ಹೈಕೋರ್ಟ್ ತೀರ್ಪನ್ನು ಮೀರಿ ಕುದ್ರೋಳಿ ಕಸಾಯಿ ಖಾನೆಗೆ ಹಣ ಹಾಕಿದರೆ ನ್ಯಾಯಾಂಗ ನಿಂದನೆ ಆಗಲಿದೆ!!
ನೇರ ವಿಷಯಕ್ಕೆ ಬರ್ತಾ ಇದ್ದೇನೆ. ನಿನ್ನೆ ಸೋಮವಾರ ಸ್ಮಾರ್ಟ್ ಸಿಟಿ ಅನುಷ್ಟಾನಕ್ಕೆ ಸಂಬಂಧಪಟ್ಟಂತೆ ನಿರ್ದೇಶಕ ಮಂಡಳಿಯ ಸಭೆ ನಡೆದಿದೆ. ಕುದ್ರೋಳಿ ಕಸಾಯಿಖಾನೆಗೆ ಹದಿನೈದು ಕೋಟಿ ರೂಪಾಯಿ ಇಡುವ ಬಗ್ಗೆ ಚರ್ಚೆ ಆಗಿದೆ. “ಹಾಗೆಲ್ಲ ಮೇಲ್ನೋಟಕ್ಕೆ ಹೇಳಲು ಆಗುವುದಿಲ್ಲ. ಅದನ್ನು ಎಸ್ಟಿಮೇಟ್ ಅಂದರೆ ತಗಲುವ ವೆಚ್ಚ ಎಲ್ಲಾ ಅಂದಾಜು ಮಾಡಿ ನೋಡಿ ನಂತರ ಈ ಬಗ್ಗೆ ನಿರ್ಧಾರಕ್ಕೆ ಬರಬೇಕಾಗುತ್ತದೆ” ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದ್ದಾರೆ.
ಅಲ್ಲಿಗೆ ಒಂದು ಲೆವೆಲ್ಲಿಗೆ ಕಸಾಯಿಖಾನೆ ಅಭಿವೃದ್ಧಿ ಆಗುವುದೇನೋ ಎನ್ನುವ ಭಾವನೆ ವ್ಯಕ್ತವಾಗಿದೆ. ಆದರೆ ಕುದ್ರೋಳಿ ಕಸಾಯಿಖಾನೆಗೆ ಒಂದು ರೂಪಾಯಿ ಖರ್ಚು ಮಾಡುವುದಾದರೂ ನಮ್ಮ ಸ್ಮಾರ್ಟ್ ಸಿಟಿ ನಿರ್ದೇಶಕರ ಮಂಡಳಿ ಕೆಲವು ವಿಷಯಗಳ ಬಗ್ಗೆ ಸಣ್ಣ ರಿಸರ್ಚ್ ಮಾಡುವುದು ಒಳ್ಳೆಯದು. ಮೊದಲನೇಯದಾಗಿ ಆ ಮಂಡಳಿಯಲ್ಲಿ ಪಾಲಿಕೆಯ ಮೇಯರ್, ಆಡಳಿತ ಪಕ್ಷದ ಇಬ್ಬರು ಸದಸ್ಯರು, ಒಬ್ಬ ವಿಪಕ್ಷದ ಸದಸ್ಯರು ಸ್ಮಾರ್ಟ್ ಸಿಟಿ ಮಂಡಳಿಯಲ್ಲಿ ಇದ್ದಾರೆ. ಅವರಿಗೆ ಒಂದು ವಿಷಯ ಸರಿಯಾಗಿ ಗೊತ್ತಿದೆ, ಅದೇನೆಂದರೆ 2006 ರಲ್ಲಿ ಕರ್ನಾಟಕ ಪರಿಸರ ಇಲಾಖೆ ಕುದ್ರೋಳಿ ಕಸಾಯಿ ಖಾನೆಯನ್ನು ಮುಚ್ಚಲು ಸೂಚನೆ ನೀಡಿತ್ತು. ಅಲ್ಲಿರುವ ಮೂಲಭೂತ ವ್ಯವಸ್ಥೆ, ವಧೆ ಮಾಡುವ ಸ್ಥಳ ಯಾವುದೂ ಸರಿ ಇಲ್ಲ ಎನ್ನುವ ಆಧಾರದಲ್ಲಿ ಅಲ್ಲಿ ಕಸಾಯಿ ಖಾನೆಯನ್ನು ಮುಂದುವರೆಸುವುದು ಬೇಡಾ ಎಂದು ವರದಿ ನೀಡಿತ್ತು. ಎಲ್ಲಿಯ ತನಕ ಅಂದರೆ ಒಂದು ಪ್ರಾಣಿಯ ಹತ್ಯೆ ಮಾಡುವಾಗ ಅದನ್ನು ಇನ್ನೊಂದು ಪ್ರಾಣಿ ನೋಡಬಾರದು ಎನ್ನುವ ನಿಯಮ ಇದೆ. ಅದರ ಉದ್ದೇಶ ನಿಮಗೆ ಅರ್ಥವಾಗಬಹುದು. ಇದೊಂದು ಮಾನವೀಯತೆಯ ಪ್ರಶ್ನೆ. ಈಗ ನಮ್ಮನ್ನೆಲ್ಲ ಒಂದು ಕೋಣೆಯಲ್ಲಿ ಹಾಕಿ ಒಬ್ಬರ ಎದುರು ಇನ್ನೊಬ್ಬರ ರುಂಡ ಕಟ್ ಮಾಡುತ್ತಾ ಹೋದರೆ ನೋಡುವವರಿಗೆ ಏನಾಗಬೇಡಾ? ಹಾಗೆ ಪ್ರಾಣಿಗಳಿಗೂ ಆಗುತ್ತದೆ, ಅಲ್ವಾ? ಒಟ್ಟಿನಲ್ಲಿ ಯಾವುದೇ ವ್ಯವಸ್ಥೆ ಇಲ್ಲದ ಗಲೀಜು ವಾತಾವರಣದಲ್ಲಿ ಅಲ್ಲಿ ಯಾರಾದರೂ ಬಂದು ನೋಡಿದರೆ ಈ ಜನ್ಮದಲ್ಲಿ ಮಾಂಸಾಹಾರ ಸ್ವೀಕರಿಸುವುದಿಲ್ಲ ಎಂದು ಶಪಥ ಮಾಡಿಯಾರು. ಆದ್ದರಿಂದ ಆವತ್ತು 2006ರಲ್ಲಿ ಅನಿವಾರ್ಯವಾಗಿ ಹದಿನೈದು ದಿನ ಕುದ್ರೋಳಿ ಕಸಾಯಿ ಖಾನೆ ಮುಚ್ಚಿತ್ತು. ಏಕೆಂದರೆ ಅದು ಸರಿಯಿಲ್ಲ ಎಂದು ಇಲಾಖೆಯೇ ಹೇಳಿದ ನಂತರ ನಡೆಸಲು ಪಾಲಿಕೆಗೆ ನೈತಿಕತೆ ಬೇಡವೇ? ಅದರ ನಂತರ ಎರಡೂವರೆ ಲಕ್ಷ ರೂಪಾಯಿ ಖರ್ಚು ಮಾಡಿ ಆ ಕಸಾಯಿ ಖಾನೆಯನ್ನು ತಾತ್ಕಾಲಿಕವಾಗಿ ಹೊಸ ಕಸಾಯಿ ಖಾನೆ ಆಗುವ ತನಕ ನಡೆಸಿಕೊಂಡು ಹೋಗುವುದೆಂದು ನಿರ್ಧರಿಸಲಾಯಿತು.
ನಮ್ಮಲ್ಲಿ ತಾತ್ಕಾಲಿಕ ವ್ಯವಸ್ಥೆಗೆ ಖರ್ಚು ಮಾಡುವುದು ಜಾಸ್ತಿ…
ನಮ್ಮ ಮಂಗಳೂರು ನಗರದ ದುರ್ಭಾಗ್ಯ ಏನೆಂದರೆ ಇಲ್ಲಿ ಯಾವುದಾದರೂ ಒಂದು ತಾತ್ಕಾಲಿಕ ನೆಲೆಯಲ್ಲಿ ಶುರುವಾಯಿತು ಎಂದಾದರೆ ಅದನ್ನು ಅದೇ ಪ್ರಕಾರದಲ್ಲಿ ಮುಂದುವರೆಸಿಕೊಂಡು ಹೋಗುತ್ತಾರೆ ವಿನ: ಹೊಸತನ್ನು ಮಾಡುವ ವಿಷಯವನ್ನೇ ಇವರು ಯೋಚಿಸುವುದಿಲ್ಲ, ಯೋಚಿಸಿದರೂ ಅದನ್ನು ದಡ ಮುಟ್ಟಿಸುವ ಕೆಲಸ ಮಾಡುವುದಿಲ್ಲ. ಉದಾಹರಣೆಗೆ ಮಂಗಳೂರು ಖಾಸಗಿ ಬಸ್ ನಿಲ್ದಾಣ. ಅದನ್ನು ಹಂಪನಕಟ್ಟೆಯಿಂದ ಪಂಪ್ ವೆಲ್ ಗೆ ಸ್ಥಳಾಂತರಿಸುವುದು ಎಂದಾದಾಗ ತಾತ್ಕಾಲಿಕ ನೆಲೆಯಲ್ಲಿ ಸ್ಟೇಟ್ ಬ್ಯಾಂಕ್ ಬಳಿ ಮಾಡುವುದು ಎಂದಾಗಿತ್ತು. ಆದರೆ ಸ್ಟೇಟ್ ಬ್ಯಾಂಕ್ ಬಳಿ ತಾತ್ಕಾಲಿಕ ಬಸ್ ನಿಲ್ದಾಣ ಬಂದು ಎರಡು ದಶಕಗಳಾದರೂ ಇಲ್ಲಿಯ ತನಕ ಹೊಸ ಬಸ್ ನಿಲ್ದಾಣ ಪಂಪವೆಲ್ ನಲ್ಲಿ ಆಗಿಯೇ ಇಲ್ಲ. ಹೀಗೆ ತಾತ್ಕಾಲಿಕವಾಗಿ ಮುಂದುವರೆಯುತ್ತಿರುವ ಕುದ್ರೋಳಿ ಕಸಾಯಿಗೆ ಇವರು ಎಡಿಬಿ ಸಾಲದಲ್ಲಿ ಕಣ್ಣೂರು, ಕುಡುಪುವಿನಲ್ಲಿ ಜಾಗ ನೋಡಿದರಾದರೂ ಅದು ಅನುಷ್ಟಾನಕ್ಕೆ ಬರಲೇ ಇಲ್ಲ. ಕುದ್ರೋಳಿಯಲ್ಲಿ ಈಗ ತಾತ್ಕಾಲಿಕ ನೆಲೆಯಲ್ಲಿ ಕಸಾಯಿ ಖಾನೆ ನಡೆಯುತ್ತಿದೆ. ಇವತ್ತಲ್ಲ, ನಾಳೆ ಯಾರಾದರೂ ಕೋರ್ಟಿಗೆ ಹೋದರೆ ಅದನ್ನು ಮುಚ್ಚುವ ಪ್ರಸ್ತಾಪ ಕೂಡ ಬರಬಹುದು. ಆದ್ದರಿಂದ ಅದಕ್ಕೆ 15 ಕೋಟಿ ಖರ್ಚು ಮಾಡುವ ಅಗತ್ಯವಾದರೂ ಇದೆಯಾ? ಹದಿನೈದು ಕೋಟಿ ಬಿಡಿ, ಅದಕ್ಕೆ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಹದಿನೈದು ಲಕ್ಷ ಕೂಡ ಖರ್ಚು ಮಾಡುವುದು ವೇಸ್ಟ್. ಇದರೊಂದಿಗೆ ಇನ್ನೊಂದು ಅಂಶ ಇದೆ.
ಖಾದರ್ ಅವರ ಕ್ಷೇತ್ರದಲ್ಲಿ ಜಾಗ ಹುಡುಕಲಿ…
ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯ ಬೆಂಗಳೂರಿನಲ್ಲಿ ಕಸಾಯಿ ಖಾನೆಯ ವಿಷಯದಲ್ಲಿ ಪ್ರಕರಣ ಒಂದು ದಾಖಲಾದಾಗ ಕೊಟ್ಟ ತೀರ್ಪು ನಿಜಕ್ಕೂ ದೂರಗಾಮಿ ಪರಿಣಾಮ ಉಂಟು ಮಾಡುತ್ತದೆ. ಮಹಾನಗರ ಪಾಲಿಕೆಯ ವ್ಯಾಪ್ತಿಯೊಳಗೆ ಯಾವುದೇ ಕಸಾಯಿ ಖಾನೆ ಇರಬಾರದು ಎಂದು ನ್ಯಾಯಾಲಯ ಹೇಳಿದೆ. ಹಾಗಿರುವಾಗ ಕುದ್ರೋಳಿ ಮಂಗಳೂರು ಮಹಾನಗರ ಪಾಲಿಕೆಯ ಒಳಗೆ ಬರುತ್ತದಾ, ಹೊರಗೆ ಬರುತ್ತದಾ ಎನ್ನುವುದು ಕಸಾಯಿ ಖಾನೆಯನ್ನು ಕೋಟಿ ಕೋಟಿ ಖರ್ಚು ಮಾಡಿ ಅಭಿವೃದ್ಧಿ ಮಾಡಲು ಹೊರಟಿರುವ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯುಟಿ ಖಾದರ್ ಅವರೇ ಹೇಳಬೇಕು.
ಒಂದು ವೇಳೆ ಖಾದರ್ ಅವರಿಗೆ ಜನರು ಸ್ವಚ್ಚವಾಗಿರುವ ಮಾಂಸವನ್ನೇ ತಿನ್ನಬೇಕೆಂದು ಮನಸ್ಸು ಇದ್ದಲ್ಲಿ ಹೈಕೋರ್ಟ್ ಕೊಟ್ಟಿರುವ ತೀರ್ಪನ್ನು ಕೂಡ ಗೌರವಿಸುವುದನ್ನು ಕಲಿಯಬೇಕು. ಪರಿಸರ ಇಲಾಖೆ ಕೊಟ್ಟಿರುವ ಸೂಚನೆಯನ್ನು ಕೂಡ ಪಾಲಿಸುವುದನ್ನು ಕಲಿಯಬೇಕು. ಖಾದರ್ ಅವರು ಬೇಕಾದರೆ ತಮ್ಮ ಕ್ಷೇತ್ರದಲ್ಲಿ ಎಲ್ಲಿಯಾದರೂ ಅಗತ್ಯ ಇರುವಷ್ಟು ಜಾಗ ಕಸಾಯಿ ಖಾನೆಗೆ ಒದಗಿಸಿಕೊಡಲಿ. ಹೇಗೂ ಅವರ ಕ್ಷೇತ್ರದಲ್ಲಿ ತ್ಯಾಜ್ಯ ಸಂಸ್ಕರಣ ಘಟಕ, ಅಗ್ನಿಶಾಮಕ ದಳದ ಘಟಕ, ಸರಕಾರಿ ಆಸ್ಪತ್ರೆ ಎಲ್ಲ ಈ ಬಾರಿ ಪ್ರಪ್ರಥಮವಾಗಿ ಮಾಡಲು ಬಾಕಿ ಇದೆಯಲ್ಲ, ಆವಾಗಲೇ ಕಸಾಯಿ ಖಾನೆ ಕೂಡ ಅಲ್ಲಿಯೇ ಮಾಡಿ ಬಿಡಲಿ!
Leave A Reply