ನಾಲ್ಕೈದು “ವಿಐಪಿ” ಕಾರ್ಪೋರೇಟರ್ ಗಳಿಂದ ಇಡೀ ಚುನಾವಣೆ ನ್ಯಾಯಾಲಯದ ಅಂಗಳದಲ್ಲಿ!!
ಇದು ಪ್ರತಿ ಚುನಾವಣೆಯ ಮೊದಲಿನ ಹಣೆಬರಹ. ಅದರಲ್ಲಿಯೂ ಮಹಾನಗರ ಪಾಲಿಕೆ, ಪಂಚಾಯತ್ ಚುನಾವಣೆ ಎಂದ ಕೂಡಲೇ ಮೀಸಲಾತಿ ವಿಷಯ ಕೋರ್ಟಿಗೆ ಹೋಗದೆ ಯಾವ ಚುನಾವಣೆಯೂ ಸರಾಗವಾಗಿ ನಡೆದದ್ದು ಅಪರೂಪ. ಈ ಬಾರಿ ಕೂಡ ಹಾಗೆ ಆಗಿದೆ. ಮೀಸಲಾತಿಯ ವಿಷಯದಲ್ಲಿ ಅನ್ಯಾಯಕ್ಕೊಳಗಾದ ಕೆಲವು ಕಾರ್ಪೋರೇಟರ್ ಗಳು ಮತ್ತು ಕೆಲವರು ವೈಯಕ್ತಿಕವಾಗಿಯೂ ಕೋರ್ಟಿಗೆ ಹೋಗಿದ್ದಾರೆ. ಯಾವ ಸರಕಾರ ರಾಜ್ಯದಲ್ಲಿ ಅಧಿಕಾರದಲ್ಲಿ ಇರುತ್ತದೆಯೋ ಅವರು ತಮ್ಮ ಪಕ್ಷದ ಸದಸ್ಯರಿಗೆ ಅನುಕೂಲವಾಗುವಂತೆ ಮೀಸಲಾತಿಯನ್ನು ರಚಿಸಿ ಅದನ್ನು ಸುತ್ತೋಲೆ ಮೂಲಕ ಹೊರಡಿಸುತ್ತಾರೆ. ಅದು ಬಹಳ ಹಿಂದಿನಿಂದಲೂ ನಡೆದುಕೊಂಡು ಬರುತ್ತಿದ್ದ ಸಂಪ್ರದಾಯ. ಆದರೆ ಹತ್ತು ವರ್ಷಗಳ ಹಿಂದೆ ಮಾನ್ಯ ಉಚ್ಚ ನ್ಯಾಯಾಲಯ ಒಂದು ಮಹತ್ತರ ಆದೇಶವನ್ನು ನೀಡಿತು. ಈ ಮೂಲಕ ಪ್ರತಿ ಸ್ಥಳೀಯ ಸಂಸ್ಥೆ ಚುನಾವಣೆಯ ಸಂದರ್ಭದಲ್ಲಿ ರೋಟೇಶನ್ ಸಿಸ್ಟಮ್ ನಲ್ಲಿ ಮೀಸಲಾತಿಯನ್ನು ತರಬೇಕು ಎಂದು ಆದೇಶಿಸಿತು. ಇದು ಮೀಸಲಾತಿ ರಾಜಕೀಯವನ್ನು ಒಂದಿಷ್ಟು ಕಡಿಮೆ ಮಾಡಿರಬಹುದು. ಆದರೆ ಸಂಪೂರ್ಣವಾಗಿ ಕಡಿಮೆಯಾಗಿಲ್ಲ.
ರೋಟೇಶನ್ ಸಿಸ್ಟಮ್ ನಲ್ಲಿ ಗೊಂದಲ…
ಉಚ್ಚ ನ್ಯಾಯಾಲಯದ ಆದೇಶ ಹೇಗಿದೆ ಎಂದರೆ ಉದಾಹರಣೆಗೆ ನಮ್ಮ ಪಾಲಿಕೆಯಲ್ಲಿ ವಾರ್ಡ್ ನಂಬ್ರ 45 ಎಂದು ಇಟ್ಟುಕೊಳ್ಳೋಣ. ಇಲ್ಲಿ ಒಂದು ಸಲ ಸಾಮಾನ್ಯ ವರ್ಗಕ್ಕೆ ಮೀಸಲಾತಿ ಬಂದರೆ, ಮುಂದಿನ ಚುನಾವಣೆಯಲ್ಲಿ ಹಿಂದುಳಿದ ವರ್ಗ ಎ ಗೆ ಅವಕಾಶ ಕೊಡಬೇಕು. ಅದೇ ರೀತಿಯಲ್ಲಿ ಅದರ ಮುಂದಿನ ಬಾರಿ ಹಿಂದುಳಿದ ವರ್ಗ ಬಿಯ ಯಾವುದಾದರೂ ವ್ಯಕ್ತಿಗೆ ಆಯಾ ಪಕ್ಷದವರು ಅವಕಾಶ ಕೊಡಬೇಕು. ಹೀಗೆ ಪ್ರತಿ ಎರಡು ಟರ್ಮ್ ನಂತರ ಅಲ್ಲಿ ಮಹಿಳೆಯರಿಗೆ ಅವಕಾಶ ಕೊಡಬೇಕು. ಹಾಗೆ ಅದರ ನಂತರ ಮಹಿಳೆಯರಲ್ಲಿ ಹಿಂದುಳಿದ ವರ್ಗ ಎ ನಂತರ ಬಿ ಹೀಗೆ ಟಿಕೆಟ್ ಕೊಟ್ಟರೆ ಎಲ್ಲರಿಗೂ ಸ್ಪರ್ಧಿಸಲು ಅವಕಾಶ ಸಿಗುತ್ತದೆ ಮತ್ತು ಯಾವುದೇ ರಾಜಕೀಯ ನಡೆಯುವುದಿಲ್ಲ ಹಾಗೂ ಆಡಳಿತ ಪಕ್ಷದವರಿಗೆ ಸರಕಾರ ಅನುಕೂಲವಾಗುವಂತೆ ಮೀಸಲಾತಿ ತರಲು ಸಾಧ್ಯವಿಲ್ಲ ಎಂದು ಉದ್ದೇಶವಾಗಿತ್ತು. ಕಳೆದ ಬಾರಿ ಐದು ವರ್ಷಗಳ ಹಿಂದೆ ಏನಾಗಿತ್ತು ಎಂದರೆ ರೋಟೇಶನ್ ಸಿಸ್ಟಮ್ ನಲ್ಲಿಯೇ ಗೊಂದಲವಾಗಿದೆ ಎನ್ನುವ ವಾದದ ಅಡಿಯಲ್ಲಿ ಕೆಲವರು ನ್ಯಾಯಾಲಯಕ್ಕೆ ಹೋದ ಕಾರಣ ಕೋರ್ಟ್ ಆ ಬಾರಿ ಹಿಂದಿನ ಮೀಸಲಾತಿ ಪ್ರಕಾರವೇ ಚುನಾವಣೆ ನಡೆಯಲಿ ಎಂದು ಸೂಚನೆ ಕೊಟ್ಟಿತ್ತು. ಹಾಗೆ ಚುನಾವಣೆ ನಡೆದುಹೋಗಿತ್ತು. ಆದರೆ ಈ ಬಾರಿ ಯಾವ ರೋಟೇಶನ್ ಸಿಸ್ಟಮ್ ನಲ್ಲಿ ಮೀಸಲಾತಿ ಆಧರಿಸಿ ಚುನಾವಣೆ ನಡೆಯಬೇಕಿತ್ತೋ ಅದರಲ್ಲಿ ಮತ್ತೆ ಗೊಂದಲ ಮೂಡಿದೆ. ಅದಕ್ಕೆ ಕಾರಣ ಏನೆಂದರೆ ಮಂಗಳೂರು ಮಹಾನಗರ ಪಾಲಿಕೆಯಲ್ಲಿರುವ ಕೆಲವು ವಿಐಪಿ ಕಾರ್ಪೋರೇಟರ್ ಗಳು.
ರಾಜ್ಯ ಸರಕಾರದ ನಡೆ ಕೂಡ ಕಾರಣ…
ಮಂಗಳೂರು ಮಹಾನಗರ ಪಾಲಿಕೆಯಲ್ಲಿ ನಾಲ್ಕೈದು ಜನ ವಿಐಪಿ ಕಾರ್ಪೋರೇಟರ್ ಗಳಿದ್ದಾರೆ. ಇವರಿಗೆ ಇದು ಪೂರ್ಣಕಾಲೀನ ಉದ್ಯೋಗ. ಅವರು ಮೂರ್ನಾಕು ಟರ್ಮ್ ನಿಂದ ಸದಸ್ಯರಾಗಿದ್ದರೂ ಅವರಿಗೆ ತುಳುವಿನಲ್ಲಿ “ಅರ್ಬು” ಎಂದು ಹೇಳುತ್ತಾರಲ್ಲ, ಅದು ಕಡಿಮೆ ಆಗಿಲ್ಲ. ಅವರು ಯಾವ ಮೀಸಲಾತಿ ಬಂದರೂ ಅಳಕುವುದಿಲ್ಲ. ರೋಟೆಶನ್ ಸಿಸ್ಟಮ್ ಎಂಬ ಚಾಪೆಯನ್ನು ಕೋರ್ಟ್ ಹರಡಿದರೂ ಇವರು ರಂಗೋಲಿ ಕೆಳಗೆ ಹೋಗುತ್ತಾ ತಮಗೆ ಯಾವುದೇ ತೊಂದರೆ ಆಗದ ಹಾಗೆ ನೋಡಿಕೊಳ್ಳುತ್ತಾರೆ. ಇವರಿಗೆ ಎರಡು ಪಕ್ಷಗಳಲ್ಲಿ ಸೆಟ್ಟಿಂಗ್ ಇರುವುದರಿಂದ ಮತ್ತು ದೊಡ್ಡವರ ಆರ್ಶೀವಾದ ಇರುವುದರಿಂದ ಇವರು ಆರಾಮವಾಗಿ ಇದ್ದು ಬಿಡುತ್ತಾರೆ. ಇವರು ಈ ಬಾರಿ ಮತ್ತೆ ತಮ್ಮ ಚಾಣಾಕ್ಷತೆಯನ್ನು ತೋರಿದ ಕಾರಣ ಮೀಸಲಾತಿಯಲ್ಲಿ ಗೊಂದಲ ಮೂಡಿದೆ. ಯಾಕೆಂದರೆ ಇಡೀ ಅರವತ್ತು ವಾರ್ಡಿನ ಮೀಸಲಾತಿ ಲೆಕ್ಕಾಚಾರ ಮೇಲೆ ಕೆಳಗೆ ಆದರೂ ಈ ಐದಾರು ಜನರು ಮಾತ್ರ ಸೇಫ್. ಇವರ ಕಲೆಯನ್ನು ನೋಡಿದ ಉಳಿದ ಆಕಾಂಕ್ಷಿಗಳು ಟೆನ್ಷನ್ ಗೆ ಒಳಗಾಗಿ ಕೋರ್ಟಿಗೆ ಹೋಗಿದ್ದ ಕಾರಣ ಈಗ ಮತ್ತೆ ಮೀಸಲಾತಿ ಗೊಂದಲ ನ್ಯಾಯಾಲಯದ ಮುಂದಿದೆ.
ನಮ್ಮ ರಾಜ್ಯ ಸರಕಾರ ಕೂಡ ಈ ಮೀಸಲಾತಿ ವಿಷಯದಲ್ಲಿ ಆಗಾಗ ಡಬ್ಬಲ್ ಗೇಮ್ ಆಡುತ್ತಾ ಇರುತ್ತದೆ. ಅದಕ್ಕೆ ತಾಜಾ ಉದಾಹರಣೆ ಇತ್ತೀಚೆಗೆ ನಡೆದ ನಗರ ಸಭೆ, ಪುರಸಭೆ ಚುನಾವಣೆಗಳು. ಚುನಾವಣೆಯ ಮೊದಲು ರಾಜ್ಯ ಸರಕಾರ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿಯನ್ನು ನಿಗದಿಗೊಳಿಸಿ ಆದೇಶ ಹೊರಡಿಸಿತು. ಆದರೆ ಚುನಾವಣೆ ನಡೆದು ಯಾವಾಗ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಯಿತೋ ಆಗ ತಕ್ಷಣ ಹೊಸ ಮೀಸಲಾತಿ ಪ್ರಕಟಿಸಿ ತನ್ನ ಪಕ್ಷದ ಸದಸ್ಯರು ಅಧ್ಯಕ್ಷ, ಉಪಾಧ್ಯಕ್ಷ ಆಗುವಂತೆ ನೋಡಿಕೊಂಡಿತು. ಇದನ್ನು ಪ್ರಶ್ನಿಸಿ ಮತ್ತೆ ಕೆಲವರು ನ್ಯಾಯಾಲಯದ ಮೆಟ್ಟಿಲು ಏರಿದ್ದಾರೆ. ಹೀಗೆ ನಿಯಮ, ಕಾನೂನು ಎಷ್ಟೇ ಒಳ್ಳೆಯದಿದ್ದರೂ ಕೆಲವರ ದುರಾಸೆ ಹಲವು ಬಾರಿ ಅನೇಕರಿಗೆ ತೊಂದರೆ ತರುತ್ತದೆ. ಸದ್ಯ ಜನವರಿ 10 ತನಕ ಚುನಾವಣಾ ಆಯೋಗ ಮತದಾನದ ದಿನಾಂಕ ಪ್ರಕಟಿಸುವುದಿಲ್ಲ ಎಂದು ಕೋರ್ಟಿಗೆ ಹೇಳಿದೆ. ಅಲ್ಲಿಯ ತನಕ ಏನೆಲ್ಲ ಆಗುತ್ತದೆಯೋ ನೋಡಬೇಕು. ನಾಟಕ ಈಗ ತಾನೆ ಶುರುವಾಗಿದೆ!
Leave A Reply