ಪ್ರತಿಭಟನೆಗೆ ಹಣ ಕಟ್ಟಬೇಕು ಎನ್ನುವುದು ಬಿಟ್ಟು ಬೇರೆಲ್ಲ ಓಕೆ!!
ಇನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಹೊರಗೆ, ಮಂಗಳೂರು ಮಹಾನಗರ ಪಾಲಿಕೆ ಹೊರಗೆ ಅಥವಾ ಯಾವುದೇ ಪ್ರದೇಶದಲ್ಲಿ ಪ್ರತಿಭಟನೆ ಮಾಡುವಾಗ ಒಂದಿಷ್ಟು ಹಣ ಕಟ್ಟಬೇಕಾಗುತ್ತದೆ. ಹಿಂದೆ ಹೇಗಿತ್ತು ಎಂದರೆ “ನಾವು ಹೀಗಿಗೆ ಪ್ರತಿಭಟನೆ ಮಾಡ್ತೇವೆ, ಮೈಕ್ ಗೆ ಅನುಮತಿ ಕೊಡಿ” ಎಂದು ಲಿಖಿತವಾಗಿ ಬರೆದುಕೊಟ್ಟು ಬಂದರೆ ಸಾಕಿತ್ತು. ಅದಕ್ಕೆ ಸೀಲ್ ಒತ್ತಿ, ಆಯಾ ಪೊಲೀಸ್ ಠಾಣಾಧಿಕಾರಿಗಳು ಸಹಿ ಹಾಕಿ ಕೊಡುತ್ತಿದ್ದರು. ಕೆಲವು ಬಾರಿ ಪ್ರತಿಭಟನೆಗೆ ವಿವಿಧ ಕಾರಣಗಳಿಂದ ನಿರಾಕರಣೆ ಮಾಡಿದ್ದು ಇದೆ. ಅದು ಬೇರೆ ವಿಷಯ. ಆದರೆ ಇನ್ನು ಮುಂದೆ ಹಾಗಲ್ಲ. ನೀವು ಪ್ರತಿಭಟನೆ ಮಾಡಲು ತೀರ್ಮಾನಿಸಿ ನಂತರ ಪೊಲೀಸ್ ಠಾಣೆಗೆ ಅನುಮತಿಗೆ ಹೋಗುವಾಗ ಅಲ್ಲಿ ಹಣ ಕಟ್ಟಬೇಕಾಗುತ್ತದೆ. ನೀವು ಶಾಂತಿಯುತ ಸಭೆ ಅಂದರೆ ಪ್ರತಿಭಟನೆ ಮಾಡುತ್ತೀರಿ ಅಂದಾದರೆ ಅದಕ್ಕೆ 500 ರೂಪಾಯಿ ಕಟ್ಟಬೇಕಾಗುತ್ತದೆ. ಹಾಗೆ ಕ್ರಿಕೆಟ್ ಟೂರ್ನಮೆಂಟ್ ಅಥವಾ ಯಾವುದೇ ಹೊರಾಂಗಣ ಕ್ರೀಡಾಕೂಟ ಮಾಡಿ ಅಲ್ಲಿ ಪೊಲೀಸ್ ಸಹಕಾರ ಆಯೋಜಕರು ಕೇಳಿದರೆ ಅದಕ್ಕೆ 50 ಸಾವಿರ ಕಟ್ಟಬೇಕಾಗುತ್ತದೆ. ಅದೇ ಒಳಾಂಗಣ ಕ್ರೀಡೆಯಾದರೆ ನಲ್ವತ್ತು ಸಾವಿರ ರೂಪಾಯಿಯಲ್ಲಿ ಆಗುತ್ತದೆ. ಯಾಕೆಂದರೆ ಹೊರಾಂಗಣ ಕ್ರೀಡಾಕೂಟಕ್ಕೆ ಹೋಲಿಸಿದರೆ ಒಳಾಂಗಣ ಕ್ರೀಡಾಕೂಟದ ರಿಸ್ಕ್ ಒಂದಿಷ್ಟು ಕಡಿಮೆ. ಇನ್ನು ಹೊರಾಂಗಣ ವಸ್ತು ಪ್ರದರ್ಶನ ಅಂದರೆ ಎಕ್ಸಿಬಿಷನ್ ಮಾಡುವುದಾದರೆ 25 ಸಾವಿರ, ಒಳಾಂಗಣ ವಸ್ತು ಪ್ರದರ್ಶನ ಆದರೆ 20 ಸಾವಿರ, ಇನ್ನು ನಗರ ಪ್ರದೇಶದಲ್ಲಿ ರಾಜಕೀಯ, ಖಾಸಗಿ ಕಾರ್ಯಕ್ರಮ ಆದರೆ 20 ಸಾವಿರ ಮತ್ತು ಬೇರೆ ಕಡೆಗಳಲ್ಲಿ ರಾಜಕೀಯ ಅಥವಾ ಖಾಸಗಿ ಕಾರ್ಯಕ್ರಮ ಆದರೆ ಹತ್ತು ಸಾವಿರ ರೂಪಾಯಿ ಕಟ್ಟಬೇಕಾಗುತ್ತದೆ. ಈ ಮೊತ್ತವು ಪೊಲೀಸ್ ಇಲಾಖೆಯ ರಾಜಸ್ವ ಜಮೆಯ ಲೆಕ್ಕಕ್ಕೆ ಹೋಗುತ್ತದೆ ಎಂದು ಪೊಲೀಸ್ ಕಮೀಷನರ್ ಟಿ ಸುರೇಶ್ ಹೇಳಿದ್ದಾರೆ. ಈ ಎಲ್ಲದರಲ್ಲಿ ಪ್ರತಿಭಟನೆ, ಮೆರವಣಿಗೆಗೆ ಶುಲ್ಕ ಇಟ್ಟಿರುವುದು ಮಾತ್ರ ನನಗೆ ಸರಿ ಕಾಣುತ್ತಾ ಇಲ್ಲ. ಬೇರೆ ಕ್ರೀಡಾಕೂಟ, ವಸ್ತುಪ್ರದರ್ಶನ, ರಾಜಕೀಯ, ಖಾಸಗಿ ಕಾರ್ಯಕ್ರಮ ಆದರೆ ನೀವು ಇಟ್ಟ ಅಮೌಂಟ್ ಓಕೆ. ಅಲ್ಲಿ ಪೊಲೀಸರ ಸಹಕಾರ ಬೇಕಾದರೆ ಹಣ ಕಟ್ಟಲಿ. ಆದರೆ ಪ್ರತಿಭಟನೆ ಹಾಗೆ ಅಲ್ಲ. ವಿವಿಧ ಸಂಘಟನೆಗಳು ಪ್ರತಿಭಟನೆ ಮಾಡುತ್ತವೆ, ಅನೇಕ ಬಾರಿ ಅದರಲ್ಲಿ ಎಲ್ಲರ ಹಕ್ಕಿಗಾಗಿ ಹೋರಾಟ ನಡೆಯುತ್ತದೆ. ಆಗ ಹೋರಾಟ ಮಾಡಲು ಹಣ ಕಟ್ಟಬೇಕು ಎಂದು ಹೇಳಿದರೆ ಯಾರೂ ಕೂಡ ಧ್ವನಿ ಎತ್ತುವ ಪ್ರಯತ್ನ ಮಾಡುವುದೇ ಇಲ್ಲ. ಸುಮ್ಮನೆ ಹಣ ಖರ್ಚು ಯಾಕೆ ಎನ್ನುವುದು ಅವರ ಮನಸ್ಸಿನಲ್ಲಿ ಮೂಡುತ್ತದೆ. ಅದರ ಬದಲಿಗೆ ಪ್ರತಿಭಟನೆ ಮಾಡುವಾಗ ಏನಾದರೂ ಅಹಿತಕರ ಘಟನೆಗಳು ನಡೆದು ಪೊಲೀಸ್ ಪಡೆಯನ್ನು ಬಳಸಬೇಕಾಗಬಹುದು. ಆಗ ಪರಿಸ್ಥಿತಿಯನ್ನು ಹದ್ದುಬಸ್ತಿನಲ್ಲಿಡುವ ಅಗತ್ಯ ಬಂದಾಗ ಪೊಲೀಸ್ ಬಲಬೇಕಾದರೆ ಆಗ ಸಂಘಟನೆಯವರು ಖರ್ಚು ನೀಡಬೇಕು ಎಂದು ಹೇಳಲಿ. ಅದು ಬಿಟ್ಟು ಹತ್ತಿಪ್ಪತ್ತು ಜನ ನಿಂತು ಹೋರಾಟ ಮಾಡಿದರೆ ಹಣ ಕಟ್ಟಬೇಕು ಎಂದು ಹೇಳಿದರೆ ಅಲ್ಲಿ ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಗೆ ಅರ್ಥವೇ ಹೊರಟು ಹೋದಿತು.
ರಾಜಕೀಯದವರ ಬಳಿ ತೆಗೆದುಕೊಳ್ಳಿ…
ನೀವು ಅನೇಕ ಬಾರಿ ನೋಡಿರಬಹುದು, ಎಡಪಕ್ಷಗಳು ಡಿಸಿ ಆಫೀಸ್ ಹೊರಗೆ ಹೋರಾಟ ಮಾಡುತ್ತವೆ, ಸನಾತನ ಸಂಸ್ಥೆಯಂತಹ ಸಂಘಟನೆಗಳು ಹೋರಾಟ ಮಾಡುತ್ತವೆ, ಇತ್ತೀಚೆಗೆ ಕೆಲವು ಮಂಗಳಮುಖಿಯರು ನಿಂತು ಹೋರಾಟ ಮಾಡಿದ್ದರು, ಆಗಾಗ ಎಬಿವಿಪಿ, ಎಸ್ ಎಫ್ ಐ, ಎನ್ ಎಸ್ ಯುಐ ಪ್ರತಿಭಟನೆ ಮಾಡುತ್ತವೆ, ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ ಮಾಡುತ್ತಾರೆ, ಆಶಾ ಕಾರ್ಯಕರ್ತೆಯರು ಮಾಡುತ್ತಾರೆ, ಹೀಗೆ ಅನೇಕ ಸಂಘಟನೆಗಳು ಪ್ರತಿಭಟನೆ ಮಾಡುವಾಗ ಅಲ್ಲಿ ಕೂಡ ನೀವು ಹಣ ಕಟ್ಟಬೇಕು ಎಂದರೆ ಅವರಿಗೆ ಅದೊಂದು ಹೊರೆಯಾಗಬಹುದು. ರಾಜಕೀಯ ಪಕ್ಷದವರು ಪ್ರತಿಭಟನೆ ಮಾಡಿದರೆ ಖಂಡಿತ ಹಣ ತೆಗೆದುಕೊಳ್ಳಿ, ಐನೂರು ಅಲ್ಲ, ಒಂದು ಸಾವಿರ ತೆಗೆದುಕೊಳ್ಳಿ. ಅವರಿಗೆನೂ ಕೊರತೆ ಇಲ್ಲ. ಎಲ್ಲಾ ಪಕ್ಷದವರೂ ರೆಸಾರ್ಟ್ ನಲ್ಲಿ ಕೊಟ್ಟಿರುವ ಬಿಲ್ ಎದುರು ಈ ಐನೂರು ಏನೂ ಅಲ್ಲ. ಆದರೆ ಉಳಿದ ಸಣ್ಣಪುಟ್ಟ ಹೋರಾಟಗಳಿಗೆ ಸರಕಾರ ಒಂದಿಷ್ಟು ಕನಿಕರ ತೋರಬೇಕು. ಬಹುಶ: ಬೆಂಗಳೂರಿನಲ್ಲಿ ನಡೆಯುವ ಪ್ರತಿಭಟನೆಗಳಿಂದ ದಿನನಿತ್ಯ ಅಲ್ಲಿ ಟ್ರಾಫಿಕ್ ಜಾಮ್ ನಂತಹ ಘಟನೆಗಳು ನಡೆದು ಪೊಲೀಸರು ಅದನ್ನು ಸುಧಾರಿಸಲು ಹರಸಾಹಸ ಪಡಬೇಕಾಗುತ್ತದೆ. ಅದನ್ನು ಒಪ್ಪಿಕೊಳ್ಳೋಣ. ಬಹುಶ: ಬೆಂಗಳೂರಿನಲ್ಲಿ ಮೆರವಣಿಗೆ, ರಾಸ್ತಾರೋಕೋ ಮುಂತಾದವುಗಳನ್ನು ತಡೆಯಲು ಹೀಗೆ ಮಾಡಿರಲೂಬಹುದು. ಅಲ್ಲಿ ದಿನಕ್ಕೊಂದು ಸಂಘಟನೆಗಳು ಪ್ರತಿಭಟನೆ, ಮೆರವಣಿಗೆ ಮಾಡಿದರೆ ನಾಗರಿಕರ ಬೈಗುಳ ತಿನ್ನಬೇಕಾಗಿರುವುದು ಟ್ರಾಫಿಕ್ ಪೊಲೀಸರು. ಇನ್ನು ತಮ್ಮ ಅಸ್ತಿತ್ವ ಅಥವಾ ಮೈಲೇಜ್ ತೋರಿಸಲು ನಡೆಸುವ ಪ್ರತಿಭಟನೆಗಳಿಗೆ ಹಣ ತೆಗೆದುಕೊಂಡರೆ ಪರವಾಗಿಲ್ಲ. ಆದರೆ ಎಲ್ಲದಕ್ಕೂ ಒಂದೇ ಕಾನೂನು ಮಾಡಿದರೆ ಭವಿಷ್ಯದಲ್ಲಿ ನೈಜ ಉದ್ದೇಶ ಇಟ್ಟು ನಡೆಸುವ ಪ್ರತಿಭಟನೆಗಳು ಉದಾಹರಣೆ ನೇತ್ರಾವತಿ ಉಳಿಸಿ ಹೋರಾಟ, ಬಸ್ ಪಾಸ್ ದರ ಇಳಿಸಿ ಹೋರಾಟದಂತವು ಕಣ್ಮರೆಯಾಗುತ್ತವೆ ಅಥವಾ ಯಾರಾದರೂ ಹಣ ಕೊಟ್ಟು ಮಾಡಿಸಬೇಕಾಗುತ್ತದೆ.
ದೊಡ್ಡ ನಾಯಕರ ವಿಶೇಷ ಕಾರ್ಯಕ್ರಮಗಳಿಗೆ ತೆಗೆದುಕೊಳ್ಳಿ..
ಬೆಂಗಳೂರು ಬಿಟ್ಟರೆ ಉಳಿದ ಜಿಲ್ಲೆಗಳಲ್ಲಿ ಟ್ರಾಫಿಕ್ ಜಾಮ್ ನಂತಹ ಸಮಸ್ಯೆ ಆಗುವುದು ಕಡಿಮೆ. ವರ್ಷಕೊಂದೆರಡು ಸಲ ಸಂಘ ಪರಿವಾರದ ಕಡೆಯಿಂದ ನಡೆಯುವ ಪಾದಯಾತ್ರೆ, ಎಡಪಕ್ಷಗಳ ಮೆರವಣಿಗೆ, ಕಾಂಗ್ರೆಸ್ ನವರ ಚಲೋಗಳಂತಹ ಹೋರಾಟ ಬಿಟ್ಟರೆ ಇಲ್ಲಿ ಆಗಾಗ ರಸ್ತೆ ಬ್ಲಾಕ್ ಆಗುವುದು ಇಲ್ಲ. ಎಲ್ಲಿಯಾದರೂ ಇವತ್ತಿನ ಹಾಗೆ ಅತೀ ದೊಡ್ಡ ನಾಯಕರ ವಿಶೇಷ ಕಾರ್ಯಕ್ರಮ ಇದ್ದರೆ ಆಗ ಮಂಗಳೂರಿನ ಕೇಂದ್ರ ಮೈದಾನಕ್ಕೆ ಹೋಗುವ ದಾರಿಗಳು ಬ್ಲಾಕ್ ಆಗುತ್ತವೆ. ಅಂತವರಿಂದ ನೀವು ಹತ್ತಲ್ಲ, ಇಪ್ಪತ್ತು ಸಾವಿರ ತೆಗೆದುಕೊಳ್ಳಿ. ಪಾಪದವರ ಬಳಿ ಎಲ್ಲ ತೆಗೆದುಕೊಳ್ಳಲು ಶುರುವಾದರೆ ಬರುವ ದಿನಗಳಲ್ಲಿ ರಿಕ್ಷಾ ಪಾರ್ಕ್ ಮಾಡುವ ಆಟೋ ರಿಕ್ಷಾಗಳ ಚಾಲಕರಿಂದಲೂ ಇಂತಿಷ್ಟು ಹಣ ಕಟ್ಟಿಯೇ ರಿಕ್ಷಾ ಪಾರ್ಕ್ ಮಾಡಬೇಕು ಎಂದು ಸೂಚನೆ ಹೋಗಬಹುದು!
Leave A Reply