ಜನಾಗ್ರಹ ಸಭೆಗೆ ಫ್ರೀ ಬಸ್ ಇದ್ರೆ ಮಾತ್ರ ಹೋಗ್ತಿರಾ?
ಅಯೋಧ್ಯೆಯಲ್ಲಿ ಶೀಘ್ರದಲ್ಲಿ ರಾಮ ಮಂದಿರ ನಿರ್ಮಿಸಬೇಕು ಎನ್ನುವ ವಿಷಯ ಇಟ್ಟುಕೊಂಡು ಭಾನುವಾರ ಮಂಗಳೂರಿನ ಕೇಂದ್ರ ಭಾಗದಲ್ಲಿರುವ ಮೈದಾನದಲ್ಲಿ ಬೃಹತ್ ಜನಾಗ್ರಹ ಸಭೆ ನಡೆಸಲು ವಿಶ್ವ ಹಿಂದೂ ಪರಿಷತ್ ಅಂತಿಮ ಸಿದ್ಧತೆಯಲ್ಲಿದೆ. ಅದಕ್ಕಾಗಿ ಹಲವಾರು ಪೂರ್ವಭಾವಿ ಸಭೆಗಳನ್ನು ಆಯೋಜನೆ ಮಾಡುತ್ತಿದೆ. ಒಂದು ಸಭೆ ಯಶಸ್ವಿಯಾಗಬೇಕಾದರೆ ಅದಕ್ಕೆ ಸಮಾಜದ ವಿವಿಧ ಸ್ತರದ ಜನರು ಸೇರಿ ತಮ್ಮ ತಮ್ಮ ಕೊಡುಗೆ, ಸಲಹೆಗಳನ್ನು ನೀಡಬೇಕಾಗುತ್ತದೆ. ಆ ನಿಟ್ಟಿನಲ್ಲಿ ನಡೆಯುವ ಸಭೆಗಳಲ್ಲಿ ಜಿಲ್ಲಾ ಬಸ್ಸು ಮಾಲೀಕರ ಜೊತೆಗಿನ ಸಭೆಯೂ ಒಂದು. ಹಿಂದೂ ಸಂಘಟನೆಗಳ ಕಾರ್ಯಕ್ರಮಗಳಿಗೆ ಮಾತ್ರ ಇಂತಹ ಸಭೆಗಳನ್ನು ಕರೆಯುವುದಲ್ಲ, ಮುಸ್ಲಿಮರು ಮಾಡಿದ್ರು, ಕೈಸ್ತರು ಮಾಡಿದ್ರು, ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷ ಯಾವುದೇ ಕಾರ್ಯಕ್ರಮ ಮಾಡುವುದಾದರೂ ವಿವಿಧ ವರ್ಗಗಳ ಸಭೆಗಳನ್ನು ಕರೆಯುತ್ತಾರೆ. ಕರೆದೂ ನಿಮ್ಮ ಸಲಹೆ, ಸಹಕಾರ ಬೇಕು ಎಂದು ವಿನಂತಿ ಮಾಡಲಾಗುತ್ತದೆ. ಅದಕ್ಕೆ ಈ ಸಲ ಮೊದಲ ಬಾರಿಗೆ ಕಮ್ಮಿನಿಷ್ಟರು ಆಕ್ಷೇಪ ಎತ್ತಿದ್ದಾರೆ. ಹಿಂದೂ ಸಂಘಟನೆಗಳ ಕಾರ್ಯಕ್ರಮಕ್ಕೆ ಬಸ್ಸುಗಳನ್ನು ಉಚಿತವಾಗಿ ಕೇಳಿದ್ದು ಸರಿಯಲ್ಲ ಎಂದು ಹಾಲಿಗೆ ಹುಳಿ ಹಿಂಡಿದ್ದಾರೆ. ಅಷ್ಟಕ್ಕೂ ಈ ಬಸ್ಸು ಮಾಲೀಕರ ಸಭೆಯನ್ನು ಕರೆದು ಅವರಿಗೆ ವಿನಂತಿ ಮಾಡಲಾಗಿದೆ ವಿನ: ಅವರಿಗೆ ಜಬರದಸ್ತ್ ಮಾಡಲಾಗಿಲ್ಲ. ಅದು ಈಗಾಗಲೇ ಬಸ್ ಮಾಲೀಕರ ಸಂಘದ ಅಧ್ಯಕ್ಷರಿಂದ ಸ್ಪಷ್ಟವಾಗಿದೆ. ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ವಿನಂತಿಯ ಮೇರೆಗೆ ಎಂದೇ ಬರೆದು ಅವರು ಸುತ್ತೋಲೆ ಹೊರಡಿಸಿದ್ದಾರೆ. ಅದರೊಂದಿಗೆ ಬಸ್ಸುಗಳಲ್ಲಿ ಜನಾಗ್ರಹ ಸಭೆಗೆ ಹೋಗುವ ನಾಗರಿಕರಿಂದ ಟಿಕೆಟ್ ದರ ಪಡೆದುಕೊಳ್ಳುವುದು, ಬಿಡುವುದು ಆಯಾ ಮಾಲೀಕರಿಗೆ ಬಿಟ್ಟ ವಿಷಯ ಎಂದು ಕೂಡ ಸೇರಿಸಿದ್ದಾರೆ. ಆದ್ದರಿಂದ ಇದನ್ನು ವಿವಾದ ಮಾಡುವ ಅಗತ್ಯ ಎಡಪಕ್ಷಗಳಿಗೆ ಮತ್ತು ಅದರ ಒರಗೆಯ ಸಂಘಟನೆಗಳಿಗೆ ಇರಲೇ ಇಲ್ಲ
ಕೊಡುವುದು ಬೇರೆಯವರು, ವಿರೋಧ ಇವರದ್ದು…
ಎರಡನೇಯದಾಗಿ ಇದು ಮಂಗಳೂರಿನಲ್ಲಿ ನಡೆಯುವ ಮೊದಲ ಬೃಹತ್ ಕಾರ್ಯಕ್ರಮ ಅಲ್ಲ. ಹಿಂದೆಲ್ಲ ಪ್ರತಿ ಬಾರಿ ಹಿಂದೂ ಸಮಾಜೋತ್ಸವ ಎನ್ನುವ ಹೆಸರಿನಲ್ಲಿ ಹಿಂದೂ ಸಂಘಟನೆಗಳು ನಡೆಸುತ್ತಿದ್ದವು. ಈ ಬಾರಿ ಜನಾಗ್ರಹ ಎನ್ನುವ ಹೆಸರನ್ನು ಇಡಲಾಗಿದೆ. ಬಸ್ಸನ್ನು ಉಚಿತವಾಗಿ ನೀಡುವುದು ಇದು ಮೊದಲನೇಯದ್ದೂ ಅಲ್ಲ, ಕೊನೆಯದ್ದೂ ಅಲ್ಲ. ಭಾರತದ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿಯವರ ಕಾಲದಿಂದಲೂ ಅವರ ಕಾರ್ಯಕ್ರಮಗಳಿಗೆ ಜನರನ್ನು ಸೇರಿಸಲು ಹೀಗೆ ಮಾಡಲಾಗಿದೆ. ಇದು ಎಲ್ಲಾ ಕಾಲಕ್ಕೂ ಎಲ್ಲ ಪಕ್ಷ, ಸಂಘಟನೆಗಳು ನಡೆಸಿಕೊಂಡು ಬಂದ ಪದ್ಧತಿ. ಇನ್ನು ಈಗ ಹಿಂದಿನ ಹಾಗೆ ಇಲ್ಲ. ಈಗ ಹಿಂದಿಗಿಂತ ಹೆಚ್ಚು ಪ್ರಜಾಪ್ರಭುತ್ವ ಇದೆ. ಈಗ ಯಾವುದೇ ಒತ್ತಡ ಹಾಕಿ ಒತ್ತಾಯದಿಂದ ಏನನ್ನು ಕಿತ್ತುಕೊಳ್ಳಲಾಗುವುದಿಲ್ಲ. ಏನಿದ್ದರೂ ವಿನಂತಿ ಮಾಡಬೇಕಷ್ಟೇ.
ಇಲ್ಲಿರುವ ಸಿಂಪಲ್ ಲಾಜಿಕ್ ಅನ್ನು ಕಮ್ಮಿನಿಷ್ಟರು ಮತ್ತು ಅವರ ಒರಗೆಯವರು ಅರ್ಥ ಮಾಡಿಕೊಳ್ಳಬೇಕು. ಇದು ಸರಕಾರಿ ಕಾರ್ಯಕ್ರಮ ಅಲ್ಲ, ಆದ್ದರಿಂದ ಬಸ್ಸುಗಳನ್ನು ಉಚಿತವಾಗಿ ಕೊಡುವುದು ಯಾಕೆ ಎನ್ನುವುದು ಅವರ ಪ್ರಶ್ನೆ. ಹೇಗೆ ಇದು ಸರಕಾರಿ ಕಾರ್ಯಕ್ರಮ ಅಲ್ಲವೋ ಹಾಗೆ ಬಸ್ಸು ಕೇಳಿದ್ದು ಸರಕಾರಿ ಅಲ್ಲ, ಖಾಸಗಿ ಬಸ್ಸು ಮಾಲೀಕರದ್ದು. ಅವರಿಗೆ ಇಷ್ಟವಿದ್ದರೆ ಅವರು ಕೊಡುತ್ತಾರೆ ಬಿಟ್ಟರೆ, ಇಲ್ಲದಿದ್ದರೆ ಇಲ್ಲ. ಉದಾಹರಣೆಗೆ: ಒಬ್ಬ ವ್ಯಕ್ತಿ ತನ್ನ ಅಂಗಡಿಯಿಂದ ನಿತ್ಯ ಐದು ಕೆಜಿ ಅಕ್ಕಿ, ಐದು ಕೆಜಿ ಬೇಳೆ ಪಕ್ಕದ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳ ಮಧ್ಯಾಹ್ನದ ಊಟಕ್ಕೆ ಕೊಡುತ್ತಾರೆ ಎಂದು ಇಟ್ಟುಕೊಳ್ಳೋಣ. ಅದನ್ನು ಅವನ ಪಕ್ಕದ ಅಂಗಡಿಯವ ವಿರೋಧಿಸುವಂತಿಲ್ಲ. ಒಂದು ವೇಳೆ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದರೆ ಮತ್ತು ಮಂಗಳೂರಿನಲ್ಲಿ ಸಂಘ ಪರಿವಾರ ಆಯೋಜಿಸುವ ಕಾರ್ಯಕ್ರಮಕ್ಕೆ ಸರಕಾರಿ ಬಸ್ಸುಗಳನ್ನು ಉಚಿತವಾಗಿ ಬಳಸಲು ಸೂಚನೆ ಕೊಟ್ಟರೆ ಆಗ ಬೇಕಾದರೆ ವಿರೋಧಿಸೋಣ. ಆದರೆ ಹಾಗೆ ಮಾಡಲಿಲ್ಲವಲ್ಲ. ಅದೇ ಕಾಂಗ್ರೆಸ್ ಪಕ್ಷ ಮುಸ್ಲಿಮರ ಮತಗಳನ್ನು ಸೆಳೆಯಲು ಸರಕಾರಿ ಖರ್ಚಿನಲ್ಲಿ ಲಕ್ಷಗಟ್ಟಲೆ ಖರ್ಚು ಮಾಡಿ ಟಿಪ್ಪು ಜಯಂತಿ ಆಚರಿಸಿದ್ದನ್ನು ವಿರೋಧಿಸಬೇಕೆ ವಿನ: ಒಂದು ವೇಳೆ ದಿನೇಶ ಗುಂಡುರಾವ್ ಹಾಗೂ ಸಿದ್ಧರಾಮಯ್ಯ ತಮ್ಮ ಖರ್ಚಿನಲ್ಲಿ ಮನೆಯ ಪಕ್ಕದ ಸಭಾಂಗಣದಲ್ಲಿ ಟಿಪ್ಪು ಜಯಂತಿ ಆಚರಿಸಿದರೆ ಆಗ ಯಾರಾದರೂ ವಿರೋಧ ಮಾಡಲು ಸಾಧ್ಯವಾ?
ಖಾಸಗಿ ಬಸ್ಸಿನವರ ಮನಸ್ಥಿತಿ ನನಗೆ ಗೊತ್ತಿದೆ…
ಇನ್ನು ಕೆಲವರು ಬಸ್ಸು ಮಾಲೀಕರ ಸಂಘದವರು ಬಿಜೆಪಿ ಪರ ಎಂದು ಟೀಕೆ ಮಾಡಿದ್ದಾರೆ. ನಿಜ ಹೇಳಬೇಕೆಂದರೆ ಬಸ್ಸಿನ ಮಾಲೀಕರು ಯಾರ ಪರವೂ ಇಲ್ಲ. ಅವರು ಅಪ್ಪಟ ವ್ಯವಹಾರಿಕ ಜನ. ನರ್ಮ್ ಬಸ್ಸುಗಳನ್ನು ಹಾಕಬಾರದು ಎನ್ನುವುದರಿಂದ ಹಿಡಿದು ಖಾಸಗಿ ರೂಟಿನಲ್ಲಿ ಸರಕಾರಿ ಬಸ್ಸುಗಳನ್ನು ಹಾಕುವುದರ ವಿರುದ್ಧ ಅವರು ಹಿಂದಿನ ಸಾರಿಗೆ ಸಚಿವರುಗಳಿಗೆ ಕೊಟ್ಟ ಕಪ್ಪಗಳು ಕಡಿಮೆನಾ? ಮುಖೇಶ್ ಅಂಬಾನಿ ಜಿಯೋ ಲಾಂಚ್ ಮಾಡಿ ಕಡಿಮೆಗೆ ಇಂಟರ್ ನೆಟ್, ಕಾಲ್ ಕೊಟ್ಟಾಗಲೂ ಬೇರೆಯವರಿಂದ ಇಂತಹುದೇ ಮಾತುಗಳು ಬಂದಿದ್ದವು. ಅಷ್ಟಕ್ಕೂ ಖಾಸಗಿ ಬಸ್ಸು ಮಾಲೀಕರು ಉಚಿತವಾಗಿ ಬಸ್ಸು ಕೊಡುವುದರಿಂದಲೇ ಯಾವುದೇ ಸಮಾವೇಶ ಯಶಸ್ವಿಯಾಗುವುದಿಲ್ಲ. ಒಂದು ಸಂಘಟನೆ ತಾವು ಮಾಡುವ ಕಾರ್ಯಕ್ರಮಗಳಲ್ಲಿ ಇದೊಂದು ಅಂಗ ಅಷ್ಟೇ. ಜನಾಗ್ರಹ ಸಭೆಯಲ್ಲಿ ಭಾಗವಹಿಸಲೇಬೇಕೆಂದು ಮನಸ್ಸು ಇದ್ದ ವ್ಯಕ್ತಿ ಬಸ್ಸು ಫ್ರೀ ಇದ್ದರೆ ಮಾತ್ರ ಬರುತ್ತೇನೆ ಎಂದು ಹೇಳುವುದಿಲ್ಲ. ಅಷ್ಟಕ್ಕೂ ಮಂಗಳೂರು ನಗರಕ್ಕೆ ಬರುವುದಕ್ಕೆ ಸಾವಿರಾರು ರೂಪಾಯಿ ಬೇಕಾಗಿಲ್ಲ. ಅದೇ ಬರಲು ಮನಸ್ಸು ಇಲ್ಲದವನಿಗೆ ನೀವು ಕೈ ಹಿಡಿದು ಬಸ್ಸಿನಲ್ಲಿ ಕುಳ್ಳಿರಿಸಿದರೂ ಅವನು ಬರಲು ಕೇಳುವುದಿಲ್ಲ. ಬರುವವರು ಹೇಗಾದರೂ ಬಂದೇ ಬರುತ್ತಾರೆ. ವಿರೋಧ ಮಾಡುವವರು ತಮ್ಮ ಅಸ್ತಿತ್ವಕ್ಕಾಗಿ ವಿರೋಧ ಮಾಡುತ್ತಲೇ ಇರುತ್ತಾರೆ. ಬೇಕಾದರೂ ಕಮ್ಮಿನಿಷ್ಟರು ಮುಂದಿನ ತಿಂಗಳು ತಮ್ಮ ಒಂದು ಬೃಹತ್ ಸಭೆ ಮಾಡಲಿ, ಬಸ್ಸುಗಳನ್ನು ಉಚಿತವಾಗಿ ಕೇಳಲಿ. ಸಿಕ್ಕಿದರೆ ಉಪಯೋಗಿಸಲಿ!
Leave A Reply