ಪಾಲಿಕೆಯಲ್ಲಿ ಕಂಪ್ಯೂಟರ್ ಇರುವುದು ವಿಡಿಯೋ ಗೇಮ್ ಆಡುವುದಕ್ಕಾ!!
ಒಂದು ಕಾಲದಲ್ಲಿ ಯಾವುದೂ ಅತ್ಯಾಧುನಿಕ ತಂತ್ರಜ್ಞಾನ ಇಲ್ಲದ ಕಾಲದಲ್ಲಿ ಮನುಷ್ಯ ಕೈಯಿಂದ ಬರೆಯುತ್ತಿದ್ದ. ಅದರ ನಂತರ ಒಂದಿಷ್ಟು ಅಭಿವೃದ್ಧಿಯಾಗಿ ಟೈಪ್ ರೈಟಿಂಗ್ ಇತ್ತು. ನಂತರ ಕಂಪ್ಯೂಟರ್ ಬಂತು. ಕೈ ಬರವಣಿಗೆಗಿಂತ ಟೈಪ್ ರೈಟಿಂಗ್ ಸ್ಪೀಡ್ ಆಗುತ್ತದೆ. ಟೈಪ್ ರೈಟಿಂಗ್ ಗಿಂತ ಕಂಪ್ಯೂಟರ್ ಫಾಸ್ಟ್ ಆಗುತ್ತದೆ. ಮುಂದೆ ಏನು ಬರುತ್ತದೋ ಗೊತ್ತಿಲ್ಲ. ಆದರೆ ಒಂದಂತೂ ನಿಜ. ಕಾಲ ಬದಲಾದಂತೆಲ್ಲ ನಮ್ಮ ಲೈಫ್ ಫಾಸ್ಟ್ ಆಗುತ್ತಾ ಹೋಗುತ್ತದೆ. ಆದರೆ ಮಂಗಳೂರಿನಲ್ಲಿ ಒಂದು ಸರಕಾರಿ ಕಚೇರಿ ಮಾತ್ರ ವರ್ಷ ಹೋದಂತೆಲ್ಲ ಹಿಂದಿನ ಶಿಲಾಯುಗದ ಕಡೆ ರಿವರ್ಸ್ ಆಂಗಲ್ ನಲ್ಲಿ ಹೋಗುತ್ತಿದೆ. ಅಂತಹ ಸರಕಾರಿ ಕಚೇರಿಯನ್ನು ನಾವು ಮಂಗಳೂರು ಮಹಾನಗರ ಪಾಲಿಕೆ ಎಂದು ಕರೆಯುತ್ತೇವೆ.
ಸ್ಟುಡಿಯೋದಲ್ಲಿ ನೋಡಿ ಕಲಿಯಬೇಕು…
ಈಗ ಎಲ್ಲಾ ಕಡೆ ಡಿಜಿಟಲ್ ಕ್ರಾಂತಿ ನಡೆಯುತ್ತದೆ. ನಮ್ಮ ಪಾಲಿಕೆ ಕೂಡ ಯಾವ ವಿಷಯದಲ್ಲಿಯೂ ಹಿಂದೆ ಬೀಳಬಾರದು ಎನ್ನುವ ಕಾರಣಕ್ಕೆ ಸರಕಾರ ಪಾಲಿಕೆಗೆ ಕಂಪ್ಯೂಟರ್ ಗಳನ್ನು ಕೊಡಿಸಿದೆ. ಕಂಪ್ಯೂಟರ್ ಬಂದ ಮೇಲೆ ಪಾಲಿಕೆ ಕೆಲಸದ ವಿಷಯದಲ್ಲಿ ಹಿಂದಿಗಿಂತ ಹೆಚ್ಚು ನಿಧಾನಗತಿಯಲ್ಲಿ ತೆವಳಿಕೊಂಡು ನಡೆಯುತ್ತಿದೆ. ಅಷ್ಟಕ್ಕೂ ಕಂಪ್ಯೂಟರ್ ನಲ್ಲಿ ಇವರು ವಿಡಿಯೋ ಗೇಮ್ ಆಡುತ್ತಾ ಕಾಲ ಕಳೆಯುತ್ತಿದ್ದಾರಾ ಎಂದು ನೀವು ಅಂದುಕೊಳ್ಳಬಹುದು. ಅದೇನೂ ಮಾಡ್ತಾರೋ ಬಿಡ್ತಾರೋ ಒಟ್ಟು ಬೆರಳೆಣಿಕೆಯ ದಿನಗಳಲ್ಲಿ ಆಗುವಂತಹ ಕೆಲಸಕ್ಕೆ ತಿಂಗಳುಗಟ್ಟಲೆ ಹಿಡಿಯುತ್ತಿದೆ. ಉದಾಹರಣೆಗೆ ಟ್ರೇಡ್ ಲೈಸೆನ್ಸ್ ನವೀಕರಣ ಮಾಡುವುದನ್ನೇ ತೆಗೆದುಕೊಳ್ಳೋಣ. ಹಿಂದೆ ಟ್ರೇಡ್ ಲೈಸೆನ್ಸ್ ನವೀಕರಣದ ಅರ್ಜಿ ಸಲ್ಲಿಸಿದ ಮೂರರಿಂದ ಏಳು ದಿನಗಳೊಳಗೆ ಲೈಸೆನ್ಸ್ ನವೀಕರಣ ಆಗಿಬಿಡುತ್ತಿತ್ತು. ಅದಕ್ಕಿಂತ ಮೊದಲು ಹಣ ಪಾವತಿಸಿದ ಐದು ದಿನಗಳೊಳಗೆ ರಸೀದಿ ಸಿಗುತ್ತಿತ್ತು. ಈಗ ಕಂಪ್ಯೂಟರ್ ಬಂದ ನಂತರ ಎಷ್ಟು ಬೇಗ ಆಗಬೇಕೋ ಅಷ್ಟು ಬೇಗ ಆಗುತ್ತದಾ ಎನ್ನುವುದನ್ನು ಅಲ್ಲಿಗೆ ಹೋದವರಿಗೆ ಮಾತ್ರ ಗೊತ್ತಾಗುತ್ತದೆ. ಈಗ ಡಿಜಿಟಲ್ ಆದ ನಂತರ ಟ್ರೇಡ್ ಲೈಸೆನ್ಸ್ ನವೀಕರಣಕ್ಕೆ ಹಣ ಪಾವತಿಸಿದ ಒಂದು ತಿಂಗಳು ತನಕ ರಸೀದಿಯೇ ಸಿಗುವುದಿಲ್ಲ. ಅದರ ನಂತರ ಲೈಸೆನ್ಸ್ ನವೀಕರಣ ಪತ್ರ ಪ್ರಿಂಟ್ ಆಗಿ ಬರಲು ಎರಡರಿಂದ ಮೂರು ತಿಂಗಳು ತಗಲುತ್ತದೆ. ಹಿಂದೆ ಹೊಸ ಟ್ರೇಡ್ ಲೈಸೆನ್ಸ್ ಹತ್ತು ದಿನಗಳ ಒಳಗೆ ಸಿಗುತ್ತಿತ್ತು. ಈಗ ಮೂರು ತಿಂಗಳು ದಾಟುತ್ತದೆ. ಹೀಗೆ ಆದರೆ ಇವರಿಗೆ ಡಿಜಿಟಲ್ ಮಾಡಿಕೊಟ್ಟದ್ದಕ್ಕೆ ಏನು ಪ್ರಯೋಜನ. ಇವರಿಗೆ ಡಿಜಿಟಲ್ ಕ್ರಾಂತಿಯ ಎಫೆಕ್ಟ್ ಗೊತ್ತಾಗಬೇಕಾದರೆ ಪಾಲಿಕೆಯ ಸಿಬ್ಬಂದಿಗಳನ್ನು ಯಾವುದಾದರೂ ಫೋಟೋ ಸ್ಟುಡಿಯೋಗೆ ಕರೆದುಕೊಂಡು ಹೋಗಿ ತೋರಿಸಬೇಕು. ಹಿಂದೆ ಒಂದು ಪಾಸ್ ಪೋರ್ಟ್ ನೆಗೆಟಿವ್ ಅನ್ನು ಪ್ರಿಂಟ್ ಹಾಕಬೇಕಾದರೆ ತುಂಬಾ ದಿನ ತಗಲುತ್ತಿತ್ತು. ಈಗ ನೀವು ಅವರ ಕೈಯಲ್ಲಿ ಕೊಟ್ಟು ಆ ಕಡೆ ಈ ಕಡೆ ನೋಡುವಷ್ಟರಲ್ಲಿ ನಿಮ್ಮ ಕೈಯಲ್ಲಿ ಪ್ರಿಂಟ್ ತಂದುಕೊಡುತ್ತಾರೆ. ಈಗ ಪಾಲಿಕೆಯಲ್ಲಿ ಡಿಜಿಟಲ್ ವ್ಯವಸ್ಥೆ ಆದ ನಂತರ ಸ್ಟುಡಿಯೋದಲ್ಲಿ ಆಗುವಷ್ಟು ಸ್ಪೀಡ್ ಆಗಬೇಕು ಎಂದು ನಾವು ನಿರೀಕ್ಷಿಸುವುದಿಲ್ಲ. ಆದರೆ ಹಿಂದಿಗಿಂತ ಫಾಸ್ಟ್ ಆಗಲೇಬೇಕು ತಾನೇ?
ಖಾತಾ ಕಾಪಿ ಯಾಕೆ?
ಈಗ ಟ್ರೇಡ್ ಲೈಸೆನ್ಸ್ ಅಥವಾ ಅದರ ನವೀಕರಣ ಮಾಡುವಾಗ ನಿಮ್ಮ ಉದ್ಯಮದ ಜಾಗದ ಖಾತಾ ಕಾಪಿ ಕೂಡ ಲಗತ್ತಿಸಬೇಕು ಎಂದು ಪಾಲಿಕೆಯಲ್ಲಿ ಹೇಳುತ್ತಾರೆ. ಖಾತಾ ಕಾಪಿ ಯಾಕೆ ಎಂದರೆ ಜನ ಟ್ರೇಡ್ ಲೈಸೆನ್ಸ್ ಮಾಡಿಸುವಾಗ ಜಾಗದ ಚದರ ಅಡಿಯನ್ನು ಕಡಿಮೆ ತೋರಿಸುತ್ತಾರೆ ಎನ್ನುವುದು ಸಿಬ್ಬಂದಿಗಳ ಅನಿಸಿಕೆ. ಖಾತಾ ಕಾಪಿ ನೋಡಿದರೆ ಸತ್ಯ ಗೊತ್ತಾಗುತ್ತದೆ ಎನ್ನುವುದು ಅಭಿಪ್ರಾಯ. ಈ ಖಾತಾದಲ್ಲಿ ಇತ್ತೀಚಿನ ಎಂಟು ವರ್ಷಗಳಿಂದ ಮಾತ್ರ ಜಾಗದ ಚದರ ಅಡಿಯನ್ನು ನಮೂದಿಸಲಾಗುತ್ತಿದೆ ಬಿಟ್ಟರೆ ಅದರ ಹಳೆ ಖಾತಾಗಳಲ್ಲಿ ಅದು ನಮೂದಿಸಿರುವುದಿಲ್ಲ. ಅಂತವರು ಏನು ಮಾಡುವುದು.
ಇನ್ನು ನೀವು ವ್ಯಾಪಾರ ಮಾಡುವ ಕಟ್ಟಡದ ಮಾಲೀಕ ಬೇರೆಯಾಗಿದ್ದರೆ, ನೀವು ಆತನ ಬಳಿ ಬಾಡಿಗೆಗೆ ಇದ್ದರೆ ಆಗ ಮಾಲೀಕ ಖಾತಾ ಕಾಪಿ ಕೊಡದೇ ಇದ್ದರೆ ಏನು ಮಾಡುತ್ತೀರಿ. ಅದೆಲ್ಲ ಸಮಸ್ಯೆ ತಪ್ಪಿಸಬೇಕಾದರೆ ಇರುವ ಸುಲಭ ಉಪಾಯವನ್ನು ನಾನು ಹೇಳುತ್ತೇನೆ. ನೀವು ನವೀಕರಣ ಮಾಡಲು ಆರೋಗ್ಯ ವಿಭಾಗಕ್ಕೆ ಅರ್ಜಿ ಹಾಕುತ್ತೀರಿ. ನಿಮ್ಮ ಡೋರ್ ನಂಬರ್, ಚದರ ಅಡಿ ವಿಸ್ತ್ರೀರ್ಣ ಎಲ್ಲವೂ ಕಂದಾಯ ವಿಭಾಗದಲ್ಲಿ ಇರುತ್ತದೆ. ಪಾಲಿಕೆ ಕಂಪ್ಯೂಟರೈಸ್ಡ್ ಆಗಿರುವುದರಿಂದ ನೀವು ಅರ್ಜಿ ಹಾಕಿದ ಕೂಡಲೇ ನಿಮ್ಮ ಅರ್ಜಿಯನ್ನು ಕಂದಾಯ ವಿಭಾಗದೊಂದಿಗೆ ಲಿಂಕ್ ಮಾಡಿದರೆ ಅಲ್ಲಿ ಲಿಂಕ್ ಒಪನ್ ಮಾಡಿದರೆ ನಿಮ್ಮ ಎಲ್ಲಾ ಡಿಟೇಲ್ಸ್ ಒಪನ್ ಆಗುತ್ತದೆ. ಆಗ ನೀವು ಅರ್ಜಿಯಲ್ಲಿ ಜಾಗದ ವಿಸ್ತ್ರೀರ್ಣ ಕಡಿಮೆ ಬರೆದಿದ್ದರೆ ಅಲ್ಲಿ ಕೂಡಲೇ ಸಿಕ್ಕಿ ಬೀಳುತ್ತೀರಿ. ಅದನ್ನು ರಿಜೆಕ್ಟ್ ಮಾಡುವ ಎಲ್ಲಾ ಅವಕಾಶ ಪಾಲಿಕೆಗೆ ಇರುತ್ತದೆ. ಆದ್ದರಿಂದ ಆರೋಗ್ಯ ವಿಭಾಗ, ಕಂದಾಯ ವಿಭಾಗ ಲಿಂಕ್ ಮಾಡುವ ಮೂಲಕ ಡಿಜಿಟಲ್ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಈ ಮೂಲಕ ಜನರಿಗೆ ಆಗುವ ತೊಂದರೆಯನ್ನು ತಪ್ಪಿಸಬಹುದು. ಇನ್ನು ಕಂದಾಯ ವಿಭಾಗದಲ್ಲಿ ಖಾತಾ ನೋಂದಾವಣೆ ಮಾಡುವಾಗ ಆಗುವ ತೊಂದರೆ ಬಗ್ಗೆ ಕೂಡ ನಿಮ್ಮ ಗಮನಕ್ಕೆ ತರುತ್ತೇನೆ. ಸೋಮವಾರ ಇದೇ ಜಾಗೃತ ಅಂಕಣದಲ್ಲಿ ಭೇಟಿಯಾಗೋಣ.
Leave A Reply