ವಾಹನ ನನ್ನದು; ರಸ್ತೆ ನಮ್ಮೆಲ್ಲರದು!
ಈಗಿನ ಜಮಾನದಲ್ಲಿ ಸ್ವಂತ ವಾಹನ ಹೊಂದಿರದವರು ತುಂಬಾ ಕಡಿಮೆ. ಒಂದೊಂದು ಮನೆಯಲ್ಲಿ ಕನಿಷ್ಠ ಪಕ್ಷ ದ್ವಿಚಕ್ರ ವಾಹನವನ್ನಾದರೂ ಹೊಂದಿರುತ್ತದೆ. ಕೆಲವು ಮನೆಯಲ್ಲಿ ಮನೆಯ ಪ್ರತಿಯೊಬ್ಬ ಸದಸ್ಯರಿಗೊಂದು ಯಾವುದಾದರೂ ಒಂದು ವಾಹನ ಹೊಂದಿರುತ್ತದೆ. ಮೊದಲು ವಾಹನ ಹೊಂದುವುದೆಂದರೆ ಪ್ರತಿಷ್ಠೆಯ ವಿಷಯವಾಗಿತ್ತು. ಈಗ ವಾಹನ ಎಂಬುದು ಜೀವನದ ಅವಿಭಾಜ್ಯ ಅಂಗವಾಗಿ ಹೋಗಿದೆ. ಅಂದರೆ ವಾಹನವೂ ಆ ಕುಟುಂಬದ ಒಬ್ಬ ಸದಸ್ಯನಂತಾಗಿದೆ. ಅದು ಹಳ್ಳಿಯಾಗಿರಲಿ ಪಟ್ಟಣವಾಗಿರಲಿ ವಾಹನ ಹೊಂದಿರುವುದರ ವಿಷಯದಲ್ಲಿ ಎರಡು ರೀತಿಯ ಜನರ ಮನಸ್ಥಿತಿ ಒಂದೇ ಆಗಿದೆ. ನಾವು ಬಾಲ್ಯದಲ್ಲಿ ರಸ್ತೆಯಲ್ಲಿ ಒಂದು ವಾಹನ ಹೋಯಿತು ಅಂತಾದರೆ ಅದು ವಾಪಸ್ಸು ಬರುವ ತನಕ ಕಾಯುತ್ತಿದ್ದೇವು. ಆಗ ಅದು ಅಷ್ಟು ಕುತೂಹಲದ ಸಂಗತಿಯಾಗಿತ್ತು. ಈಗಿನ ಮಕ್ಕಳು ಅದೃಷ್ಟವಂತರು ಹುಟ್ಟಿದ ಆರನೇ ತಿಂಗಳಿಗೆ ಕಾರು,ಬಸ್, ಸ್ಕೂಟರ್ ಮುಂತಾದ ವಾಹನದ ರೂಪದ ಆಟದ ಸಾಮಾನುಗಳನ್ನು ಹೆತ್ತವರು ಕೊಡುತ್ತಾರೆ. ಆಗ ಶುರುವಾಗುವ ವಾಹನದ ಖಯಾಲಿ ಕೊನೆಯ ಉಸಿರಿರುವ ತನಕ ಇರುತ್ತದೆ.
ಈಗಿನ ಜೀವನ ಶೈಲಿಯಲ್ಲಿ ವಾಹನಗಳ ಮೇಲೆ ಎಷ್ಟು ಅವಲಂಬಿತರಾಗಿದ್ದೇವೆ ಅಂದರೆ ಪಕ್ಕದಲ್ಲಿಯೇ ಇರುವ ಅಂಗಡಿಯಿಂದ ಹಾಲು ತರಲು ವಾಹನ ತೆಗೆದುಕೊಂಡು ಹೋಗುತ್ತೇವೆ. ಮತ್ತೆ ಅದರ ಎಂಜಿನ್ ಆಪ್ ಆಗುವುದು ರಾತ್ರಿ ಹೊತ್ತಿಗೆ ಮಾತ್ರ. ಕಾರಣ ಕೆಲಸದ ಒತ್ತಡ, ಸಮಯ ಉಳಿತಾಯ ಇತ್ಯಾದಿ. ವಾಹನಗಳ ಮೇಲೆ ಇಷ್ಟು ಅವಲಂಬಿತರಾದರೂ ಅದರ ನಿಭಾವಣೆಯಲ್ಲಿ ನಾವು ಖಂಡಿತ ಎಡವಿದ್ದೇವೆ. ವಾಹನ ಚಲಾಯಿಸುವುದರ ಬಗ್ಗೆ ಅಥವಾ ವಾಹನ ಚಲಾಯಿಸುವಾಗ ಯಾವೆಲ್ಲ ಮುಂಜಾಗರೂಕತೆ ವಹಿಸಬೇಕು ಎನ್ನುವ ಸಾಮಾನ್ಯ ಜ್ಞಾನದ ಕೊರತೆ ಎದ್ದು ಕಾಣುತ್ತದೆ. ಇದಕ್ಕೆ ಕಾರಣ ಹಲವು ಇದ್ದರೂ ನಾವು ಕಾರಣ ಹುಡುಕುವ ಬದಲು ಅದಕ್ಕೆ ಸಾಮಾನ್ಯ ಪರಿಹಾರ ಏನು ಅನ್ನುವುದು ತಿಳಿಸುವುದೇ ಈ ಲೇಖನದ ಉದ್ದೇಶ. ಕೆಲವರಿಗೆ ಅವರು ಬಳಸುವ ವಾಹನ ಅಂದರೆ ತಮ್ಮ ಮನೆಯವರಿಗಿಂತಲೂ ಪ್ರೀತಿ ಜಾಸ್ತಿ. ಅಂತವರು ವಾಹನವನ್ನು ದಿನಾಲೂ ತೊಳೆಯುತ್ತಾರೆ. ಅದರಲ್ಲಿ ಏನೇ ತಾಂತ್ರಿಕ ಸಮಸ್ಯೆ ಬಂದರೂ ತಕ್ಷಣ ಸರಿ ಮಾಡಿಸುತ್ತಾರೆ. ಕೆಲವರು ಇದಕ್ಕೆ ತದ್ವಿರುದ್ಧವಾಗಿರುತ್ತಾರೆ. ವಾಹನವನ್ನು ಚೆನ್ನಾಗಿ ನೋಡಿಕೊಂಡರೆ ಮಾತ್ರ ಬಾಳಿಕೆ ಬರುವುದು ಅಲ್ಲದೆ ಕೆಲವು ಸಂದರ್ಭಗಳಲ್ಲಿ ಅದು ನಮ್ಮ ಜೀವವನ್ನು ಕಾಪಾಡಲೂ ಬಹುದು. ವಾಹನಗಳಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳಬೇಕು. ಅಂದರೆ ದಾಖಲೆಗಳು ಯಾವಾಗಲೂ upto-date ಆಗಿ ಇಟ್ಟುಕೊಳ್ಳಬೇಕು. ಅಪಘಾತ ಸಂಭವಿಸಿದಾಗ ವಿಮೆ ಸೌಲಭ್ಯ ಪಡೆಯುವ ಸಂದರ್ಭದಲ್ಲಿ ವಾಹನದ ದಾಖಲೆಗಳ ಅಗತ್ಯ ಬೀಳುತ್ತದೆ.
ನಮ್ಮ ತಲೆಯಲ್ಲಿ ಒಂದು ದುರಾಲೋಚನೆ ಇದೆ. ನಾವು ರಸ್ತೆ ತೆರಿಗೆ ಕಟ್ಟುತ್ತೇವೆ. ಹಾಗಾಗಿ ರಸ್ತೆಯಲ್ಲಿ ನಾನು ರಾಜನಾಗಿ ಇರಬೇಕೆಂದು, ರಸ್ತೆಯಲ್ಲಿ ಹೇಗೆ ಬೇಕಾದರೂ ಇರುವ ಸ್ವಾತಂತ್ರ್ಯ ನಮಗಿದೆ ಅನ್ನು ಕೆಟ್ಟ ಆಲೋಚನೆ ಇದೆ. ಆದರೆ ಎಲ್ಲರೂ ಅದೇ ಮನಸ್ಥಿತಿಯನ್ನು ಹೊಂದಿದವರಾದರೆ ಟ್ರಾಫಿಕ್ ನ ಗತಿಯೇನು ? ಯಾರಾದರೂ ಆಲೋಚನೆ ಮಾಡಿದ್ದಿರಾ ? ನಾವೆಲ್ಲ ನಮ್ಮ ಮೂಗಿನ ನೇರಕ್ಕೆ ಆಲೋಚನೆ ಮಾಡುತ್ತೇವೆ ಹೊರತು ಇನ್ನೊಬ್ಬರ ಬಗ್ಗೆ ಆಲೋಚನೆ ಮಾಡುವಂತಹ ಒಳ್ಳೆಯ ಕೆಲಸ ಮಾಡುವುದಿಲ್ಲ. ಅದಕ್ಕೆ ರಸ್ತೆಯಲ್ಲಿ ಯಾವ ರೀತಿ ಇರಬೇಕೆಂದು ಕೆಲವು ಸೂಚನೆಗಳನ್ನು ನೀಡುವುದು ಕೂಡಾ ಈ ಲೇಖನದ ಉದ್ದೇಶ. ಆದರೆ ಇದು ಕಾನೂನಿನ ಪ್ರಕಾರವಾದರೂ ಜನಸಾಮಾನ್ಯನ ನೆಲೆಯಲ್ಲಿ ಯೋಚನೆ ಮಾಡಿ ಬರೆದಿರುತ್ತೇನೆ.
ನೀವು ಮನೆಯಿರುವ ಅಡ್ಡ ರಸ್ತೆಯಿಂದ ಮುಖ್ಯ ರಸ್ತೆಗೆ ಬೇಕಾಬಿಟ್ಟಿ ಹಾರ್ನ್ ಮಾಡಿಕೊಂಡು ಒಮ್ಮೆಲೇ ನುಗ್ಗಿ ಬರುತ್ತಿರಿ. ಇದು ತಪ್ಪು ಯಾಕೆಂದರೆ ಮುಖ್ಯ ರಸ್ತೆಯಲ್ಲಿ ವಾಹನ ಯಾವುದೇ ಅಡೆ ತಡೆ ಇಲ್ಲವೆಂದು ಅವರ ಪಾಡಿಗೆ ಹೋಗುತ್ತಿರುತ್ತಾರೆ. ಅಲ್ಲಿಗೆ ನೀವು ಒಮ್ಮೆಲೇ ನುಗ್ಗಿ ಬಂದರೆ ಅಲ್ಲಿ ಪರಿಸ್ಥಿತಿ ಹೇಗಾಗಬೇಡ ಆಲೋಚನೆ ಮಾಡಿ.!!!. ಇಂತಹ ಅವಘಡ ತಪ್ಪಿಸಲು ಅಡ್ಢರಸ್ತೆಯಿಂದ ಬರುವ ನಮ್ಮಿಂದ ಮಾತ್ರ ಸಾಧ್ಯ. ಮುಖ್ಯ ರಸ್ತೆ ಬರುವ ಮುನ್ನ ಎಡ ಬಲ ನೋಡಿಕೊಂಡು ಬಂದರೆ ನಾವು ಕ್ಷೇಮ ಉಳಿದವರು ಕ್ಷೇಮ. ಅದಕ್ಕೆ ಹಿರಿಯರು ಹೇಳಿರುವುದು “ಅವಸರವೇ ಅಪಘಾತಕ್ಕೆ ಕಾರಣ” ಅಂತ.
ನೀವು ಹಾಗೆಯೇ ಸುಮ್ಮನೆ ರಸ್ತೆಯಲ್ಲಿ ಹೋಗುವ ವಾಹನಗಳನು ಗಮನಿಸಿ. ಅವುಗಳಲ್ಲಿ ಕನಿಷ್ಟ ಅಂದರೂ 5-6 ವಾಹನದ ಚಾಲಕರು ಮೊಬೈಲ್ ನಲ್ಲಿ ಮಾತಾನಾಡಿಕೊಂಡೇ ಚಲಾಯಿಸುತ್ತಾರೆ. ಈಗಿನ ವೇಗದ ಜೀವನ ಶೈಲಿಯಲ್ಲಿ ಕೆಲವೊಂದು ವಿಚಾರಗಳು ಅನಿವಾರ್ಯ ಎನಿಸಿವೆ. ಅದರಲ್ಲಿ ಈ ಮೊಬೈಲ್ ಪೋನ್ ಕೂಡಾ ಒಂದು. ವಾಹನ ಚಲಾಯಿಸುವಾಗ ಮೊಬೈಲ್ ಮಾತನಾಡಿದರೆ ಅಪಘಾತ ಸಂಭವಿಸುತ್ತದೆ ಅನ್ನುವ ಕನಿಷ್ಟ ಜ್ಞಾನ ಎಲ್ಲರಲ್ಲೂ ಇರುತ್ತದೆ ಆದರೆ ಅದನ್ನು ಪಾಲನೆ ಮಾಡುವುದು ಕೇವಲ ಕೆಲವೇ ಪ್ರತಿಶತ ಮಂದಿ ಮಾತ್ರ. ನೀವು ಸೂಕ್ಷ್ಮವಾಗಿ ಗಮನಿಸಿ ಮೊಬೈಲ್ ಮಾತಾನಾಡುವ ವಾಹನಿಗರ ಶೈಲಿಯನ್ನು, ದ್ವಿಚಕ್ರ ವಾಹನ ಸವಾರರು ಕಿವಿ ಮತ್ತು ಕೆನ್ನೆಯ ಮಧ್ಯೆ ಇಟ್ಟು, ಇನ್ನು ಕೆಲವರು ಒಂದು ಕೈಯಲ್ಲಿ ಮೊಬೈಲ್ ಇನ್ನೊಂದು ಕೈಯಲ್ಲಿ ಬೈಕಿನ ಹ್ಯಾಂಡಲ್ ಹಿಡಿದುಕೊಂಡು ಏನೇನು ಸರ್ಕಸ್ ಮಾಡುತ್ತಾ ಮೊಬೈಲ್ ಮಾತಾನಾಡುತ್ತಾರೆ. ಹಾಗಾದರೆ ಇವರಿಗೆ ಬದಿಯಲ್ಲಿ ನಿಲ್ಲಿಸಿ ಮಾತಾನಾಡುವ ವ್ಯವಧಾನ ಇಲ್ಲವಾ ಅಥವಾ ತೀರಾ ನಿರ್ಲಕ್ಷ್ಯವೋ ಗೊತ್ತಿಲ್ಲ. ಇನ್ನುಳಿದ ವಾಹನದವರ ಅವಸ್ಥೆ ಇದಕ್ಕಿಂತ ಭಿನ್ನವಾಗಿ ಏನಿಲ್ಲ. ಇಷ್ಟೆಲ್ಲಾ ಸರ್ಕಸ್ ಮಾಡಿ ಮೊಬೈಲ್ ಮಾತನಾಡುವ ಬದಲು ಮೊಬೈಲ್ ಕರೆ ಬಂದಾಗ ವಾಹನವನ್ನು ಬದಿಗೆ ನಿಲ್ಲಿಸಿ ಚಿಕ್ಕದಾಗಿ ಚೊಕ್ಕದಾಗಿ ಮಾತಾನಾಡಿ ಮುಗಿಸಿ ಮುಂದುವರಿಯುವುದು.
ಚಾಲನೆಯಲ್ಲಿ ಮೊಬೈಲ್ ಮಾತನಾಡುವಾಗ ಅಪಘಾತ ಆಗುವ ಸಂಭವ ಇರುತ್ತದೆ. ನಮ್ಮ ಗಮನವೆಲ್ಲಾ ಮಾತಿನ ಕಡೆಗೆ ಇರುತ್ತದೆ ಎದುರಿಗೆ ವಾಹನ ಅಥವಾ ಜನರು ಬಂದರೆ ಕೂಡಾ ಗಮನಿಸಲು ಸಾಧ್ಯವಾಗುವುದಿಲ್ಲ. ಆಗ ಅಪಘಾತ ಸಂಭವಿಸುತ್ತದೆ. ಮೊಬೈಲ್ ಮಾತನಾಡುತ್ತಾ ವಾಹನ ಚಲಾಯಿಸಿದರೆ, ಮಾತನಾಡಿದವರಿಗೂ ತೊಂದರೆ ಎದುರಲ್ಲಿ ತನ್ನ ಪಾಡಿಗೆ ಹೋಗುವವರಿಗೂ ತೊಂದರೆ. ಬಸ್ ಚಾಲಕರಲ್ಲಿ ಒಂದು ವಿನಂತಿ ನಿಮ್ಮಲ್ಲಿ ನಂಬಿಕೆ ಇಟ್ಟು ಬಸ್ ನಲ್ಲಿ ಕುಳಿತಿರುತ್ತೇವೆ ನೀವು ಮೊಬೈಲ್ ಮಾತನಾಡಿ ಏನಾದರೂ ಅನಾಹುತ ನಡೆದರೆ ಅಮಾಯಕ ಪ್ರಯಾಣಿಕರು ತುಂಬಾ ನೋವು ಅನುಭವಿಸುತ್ತಾರೆ. ಯೋಚನೆ ಮಾಡಿ ಚಾಲಕರೇ ಬಸ್ಸಲ್ಲಿ ನಿಮ್ಮ ಮನೆಯವರು ಕೂಡಾ ಇರಬಹುದು.(ಮುಂದುವರಿಯುವುದು)
Leave A Reply