ಫುಟ್ ಪಾತ್ ಮೇಲೆ ಚಿಪ್ಸು. ಪಾಲಿಕೆ ಆಗಿದೆ ಬೆಪ್ಪು!!
ಮಂಗಳೂರಿನಲ್ಲಿ ಆಗಾಗ ಕೇಳಿಬರುವ ಸಮಸ್ಯೆ ಏನೆಂದರೆ ಬೀದಿಬದಿ ವ್ಯಾಪಾರಿಗಳು ರಸ್ತೆಬದಿಯಲ್ಲಿ, ಫುಟ್ ಪಾತ್ ಮೇಲೆ ವ್ಯಾಪಾರ ಮಾಡುತ್ತಾರೆ, ಅದರಿಂದ ಮಂಗಳೂರಿನ ಸೌಂದರ್ಯ ಹಾಳಾಗುತ್ತದೆ, ಜನರ ಸಂಚಾರಕ್ಕೆ, ವಾಹನ ಸಂಚಾರಕ್ಕೆ ಅಡಚಣೆಯಾಗುತ್ತದೆ ಎಂದೆಲ್ಲ ಆರೋಪ-ಪ್ರತ್ಯಾರೋಪಗಳು ದಶಕದಿಂದ ಚಾಲ್ತಿಯಲ್ಲಿವೆ. ಇವತ್ತು ನಾನು ಆ ವಿಷಯದ ಬಗ್ಗೆ ಬರೆಯಲು ಹೋಗುತ್ತಿಲ್ಲ. ಅದಕ್ಕಿಂತಲೂ ಹೆಚ್ಚು ಚರ್ಚೆಗೆ ಒಳಗಾಗಬೇಕಾಗಿರುವ ಆದರೆ ಮಂಗಳೂರು ಮಹಾನಗರ ಪಾಲಿಕೆ ಶ್ರೀಮಂತರ ಬಗ್ಗೆ ಒಂದು ನೀತಿ, ಬಡವರ ಬಗ್ಗೆ ಒಂದು ನೀತಿ ಅನುಸರಿಸುತ್ತಿರುವ ವಿಷಯವನ್ನು ನಿಮ್ಮ ಗಮನಕ್ಕೆ ತರುತ್ತಿದ್ದೇನೆ. ಇವತ್ತು ನಾನು ಹೇಳುತ್ತಿರುವ ಸಂಗತಿಯನ್ನು ನೀವು ಅನೇಕ ಬಾರಿ ಅನುಭವಿಸಿರಬಹುದು. ಆದರೆ ಏನೂ ಮಾಡಲಾಗದೇ ಮನಸ್ಸಿನಲ್ಲಿಯೇ ಗೊಣಗಿಕೊಂಡು ಮುಂದೆ ಹೋಗಿರಬಹುದು. ಅದು ಬಿಟ್ಟು ಜನಸಾಮಾನ್ಯರಾದ ನಾವು, ನೀವು ಏನು ಮಾಡಲು ಆಗುವುದಿಲ್ಲ. ಮಾಡಬೇಕಾದವರು ಸುಮ್ಮನೆ ಕುಳಿತಿರುವುದರಿಂದ ಇವತ್ತು ನಾನು ಫೋಟೋ ಸಹಿತ ಅದನ್ನು ಬರೆಯುತ್ತಿದ್ದೇನೆ.
ಫುಟ್ ಪಾತ್ ಏಕೆ, ಅದನ್ನೇ ಅಂಗಡಿ ಮಾಡಿಕೊಳ್ಳಲಿ..
ಪ್ರಾರಂಭದಲ್ಲಿಯೇ ಹೇಳಿಬಿಡುತ್ತೇನೆ. ಇದು ಯಾವುದೇ ಅಂಗಡಿ ಅಥವಾ ವ್ಯಕ್ತಿಗಳ ವಿರುದ್ಧ ಬರೆಯುವುದಲ್ಲ. ನನಗೆ ತಪ್ಪು ಮಾಡಿದ ಅಂಗಡಿಯವರು ಮುಖ್ಯ ಅಲ್ಲವೇ ಅಲ್ಲ. ಇಲ್ಲಿ ಎಚ್ಚೆತ್ತುಕೊಳ್ಳಬೇಕಾಗಿರುವುದು ನಮ್ಮ ಪಾಲಿಕೆ. ಅವರು ಸುಮ್ಮನೆ ಕುಳಿತುಕೊಂಡಿರುವುದರಿಂದ ಅದು ಸರಿಯಾಗುವ ತನಕ ನಾನು ಬರೆಯುತ್ತಲೆ ಇರುತ್ತೇನೆ. ನೀವು ಮಂಗಳೂರಿನ ಹೃದಯಭಾಗದಲ್ಲಿರುವ ಹಂಪನಕಟ್ಟೆ, ಮೈದಾನರಸ್ತೆ, ಕ್ಲಾಕ್ ಟವರ್ ಇರುವ ರಸ್ತೆ, ಸೆಂಟ್ರಲ್ ಮಾರ್ಕೆಟ್ ರಸ್ತೆ ಇಂತಹ ಕೆಲವು ಪ್ರಮುಖ ರಸ್ತೆಗಳಲ್ಲಿ ಯಾವತ್ತಾದರೂ ನಡೆದುಕೊಂಡೋ ಅಥವಾ ದ್ವಿಚಕ್ರದಲ್ಲಿಯೋ ಅಥವಾ ಕಾರು, ಜೀಪಿನಲ್ಲಿಯೋ ಹೋಗಿಯೇ ಇರುತ್ತೀರಿ. ಆ ರಸ್ತೆಗಳಲ್ಲಿರುವ ಹೆಚ್ಚಿನ ಅಂಗಡಿಯ ಮಾಲೀಕರಿಗೆ ಒಂದು ಕೆಟ್ಟ ಅಭ್ಯಾಸ ಇದೆ. ಅದೇನೆಂದರೆ ತಮ್ಮ ಅಂಗಡಿಗಳ ಸಾಮಾನುಗಳನ್ನು ತಂದು ಅಂಗಡಿಯ ಹೊರಗೆ ಇಡುವುದು. ಎಷ್ಟೋ ಬಾರಿ ಇವರ ಅಂಗಡಿಯ ಒಳಗೆ ಜಾಗ ಸಾಕಷ್ಟು ಇರುತ್ತದೆ. ಆದರೆ ಅಂಗಡಿಯ ಹೊರಗೆ ಫುಟ್ ಪಾತ್ ಮೇಲೆ ಅಂಗಡಿಯ ಅರ್ಧ ಸಾಮಾನುಗಳನ್ನು ತಂದು ಇಟ್ಟಿರುತ್ತಾರೆ. ಪ್ಲಾಸ್ಟಿಕ್ ವಸ್ತುಗಳನ್ನು ಮಾರುವ ಅಂಗಡಿಯವರಾದರೆ ಪ್ಲಾಸ್ಟಿಕ್ ಬಕೆಟ್, ಚೊಂಬು, ಕುರ್ಚಿಗಳಿಂದ ಹಿಡಿದು ಪೊರಕೆಯ ತನಕ ಹೊರಗೆ ಇಟ್ಟುಬಿಟ್ಟಿರುತ್ತಾರೆ. ಅವರ ಅಂಗಡಿಯ ಎದುರಿನ ಅಷ್ಟು ಜಾಗವನ್ನು ಇವರು ಆಕ್ರಮಿಸಿಕೊಂಡಿರುತ್ತಾರೆ. ಇನ್ನು ಬಟ್ಟೆ ಅಂಗಡಿಯವರು ಸೀರೆಗಳಿಂದ ಹಿಡಿದು ಬಾವುಟಗಳ ತನಕ ಹೊರಗೆ ನೇತಾಡಿಸಿ ಇರುತ್ತಾರೆ. ಹೂವಿನ ಅಂಗಡಿಗಳವರು ದೊಡ್ಡ ದೊಡ್ಡ ಬುಟ್ಟಿಗಳನ್ನು, ತರಕಾರಿ ಅಂಗಡಿಯವರು ತರಕಾರಿ ಬುಟ್ಟಿಗಳನ್ನು, ಜಿನಸು ಅಂಗಡಿಯವರು ಮೆಣಸಿನಿಂದ ಹಿಡಿದು ಉಪ್ಪಿನ ತನಕ, ಪಾನೀಯದ ಅಂಗಡಿಯವರು ಬಾಟಲಿಗಳ ಕ್ರೇಟ್ ಗಳನ್ನು ಹೊರಗೆ ಇಟ್ಟುಕೊಂಡಿರುತ್ತಾರೆ. ಈ ಸೆಂಟ್ರಲ್ ಥಿಯೇಟರ್ ನಿಂದ ರೂಪವಾಣಿ ಥಿಯೇಟರ್ ತನಕ ಹೋಗುವ ರಸ್ತೆ ಏಕಮುಖವಾಗಿರುವುದು ಮತ್ತು ಇವರ ಅರ್ಧಕರ್ಧ ವಸ್ತುಗಳನ್ನು ಹೊರಗೆ ಇಟ್ಟಿರುವುದರಿಂದ ಜನರಿಗೆ ಆಗುತ್ತಿರುವ ತೊಂದರೆ ಅಷ್ಟಿಷ್ಟಲ್ಲ. ಅಷ್ಟೇ ಅಲ್ಲದೆ ಇದು ಒಂದು ಊರಿನ ಸೌಂದರ್ಯವನ್ನು ಕೂಡ ಇಂಚಿಂಚಾಗಿ ಹಾಳು ಮಾಡುತ್ತಾ ಹೋಗುತ್ತದೆ. ಇದು ಯಾಕೆ ಪಾಲಿಕೆಯವರು ಗಮನಿಸುವುದಿಲ್ಲ ಎನ್ನುವುದು ನನ್ನ ಪ್ರಶ್ನೆ.
ಬಿಸಿ ಎಣ್ಣೆ ಮೈ ಮೇಲೆ ಬಿದ್ದರೆ…
ಇದು ಹಂಪನಕಟ್ಟೆ ಅಥವಾ ಮೈದಾನ ಫಸ್ಟ್ ಕ್ರಾಸ್ ರೋಡ್ ಗೆ ಮಾತ್ರ ಸೀಮಿತವಲ್ಲ. ಪಿಎಂ ರಾವ್ ರಸ್ತೆ, ರಥಬೀದಿ ಸಹಿತ ನಾನು ಈಗಾಗಲೇ ಮೇಲೆ ಹೇಳಿದ ಎಲ್ಲ ರಸ್ತೆಗಳಿಗೂ ಅನ್ವಯವಾಗುತ್ತದೆ. ಇದನ್ನು ಸರಿ ಮಾಡಬೇಕಾದವರು ಯಾರು? ಮೊದಲನೇಯದಾಗಿ ಪಾಲಿಕೆಯ ಆಯುಕ್ತರಿಗೆ ಇದು ಗೊತ್ತಿಲ್ಲವೇ? ಮೇಯರ್ ಅವರಿಗೆ ಇದು ಕಾಣುವುದಿಲ್ಲವೇ? ಕೆಲವು ಅಂಗಡಿಯವರಂತೂ ಫುಟ್ ಪಾತ್ ಮೇಲೆ ಯಮಗಾತ್ರದ ಕಾವಲಿಗಳನ್ನು ಇಟ್ಟು ಅದರಲ್ಲಿಯೇ ತಿಂಡಿಗಳನ್ನು ತಯಾರಿಸಿ ಅಲ್ಲಿಯೇ ಮಾರುತ್ತಿರುತ್ತಾರೆ. ರಥಬೀದಿಗೆ ತಾಗಿಕೊಂಡಿರುವ ಶ್ರೀನಿವಾಸ್ ಥಿಯೇಟರ್ ಇದೆಯಲ್ಲ. ಅಲ್ಲಿ ಎದುರಿಗೆ ಅಂಗಡಿಯೊಂದರ ಹೊರಗೆನೆ ಎಣ್ಣೆಯ ತಿಂಡಿಗಳನ್ನು ಮಾಡಲು ಕಾವಲಿಯೊಂದನ್ನು ಇಟ್ಟು ವ್ಯಾಪಾರ ಮಾಡುತ್ತಿದ್ದಾರೆ. ವ್ಯಾಪಾರ ಮಾಡುವುದಕ್ಕೆ ನನ್ನ ವಿರೋಧವಲ್ಲ. ಆದರೆ ಮಾಡುತ್ತಿರುವ ಜಾಗ ಅದು ಸರಿಯಲ್ಲ. ನೀವು ಅಂಗಡಿಯೊಳಗೆ ಏನು ಬೇಕಾದರೂ ಮಾಡಿ. ಅದು ಬಿಟ್ಟು ರಸ್ತೆಗೆ ತಾಗಿ ಬಿಸಿ ಬಿಸಿ ಎಣ್ಣೆಯ ಕಾವಲಿ ಇಟ್ಟು ವ್ಯಾಪಾರ ಮಾಡಿದರೆ ಒಂದು ವೇಳೆ ಹೆಚ್ಚು ಕಡಿಮೆ ಆದರೆ ಅದಕ್ಕೆ ಯಾರು ಹೊಣೆ? ಹಾಗಂತ ನಾನು ಏನೂ ಆಗದೇ ಆತಂಕ ವ್ಯಕ್ತಪಡಿಸುತ್ತಿದ್ದೇನೆ ಎಂದಲ್ಲ. ಅಲ್ಲಿ ಅಕ್ಕಪಕ್ಕದಲ್ಲಿ ಶಾಲೆ, ಕಾಲೇಜುಗಳಿವೆ. ಅಲ್ಲಿ ನಿತ್ಯ ನೂರಾರು ಮಕ್ಕಳು ಹೋಗಿ ಬರುತ್ತಾ ಇರುತ್ತಾರೆ. ಇತ್ತೀಚೆಗೆ ಮಹಿಳೆಯೊಬ್ಬರ ಮೇಲೆ ಬಿಸಿ ಎಣ್ಣೆ ಹಾರಿದೆ. ಒಂದು ವೇಳೆ ಮಕ್ಕಳು ಬರುವಾಗ ಇದೇ ಬಿಸಿ ಎಣ್ಣೆಯ ಕಾವಲಿಗೆ ತಾಗಿ ಬಿದ್ದರೆ ನಂತರ ಸುಟ್ಟ ಹೋಗುವ ಚರ್ಮವನ್ನು ಈ ಅಂಗಡಿಯವರು ಸರಿ ಮಾಡಿ ಕೊಡುತ್ತಾರಾ? ಮಕ್ಕಳ ಮುಖದ ಮೇಲೆ ಎಣ್ಣೆ ಬಿದ್ದರೆ ಜೀವಕ್ಕೆ ಹೆಚ್ಚು ಕಡಿಮೆ ಆದರೆ ಇವರು ಹೊಣೆ ಹೊರುತ್ತಾರಾ? ಒಂದು ವೇಳೆ ಯಾವುದಾದರೂ ಸ್ಕೂಟರ್ ಸ್ಕಿಡ್ ಆಗಿ ಎಣ್ಣೆಯ ಕಾವಲಿಗೆ ಬಂದು ಹೊಡೆದು ಸಾರ್ವಜನಿಕರ ಮೇಲೆ ಕಾದದ್ದು ಬಿದ್ದರೆ ಪಾಲಿಕೆಯವರು ಜವಾಬ್ದಾರಿ ತೆಗೆದುಕೊಳ್ಳುತ್ತಾರಾ? ನಾಳೆ ಆಗುವುದನ್ನು ಇವತ್ತೆ ಹೇಳುತ್ತಿದ್ದೇನೆ. ಪಾಲಿಕೆಯಲ್ಲಿ ಮತ್ತೆ ಆಡಳಿತಕ್ಕೆ ಬರುತ್ತೇವಾ ಇಲ್ವಾ ಎನ್ನುವ ಚಿಂತನೆಯಲ್ಲಿರುವ ಕಾಂಗ್ರೆಸ್ಸಿಗರಿಗೆ ಇದೆಲ್ಲ ತುಂಬಾ ಚಿಕ್ಕ ವಿಷಯ ಅನಿಸುತ್ತದೆ. ನನಗೆ ಇಂತಹ ಚಿಕ್ಕ ಚಿಕ್ಕ ವಿಷಯಗಳೇ ಜನಸಾಮಾನ್ಯರಿಗೆ ಹೆಚ್ಚು ಡೆಂಜರ್ ಎನಿಸುವುದು!
Leave A Reply