವಿ ದೇವಸ್ಥಾನದ ದೇವರು ತೀರ್ಥಸ್ನಾನ ಮಾಡುತ್ತಿದ್ದ ಕೆರೆ ಅದು. ಹಿಂದೂಗಳಿಗೆ ಪವಿತ್ರವಾಗಿದ್ದ ಕೆರೆಯ ಪರಿಸ್ಥಿತಿ ಬರಬರುತ್ತಾ ಎಷ್ಟು ಹದಗೆಡುತ್ತಾ ಬಂತು ಎಂದರೆ ಗುಜ್ಜರಕೆರೆಯ ದಂಡೆಯ ಮೇಲೆ ಎಲ್ಲಿಯಾದರೂ ನೀವು ಹತ್ತು ನಿಮಿಷ ಕುಳಿತುಕೊಂಡು ಬಂದ್ರಿ ಎಂದರೆ ನೀವು ಮಲೇರಿಯಾ ಕಾಯಿಲೆಯನ್ನು ಮೈಮೇಲೆ ಎಳೆದುಕೊಳ್ಳಲು ತಯಾರಾದಿರಿ ಎಂದೇ ಅರ್ಥ. ಕಳೆದ ಹತ್ತಿಪ್ಪತ್ತು ವರ್ಷಗಳಿಂದ ಗುಜ್ಜರಕೆರೆ ತ್ಯಾಜ್ಯದ ದೊಡ್ಡಿಯಾಗಿ ಬದಲಾಗುತ್ತಿದೆ. ಒಳಚರಂಡಿಗಳ ಅಸಮರ್ಪಕಗಳ ಜೋಡಣೆಗಳಿಂದಾಗಿ ಅಕ್ಕಪಕ್ಕದ ಡ್ರೈನೇಜ್ ಗಳ ನೀರು ನೇರವಾಗಿ ಹೋಗಿ ಸೆಟಲ್ ಆಗುತ್ತಿರುವುದು ಇದೇ ಗುಜ್ಜರಕೆರೆಯಲ್ಲಿ.
ಕೋಟಿ ಕೋಟಿ ಪೋಲಾಗಿದೆ…
ಗುಜ್ಜರಕೆರೆಯನ್ನು ಸರಿ ಮಾಡುವ ಪ್ರಯತ್ನ ಹಿಂದೆ ಆಗಿದೆ. ಆದರೆ ಪ್ರತಿ ಬಾರಿ ಆದಾಗ ಅದು ಕಲ್ಲಿನ ಮೇಲೆ ನೀರು ಸುರಿದ ಹಾಗೆನೆ ಆಗುತ್ತಿದೆ. ಉದಾಹರಣೆಗೆ ಕೆರೆಯಲ್ಲಿ ಬೆಳೆದಿರುವ ಪಾಚಿ ತೆಗೆದು ಅಲ್ಲಿ ಮೆಟ್ಟಿಲು ನಿರ್ಮಿಸಲು ಆ ಹಣ ಖರ್ಚಾಯಿತು. ಅಲ್ಲಿ ಗ್ಯಾಲರಿ ನಿರ್ಮಿಸಲಾಯಿತು. ಅಲ್ಲಿನ ಗುಜ್ಜರಕೆರೆ ಅಭಿವೃದ್ಧಿ ಸಮಿತಿಯವರು ಮೊದಲೇ ಹೇಳಿದ್ರು, ಏನೆಂದರೆ ಡ್ರೈನೇಜ್ ಸಿಸ್ಟಮ್ ಸರಿ ಮಾಡದೇ ಅಲ್ಲಿ ಏನೂ ಮಾಡಿದರೂ ಅದು ವೇಸ್ಟ್. ಅವರು ಹೇಳಿದ್ದು ನೂರಕ್ಕೆ ನೂರರಷ್ಟು ಸತ್ಯ. ಏನೆಂದರೆ ನೀವು ಮೂಲ ಸಮಸ್ಯೆಯನ್ನು ಸರಿ ಮಾಡದೇ ಬೇರೆ ಏನು ಮಾಡಿದರೂ ಅದರಿಂದ ಗುಜ್ಜರಕೆರೆಗೆ ಶಾಶ್ವತ ಪರಿಹಾರ ಮಾಡಲು ಆಗುವುದಿಲ್ಲ. ನೀವು ಅಲ್ಲಿ ಬೆಳೆದಿರುವ ಪಾಚಿಯನ್ನು ಎಷ್ಟು ತೆಗೆದರೂ ಅದು ಮತ್ತೆ ಬೆಳೆಯುತ್ತದೆ. ಕಾರಣ ಅದಕ್ಕೆ ಬಂದು ಬೀಳುವ ಫಲವತ್ತಾದ “ತ್ಯಾಜ್ಯ”. ಅದು ಯಾವ ಗೊಬ್ಬರಕ್ಕಿಂತಲೂ ಕಡಿಮೆ ಇಲ್ಲ. ಇನ್ನು ನಾಲ್ಕು ಸಲ ಜೋರು ಬಂದದ್ದಕ್ಕೆ ಗ್ಯಾಲರಿಗಳು ಕೊಚ್ಚಿ ಹೋಗಿವೆ. ಮತ್ತೆ ಒಂದು ಕೋಟಿ ಗುಜ್ಜರಕೆರೆ ಅಭಿವೃದ್ಧಿಗೆ ಬಂತು. ಡ್ರೈನೇಜ್ ಸರಿ ಮಾಡುವುದು ಬಿಟ್ಟು ಅಲ್ಲಿನ ಅಕ್ಕಪಕ್ಕದ ರಸ್ತೆಗಳಿಗೆ ಕಾಂಕ್ರೀಟ್ ಹಾಕಲಾಯಿತು. ನಮ್ಮ ಪಾಲಿಕೆಯ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ತಲೆಯೊಳಗೆ ಒಂದಿಷ್ಟು ಬುದ್ಧಿ ಇದೆ ಎಂದಾದರೆ ಮೊದಲು ಒಳಚರಂಡಿ ಅಥವಾ ಡ್ರೈನೇಜ್ ವ್ಯವಸ್ಥೆ ಸರಿ ಮಾಡಿ ನಂತರ ಕಾಂಕ್ರೀಟ್ ಎಲ್ಲಾ ನೋಡೋಣ ಎನ್ನುವ ನಿರ್ಧಾರಕ್ಕೆ ಬರುತ್ತಿದ್ದರು. ಆದರೆ ನಮ್ಮ ವ್ಯವಸ್ಥೆಯಲ್ಲಿ ಸಮಸ್ಯೆ ಪರಿಹಾರವಾಗುವುದು ಮುಖ್ಯವಲ್ಲ, ಅವರಿಗೆ ಕಮೀಷನ್ ಸಿಗುವುದು ಮುಖ್ಯ. ಅಕ್ಕಪಕ್ಕದ ರಸ್ತೆಗಳಿಗೆ ಕಾಂಕ್ರೀಟ್ ಹಾಕಿದರೆ ಗುಜ್ಜರಕೆರೆಯ ಸಮಸ್ಯೆ ಪರಿಹಾರವಾಗಲ್ಲ ಎನ್ನುವುದು ಗೊತ್ತಿಲ್ಲದವರು ಇದ್ದರೆ ಮಂಗಳೂರು ಹೇಗೆ ಉದ್ಧಾರವಾಗುತ್ತೆ ಅಲ್ವಾ?
ಗುಜ್ಜರಕೆರೆಗೆ ಹೊಸ ರೂಪ ಸಿಗುತ್ತಾ…
ಈಗ ಎಲ್ಲರಿಗೂ ಗೊತ್ತಾಗಿದೆ. ಮೊದಲು ಪರಿಹಾರವಾಗಬೇಕಿರುವುದು ಡ್ರೈನೇಜ್ ಸಮಸ್ಯೆ. ಈ ಡ್ರೈನೇಜ್ ಸಮಸ್ಯೆ ಪರಿಹಾರವಾಗಬೇಕಾದರೆ ಅಲ್ಲಲ್ಲಿ ಕಾಂಕ್ರೀಟ್ ಒಡೆಯಬೇಕಾಗುತ್ತದೆ. ಬಳಿಕ ಎಲ್ಲವೂ ಸರಿಯಾದ ಬಳಿಕ ಮತ್ತೆ ಕಾಂಕ್ರೀಟ್ ಹಾಕಬೇಕಾಗಬಹುದು. ಒಟ್ಟಿನಲ್ಲಿ ಸೊಳ್ಳೆ ಉತ್ಪತ್ತಿ ಕೇಂದ್ರವಾಗಿರುವ ಗುಜ್ಜರಕೆರೆಯನ್ನು ಸರಿ ಮಾಡಲು ಹೊಸ ಶಾಸಕರು ಕಂಕಣಬದ್ಧರಾದಂತೆ ಕಾಣುತ್ತದೆ. ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಕರೆಸಿ ಸಭೆ ನಡೆಸಿದ್ದಾರೆ. ಅಲ್ಲಿಗೆ ಎರಡ್ಮೂರು ಸುತ್ತಿನ ಭೇಟಿಯಾಗಿದೆ. ರೂಪುರೇಶೆ ತಯಾರಿಸಲು ಶಾಸಕರು ಸೂಚನೆ ಕೊಟ್ಟಿದ್ದಾರೆ. ಅಲ್ಲಿ ಸುತ್ತಲೂ ವಾಕಿಂಗ್ ಟ್ರಾಕ್ ನಿರ್ಮಿಸುವ ಯೋಜನೆ ಇದೆ. ಎಲ್ಲವೂ ಸರಿಯಾದರೆ ನವೆಂಬರ್ ನಂತರ ಗುಜ್ಜರಕೆರೆ ಪ್ರವಾಸಿತಾಣವಾಗುವ ಸಾಧ್ಯತೆ ಇದೆ. ಕಾದು ನೋಡೋಣ!
Leave A Reply