ಇವರ ಆಲಸ್ಯಕ್ಕೆ ನಾವು ಹೆಚ್ಚು ಬಿಲ್ ಕಟ್ಟಬೇಕಾ?
ನಾವು ಸಣ್ಣವರಿದ್ದಾಗ ಅಪ್ಪ, ಅಮ್ಮ ಶಾಲೆ ಶುರುವಾಗ ಅಂದರೆ ಜೂನ್ ನಲ್ಲಿ ಒಂದು ಮಾತು ಹೇಳುತ್ತಿದ್ದರು. ಆಯಾ ದಿನದ ಪಾಠಗಳನ್ನು ಆಯಾ ದಿನವೇ ಓದಿ ಮುಗಿಸು. ಇಲ್ಲದಿದ್ದರೆ ಕೊನೆಯಲ್ಲಿ ಎಲ್ಲಾ ಒಮ್ಮೆಲೇ ಓದಿದರೆ ಆಗ ಕಷ್ಟವಾಗುತ್ತದೆ. ಈ ಮಾತನ್ನು ಹೆಚ್ಚಿನ ಮನೆಗಳಲ್ಲಿ ಒಂದಲ್ಲ ಒಂದು ಸಂದರ್ಭದಲ್ಲಿ ಮನೆಯ ಯಾರಾದರೊಬ್ಬರು ಹೇಳಿಯೇ ಹೇಳಿರುತ್ತಾರೆ. ಇದರ ಲಾಜಿಕ್ ನಿಮಗೂ ಅರ್ಥವಾಗಬಹುದು. ಆದರೆ ಇಷ್ಟು ಸಿಂಪಲ್ ವಿಷಯ ನಮ್ಮ ಮಂಗಳೂರು ಮಹಾನಗರ ಪಾಲಿಕೆಗೆ ಗೊತ್ತಾಗುತ್ತಿರಲಿಲ್ಲ. ಅವರ ತಪ್ಪಿನಿಂದ ಜನಸಾಮಾನ್ಯರಾದ ನಾವು ಕಷ್ಟವನ್ನು ಅಥವಾ ಹೊರೆಯನ್ನು ಅನುಭವಿಸಬೇಕಾಗಿ ಬರುತ್ತಿತ್ತು.
ಎರಡು ರೀತಿಯಲ್ಲಿ ನೀವು ತೊಂದರೆ ಅನುಭವಿಸುತ್ತೀರಿ…
ಕಳೆದ ಬಾರಿ ನಮ್ಮ ನಿಮ್ಮ ಮನೆಗಳ ನೀರಿನ ಬಿಲ್ ಕೊಡಲಿಕ್ಕೆ ಎಂದು ಪಾಲಿಕೆ ಗುತ್ತಿಗೆದಾರರಿಗೆ ಹೊರ ಗುತ್ತಿಗೆಯಲ್ಲಿ ಜವಾಬ್ದಾರಿ ನೀಡಿತ್ತು. ಒಂದು ಬಿಲ್ ಇಶ್ಯೂ ಮಾಡಿದರೆ ಗುತ್ತಿಗೆದಾರನಿಗೆ ಇಂತಿಷ್ಟು ಎಂದು ಹಣ ಸಿಗುವಂತೆ ವ್ಯವಸ್ಥೆ ಮಾಡಲಾಗಿತ್ತು. ಪಾಲಿಕೆ ಈ ನೀರಿನ ಬಿಲ್ ಕೊಡುವ ಜವಾಬ್ದಾರಿಯನ್ನು ಬೇರೆಯವರಿಗೆ ವಹಿಸಿಕೊಟ್ಟು ತನ್ನ ಹೆಗಲನ್ನು ಹಗುರ ಮಾಡಿಕೊಂಡಿತ್ತು. ಆದರೆ ಆ ಗುತ್ತಿಗೆದಾರರ ಕೆಲಸದವರು ಸರಿಯಾಗಿ ಯಾರ ಮನೆಗೂ ಹೋಗದೆ ತಾವು ಎಲ್ಲಿಯೋ ಕುಳಿತು ಮೀಟರ್ ನಾಟ್ ರೀಡಿಂಗ್ (ಎಂಎನ್ ಆರ್) ಅಥವಾ ಎನ್ ಎಲ್ ಎಂದು ಬರೆದು ಅಲ್ಲಿಯೇ ಬಿಲ್ ಹರಿದು ಬಿಸಾಡುತ್ತಿದ್ದರು. ಇದರಿಂದ ಅವರೇನೋ ಬಿಲ್ ಕೊಟ್ಟಂತೆ ಆಗುತ್ತಿತ್ತು. ಇತ್ತ ಅವರು ಕೊಟ್ಟಿದ್ದಾರೆ ಎಂದು ಪಾಲಿಕೆ ಹಣ ಪಾವತಿಸುತ್ತಿತ್ತು. ಆದರೆ ಆ ನಡುವೆ ಮನೆಯವರಿಗೆ ಯಾವಾಗಲೂ ಬಿಲ್ ಬರುತ್ತಲೇ ಇರಲಿಲ್ಲ. ಇವತ್ತು ಬಿಲ್ಲಿನವ ಬರುತ್ತಾನೆ, ನಾಳೆ ಬರುತ್ತಾನೆ ಎಂದು ಮನೆಯವರು ಕಾದು ಕುಳಿತದ್ದೇ ಬಂತು. ಬಿಲ್ ಕೊಡುವವ ಒಂದು ತಿಂಗಳು ಆದರೂ ಬರಲಿಲ್ಲ, ಎರಡೂ ತಿಂಗಳು ಆದರೂ ಇರಲಿಲ್ಲ. ಕೊನೆಗೆ ಐದು ತಿಂಗಳು ಆಗುವಾಗ ಬಿಲ್ಲೊಂದು ನಿಮ್ಮ ಮನೆ ಬಾಗಿಲಿಗೆ ಬಂದು ಬೀಳುತ್ತದೆ. ಕೊನೆಗೂ ಬಿಲ್ ಬಂತಲ್ಲ ಎಂದು ನೀವು ನಿಟ್ಟುಸಿರು ಬಿಡುತ್ತೀರಿ. ಬಿಲ್ ನಲ್ಲಿ ಐದು ತಿಂಗಳಿನ ಒಟ್ಟು ಮೊತ್ತ ನೋಡುವಾಗ ನಿಮಗೆ ಏನೋ ಸ್ವಲ್ಪ ಜಾಸ್ತಿಯೇ ಇದೆಯಲ್ವಾ ಎಂದು ಅನಿಸುತ್ತದೆ.
ಇಲ್ಲಿ ಒಬ್ಬ ಜನಸಾಮಾನ್ಯ ಎರಡು ರೀತಿಯ ಸಂಕಷ್ಟವನ್ನು ಎದುರಿಸುತ್ತಾನೆ. ಮೊದಲನೇಯದಾಗಿ ಒಮ್ಮೆಲ್ಲೆ ಐದು ತಿಂಗಳಿನ ಬಿಲ್ ಕಟ್ಟಲು ಬಂದಾಗ ಸಹಜವಾಗಿ ಮಧ್ಯಮ ವರ್ಗದವರಿಗೆ ಅದು ಹೊರೆಯಾಗುತ್ತದೆ. ಅದರೊಂದಿಗೆ ತಾವು ಐದು ತಿಂಗಳಿದ್ದು ಒಮ್ಮೆಲ್ಲೆ ಕಟ್ಟುವಾಗ ಒಮ್ಮೆಲೆ ಹೆಚ್ಚು ಹಣ ಅಥವಾ ಪರೋಕ್ಷವಾಗಿ ದಂಡ ನಮಗೆ ಗೊತ್ತಿಲ್ಲದೆ ನಮ್ಮಿಂದ ಕಟ್ಟಲ್ಪಡಲಾಗುತ್ತಿದೆ. ಅದು ಹೇಗೆಂದು ವಿವರಿಸುತ್ತೇನೆ. ನೀವು ಸಾಮಾನ್ಯವಾಗಿ ತಿಂಗಳಿಗೆ ಇಪ್ಪತ್ತು ಸಾವಿರ ಲೀಟರ್ ಒಳಗೆ ನೀರನ್ನು ಉಪಯೋಗಿಸುವವರಾದರೆ ನಿಮಗೆ ತಿಂಗಳಿಗೆ ಮಿನಿಮಮ್ ಆಗಿರುವ 65 ರೂಪಾಯಿ ಬಿಲ್ ಬರುತ್ತದೆ. ಅದು ಮಾಮೂಲಿ. ಇದು ಇಪ್ಪತ್ತು ಸಾವಿರ ಲೀಟರ್ ಒಳಗಿನವರಿಗೆ ಮಾತ್ರ. ಅದೇ ನೀವು ಐದು ತಿಂಗಳಿಗೆ ಒಮ್ಮೆ ಬಿಲ್ ಕಟ್ಟುವಾಗ ಬಿಲ್ಲಿನಲ್ಲಿ ನೀವು ಉಪಯೋಗಿಸಿದ ನೀರಿನ ಪ್ರಮಾಣವನ್ನು ನಮೂದಿಸಲಾಗಿರುತ್ತದೆ. ಅದು ಸಹಜವಾಗಿ ಜಾಸ್ತಿಯೇ ಇರುತ್ತದೆ. ಐದು ತಿಂಗಳಿನ ಬಿಲ್ ಒಟ್ಟಿಗೆ ಸೇರಿ ಒಂದೇ ಬಿಲ್ ಬಂದಿರುವಾಗ ಉಪಯೋಗಿಸಿದ ನೀರು ಒಟ್ಟು ಒಂದೂಕಾಲು ಲಕ್ಷ ಎಂದು ಇತ್ತು ಎಂದು ಇಟ್ಟುಕೊಳ್ಳೋಣ. ಆಗ ನಿಮ್ಮ ಮೂಲ ಲೆಕ್ಕ ಇಪ್ಪತ್ತು ಸಾವಿರಕ್ಕೆ ಅರವತ್ತೈದು ರೂಪಾಯಿ ಒಂದು ಲಕ್ಷ ಲೀಟರಿಗೆ ಅರವತ್ತೈದು ರೂಪಾಯಿ ಇಂಟು ಫೈವ್ ಆಗುವುದಿಲ್ಲ. ಅದರ ಲೆಕ್ಕವನ್ನು ನಿಖರವಾಗಿ ನಿಮ್ಮ ಮುಂದೆ ಇಡುತ್ತಿದ್ದೇನೆ.
ಈ ಲೆಕ್ಕ ಅರ್ಥ ಮಾಡಿ..
ಗೃಹ ಬಳಕೆ (ನಿವಾಸಿ) ರೂಪಾಯಿ ತಿಂಗಳಿಗೆ 65. ಎ) ಸೊನ್ನೆಯಿಂದ ಹದಿನೈದು ಸಾವಿರ ಲೀಟರ್ ಗೆ ಪ್ರತಿ ಒಂದು ಸಾವಿರ ಲೀಟರ್ ಗೆ ರೂ 2.50. ಆ)ಹದಿನೈದು ಸಾವಿರ ಲೀಟರ್ ನಿಂದ ಮೂವತ್ತು ಲೀಟರ್ ಗೆ ಪ್ರತಿ ಒಂದು ಸಾವಿರ ಲೀಟರ್ ಗರ ಮೂರು ರೂಪಾಯಿ. ಇ) ಮೂವತ್ತು ಸಾವಿರದ ಒಂದು ಲೀಟರ್ ನಿಂದ ಐವತ್ತು ಸಾವಿರ ಲೀಟರ್ ಗೆ ಪ್ರತಿ ಒಂದು ಸಾವಿರ ಲೀಟರ್ ಗೆ ರೂಪಾಯಿ ಐದು. ಈ) ಐವತ್ತು ಸಾವಿರದ ಒಂದು ಲೀಟರ್ ನಿಂದ ಎಪ್ಪತೈದು ಸಾವಿರ ಲೀಟರ್ ಗೆ ಪ್ರತಿ ಒಂದು ಸಾವಿರ ಲೀಟರ್ ಗೆ ಏಳು ರೂಪಾಯಿ. ಉ) 75001 ಲೀಟರ್ ನಿಂದ 1,00,000 ಲೀಟರ್ ಗೆ ಪ್ರತಿ ಒಂದು ಸಾವಿರ ಲೀಟರ್ ಗೆ ಹತ್ತು ರೂಪಾಯಿ. ಊ) 1,00,001 ಲೀಟರ್ ನಿಂದ ಮೇಲ್ಪಟ್ಟು ಪ್ರತಿ 1000 ಲೀಟರ್ ಗೆ ರೂ 12. ಹೀಗೆ ಲೆಕ್ಕಚಾರದಲ್ಲಿ ಬಿಲ್ ಇದೆ. ಈಗ ಕುಳಿತು ಲೆಕ್ಕ ಹಾಕಿ. ನಿಮಗೆ ಐದು ತಿಂಗಳಿನ ನಂತರ ಬಂದ ಬಿಲ್ ನಲ್ಲಿ ಎಷ್ಟು ಸಾವಿರ ಲೀಟರ್ ನೀರು ಖರ್ಚಾಗಿದೆ ಮತ್ತು ನೀವು ಯಾವ ಕ್ಯಾಟಗರಿಯಲ್ಲಿ ಬರುತ್ತೀರಿ. ಒಂದು ವೇಳೆ ಪ್ರತಿ ತಿಂಗಳಿಗೆ ಬಿಲ್ ಬರುತ್ತಿದ್ದಲ್ಲಿ ನೀವು ಎಷ್ಟು ಕಟ್ಟಬೇಕಿತ್ತು. ಹೀಗೆ ಒಮ್ಮೆಲ್ಲೆ ಬಂದ ಕಾರಣ ನೀವು ಎಷ್ಟು ಕಟ್ಟಬೇಕಾಗಿದೆ. ಲೆಕ್ಕ ಹಾಕಿ ಕಮೆಂಟ್ ಮಾಡಿ. ಇದರ ಮುಂದುವರಿದ ಭಾಗ ನಾಳೆ ಹೇಳುತ್ತೇನೆ!
Leave A Reply