ವಾರ್ಡ್ ಕಮಿಟಿ ಆದ್ರೆ ತಿನ್ನಲು ಸಿಗುವುದಿಲ್ಲ ಎಂದು ಬಹಿರಂಗವಾಗಿ ಒಪ್ಪಿಕೊಳ್ಳಿ ಪಾಲಿಕೆ ಸದಸ್ಯರೇ!!
ಒಂದಿಷ್ಟು ಮಾನ, ಮರ್ಯಾದೆ, ನಾಚಿಕೆ ಇದ್ದಿದ್ರೆ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಆಡಳಿತ ಪಕ್ಷದವರು ಹೈಕೋರ್ಟಿನಿಂದ ಹೇಳಿಸಿಕೊಳ್ಳುವ ತನಕ ಕಾಯಲೇಬಾರದು. ಈಗಾಗಲೇ ನಿಗೆಲ್ ಅಲ್ಬುಕರ್ಕ್, ಅಶೋಯ್ ಡಿಸಿಲ್ವ ಎನ್ನುವ ಮಂಗಳೂರಿನ ಬಿಜೈ ನಿವಾಸಿಗಳು ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ಹೂಡಿರುವುದೇ ವಾರ್ಡ್ ಕಮಿಟಿಯನ್ನು ರಚಿಸಲು ನಮ್ಮ ಪಾಲಿಕೆಗೆ ನಿರ್ದೇಶನ ನೀಡಬೇಕು ಎನ್ನುವ ವಿಷಯದ ಮೇಲೆ. ಇವರೊಂದಿಗೆ ಬೆಂಗಳೂರಿನ ಇಬ್ಬರು ನಾಗರಿಕರು ಕೂಡ ಹೈಕೋರ್ಟ್ ಮೊರೆ ಹೋಗಿದ್ದಾರೆ. ಈ ವಿಷಯದ ಕುರಿತು ಹೈಕೋರ್ಟ್ ವಿಭಾಗೀಯ ಪೀಠ ಸರಕಾರಿ ವಕೀಲರಿಗೆ ಉತ್ತರ ಕೊಡಲು ಸಮಯಾವಕಾಶ ನೀಡಿದೆ. ಬಹುಶ: ಬರುವ ದಿನಗಳಲ್ಲಿ ಈ ಬಗ್ಗೆ ಹೈಕೋರ್ಟ್ ನಿರ್ದೇಶನ ನೀಡಿ ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ವಾರ್ಡ್ ಕಮಿಟಿ ರಚನೆ ಆಗಲೂಬಹುದು ಅಥವಾ ಆಗ ಕೂಡ ನ್ಯಾಯಾಲಯದ ಸೂಚನೆಯನ್ನು ನಿರ್ಲಕ್ಷಿಸಿ ಪಾಲಿಕೆಯ ಸದಸ್ಯರು ತಮಗೆ ಬೇಕಾದ ಹಾಗೆ ಕಮೀಷನ್ ತೆಗೆದುಕೊಳ್ಳುತ್ತಾ, ಡಾಮರು ಹಾಕಿದ ಕಡೆ ಮತ್ತೆ ಡಾಮರು ಹಾಕುತ್ತಾ, ಅಲ್ಲಿ ಪರ್ಸಟೆಂಜ್ ನುಂಗುತ್ತಾ ಆರಾಮವಾಗಿ ಇರಲೂಬಹುದು. ವಾರ್ಡ್ ಕಮಿಟಿ ರಚನೆ ಎನ್ನುವುದು ನಮ್ಮ ಸಂವಿಧಾನದ ಹಕ್ಕು. ಆರ್ಟಿಕಲ್ 243-ಎಸ್ ಮತ್ತು ಕರ್ನಾಟಕ ಮುನ್ಸಿಪಲ್ ಕಾರ್ಪೋರೇಶನ್ ಕಾಯ್ದೆ ಕಲಾಂ 13 ರ ಪ್ರಕಾರ ಪಾಲಿಕೆ ವ್ಯಾಪ್ತಿಯಲ್ಲಿ ವಾರ್ಡ್ ಕಮಿಟಿ ರಚನೆ ಅತ್ಯಗತ್ಯ. ಆದರೆ ಪಾಲಿಕೆಯ ಸದಸ್ಯರು ಜನರ ಹಕ್ಕುಗಳನ್ನು ಪಕ್ಕಕ್ಕೆ ಇಟ್ಟು ಕೇವಲ ತಮ್ಮ ಲಾಭ ಮಾತ್ರ ನೋಡುವುದರಿಂದ ಅವರಿಗೆ ಈ ಸಂವಿಧಾನ, ನ್ಯಾಯಾಲಯ ಎಲ್ಲವೂ ಅಷ್ಟು ಸುಲಭವಾಗಿ ತಲೆಯ ಒಳಗೆ ಹೋಗುವುದಿಲ್ಲ.
ಭ್ರಷ್ಟಾಚಾರ ಕಡಿಮೆ ಮಾಡಲು ಸದಸ್ಯರೇ ಅಡ್ಡಿ…
ಇಲ್ಲಿ ಮುಖ್ಯವಾಗಿ ಪಾಲಿಕೆಯವರು ಯಾಕೆ ವಾರ್ಡ್ ಕಮಿಟಿ ಮಾಡುವುದಿಲ್ಲ ಎಂದರೆ ಒಂದು ವಾರ್ಡ್ ಕಮಿಟಿ ಆದರೆ ಆ ವಾರ್ಡಿನ ಕಾರ್ಪೋರೇಟರ್ ಅವರ ಸಾರ್ವಭೌಮತೆ ಕಡಿಮೆ ಆಗುತ್ತದೆ ಎನ್ನುವ ಅನಿಸಿಕೆ. ಇದು ಸರಿಯಲ್ಲ. ವಾರ್ಡ್ ಕಮಿಟಿಯ ರಚನೆಯಾದರೆ ಆಯಾ ವಾರ್ಡಿನ ಅಭಿವೃದ್ಧಿಗೆ ಒಂದು ಸ್ಪಷ್ಟ ರೂಪುರೇಶೆ ದೊರಕುತ್ತದೆ ಎನ್ನುವುದು ನಿಜ. ಈಗ ಒಂದು ಮನೆಯಲ್ಲಿ ಹದಿನೈದು ಜನ ಸದಸ್ಯರು ವಾಸಿಸುತ್ತಾರೆ ಎಂದು ಇಟ್ಟುಕೊಳ್ಳೋಣ. ಮನೆಗೆ ನಾಲ್ವತ್ತೈದು ಸಾವಿರ ರೂಪಾಯಿ ಬಜೆಟಿನಲ್ಲಿ ಸೋಫಾ ಸೆಟ್ ಖರೀದಿ ಮಾಡಲು ಇದೆ ಎಂದು ಇಟ್ಟುಕೊಳ್ಳಿ. ಆಗ ಆ ಮನೆಯ ಪ್ರಮುಖ ಸದಸ್ಯರಲ್ಲಿ ಮೂರ್ನಾಕು ಜನ ಕೂತು ಯಾವ ಸೋಫಾ ಸೆಟ್ ಖರೀದಿಸುವುದು, ಎಲ್ಲಿಂದ ಖರೀದಿಸುವುದು, ಎಷ್ಟು ಕಡಿಮೆಯಲ್ಲಿ ಎಷ್ಟು ಉತ್ತಮ ಗುಣಮಟ್ಟದ ಸೋಫಾ ಸೆಟ್ ಖರೀದಿಸಿ ಹಣ ಉಳಿಸುವುದು, ನಿಜಕ್ಕೂ ಹೊಸ ಸೋಫಾ ಸೆಟ್ ಬೇಕಾ, ಇದ್ದದ್ದನ್ನೇ ರಿಪೇರಿ ಮಾಡಿಸಿ ಆ ಹಣದಲ್ಲಿ ಒಂದು ಸ್ಕೂಟರ್ ಖರೀದಿ ಮಾಡಲು ಪ್ಲಾನ್ ಮಾಡೋಣ ಎಂದೆಲ್ಲ ಯೋಚಿಸುವುದಿಲ್ಲವೇ. ಆಗ ಮಾತ್ರ ನಿಮ್ಮ ಮನೆಯ ಸದಸ್ಯರು ಬೆವರು ಸುರಿಸಿ ನಾಲ್ಕು ರೂಪಾಯಿ ಒಟ್ಟು ಮಾಡಿದ್ದು ಸಮರ್ಪಕವಾಗಿ ಖರ್ಚು ಮಾಡಲು ಸಾಧ್ಯ. ವಾರ್ಡ್ ಕಮಿಟಿ ಎಂದರೆ ಇದೆ ಅಲ್ವಾ? ಒಂದು ವಾರ್ಡಿನ ವಿವಿಧ ಸ್ತರದ ಕೆಲವರು ಕುಳಿತು ತಮ್ಮ ವಾರ್ಡ್ ನಲ್ಲಿ ಹೇಗೆ, ಏನು, ಎಲ್ಲಿ, ಯಾವಾಗ ಅಭಿವೃದ್ಧಿ ಆಗಬೇಕು ಎಂದು ಪ್ಲಾನ್ ಮಾಡಿ ಮುಂದಡಿ ಇಟ್ಟರೆ ಅದಕ್ಕೆ ಆಯಾ ವಾರ್ಡಿನ ಕಾರ್ಪೋರೇಟರ್ ಹೆದರುವುದು ಯಾಕೆ? ಅಷ್ಟಕ್ಕೂ ಆಯಾ ವಾರ್ಡಿನ ಕಾರ್ಪೋರೇಟರ್ ಆಯಾ ವಾರ್ಡ್ ಸಮಿತಿಯ ಅಧ್ಯಕ್ಷರು. ಅವರು ಇದ್ದೇ ಇರುತ್ತಾರೆ. ವಿಷಯ ಏನೆಂದರೆ ವಾರ್ಡ್ ಸಮಿತಿ ಆದ ಮೇಲೆ ಕಾರ್ಪೋರೇಟರ್ ಆಗಬೇಕು ಎಂದು ಗುರಿ ಇಟ್ಟುಕೊಂಡವರ ಸಂಖ್ಯೆ ಕಡಿಮೆಯಾಗಲಿದೆ. ಯಾಕೆಂದರೆ ವಾರ್ಡ್ ಸಮಿತಿ ಆದ ಮೇಲೆ ಕಾರ್ಪೋರೇಟರ್ ಎನ್ನುವುದು ಜವಾಬ್ದಾರಿ ಆಗುತ್ತದೆ ವಿನ: ಈಗ ಕೆಲವರಿಗೆ ಇದ್ದಂತೆ ಉದ್ಯೋಗವಾಗುವುದಿಲ್ಲ.
ಕಾಂಗ್ರೆಸ್ಸಿಗೆ ಈ ಬಾರಿ ಮತ ಕೇಳಲು ನೈತಿಕತೆ ಇದೆಯಾ?
ಇನ್ನು ಮಂಗಳೂರಿನಲ್ಲಿ ಘನತ್ಯಾಜ್ಯ ವಿಲೇವಾರಿ, ಸ್ವಚ್ಚತೆ ಜಾಗೃತಿಗೆ ವಾರ್ಡ್ ಕಮಿಟಿ ರಚನೆ ಮಾಡುತ್ತೇವೆ ಎಂದು ಪಾಲಿಕೆ ಆಯುಕ್ತ ನಝೀರ್ ಅವರು ಮೊನ್ನೆ ಹೇಳಿದ್ದಾರೆ. ಘನತ್ಯಾಜ್ಯ ವಿಲೇವಾರಿಗೆ ಮಾತ್ರ ವಾರ್ಡ್ ಸಮಿತಿ ಯಾಕೆ, ಪೂರ್ಣಕಾಲೀಕ ವ್ಯವಸ್ಥೆಯಲ್ಲಿ ಮಾಡಿ. ಈ ಸ್ವಚ್ಛ ಸರ್ವೇಕ್ಷಣೆ-2019 ಎನ್ನುವುದು ನಮ್ಮ ಪಾಲಿಕೆಗೆ ಒಂದು ಪ್ರಶಸ್ತಿ ತರಹದ್ದು ಸಿಕ್ಕಿ ಅದರ ಫೋಟೋ ತೆಗೆದು ಅದನ್ನು ಪಾಲಿಕೆಯ ಹೊರಗೆ ಫ್ಲೆಕ್ಸ್ ತರಹ ಹಾಕಿ ಕೆಲವರು ಮಾತ್ರ ಮಿಂಚಲು ಮಾಡಿರುವ ಯೋಜನೆ. ಹಾಗಂತ ಇದಕ್ಕೆ ನಾನು ವಿರೋಧ ಇದ್ದೇನೆ ಎಂದಲ್ಲ. ಮಂಗಳೂರು ಸ್ವಚ್ಛ ಆಗಲೇಬೇಕು. ಅದರಲ್ಲಿ ಎರಡು ಮಾತಿಲ್ಲ. ಆದರೆ ಅದಕ್ಕೆ ಮಾತ್ರ ವಾರ್ಡ್ ಕಮಿಟಿ ಮಾಡುವುದು ಯಾಕೆ ಎನ್ನುವುದು ಪ್ರಶ್ನೆ. ಅಷ್ಟಕ್ಕೂ ಮುಂದಿನ ಬಾರಿ ಪಾಲಿಕೆಯ ಚುನಾವಣೆಯಲ್ಲಿ ನಮಗೆ ಮತ ನೀಡಿ ಎಂದು ಕೇಳುವಂತಹ ನೈತಿಕತೆ ಕಾಂಗ್ರೆಸ್ಸಿಗೆ ಇಲ್ಲವೇ ಇಲ್ಲ. ಅವರು ಕಳೆದ ಬಾರಿಯೇ ಚುನಾವಣಾ ಪ್ರಣಾಳಿಕೆಯಲ್ಲಿ ವಾರ್ಡ್ ಸಮಿತಿ ಮಾಡುತ್ತೇವೆ ಎಂದು ಭರವಸೆ ಕೊಟ್ಟು ಗೆದ್ದು ಬಂದಿದ್ದರು. ಹಾಗಿರುವಾಗ ಐದು ವರ್ಷದಲ್ಲಿ ಆಗದೇ ಇದ್ದದ್ದಕ್ಕೆ ಅವರ ಬಳಿ ಈಗ ಉತ್ತರ ಇದೆಯಾ?
Leave A Reply