ಸುರತ್ಕಲ್ ಮಾರುಕಟ್ಟೆಯಲ್ಲಿ ಯಾರದ್ದೋ ಕರೆಂಟ್, ಇನ್ಯಾರದ್ದೋ ಗಮ್ಮತ್ತ್!!
ಯಾರದ್ದೋ ದುಡ್ಡು, ಇನ್ಯಾರದ್ದೋ ಜಾತ್ರೆ ಎನ್ನುವಂತಹ ಒಂದು ಗಾದೆ ಇದೆಯಲ್ಲ. ಅದಕ್ಕೆ ಮಂಗಳೂರು ಮಹಾನಗರ ಪಾಲಿಕೆಯವರು ಜೀವಂತ ಉದಾಹರಣೆ. ಹೇಗೆಂದರೆ ಸುರತ್ಕಲ್ ಮಾರುಕಟ್ಟೆ ಇದೆಯಲ್ಲ. ಅದರ ವಿದ್ಯುತ್ ಬಿಲ್ ಬರುವುದು ಪಾಲಿಕೆಯ ಹೆಸರಿನಲ್ಲಿ. ಅದನ್ನು ಕಟ್ಟುವುದು ಪಾಲಿಕೆಯ ಕಡೆಯಿಂದ. ನಂತರ ಅಲ್ಲಿ ಸುರತ್ಕಲ್ ಮಾರುಕಟ್ಟೆಯಲ್ಲಿ ಇರುವ ಅಂಗಡಿಯವರ ಹತ್ತಿರ ಇವರು ವಿದ್ಯುತ್ ಬಿಲ್ ವಸೂಲಿ ಮಾಡುತ್ತಾರೆ. ಇಷ್ಟೇ ಆಗಿದ್ದರೆ ಸಮಸ್ಯೆ ಇರುತ್ತಿರಲಿಲ್ಲ. ಆದರೆ ಇಲ್ಲಿ ಪಾಲಿಕೆಯವರ ನಿರ್ಲಕ್ಷ್ಯವೋ ಅಥವಾ ತಪ್ಪು ನೀತಿಯ ಫಲದಿಂದಾಗಿ ಏನಾಗುತ್ತಿದೆ ಎಂದರೆ ಪಾಲಿಕೆ ಪ್ರತಿ ತಿಂಗಳು ನಷ್ಟದಲ್ಲಿ ಕರೆಂಟ್ ಬಿಲ್ ಕಟ್ಟುತ್ತಿದೆ. ಉದಾಹರಣೆಗೆ ಕರೆಂಟ್ ಬಿಲ್ ಮೂರು ಲಕ್ಷ ಬಂತು ಎಂದು ಇಟ್ಟುಕೊಳ್ಳಿ. ಇವರು ಅಂಗಡಿಯವರಿಂದ ಒಂದು ಲಕ್ಷ ವಸೂಲಿ ಮಾಡಿದರೆ ಆಗ ಏನಾಗುತ್ತದೆ. ಪಾಲಿಕೆಗೆ ಎರಡು ಲಕ್ಷ ಲಾಸ್ ಅಲ್ವೇ. ಹಾಗೆ ಆಗುತ್ತಿದೆ. ಇವರು ಕಟ್ಟುತ್ತಿರುವ ಬಿಲ್ಲಿಗೂ, ವಸೂಲಿಯಾಗುತ್ತಿರುವ ಹಣಕ್ಕೂ ಯಾವುದೇ ರೀತಿಯಲ್ಲಿ ಹೊಂದಾಣಿಕೆಯೇ ಆಗುತ್ತಿಲ್ಲ. ಇವರು ಸುರತ್ಕಲ್ ಮಾರುಕಟ್ಟೆಯಲ್ಲಿ ಒಂದೊಂದು ಅಂಗಡಿಯವರು ಎಷ್ಟು ಕರೆಂಟ್ ಉಪಯೋಗಿಸುತ್ತಿದ್ದಾರೆ ಎಂದು ನೋಡಲು ಹೋಗುತ್ತಲೇ ಇಲ್ಲ. ಅಲ್ಲಿ ಅಂಗಡಿಯವರು ಕೂಡ ತಮಗೆ ಮನಸೋ ಇಚ್ಚೇ ಬಂದಷ್ಟು ವಿದ್ಯುತ್ ಉಪಯೋಗಿಸುತ್ತಿದ್ದಾರೆ. ಒಂದೊಂದು ಅಂಗಡಿಯಲ್ಲಿ ಇರುವ ವಿದ್ಯುತ್ ಉಪಕರಣಗಳನ್ನು ನೋಡಿದರೆ ಅವರು ಕರೆಂಟ್ ಬಳಸುವುದಕ್ಕೂ, ಕಟ್ಟುವುದಕ್ಕೂ ಸಂಬಂಧವೇ ಇಲ್ಲದಂತೆ ಆಗಿದೆ. ಇದನ್ನು ಮೊದಲು ಸರಿಮಾಡಬೇಕು ಎಂದು ಹೇಳಿದೆ.
ಓಬಿರಾಯನ ಕಟ್ಟಡ ನಿರ್ಮಾಣ ಶುಲ್ಕ…
ಅಂದ ಹಾಗೆ ನಾನು ಇದನ್ನೆಲ್ಲ ಹೇಳಿದ್ದು ಮಂಗಳೂರು ಮಹಾನಗರ ಪಾಲಿಕೆಯ ಬಜೆಟ್ ಪೂರ್ವ ಸಭೆಯಲ್ಲಿ. ನಿನ್ನೆ ಆ ಬಗ್ಗೆ ಪೀಠಿಕೆ ಹಾಕಿರುವುದರಿಂದ ಇವತ್ತು ನೇರವಾಗಿ ವಿಷಯಕ್ಕೆ ಹೋಗಿಬಿಟ್ಟೆ. ನನ್ನ ನಿನ್ನೆಯ (31.12.18) ಅಂಕಣ ನೋಡಿದರೆ ಬಜೆಟ್ ಪೂರ್ವ ಸಭೆ ಎನ್ನುವುದನ್ನು ಇವರು ಫ್ರೀ ಇದ್ದಾಗ ಕಟ್ಟೆಯ ಮೇಲೆ ಕುಳಿತು ಮಾಡುವ ಒಣ ಹರಟೆಗೆ ತಂದು ನಿಲ್ಲಿಸಿದ್ದಾರೆ ಎಂದು ಗೊತ್ತಾಗುತ್ತದೆ. ಹಾಗಂತ ನಾನು ಸಿನಿಕನಾಗಿಲ್ಲ. ಪ್ರಯತ್ನ ಜಾರಿಯಲ್ಲಿದೆ. ಅದರ ನಂತರ ನಾನು ಹೇಳಿದ ಮತ್ತೊಂದು ವಿಚಾರ. ಪಾಲಿಕೆಯ ಆದಾಯಕ್ಕೆ ಸಂಬಂಧಿಸಿದ್ದು. ನಮ್ಮ ಪಾಲಿಕೆಯಲ್ಲಿ ಒಬಿರಾಯನ ಕಾಲದ ಕಟ್ಟಡ ನಿರ್ಮಾಣ ಪರವಾನಿಗೆ ಶುಲ್ಕ ಇದೆ. ನಮ್ಮ ಬಿಲ್ಡರ್ಸ್ ಒಂದೊಂದು ಫ್ಲಾಟ್ ಕಟ್ಟಿ ಕೋಟ್ಯಾಂತರ ರೂಪಾಯಿ ಲಾಭ ಮಾಡುತ್ತಾರೆ. ಆದರೆ ಪಾಲಿಕೆಗೆ ಕಟ್ಟುವ ಶುಲ್ಕ ಮಾತ್ರ ಜುಜುಬಿ. ಆದ್ದರಿಂದ ಬಿಲ್ಡರ್ ಗಳ ಮೇಲಿನ ಪ್ರೇಮವನ್ನು ಹಾಗೆ ಇಟ್ಟುಕೊಳ್ಳಿ. ಆದರೆ ಅದರಿಂದ ಪಾಲಿಕೆಗೆ ಒಂದಿಷ್ಟು ಆದಾಯ ಜಾಸ್ತಿ ಮಾಡಿ ಎಂದು ಹೇಳಿದೆ. ಬೇಕಾದರೆ ಇಂಡಿಪೆಂಡೆಂಟ್ ಆಗಿ ಮನೆ ಕಟ್ಟುವ ಮಧ್ಯಮ ವರ್ಗದವರಾದರೆ ಅವರಿಗೆ ಶುಲ್ಕ ಹೆಚ್ಚಳ ಮಾಡುವುದು ಬೇಡಾ. ಯಾಕೆಂದರೆ ಅಲ್ಲಿ ಕಮರ್ಶಿಯಲ್ ಅಂಶಗಳು ಇರುವುದಿಲ್ಲ. ಅದೇ ಫ್ಲಾಟ್ ಗಳಾದರೆ ಅಲ್ಲಿ ಅಪ್ಪಟ ಹಣ ಮಾಡುವ ಉದ್ದೇಶ ಮಾತ್ರ ಇರುತ್ತದೆ. ಅವರಿಗೆ ಶುಲ್ಕ ಜಾಸ್ತಿ ಮಾಡಿ. ಪಾಲಿಕೆಗೆ ಆದಾಯ ಹೆಚ್ಚಿಸಿ ಎಂದೆ.
ನೀರಿನ ಬಿಲ್ ವಸೂಲಿ ಮರೆತ ಪಾಲಿಕೆ..
ಇನ್ನು ನೀರಿನ ಬಿಲ್ ವಸೂಲಿಯ ಬಗ್ಗೆ ಕವಿತಾ ಸನಿಲ್ ಅವರು ಮೇಯರ್ ಆಗಿದ್ದಾಗ ಸುದ್ದಿಗೋಷ್ಟಿ ಮಾಡಿದ್ದೇ ಮಾಡಿದ್ದು. ಅವರ ವೀರಾವೇಶ ನೋಡಿ ಬಾಕಿ ಇರುವ ಇಪ್ಪತ್ತು ಕೋಟಿಯನ್ನು ಕೂಡ ಇವರು ವಸೂಲಿ ಮಾಡಿಯೇ ಮಾಡುತ್ತಾರೆ ಎಂದು ಅನಿಸಿತ್ತು. ಮಾಧ್ಯಮದವರ ಎದುರು ಕವಿತಾ ಸನಿಲ್ ನೀರಿನ ಬಿಲ್ ವಸೂಲಿಯ ಬಗ್ಗೆ ಎಷ್ಟು ಉತ್ಸಾಹಿಗಳಾಗಿದ್ದರೆಂದರೆ ಅದಕ್ಕೊಂದು ಟೀಮ್ ಮಾಡಿ ಸಮರೋಪಾದಿಯಲ್ಲಿ ಸಂಗ್ರಹ ಮಾಡಿಯೇ ಸಿದ್ಧ ಎಂದು ಅನಿಸಿಬಿಟ್ಟಿದ್ದರು. ಅದಕ್ಕೆಂದೇ ಟೀಮ್ ಕೂಡ ಆಯಿತು. ಎರಡು ತಿಂಗಳು ಕಲೆಕ್ಷನ್ ಮಾಡಿದ್ದೇ ಮಾಡಿದ್ದು. ಸುಮಾರು ಒಂದೂವರೆ ಕೋಟಿ ವಸೂಲಿ ಆಗಿರಬಹುದು. ನಂತರ ಏನಾಯಿತೋ ಏನೋ. ಕವಿತಾ ಸನಿಲ್ ತಣ್ಣಗಾದರು. ಅವರು ಕೂಲ್ ಆದ ಹಾಗೆ ಸಂಗ್ರಹಕ್ಕೆ ಹೋದ ಅಧಿಕಾರಿಗಳು ಕೂಡ ಮೌನಕ್ಕೆ ಶರಣಾದರು. ನಂತರ ಅದರ ಸುದ್ದಿ ಇಲ್ಲ. ಆಗ ಹದಿನಾಲ್ಕು ಕೋಟಿ ಬಾಕಿ ಇದ್ದ ನೀರಿನ ಬಿಲ್ ಈಗ ಇಪ್ಪತ್ತು ಕೋಟಿ ಆಗಿದೆ. ಮೊದಲು ಅದನ್ನು ಸರಿ ಮಾಡಿ ಎಂದೆ. ಅಂತಹ ಧೈರ್ಯ ಪಾಲಿಕೆಗೆ ಇದ್ದಂತೆ ಕಾಣುವುದಿಲ್ಲ. ಏಕೆಂದರೆ ಬಾಕಿ ಇಟ್ಟಿರುವ ಹೆಚ್ಚಿನವರು ಪ್ರಭಾವಿಗಳು. ಶ್ರೀಮಂತರು. ಅವರನ್ನು ಮುಟ್ಟುವ ಧೈರ್ಯ ಯಾರಿಗೂ ಇಲ್ಲ. ಮುಂದೆ ಬಿಜೆಪಿಯವರು ಬಂದರೂ ಅವರಿಗೂ ಅಷ್ಟು ಸುಲಭವಾಗಿ ಅನುಷ್ಟಾನ ಮಾಡುವುದು ಕಷ್ಟ. ಏಕೆಂದರೆ ಪಾಪದವರು ಕಟ್ಟಿ ಬಿಡುತ್ತಾರೆ. ಬಾಕಿ ಇಡುವುದು ಹಣವಂತ ಲೋಭಿಗಳು. ಸರಿಯಾಗಿ ನೋಡಿದರೆ ಮಂಗಳೂರಿನಲ್ಲಿ ಇರುವಷ್ಟು ಕಡಿಮೆ ನೀರಿನ ದರ ಬೇರೆ ಕಡೆ ಇಲ್ಲ. ಅಷ್ಟಾಗಿಯೂ ಇಲ್ಲಿ ಬಾಕಿ ಇದ್ದಷ್ಟು ಬೇರೆ ಕಡೆ ಇದೆಯೋ, ಇಲ್ವೋ?ಹಾಗೆ ಮನೆಗಳಿಗೆ ಕೊಡುವ ನೀರಿನ ದರ ಜಾಸ್ತಿ ಮಾಡದಿದ್ದರೂ ಪರವಾಗಿಲ್ಲ. ವಾಣಿಜ್ಯಕ್ಕೆ ಬಳಸುವುದು ಜಾಸ್ತಿ ಮಾಡಿ ಎಂದೆ. ಇನ್ನು ಅನೇಕ ಪಾಯಿಂಟ್ ಗಳನ್ನು ಹೇಳಿದ್ದೇನೆ. ಉಳಿದದ್ದನ್ನು ನಾಳೆ ಹೇಳುತ್ತೇನೆ. ಅಂದಹಾಗೆ ನಿಮಗೆಲ್ಲರಿಗೂ 2019 ರ ಶುಭಾಶಯಗಳು. ಭ್ರಷ್ಟಾಚಾರದ ವಿರುದ್ಧ ನನ್ನ ಹೋರಾಟ ಈ ವರುಷವೂ ಮುಂದುವರೆಯಲಿದೆ!
Leave A Reply