ಪಾಲಿಕೆಯಲ್ಲಿ ಸರ್ವರ್ ಡೌನ್ ಜೊತೆಗೆ ಇಚ್ಚಾಶಕ್ತಿಯೂ ಡೌನ್ ಆಗಿರುವುದರಿಂದ ಜನರಿಗೆ ಕಿರಿಕಿರಿ ಗ್ಯಾರಂಟಿ!!
Posted On October 13, 2018
ಮಂಗಳೂರು ಮಹಾನಗರ ಪಾಲಿಕೆಯಲ್ಲಿ ನಾಗರಿಕರು ಹಿಂದಿಗಿಂತ ಈಗ ಹೆಚ್ಚು ಕಿರಿಕಿರಿ ಅನುಭವಿಸುತ್ತಿದ್ದಾರೆ. ಅದಕ್ಕೆ ಕಾರಣ ಪಾಲಿಕೆ ಅತ್ಯಾಧುನಿಕ ಶೈಲಿಗೆ ಹೋಗಿರುವುದು. ಹಿಂದೆ ಎರಡು ಕೈಗಳಿಂದ ಮಾಡುತ್ತಿದ್ದ ಕೆಲಸವನ್ನು ಈಗ ಕೆಲವೇ ಬೆರಳುಗಳಿಂದ ಮಾಡಬಹುದಾಗಿರುವ ವ್ಯವಸ್ಥೆ ಬಂದಿದೆ. ಆದರೆ ಹಿಂದೆ ಕೆಲಸ ಹತ್ತು ದಿನಗಳ ಒಳಗೆ ಆಗುತ್ತಿದ್ದದ್ದು ಈಗ ನಲ್ವತ್ತು ದಿನ ತಗಲುತ್ತಿದೆ. ಉದಾಹರಣೆಗೆ ಮೂರು ತಿಂಗಳ ಹಿಂದೆ ಜಮೀನಿಗೆ ಖಾತಾ ಮಾಡಿಸಲು ಪಾಲಿಕೆಗೆ ಹೋದರೆ ಹೆಚ್ಚೆಂದರೆ ಹತ್ತು ದಿನಗಳ ಒಳಗೆ ಕೆಲಸ ಆಗುತ್ತಿತ್ತು. ಆದರೆ ಮೂರು ತಿಂಗಳಿಂದ ಅದೇ ಖಾತಾ ಮಾಡಿಸಲು ಹೋದರೆ ಕೆಲಸ ಮುಗಿಯಲು ನಲ್ವತ್ತು ದಿನ ಆಗುತ್ತದೆ. ಹಿಂದೆ ಟ್ರೇಡ್ ಲೈಸೆನ್ಸ್ ಮಾಡಿಸಲು ನೀವು ಹೋದರೆ ಹೆಚ್ಚೆಂದರೆ 15-20 ದಿನಗಳ ಒಳಗೆ ಮಾಡಿಕೊಡಲಾಗುತ್ತಿತ್ತು. ಅದೇ ಟ್ರೇಡ್ ಲೈಸೆನ್ಸ್ ರಿನಿವಲ್ ಐದು ದಿನಗಳ ಒಳಗೆ ಆಗುತ್ತಿತ್ತು. ಈಗ ಟ್ರೇಡ್ ಲೈಸೆನ್ಸ್ ರಿನಿವಲ್ ಮಾಡಿಸಲು ಒಂದು ತಿಂಗಳು ತಾಗುತ್ತದೆ. ಅದೇ ಹೊಸ ಟ್ರೇಡ್ ಲೈಸೆನ್ಸ್ ಮಾಡಿಸಲು ಒಂದೂವರೆ ತಿಂಗಳು ತಗಲುತ್ತದೆ. ಹಿಂದೆ ಮ್ಯಾನುವಲ್ ಆಗಿ ಕೆಲಸ ನಡೆಯುತ್ತಿತ್ತು. ಈಗ ಪಾಲಿಕೆ ಪೇಪರ್ ಲೇಸ್ ಆಗಿದೆ. ಈಗ ಎಲ್ಲ ಕಂಪ್ಯೂಟರ್ ನಲ್ಲಿಯೇ ನಡೆಯುತ್ತದೆ. ಆದ್ದರಿಂದ ಕೆಲಸ ತುಂಬಾ ನಿಧಾನವಾಗಿ ನಡೆಯುತ್ತದೆ. ನಿಮಗೆ ಆಶ್ಚರ್ಯ ಆಗಬಹುದು. ಕಂಪ್ಯೂಟರ್ ಬಂದ ಮೇಲೆ ಎಲ್ಲವೂ ಅದರಲ್ಲಿಯೇ ನಡೆಯುವಾಗ ಅದು ಹೇಗೆ ನಿಧಾನವಾಗಿ ನಡೆಯುತ್ತದೆ ಎಂದು ನಿಮಗೆ ಅನಿಸಲೂಬಹುದು. ಆದರೆ ಹಾಗೆ ಆಗುತ್ತಿದೆ ಮತ್ತು ಅದಕ್ಕೆ ಪಾಲಿಕೆ ಕೊಡುವ ಕಾರಣ ಸರ್ವರ್ ಡೌನ್ ಇದೆ.
ನಮ್ಮ ಪಾಲಿಕೆಯಲ್ಲಿ ದಶಕಗಳ ಪ್ರಯತ್ನದ ನಂತರ ಪೇಪರ್ ಲೆಸ್ ವ್ಯವಸ್ಥೆ ಜಾರಿಗೆ ಬಂತು ಅಂದಾಗ ಪ್ರಸ್ತುತ ಆಡಳಿತ ಮಾಡುತ್ತಿರುವ ಕಾಂಗ್ರೆಸ್ ಪಕ್ಷ ತನ್ನ ಬೆನ್ನನ್ನು ತಾನೇ ತಟ್ಟಿಕೊಂಡಿತು. ಎಲ್ಲಾ ಕಡೆ ಈ ಬಗ್ಗೆ ಡಂಗುರ ಸಾರಲಾಯಿತು. ಆದರೆ ಅದರ ನಂತರವೇ ಹೊಸ ಸಮಸ್ಯೆ ಶುರುವಾದದ್ದು.
ಪೇಪರ್ ಲೆಸ್ ಮಾಡಿ ಸ್ಕ್ಯಾನರ್ ಕೊರತೆ ಇದ್ದರೆ.
ಪೇಪರ್ ಲೆಸ್ ಆಫೀಸ್ ಎಂದರೆ ಅದಕ್ಕೆ ಸೂಕ್ತವಾದ ಮೂಲಭೂತ ವ್ಯವಸ್ಥೆ ಕೂಡ ಇರಬೇಕಲ್ಲ. ಪೇಪರ್ ಲೆಸ್ ಎಂದರೆ ಮ್ಯಾಜಿಕ್ ಮಾಡಿ ದಾಖಲೆಗಳನ್ನು ತಯಾರಿಸುವುದು ಅಲ್ಲವಲ್ಲ. ಒಂದು ಮಂತ್ರದಂಡ ಕೈಯಲ್ಲಿ ಹಿಡಿದು “ಅದ್ರಾಕಬಡಾ ಡಂ ಡಂ” ಎನ್ನುತ್ತಾ ನಿಮ್ಮ ಖಾತಾ ಪೇಪರ್ ರೆಡಿ, ತೆಗೆದುಕೊಂಡು ಹೋಗಿ ಎಂದು ಹೇಳಲು ಆಗುವುದಿಲ್ಲವಲ್ಲ. ಕ್ಯಾಶ್ ಲೆಸ್ ಆಫೀಸ್ ಎಂದರೆ ಅಲ್ಲಿ ಕಂಪ್ಯೂಟರ್ ಜೊತೆ ಸ್ಕ್ಯಾನರ್ ಕೂಡ ಬೇಕಾಗುತ್ತದೆ. ಚಿಕನ್ ಕರಿ ಮಾಡಿ ಸೌಟು ಕೊಡದಿದ್ದರೆ ಪಾತ್ರೆಯೊಳಗೆ ಕೈ ಹಾಕಿ ಚಿಕನ್ ಪಿಸ್ ತೆಗೆಯಲು ಆಗುತ್ತದಾ? ಹಾಗೆ ಕಂಪ್ಯೂಟರ್ ಜೊತೆ ಸ್ಕ್ಯಾನರ್ ಇದ್ರೆ ಮಾತ್ರ ತಾನೆ ಪ್ರಿಂಟ್ ತೆಗೆಯಲು ಆಗುವುದು. ಇನ್ನು ಇಡೀ ಪಾಲಿಕೆಗೆ ಒಂದು ಸ್ಕ್ಯಾನರ್ ಕೊಟ್ಟರೆ ಸಾಲುತ್ತದಾ? ಇದು ಒಂದು ರೀತಿಯಲ್ಲಿ ಒಂದೂವರೆ ಸಾವಿರ ಜನರ ಅಡುಗೆ ಮಾಡಿ ಬಡಿಸಲು ಇಬ್ಬರನ್ನು ಮಾತ್ರ ಕ್ಯಾಟರಿಂಗ್ ನವರು ಕಳುಹಿಸಿಕೊಟ್ಟರೆ ಹೇಗೆ ಆಗುತ್ತದೋ ಹಾಗೆ ಆಗುತ್ತದಾ? ಯಾವಾಗ ಹತ್ತು ಜನ ಮಾಡುವಂತಹ ಕೆಲಸವನ್ನು ಒಬ್ಬ ಮಾಡಿದರೆ ಅವನು ಹೇಗೆ ನಿತ್ರಾಣನಾಗುತ್ತಾನೋ ಹಾಗೆ ಪಾಲಿಕೆಯಲ್ಲಿ ಒಂದು ಸ್ಕ್ಯಾನರ್ ಹತ್ತು ಸ್ಕ್ಯಾನರ್ ಮಾಡುವ ಕೆಲಸ ಮಾಡಿ ಸುಸ್ತಾಗುತ್ತಿದೆ. ಹೀಗೆ ಸುಸ್ತಾದ ಪೆಟ್ಟಿಗೆ ಕಾಲು ಚಾಚಿ ಮಲಗುತ್ತಿದೆ. ಇದನ್ನು ಪಾಲಿಕೆಯವರು ಸರ್ವರ್ ಡೌನ್ ಎಂದು ಕರೆಯುತ್ತಿದ್ದಾರೆ. ಒಂದು ವೇಳೆ ಸರ್ವರ್ ಸರಿ ಇದ್ದರೂ ಇವರಲ್ಲಿ ಸರ್ವ್ ಮಾಡುವ ಸಿಬ್ಬಂದಿಗಳ ಕೊರತೆ ಇರುವುದರಿಂದ ಒಂದು ಕಚೇರಿಗೆ ವರದಾನವಾಗಬೇಕಿದ್ದ ಪೇಪರ್ ಲೆಸ್ ವ್ಯವಸ್ಥೆ ಪಾಲಿಕೆಯಲ್ಲಿ ಜನರಿಗೆ ಶಾಪವಾಗುತ್ತಿದೆ. ಉದಾಹರಣೆಗೆ ನೀವು ಇವತ್ತು ಒಂದು ಖಾತಾ ಮಾಡಲು ಕೊಟ್ಟರೆ ಇವತ್ತೇ ನಿಮ್ಮ ಹಾಗೆ ಐವತ್ತು ಜನ ಖಾತಾ ಮಾಡಿಸಲು ಕೊಟ್ಟಿದ್ದಾರೆ ಎಂದು ಇಟ್ಟುಕೊಳ್ಳೋಣ. ಹಿಂದೆ ಮ್ಯಾನುವಲ್ ಆಗಿ ಇದ್ದಾಗ ಕೆಲಸ ಮಾಡುವ ಶೈಲಿಯೇ ಬೇರೆ ಇತ್ತು. ಈಗ ಸ್ಕ್ಯಾನಿಂಗ್ ಬಂದ ಮೇಲೆ ಪ್ರತಿಯೊಂದು ದಾಖಲೆ ಕೂಡ ಸ್ಕ್ಯಾನ್ ಮಾಡಿಯೇ ತೆಗೆಯಬೇಕು. ಇವತ್ತು ಐವತ್ತು ಅರ್ಜಿಗಳು ಖಾತಾ ಮಾಡಿಸಲು ಬಂದರೆ ಸಿನಿಯಾರಿಟಿ ಪ್ರಕಾರ ನಿಮ್ಮದು ಬಂದಾಗ ನವೆಂಬರ್ ಅಂತ್ಯ ಆಗಬಹುದು. ಉಳಿದವರದ್ದು ಅದರ ನಂತರ ಒನ್ ಬೈ ಒನ್.
ಹೊಸ ಕಂದಾಯ ಅಧಿಕಾರಿ ಇಲ್ಲ.
ಪಾಲಿಕೆಯಲ್ಲಿ ಕಾಂಗ್ರೆಸ್ ತನ್ನ ಕೊನೆಯ ಅವಧಿಯ ಕೊನೆಯಲ್ಲಿ ಮಾಡುತ್ತಿರುವ ರಾಜಕೀಯಕ್ಕೂ ಕಡಿಮೆ ಇಲ್ಲ. ಕಂದಾಯ ಅಧಿಕಾರಿ ಪ್ರವೀಣ್ ಕರ್ಕೇರ ಮಾಜಿ ಶಾಸಕರೊಬ್ಬರ ಅಕ್ರಮ ಹೋರ್ಡಿಂಗ್ ತೆಗೆದರು ಎಂದು ಅವರನ್ನು ನೀರು, ಆಹಾರ ಸರಿ ಇಲ್ಲದ ಕಡೆ ಎತ್ತಂಗಡಿ ಮಾಡಲಾಗಿದೆ. ಆದರೆ ಅವರ ಸ್ಥಾನಕ್ಕೆ ಯಾರನ್ನು ಕೂಡ ತಂದು ಕೂಡಿಸುವಷ್ಟು ಪುರುಸೊತ್ತು ನಮ್ಮ ಉಸ್ತುವಾರಿ ಸಚಿವರಿಗಿಲ್ಲ. ಅವರದ್ದೇನಿದ್ದರೂ ಈಗ ಕಸಾಯಿ ಖಾನೆ ಉದ್ಧಾರ ಮಾಡುವ ಕೆಲಸ. ಆದ್ದರಿಂದ ಅಗತ್ಯ ಇದ್ದಷ್ಟು ಕಂದಾಯ ಅಧಿಕಾರಿ ಇಲ್ಲದೆ ಪಾಲಿಕೆ ಸೊರಗಿದೆ. ಇರುವ ಮೂರು ಝೋನ್ ಗಳಲ್ಲಿ ಮಂಗಳೂರು ನಗರ ಮತ್ತು ಕದ್ರಿ ಉಪವಿಭಾಗದ ಕೆಲಸವನ್ನು ಒಬ್ಬ ಕಂದಾಯ ಅಧಿಕಾರಿಯೇ ನಿರ್ವಹಿಸಬೇಕಾಗಿದೆ. ಪಾಲಿಕೆಯಲ್ಲಿ ಒಂದು ಕೆಳಮಹಡಿ ಮತ್ತು ಮತ್ತೊಂದು ಮೇಲ್ಮಹಡಿಯಲ್ಲಿ ಇರುವ ಎರಡು ವಿಭಾಗದ ಕಚೇರಿಗಳಿಗೆ ಓಡಾಡಿ ಅವರು ಕೆಲಸ ಮಾಡುವುದರಿಂದ ಅವರ ಆರೋಗ್ಯ ಹದಗೆಡದಿದ್ದರೆ ಪುಣ್ಯ.
ಇದೆಲ್ಲ ಸುಧಾರಿಸುವುದು ಯಾವಾಗ ಎಂದು ಕೇಳೋಣ ಎಂದರೆ ಪಾಲಿಕೆಯಲ್ಲಿ ಅಧಿಕಾರಿಗಳು ಕೈಗೆ ಸಿಗುವುದು ಕಷ್ಟ. ಮಧ್ಯಾಹ್ನ 3.30 ರ ನಂತರ ಎಲ್ಲಾ ಅಧಿಕಾರಿಗಳು ಅವರವರ ಕಾರ್ಯಕ್ಷೇತ್ರವಾಗಿರುವ ವಿಭಾಗದಲ್ಲಿಯೇ ಇರಬೇಕು ಎಂದು ಸುತ್ತೋಲೆ ಇದೆ. ಆದರೆ ಹೆಚ್ಚಿನವರು ಬಂದರೆ ನಾಲ್ಕೂವರೆಯ ನಂತರವೇ. ಕೇಳಿದರೆ ಮೀಟಿಂಗ್. ಪಾಲಿಕೆಯ ಆಯುಕ್ತರು, ಸಹಾಯಕ ಕಮೀಷನರ್ ಎಲ್ಲ ಆಗಲೇ ಮೀಟಿಂಗ್ ಕರೆಯುತ್ತಾರೆ ಎನ್ನುವುದು ಅಧಿಕಾರಿಗಳ ಸಬೂಬು. ಒಂದು ವೇಳೆ ಅಪ್ಪಿತಪ್ಪಿ ಅಧಿಕಾರಿಗಳು ಸಿಕ್ಕಿ ಪೇಪರ್ ಲೆಸ್ ಅವ್ಯವಸ್ಥೆಯ ಬಗ್ಗೆ ಹೇಳಿದರೆ ಅದೇ ಸಿದ್ಧ ಉತ್ತರ “ಸರ್ವರ್ ಡೌನ್”. ನಾನು ವಿನಂತಿಸುವುದಿಷ್ಟೇ. ಪಾಲಿಕೆಯಲ್ಲಿಯೇ ಇಬ್ಬರು ಯುವ ಶಾಸಕರ ಕಚೇರಿಗಳು ಇವೆ. ಒಮ್ಮೆ ಸಡನ್ನಾಗಿ ಮೂರುವರೆಗೆ ಇವರು ಪಾಲಿಕೆಯ ವಿವಿಧ ವಿಭಾಗಗಳನ್ನು ನೋಡಿ ಬರಬೇಕು. ಯಾವ ಅಧಿಕಾರಿ ಇದ್ದಾರಾ, ಇಲ್ವಾ ಗೊತ್ತಾಗುತ್ತದೆ. ಯಾವಾಗ ಪಾಲಿಕೆಯಲ್ಲಿ ಆಡಳಿತ ಪಕ್ಷ, ಅಧಿಕಾರಿಗಳ ಇಚ್ಚಾಶಕ್ತಿ ಡೌನ್ ಆದಾಗ ಆಟೋಮೆಟಿಕ್ ಆಗಿ ಸರ್ವರ್ ಕೂಡ ಡೌನ್ ಆಗುತ್ತದೆ!
- Advertisement -
Leave A Reply