ರಥ ಬಿಟ್ಟ ಕೂಡಲೇ ಸ್ವಚ್ಚತೆಯ ಬಗ್ಗೆ ಕಾಳಜಿ ಬರುತ್ತಾ?
ಎಪ್ರಿಲ್, ಮೇ ತಿಂಗಳ ರಜೆಯಲ್ಲಿ ಮಕ್ಕಳಿಗೆ ಶಿಕ್ಷಕರು ಹೋಂವರ್ಕ್ ಕೊಟ್ಟಿರುತ್ತಾರೆ. ರಜೆ ಮುಗಿದು ಜೂನ್ ಒಂದಕ್ಕೆ ಶಾಲೆ ಮರು ಪ್ರಾರಂಭವಾಗುವಾಗ ಮಕ್ಕಳಿಗೆ ರಜೆಯಲ್ಲಿ ಕೊಟ್ಟ ಹೋಂ ವರ್ಕ್ ಶಿಕ್ಷಕರಿಗೆ ತೋರಿಸಲು ಇರುತ್ತದೆ. ಅನೇಕ ಮಕ್ಕಳು ಎನು ಮಾಡುತ್ತಾರೆ ಎಂದರೆ ಬೇಸಿಗೆ ರಜೆಯಲ್ಲಿ ಎರಡು ತಿಂಗಳು ಸಂಪೂರ್ಣ ಆಡುವುದು ಮತ್ತು ಶಾಲೆ ಶುರುವಾಗುವಾಗ ಶಿಕ್ಷಕರಿಗೆ ಹೋಂವರ್ಕ್ ತೋರಿಸಬೇಕೆನ್ನುವ ಅನಿವಾರ್ಯತೆ ಇರುವುದರಿಂದ ಕೊನೆಯ ಎರಡು ದಿನ ಕುಳಿತು ಪುಸ್ತಕಗಳಲ್ಲಿ ಕಾಟಾಚಾರಕ್ಕೆ ಗೀಚಿ ಶಿಕ್ಷಕರಿಗೆ ತೋರಿಸಲು ತಯಾರಾಗುತ್ತಾರೆ. ರಜೆಯಲ್ಲಿ ಪಾಠ ಮರೆಯಬಾರದು, ಅಕ್ಷರಗಳು ಮುದ್ದಾಗಿ ಉಳಿಯಬೇಕು ಎಂದು ಕೊಡುವ ಹೋಂವರ್ಕ್ ತನ್ನ ಅರ್ಥವನ್ನೇ ಕಳೆದುಕೊಳ್ಳುತ್ತದೆ. ನಮ್ಮ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕೂಡ ಅಕ್ಷರಶ: ಹೀಗೆ ಮಾಡುತ್ತಿದೆಯೇನೋ ಎನ್ನುವ ಭಾವನೆ ಬರುತ್ತಿದೆ. ಅದಕ್ಕೆ ಕಾರಣ ಸ್ವಚ್ಛ ಸರ್ವೇಕ್ಷಣ ಗ್ರಾಮೀಣ-2018 ಕಾರ್ಯಕ್ರಮ.
ಒಂದು ತಿಂಗಳ ಜಾಗೃತಿ ನಂತರ…
ಸ್ವಚ್ಛತೆ ಮತ್ತು ಶುಚಿತ್ವವನ್ನು ಕಾಪಾಡುವ ಸಲುವಾಗಿ ಸ್ವಚ್ಛ ಸರ್ವೇಕ್ಷಣ ಗ್ರಾಮೀಣ-2018 ಎನ್ನುವ ಯೋಜನೆ ಕೇಂದ್ರ ಸರಕಾರದ್ದು. ಒಂದು ಅಭಿಯಾನ ಇದು. ಕೇಂದ್ರ ಸರಕಾರದಿಂದ ಬರುವ ತಂಡಗಳು ಜಿಲ್ಲೆ, ನಗರ, ಪುರಸಭೆ, ನಗರಸಭೆ, ಪಾಲಿಕೆ, ಗ್ರಾಮ ಪಂಚಾಯತ್ ಮಟ್ಟದಲ್ಲಿ ಸ್ವಚ್ಛತೆ ಮತ್ತು ಶುಚಿತ್ವವನ್ನು ನೋಡಿ ಪ್ರಶಸ್ತಿಗೆ ಶಿಫಾರಸ್ಸು ಮಾಡುತ್ತವೆ. ಅದಕ್ಕಾಗಿ ಆ ತಂಡಗಳು ನಮ್ಮಲ್ಲಿಗೆ ಬರುವುದಕ್ಕೆ ಸರಿಯಾಗಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕಡೆಯಿಂದ ಸ್ವಚ್ಛತಾ ರಥಕ್ಕೆ ಚಾಲನೆ ನೀಡಲಾಗಿದೆ. ಈ ರಥ ಗ್ರಾಮ ಪಂಚಾಯತ್ ಗಳಲ್ಲಿ ಸಂಚರಿಸಿ ಅಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುತ್ತದೆ. ಅಗಸ್ಟ್ 1 ರಿಂದ 30 ರವರೆಗೆ ಸಮೀಕ್ಷೆ ನಡೆಯುವುದರಿಂದ ಈ ಸಂದರ್ಭದಲ್ಲಿ ಗ್ರಾಮದಲ್ಲಿರುವ ಸಾರ್ವಜನಿಕ ಸ್ಥಳಗಳು, ಶಾಲೆಗಳು, ಅಂಗನವಾಡಿ ಕೇಂದ್ರಗಳು, ಸಂತೆ ನಡೆಯುವ ಸ್ಥಳ, ಕುಡಿಯುವ ನೀರಿನ ಸಂಗ್ರಹ ಸ್ಥಳಗಳು, ಪಂಚಾಯತಿ ಕಚೇರಿ, ಆರೋಗ್ಯ ಕೇಂದ್ರಗಳು, ಗ್ರಾಮದ ಮುಖ್ಯ ಬೀದಿ, ಎಲ್ಲಾ ಧಾರ್ಮಿಕ ಸ್ಥಳ, ಶೌಚಾಲಯಗಳನ್ನು ಸುಸ್ಥಿತಿಯಲ್ಲಿಡುವಂತೆ ರಥದ ಮೂಲಕ ಜಾಗೃತಿ ಮೂಡಿಸಲಾಗುತ್ತದೆ. ಸಮೀಕ್ಷೆಗೆ ಬಂದ ತಂಡ ಇಲ್ಲಿಂದ ತೆರಳುತ್ತಿದ್ದಂತೆ ಆ ರಥ ತನ್ನ ಕೆಲಸ ನಿಲ್ಲಿಸುತ್ತದೆ. ಅದರ ಖರ್ಚಿನ ಬಿಲ್ ತಯಾರಾಗುತ್ತದೆ. ಅದರ ವಿಲೇವಾರಿಯಾಗುತ್ತದೆ. ಅಲ್ಲಿಗೆ ಸ್ವಚ್ಚತೆಯ ಉದ್ದೇಶ ಎಂದು ಏನು ಇತ್ತೋ ಅದು ಯಾವುದೋ ಗ್ರಾಮದ ಚರಂಡಿಯಲ್ಲಿ ಪ್ರಾಣ ಬಿಟ್ಟಿರುತ್ತದೆ.
ಜನಪ್ರತಿನಿಧಿಗಳ ಭಾಷಣದಲ್ಲಿ ಜಾಗೃತಿ ಮೂಡಿಸಿ…
ನಾವು ಒಂದು ತಿಂಗಳು ಪ್ರಶಸ್ತಿಗಾಗಿ ಸ್ವಚ್ಚವಾಗಿ ಇರುವುದು ಮತ್ತು ಸಮೀಕ್ಷೆ ಮಾಡಿದ ತಂಡ ದೆಹಲಿಗೆ ಹೋದ ಕೂಡಲೇ ಇತ್ತ ಬೇಕಾಬಿಟ್ಟಿ ಕಸ ಎಸೆಯುವುದು ಎಲ್ಲಾ ಮಾಡುವುದರಿಂದ ಆ ಪ್ರಶಸ್ತಿಯ ಉದ್ದೇಶ ಈಡೇರುವುದಿಲ್ಲ. ಸ್ವಚ್ಛ ಸರ್ವೇಕ್ಷಣಾ ಗ್ರಾಮೀಣ-2018 ಪ್ರಶಸ್ತಿ ಪಡೆಯಬೇಕೆನ್ನುವುದು ಕರಾವಳಿಯ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಏಕೈಕ ಶಾಸಕ ಕಮ್ ಸಚಿವ ಯುಟಿ ಖಾದರ್ ಅವರಿಗೆ ಆಸೆ ಇರಬಹುದು. ಆ ಮೂಲಕ ತಮ್ಮ ಕಿರೀಟಕ್ಕೆ ಗರಿ ಇಟ್ಟು ಮೆರೆಯುವ ಗುರಿ ಇರಬಹುದು. ಹಾಗಾಗಿ ಅವರು ಸುದ್ದಿಗೋಷ್ಟಿ ಕರೆದು ಸ್ವಚ್ಛತಾ ಅಭಿಯಾನದಲ್ಲಿ ಒಂದು ತಿಂಗಳು ಗ್ರಾಮಗಳನ್ನು ಸ್ವಚ್ಚವಾಗಿಟ್ಟುಕೊಳ್ಳಲು ಕರೆ ನೀಡಿದ್ದಾರೆ. ನಾವು ಒಂದು ತಿಂಗಳು ಸ್ವಚ್ಛವಾಗಿದ್ದು ಪ್ರಶಸ್ತಿ ಪಡೆದು ಅದರ ಫೋಟೋ ತೆಗೆಸಿ ಮಾಧ್ಯಮಗಳಲ್ಲಿ ಹಾಕಿಸಿದರೆ ಅದರಿಂದ ಸ್ವಚ್ಚತೆ ಆಗುತ್ತದಾ? ನಾನು ನಮ್ಮ ಜನಪ್ರತಿನಿಧಿಗಳೆನಿಸಿಕೊಂಡವರ ಬಳಿ ಕೇಳಿಕೊಳ್ಳುವುದೇನೆಂದರೆ ನೀವು ದಿನಕ್ಕೆ ಒಬ್ಬೊಬ್ಬರು ಕನಿಷ್ಟ ನಾಲ್ಕೈದು ಕಾರ್ಯಕ್ರಮಗಳಿಗೆ ಹೋಗುತ್ತೀರಿ. ಪ್ರತಿ ಕಾರ್ಯಕ್ರಮದಲ್ಲಿ ವೇದಿಕೆಯ ಮೇಲೆ ಹತ್ತು ಹನ್ನೆರಡು ಜನ ಹಾಗೆ ವೇದಿಕೆಯ ಕೆಳಗೆ ನೂರಾರು ಜನ ಇರುತ್ತಾರೆ. ನಿಮ್ಮ ಭಾಷಣದಲ್ಲಿ ಹೇಳುವಂತಹ ಅಥವಾ ಜನ ಕುತೂಹಲದಿಂದ ಕೇಳುವಂತಹ ಎಷ್ಟಿರುತ್ತೆ ಎನ್ನುವುದು ನಿಮಗೆ ಗೊತ್ತು. ನಿಮ್ಮ ಭಾಷಣ ಹತ್ತು ನಿಮಿಷ ಇದೆ ಎಂದಾದರೆ ಅದರಲ್ಲಿ ಕನಿಷ್ಟ ಎರಡು ನಿಮಿಷ ಸ್ವಚ್ಚತೆಯ ಬಗ್ಗೆ ಹೇಳಿ. ಜನರಲ್ಲಿ ಸ್ವಚ್ಚತೆಯ ಬಗ್ಗೆ ಕಾಳಜಿ ಎಬ್ಬಿಸುವಂತೆ ಮಾಡಿ. ಪ್ರತಿ ಕಡೆ ಸ್ವಚ್ಚತೆಯ ವಿಷಯದಲ್ಲಿ ನಿಮ್ಮದು ಮಾತುಗಳು ಇದ್ದೇ ಇರುತ್ತದೆ ಎಂದು ನಿಮ್ಮ ಹಿಂಬಾಲಕರು ಅಂದುಕೊಳ್ಳಬಹುದು. ಆದರೆ ನಿಮ್ಮ ಭಾಷಣ ಸ್ವಚ್ಚತೆಯ ಬ್ರಾಂಡ್ ಕ್ರಿಯೇಟ್ ಮಾಡುತ್ತದೆ. ನಿಮ್ಮ ಸ್ವಚ್ಚತೆಯ ಮಾತುಗಳನ್ನು ಕೇಳಿ ಅಲ್ಲಿದ್ದ ಜನರಲ್ಲಿ ಅರ್ಧದಷ್ಟಾದರೂ ಅದನ್ನು ಅಳವಡಿಸಲು ಹೊರಟರೆ ನಿಮ್ಮ ಭಾಷಣ, ಸಮಯ ಎಲ್ಲಾ ಸಾರ್ಥಕ. ಇದು ಬಿಟ್ಟು ಸಮೀಕ್ಷೆ ಮಾಡುವವರು ಬಂದ್ರು ಎಂದ ಕೂಡಲೇ ರಥಕ್ಕೆ ಚಾಲನೆ ಕೊಟ್ಟರೆ ಅದರಿಂದ ಏನು ಸಾಧಿಸಿದಂತೆ ಆಗುತ್ತದೆ!
Leave A Reply