ನಿಜವಾದ ಸ್ವಚ್ಚಭಾರತ ಆಗಬೇಕಾಗಿರುವುದು ಮಂಗಳೂರಿನ ತಾಲೂಕು ಕಚೇರಿ ಆವರಣದಲ್ಲಿ!!
ಸ್ವಚ್ಚ ಭಾರತ ಎಂದು ಬ್ಯಾನರ್ ಹಾಕಿ ನಮ್ಮ ರಾಜಕಾರಣಿಗಳು ವರ್ಷಕ್ಕೊಮ್ಮೆ ಅಕ್ಟೋಬರ್ 2 ರಂದು ಕ್ಲೀನ್ ಇದ್ದ ಜಾಗದಲ್ಲಿಯೇ ನಾಲ್ಕು ಪೊರಕೆ ಹಿಡಿದುಕೊಂಡು ಬಗ್ಗಿದಾಗೆ ಮಾಡಿ ಕ್ಯಾಮೆರಾಗಳಿಗೆ ಫೋಸ್ ಕೊಡುತ್ತಾರಲ್ಲ. ನಾಲ್ಕು ಎಲೆ, ಎರಡು ಗುಟ್ಕಾ ಪ್ಯಾಕೇಟ್ ಬಿದ್ದ ಕಡೆ ಹದಿನೈದು ಜನ ಪೊರಕೆ ಹಿಡಿದು ಮೀಡಿಯಾದವರು ವಿಡಿಯೋ, ಫೋಟೋ ತೆಗೆದು ಆಚೆ ಹೋದ ಕೂಡಲೇ ಹಿಡಿಸೂಡಿಯನ್ನು ಅಲ್ಲಿಯೇ ಬಿಸಾಡಿ ಕಾರು ಹತ್ತಿ ಹತ್ತಿರದ ಹೋಟೇಲಿಗೆ ಹೋಗಿ ಕಾಲ ಮೇಲೆ ಕಾಲು ಹಾಕಿ ಕಾಫಿ ಕುಡಿಯುತ್ತಾರಲ್ಲ. ಅಂತಹ ಮಂಗಳೂರಿನ ಎಲ್ಲಾ ರಾಜಕಾರಣಿಗಳಿಗೆ ನಿಜಕ್ಕೂ ಸ್ವಚ್ಚ ಭಾರತ ಆಗಲೇಬೇಕು ಎನ್ನುವ ಮನಸ್ಸಿದ್ದರೆ ಮಂಗಳೂರು ತಾಲೂಕು ಕಚೇರಿಗೆ ಬನ್ನಿ. ತಾವೆಲ್ಲ ಮಿನಿ ವಿಧಾನಸೌಧ ಎಂದು ಕರೆಸಿಕೊಳ್ಳುತ್ತಿರುವ ಕಟ್ಟಡದ ಆವರಣಕ್ಕೆ ಬರಬೇಕು. ಮಂಗಳೂರಿನ ಯಾವುದೇ ರಾಜಕಾರಣಿ ಬಂದರೂ ಆಗುತ್ತದೆ. ಕಾರ್ಪೋರೇಟರ್ ಗಳು ಬಂದರೂ ಆಗುತ್ತದೆ. ಮುಂದಿನ ಮಹಾನಗರ ಪಾಲಿಕೆಯ ಚುನಾವಣೆಯ ಟಿಕೆಟ್ ಆಕಾಂಕ್ಷಿಗಳು ಬಂದರೂ ಆಗುತ್ತದೆ. ಮಾಧ್ಯಮದವರ ಫೋಟೋ, ವಿಡಿಯೋ ಇದ್ದರೂ ಆಗುತ್ತದೆ, ಇಲ್ಲದಿದ್ದರೂ ಆಗುತ್ತದೆ. ನಾನಿವತ್ತು ಹಾಕಿರುವ ಫೋಟೋದಲ್ಲಿಯೇ ತಾವು ನೋಡುವಂತೆ ಇಲ್ಲಿ ಎಷ್ಟು ಗುಡಿಸಿದರೂ ಅಷ್ಟು ಕಸ ಇದೆ. ಮಂಗಳೂರಿನ ಎಲ್ಲ ಹಿರಿಕಿರಿಯ ಜನಪ್ರತಿನಿಧಿಗಳು ಬಂದು ಎರಡು ಗಂಟೆ ಗುಡಿಸಿದರೂ ಇಲ್ಲಿ ಸ್ವಚ್ಚ ಭಾರತ ಆಗುವುದು ಡೌಟು. ಅಷ್ಟಿದೆ ಕಸ. ಬೇಕಾದರೆ ಸ್ವಚ್ಚ ಭಾರತದ ಉದ್ಘಾಟನೆಯನ್ನು ತಾಲೂಕು ಕಚೇರಿಯಲ್ಲಿ ವಿರಾಜಮಾನರಾಗಿರುವ ಮಾನ್ಯ ತಹಶೀಲ್ದಾರ್ ಸಾಹೇಬ್ರಿಂದ ಮಾಡಿಸಿ. ಅವರ ಕೈಯಲ್ಲಿ ಪೊರಕೆ ಕೊಟ್ಟು ಫೋಟೋ ತೆಗೆಸಿ. ಅವರಿಂದ ಸ್ವಚ್ಚತೆಯ ಬಗ್ಗೆ ಭಾಷಣ ಮಾಡಿಸಿ. ಅದನ್ನು ಕೇಳುವ ಭಾಗ್ಯ ನಮ್ಮ ನಾಗರಿಕರಿಗೆ ಕೊಡಿ. ಎಲ್ಲವೂ ಕ್ಲೀನ್ ಆದ ನಂತರ ತಾಲೂಕು ಕಚೇರಿಯ ಒಳಗೆ ತಹಶೀಲ್ದಾರ್ ಅವರ ಛೇಂಬರಿನಲ್ಲಿ ರಾಜಕಾರಣಿಗಳು ಕುಳಿತು ಕಾಫಿ ಕುಡಿಯುತ್ತಾ ಎಂಜಾಯ್ ಮಾಡಿ.
ನಾಚಿಕೆ ಎನ್ನುವ ಶಬ್ದ ಇವರ ಡಿಕ್ಷಂನರಿಯಲ್ಲಿ ಇಲ್ಲ…
ನಾನಿವತ್ತು ಹಾಕಿರುವ ಫೋಟೋಗಳನ್ನು ನೋಡಿದರೆ ನಿಜಕ್ಕೂ ಸ್ವಚ್ಚತೆಯ ಬಗ್ಗೆ ಪರಿಕಲ್ಪನೆ ಇದ್ದವರಿಗೆ ಬೇಸರ ಮೂಡುತ್ತದೆ. ಮಂಗಳೂರಿನಲ್ಲಿ ಸ್ವಚ್ಚತೆಯ ಬಗ್ಗೆ ಜಾಗೃತಿ ಅಭಿಯಾನದ ಮೂಲಕ ಸಾಮಾಜಿಕ ಕಳಕಳಿ ಮೆರೆಯುತ್ತಿರುವ ಸಂಘಟನೆಯವರಿಗೆ ಇದನ್ನು ನೋಡಿ ಕೋಪವೂ ಬರಬಹುದು. ಫೇಸ್ ಬುಕ್ ನಲ್ಲಿ ಲೈವ್ ಮಾಡಿ ಜನರಿಗೆ ಜಾಗೃತಿ ಮೂಡಿಸುತ್ತಿರುವ ಯುವಮಿತ್ರರಿಗೆ ಅಸಹ್ಯವೂ ಬರಬಹುದು. ಆದರೆ ನಿತ್ಯ ಈ ತಾಲೂಕು ಪಂಚಾಯತ್ ಕಚೇರಿ, ಮಿನಿ ವಿಧಾನಸೌಧದ ಕಟ್ಟಡಕ್ಕೆ ಬಂದು ತಮ್ಮ ಉದ್ಯೋಗ ಮಾಡುತ್ತಿರುವ ತಹಶೀಲ್ದಾರ್ ಅಥವಾ ಅವರ ಸಿಬ್ಬಂದಿಗಳಿಗೆ ಒಂದು ಚೂರು ನಾಚಿಕೆ, ಮಾನ, ಮರ್ಯಾದೆ ಏನೂ ಆಗುವುದಿಲ್ಲವೇ? ಅವರು ಕೆಲಸ ಮಾಡುವ ಸ್ಥಳದ ಸುತ್ತಮುತ್ತಲೂ ಸ್ವಚ್ಚವಾಗಿರಬೇಕೆಂಬ ಯಾವ ಉದ್ದೇಶವೂ ಅವರಿಗೆ ಇಲ್ಲವೇ? ಮೋದಿಯವರು ಸ್ವಚ್ಚತೆಯ ಬಗ್ಗೆ ಪಾಠ ಹೇಳಿಕೊಟ್ಟ ಮೇಲೆಯಾದರೂ ನಾವು ಅದನ್ನು ಅನುಸರಿಸಬೇಕು ಎನ್ನುವ ಚಿಂತನೆ ಇದೆಯಾ? ಅಥವಾ ಮೋದಿಯವರು ಹೇಳಿದ್ರು ಎನ್ನುವ ಕಾರಣಕ್ಕೆ ವಿರೋಧ ಮಾಡುತ್ತಾ ಇದ್ದೀರಾ? ಒಂದು ವೇಳೆ ನಿಮಗೆ ಸ್ವಚ್ಚತೆಯ ಬಗ್ಗೆ ಆಸಕ್ತಿ ಇಲ್ಲದಿದ್ದರೆ ಬೇಡಾ. ಬೇರೆಯವರಿಗೋಸ್ಕರವಾಗಿ ಆದರೂ ಒಂದಿಷ್ಟು ಸ್ಚಚ್ಚತೆಯನ್ನು ಕಾಪಾಡುವುದು ನಿಮ್ಮ ಕನಿಷ್ಟ ಹೊಣೆಯಲ್ಲವೇ.
ಮಕ್ಕಳಲ್ಲಿ ಬಂದಿರುವ ಜಾಗೃತಿ ಇವರಿಗೆ ಯಾಕಿಲ್ಲ…
ಇನ್ನು ಮಿನಿವಿಧಾನಸೌಧದಲ್ಲಿ ಕ್ಲೀನ್ ಮಾಡುವವರ ಸಂಖ್ಯೆ ಕಡಿಮೆ ಇದೆ ಅಥವಾ ಇಲ್ಲ ಎನ್ನುವುದು ನಿಮ್ಮ ಸಮಜಾಯಿಷಿಕೆ ಎಂದಾದರೆ ಅದಕ್ಕಿಂತ ದೊಡ್ಡ ಪ್ರಹಸನ ಬೇರೆ ಇಲ್ಲ. ಒಂದೋ ತಹಶೀಲ್ದಾರರು ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಅಥವಾ ವಾರದಲ್ಲಿ ಒಂದು ದಿನ ತಮ್ಮ ಕಚೇರಿಯ ಸಿಬ್ಬಂದಿಗಳಿಗೆ ಶ್ರಮದಾನ ಮಾಡುವ ಆದರ್ಶವನ್ನು ಮೆರೆಯಲು ಹೇಳಿ. ಹೇಗೂ ತಾಲೂಕು ಕಚೇರಿಯ ಸಿಬ್ಬಂದಿಗಳಿಗೆ ಕೆಲಸ ಮಾಡಿಸಿಕೊಳ್ಳಲು ಬರುವ ನಾಗರಿಕರ ಜೇಬು ಕ್ಲೀನ್ ಮಾಡಲು ಗೊತ್ತಿದೆ, ಕ್ಲೀನ್ ಮಾಡುವವರು ಬರುವ ತನಕ ಇದನ್ನು ಶ್ರಮದಾನದ ಮೂಲಕ ಸ್ವಚ್ಚತೆಯ ಕೆಲಸ ಮಾಡಲಿ. ಹೇಗೂ ಕುಳಿತುಕೊಂಡು “ತಿಂದು” ಹೊಟ್ಟೆ ಬಂದಿರುತ್ತದೆ. ಜನರ ಕೆಲಸಗಳು ಸುಲಭದಲ್ಲಿ ಆಗುವುದಿಲ್ಲ. ಅದರ ಬದಲು ನಡು ಬಗ್ಗಿಸಿದರೆ “ತಿಂದದ್ದು” ಕೂಡ ಒಂದಿಷ್ಟು ಜೀರ್ಣವಾಗಬಹುದು. ಫೋಟೋದಲ್ಲಿ ತಾವು ನೋಡಬಹುದು. ಆವರಣದಲ್ಲಿಯೇ ಪೇಪರ್ ಪೀಸ್ ಗಳು, ಕವರ್ ಗಳನ್ನು ಬಿಸಾಡಿದ್ದಾರೆ. ಇದಕ್ಕಿಂತ ನಾಚಿಕೆಗೇಡಿನ ವಿಷಯ ಬೇರೆ ಇದೆಯಾ? ಇವತ್ತಿನ ದಿನಗಳಲ್ಲಿ ಒಂದು ಮಗು ಸಹ ತಾನು ಚೋಕೋಲೇಟ್ ತಿಂದು ಅದರ ರ್ಯಾಪರ್ ಅನ್ನು ಕಿಸೆಯಲ್ಲಿಯೇ ಹಾಕಿ ಮನೆಯ ಒಳಗೆ ಡಸ್ಟ್ ಬಿನ್ ನಲ್ಲಿ ಹಾಕುತ್ತದೆ. ಕಳೆದ ಮೂರ್ನಾಕು ವರ್ಷಗಳಿಂದ ಎಷ್ಟು ಜನಜಾಗೃತಿ ಆಗಿದೆ ಎಂದರೆ ಮಕ್ಕಳು ಕಾರಿನಲ್ಲಿ ಬಿಸ್ಕಿಟ್ ಅಥವಾ ಏನಾದರೂ ತಿಂದರೆ ಅದರ ಪ್ಯಾಕೇಟುಗಳನ್ನು ಕಿಟಕಿಯಿಂದ ಹೊರಗೆ ಬಿಸಾಡುವುದಿಲ್ಲ. ಅದರ ಬದಲು ಕಾರಿನ ಒಳಗೆ ಇಡುತ್ತವೆ. ಅಂದರೆ ಮಕ್ಕಳಲ್ಲಿಯೂ ಅಷ್ಟು ಜ್ಞಾನ ಮೂಡುತ್ತಿರುವಾಗ ನಮ್ಮ ತಾಲೂಕು ಕಚೇರಿಯಲ್ಲಿ ಕೆಲಸ ಮಾಡುವವರಿಗೆ ಬುದ್ಧಿ ಬೆಳೆದಿಲ್ವಾ? ಇನ್ನು ಎಷ್ಟೇ ಕ್ಲೀನ್ ನೆಸ್ ಬಗ್ಗೆ ಗೊತ್ತಿಲ್ಲ ಎಂದು ಇಟ್ಟುಕೊಂಡರೂ ಮನೆಯ ಒಳಗೆ ಈ ಪರಿ ಗಲೀಜು ಇಟ್ಟುಕೊಳ್ಳುತ್ತಾರೆಯೇ? ಇಲ್ವಲ್ಲ, ಹಾಗಿರುವಾಗ ಇಲ್ಲಿ ಅದೇಗೆ ಮನಸ್ಸು ಬರುತ್ತೋ!!
Leave A Reply