ವಿದೇಶದಲ್ಲಿದ್ದರೂ ಕೃಷಿಯ ನಂಟು ಬಿಡದ ಈ ಎಂಜಿನಿಯರ್ ಯುವಕರಿಗೆ ಮಾದರಿ

ಉಡುಪಿ: ಭಾರತ ಕೃಷಿ ಪ್ರಧಾನ ದೇಶ. ದೇಶದ ಮೂಲ ಕಸುಬು ಕೃಷಿ. ಆದರೆ ಇಂದು ಹಣದ ಆಸೆಗೆ ಅಥವಾ ಬದಲಾವಣೆಗೊ ಹೊಸ ಹೊಸ ಕೆಲಸದತ್ತ ಮುಖ ಮಾಡುತ್ತಿದ್ದಾರೆ ಜನರು. ಅನ್ನ ಕೊಟ್ಟ ಮಣ್ಣನ್ನು ಮರೆತು ವಿದೇಶದಲ್ಲಿ ನೆಲೆಸುತ್ತಾರೆ. ಆದರೆ ಇಲ್ಲೊಬ್ಬರು ಮಾತ್ರ ವಿದೇಶದಲ್ಲಿ ಕೆಲಸ ಮಾಡುತ್ತಿದ್ದರೂ ಸ್ವದೇಶಿ ಕೃಷಿಯನ್ನು ಮರೆತಿಲ್ಲ. ಹೌದು. ನೀವು ನಂಬಲಿಕ್ಕಿಲ್ಲ. ಸಿದ್ದಾಪುರ ಗ್ರಾಮದ ಜನ್ಸಾಲೆಯಲ್ಲಿರುವ ಆ ಕಟ್ಟಡ ಒಂದಾನೊಂದು ಕಾಲದಲ್ಲಿ ಪಾಳುಬಿದ್ದಿತ್ತು. ಅಕ್ಕಪಕ್ಕದ ಜಾಗ ಒಂದು ರೀತಿಯಾಗಿ ಹಡಿಲು ಬಿದ್ದಿತ್ತು. ಆದರೆ ಈಗ ಅದು ಹಾಗಿಲ್ಲ.
ಈ ಕಟ್ಟಡದಲ್ಲೀಗ ಮೊಲಗಳ ಕಲರವ, ಸಮೃದ್ಧ ಅನಾನಸ್ ಕೃಷಿ ತುಂಬಿದೆ. ಅಷ್ಟೆ ಅಲ್ಲ, ಕಾಳು ಮೆಣಸು ಬಳ್ಳಿಗಳು ಅತ್ಯಾಧುನಿಕ ಶೈಲಿಯಲ್ಲಿ ಹರಡಿದೆ. 1500ಕ್ಕೂ ವಿವಿಧ ಜಾತಿಯ ಮತ್ತು ವಿವಿಧ ಆಕೃತಿ ಮೊಲಗಳು, 55 ಲಕ್ಷಕ್ಕೂ ಮಿಕ್ಕ ಅನಾನೆಸ್, ಎರಡು ಎಕರೆ ಪ್ರದೇಶದಲ್ಲಿ ತಲೆಯೆತ್ತಿರುವ ಕಾಳುಮೆಣಸು ಕೃಷಿ. ಇದೆಲ್ಲವೂ ಸಂಪೂರ್ಣ ಹೈಟೆಕ್. ಜೊತೆಗೆ ದೇಶಿ ಮಾದರಿ ಕೃಷಿ ಅನ್ನೋದು ವಿಶೇಷ. ಬರಡು ಭೂಮಿಯಂತಿದ್ದ ನೆಲವನ್ನು ಇಷ್ಟು ಸುಂದರವಾಗಿಸಿದ ವ್ಯಕ್ತಿಯ ಹೆಸರು ಸತೀಶ್ ಚಂದ್ರ. ಇಂಜಿನಿಯರಿಂಗ್ ಓದಿ, ದುಬೈನ ಇಂಜಿನಿಯರಿಂಗ್ ಸಂಸ್ಥೆಯಲ್ಲಿ ಫ್ಯಾಕ್ಟರಿ ಇನ್ ಚಾರ್ಜ್ ಅಗಿರುವ ಸತೀಶ್ ಚಂದ್ರ ಶೆಟ್ಟಿ ಮೂಲತಃ ಜನ್ಸಾಲೆಯವರು.
ಪೂರ್ವಿಕರು ಬಿಟ್ಟುಹೋದ ಭೂಮಿ ಹಾಳಾಗಬಾರದೆಂದು ಒಂದಷ್ಟು ವಿಭಿನ್ನ, ಇನ್ನೊಂದಷ್ಟು ಹೊಸತನದ ಕೃಷಿ ಆರಂಭಿಸಿದ ಅನಿವಾಸಿ ಭಾರತೀಯ ಈತ. ವಿದೇಶದಲ್ಲೇ ಕೂತು ಜನ್ಸಾಲೆಯಲ್ಲಿ ನಡೆಯುತ್ತಿರುವ ಕೃಷಿಯ ಆಗು ಹೋಗುಗಳನ್ನು ಗಮನಿಸುತ್ತಿರುತ್ತಾರೆ. ಅದು ಹೇಗೆ, ಇದೆಲ್ಲಾ ಹೇಗೆ ಸಾಧ್ಯವಾಯಿತು ಅಂತೀರಾ? ಮುಂದೆ ಓದಿ…. ಸತೀಶ್ ಚಂದ್ರ ಮೊಲದ ಫಾರಂ, ಅನಾನಸ್ ಕೃಷಿ, ಪೆಪ್ಪರ್ ತೋಟ ಮಾಡಿದ್ದು ಹಣದ ಉದ್ದೇಶಕ್ಕಲ್ಲ. ಮತ್ತಷ್ಟು ಯುವಕರು ಕೃಷಿಯತ್ತ ಬರಬೇಕು ಎಂದು. ಮೊದಲು ಕೋಳಿ ಫಾರಂ, ಆಡು ಸಾಕಾಣಿಕೆ, ಜೇನು, ಹಾಲಿನ ಡೇರಿ ಮಾಡುವ ಉದ್ದೇಶವಿಟ್ಟುಕೊಂಡಿದ್ದರೂ, ಅದೇಕೊ ತುಡಿತ ಮೊಲದ ಸಾಕಾಣಿಕೆಯತ್ತ ಹೋಯಿತು. ಸುಮಾರು 55 ಲಕ್ಷ ರೂ.ವೆಚ್ಚದ ಅತ್ಯಾಧುನಿಕ ಮೊಲ ಸಾಕಣಿಕೆ ಕೇಂದ್ರ ಇದಾಗಿದ್ದು, ಮೊಲದ ಮಾಂಸ ಕೊಲೆಸ್ಟ್ರಾಲ್ ರಹಿತವಾಗಿದೆ. ಈ ಫಾರಂನಿಂದ ಮೊಲ ಮಾಂಸಕ್ಕಾಗಿ ಹೆಚ್ಚು ಹೋಗದೆ ತಳಿಗಾಗಿ ಮತ್ತು ಲ್ಯಾಬ್ ಗಳಿಗೆ ಪೂರೈಸಲಾಗುತ್ತದೆ.
ಚಿಕ್ಕಮಗಳೂರು ರಾಬಿಟ್ ಫಾರಂ ಮೊಲ ಸಪ್ಲೈ ಮಾಡುತ್ತದೆ. ಹತ್ತು ಮರಿಗಳಿರುವ ಒಂದು ಬಾಕ್ಸ್ ಮೊಲಕ್ಕೆ 20 ಸಾವಿರ ಬೆಲೆ ಇದೆ. ಲ್ಯಾಬ್ ನಲ್ಲಿ ನ್ಯೂಜಿಲ್ಯಾಂಡ್ ವೈಟ್ ಎಂದು ಕರೆಸಿಕೊಳ್ಳುವ ಬಿಳಿಬಣ್ಣದ ಮೊಲಕ್ಕೆ ಹೆಚ್ಚು ಬೇಡಿಕೆ ಇದೆ. ಫಾರಂನಲ್ಲಿರುವ ಮರಿಗಳಿಗೆ ಹದಿನೈದು ದಿನ ತಾಯಿ ಹಾಲು ಕೊಟ್ಟ ನಂತರ ಫುಡ್ ನೀಡಲಾಗುತ್ತದೆ. ಮೆಡಿಕಲ್ ಚೆಕ್‌ಅಪ್ ಕೂಡ ನಡೆಯುತ್ತದೆ. ನ್ಯೂಜಿಲ್ಯಾಂಡ್ ವೈಟ್, ನ್ಯೂಜಿಲ್ಯಾಂಡ್ ಜಾಯಿಂಟ್, ಸೋವಿಯತ್ ಚಿಂಚೋಲಾ, ಕ್ಯಾಲಿಪೋರ್ನಿಯಾ ವೈಟ್, ಡೆಚ್ ಹೀಗೆ ತರಹೇವಾರಿ ಮೊಲಗಳಿವೆ. ಒಂದೊಂದು ಮೊಲಕ್ಕೂ ಒಂದೊಂದು ಗೂಡು. ಬಾಯಿ ತಾಗಿದರೆ ನೀರು ಬರುತ್ತದೆ. ಸಮಯಕ್ಕೆ ಸರಿಯಾಗಿ ದಿನಕ್ಕೆ ಮೂರು ಬಾರಿ ಆಹಾರ ನೀಡಲಾಗುತ್ತದೆ. ಆಧುನಿಕ ಜಗತ್ತಿನಲ್ಲಿ ಮನಷ್ಯರಿಗೆ ದೇಶ, ಮಾತೃಭೂಮಿ ಎಂಬ ಪರಿಕಲ್ಪನೆಯೇ ಇರುವುದಿಲ್ಲ. ಹೆಚ್ಚು ಸಂಬಳ ಸಿಗುತ್ತೆ ಎಂದಾದರೆ ಹೆತ್ತ ಮಾತೆಯನ್ನೇ ಬಿಟ್ಟು ಬೇರೆ ದೇಶದತ್ತ ಮುಖಮಾಡುವ ಕೆಲವರಿಗೆ ಈ ಸ್ವದೇಶಿ ಪ್ರೇಮಿ, ಕೃಷಿಕ ಮಾದರಿಯಾಗಬೇಕಿದೆ.
Leave A Reply