ಒಂದು ಹಂಪ್ ನ ಒಳಗೆ ಎಷ್ಟು ಕಥೆ ಅಡಗಿರುತ್ತದೆ, ಅಲ್ವಾ?
ಇಲ್ಲೊಂದು ಹಂಪ್ ಹಾಕಿ ಬಿಡಿ ಸರ್ ಎಂದು ಆ ಭಾಗದ ಕೆಲವರು ಬಂದು ಹೇಳಿದರೆ ಮುಗಿಯಿತು. ಅಲ್ಲೊಂದು ಹಂಪ್ ರೆಡಿ. ಕೆಲವು ಕಾಲದ ನಂತರ ಇನ್ನೊಬ್ಬರು ಒಂದಿಷ್ಟು ದೂರದಲ್ಲಿ ಮತ್ತೊಂದು ಹಂಪ್ ಹಾಕಿ ಸರ್ ಎಂದು ಹೇಳಿದರೆ ಅಲ್ಲಿ ಮತ್ತೊಂದು ಹಂಪ್ ಹಾಕಿಬಿಡುತ್ತಾರೆ. ಈ ಮೂಲಕ ಮಂಗಳೂರಿನ ಕುದ್ರೋಳಿಯಿಂದ ಕಂಡತ್ತ್ ಪಳ್ಳಿ ಆಗಿ ಬೊಕ್ಕಪಟ್ಣಕ್ಕೆ ಹೋಗುವಾಗ ಒಂದೂವರೆ ಕಿಲೋ ಮೀಟರ್ ಅಂತರದಲ್ಲಿ ಇಪ್ಪತ್ತು ಹಂಪ್ ಗಳಿವೆ. ಇದು ನಮ್ಮ ಮಂಗಳೂರು ಮಹಾನಗರ ಪಾಲಿಕೆಯ ಅತೀ ಬುದ್ಧಿವಂತ ಸದಸ್ಯರು ಮಾಡುತ್ತಿರುವ ಕೆಲಸ. ಹೆಚ್ಚಿನ ಕಾರ್ಪೋರೇಟರ್ ಗಳಿಗೆ ತಲೆ ಓಡಿಸಿ ಗೊತ್ತಿಲ್ಲ. ಜನರು ಕೇಳಿದ್ರು ಅಂತ ಕೇಳಲು ಬಂದವರ ವೋಟಿನ ಸಂಖ್ಯೆಯನ್ನು ನೋಡಿ ಹಂಪ್ ಹಾಕಲು ತಯಾರಿ ನಡೆದು ಆಗಿರುತ್ತದೆ. ಇನ್ನು ಇವರು ಹಂಪ್ ಹಾಕಿಸುವ ಗುತ್ತಿಗೆದಾರರಿಗೆ ಹಂಪ್ ಹೇಗೆ ಹಾಕಬೇಕು ಎಂದಾದರೂ ಗೊತ್ತಿದೆಯಾ? ಅದು ಇಲ್ಲ. ಹಂಪ್ ಹಿಂದಿನವರು ಹಾಕಿದ್ದು ಎಲ್ಲಿಯೋ ನೋಡಿರುತ್ತಾರೆ. ಅದಕ್ಕೆ ತಾವು ಕೂಡ ಗುತ್ತಿಗೆ ಸಿಕ್ಕಿದ ಕೂಡಲೇ ಹೇಳಿದ ಕಡೆ ಹಂಪ್ ಹಾಕಿಬಿಡುತ್ತಾರೆ. ಅದು ಎಷ್ಟು ಎತ್ತರ ಇರಬೇಕು. ಇರಬಾರದು ಎನ್ನುವ ಪರಿಕಲ್ಪನೆ ಇಲ್ಲವೇ ಇಲ್ಲ. ಇನ್ನು ಒಬ್ಬ ಕಾರ್ಪೋರೇಟರ್ ಕೂಡ ತನಗೆ ಬೇಕಾದ ಕಡೆ ಹಂಪ್ ಹಾಕಿಸುವಂತಿಲ್ಲ. ಅವರು ಮೊದಲು ಪಾಲಿಕೆಯ ಕಡೆಯಿಂದ ಮಂಗಳೂರು ಪೊಲೀಸ್ ಕಮೀಷನರ್ ಅವರಿಗೆ ಲಿಖಿತ ಪತ್ರ ಬರೆದು ಅವರು ಅದನ್ನು ಟ್ರಾಫಿಕ್ ವಿಭಾಗಕ್ಕೆ ಕಳುಹಿಸಿ ಅಲ್ಲಿಂದ ಆ ಜಾಗದಲ್ಲಿ ಹಂಪ್ ಎಷ್ಟರಮಟ್ಟಿಗೆ ಅವಶ್ಯಕತೆ ಇದೆ ಎಂದು ನೋಡಬೇಕಾಗುತ್ತದೆ. ಟ್ರಾಫಿಕ್ ಪೊಲೀಸರು ಅಲ್ಲಿ ಹಂಪ್ ಬೇಕು ಎಂದರೆ ಮಾತ್ರ ಹಾಕಿಸಲಾಗುತ್ತದೆ. ಅದರ ನಂತರ ಪೊಲೀಸ್ ಇಲಾಖೆಯವರು ಮಾನದಂಡಗಳ ಮೂಲಕ ಹಂಪ್ ರಚಿಸಬೇಕು. ಹಂಪ್ ನ ಎತ್ತರ ಎಷ್ಟಿರಬೇಕು… ಸರಿ ನೋಡಿದ್ರೆ ಹಂಪ್ ಹಾಕಿಸುವುದಕ್ಕೂ ಮಾನದಂಡಗಳಿವೆ. ಅದನ್ನು ಇಂಡಿಯಾ ರೋಡ್ ಕಾಂಗ್ರೆಸ್ ನಲ್ಲಿ ಸ್ಪಷ್ಟವಾಗಿ ನಮೂದಿಸಲಾಗಿದೆ. ಕಾಂಗ್ರೆಸ್ ಎಂದರೆ ಈ ಕಾಂಗ್ರೆಸ್ ಪಕ್ಷವಲ್ಲ. ಹಂಪ್ ಗಳ ವೈಜ್ಞಾನಿಕ ರಚನೆಯ ಬಗ್ಗೆ ತಜ್ಞರೇ ಸ್ಪಷ್ಟವಾಗಿ ನಿಯಮ ರೂಪಿಸಿದ್ದಾರೆ. ರಾಷ್ಟ್ರೀಯ ಮಾಪನದ ಮೂಲಕ ಯಾವುದೇ ಹಂಪ್ ನ ಎತ್ತರ ಹೆಚ್ಚು ಕಡಿಮೆ ಇರುವಂತಿಲ್ಲ. ಯಾಕೆಂದರೆ ಹಂಪ್ ಎತ್ತರ ಹೆಚ್ಚಿದರೆ ಅದು ಸಣ್ಣಪುಟ್ಟ ಕಾರುಗಳಿಂದ ಹಿಡಿದು ಅನೇಕ ಐಶಾರಾಮಿ ಕಾರುಗಳ ಬುಡಕ್ಕೆ ಡ್ಯಾಮೇಜ್ ಮಾಡಿಬಿಡುತ್ತದೆ. ಇನ್ನು ಹೈಟ್ ಜಾಸ್ತಿ ಇದ್ದರೆ ದ್ವಿಚಕ್ರ ಸವಾರರಿಗೂ ಅದು ತೊಂದರೆಯೇ. ಆದ್ದರಿಂದ ಒಂದು ನಿಗದಿತ ಮಾಪನ ಹಿಡಿದೇ ಹಂಪ್ ರಚಿಸಬೇಕು. ಅದನ್ನು ಇವರು ಮಾಡುವುದಿಲ್ಲ. ಇನ್ನು ಹಂಪ್ ಹಾಕಿದ 24 ಗಂಟೆಯೊಳಗೆ ಅದಕ್ಕೆ ಜೀಭ್ರಾ ಕ್ರಾಸ್ ತರಹ ಬಿಳಿ ಬಣ್ಣವನ್ನು ಬಳಿಯಬೇಕು. ಯಾಕೆಂದರೆ ದೂರದಿಂದ ಬರುವ ಸವಾರನಿಗೆ ಅಲ್ಲೊಂದು ಹಂಪ್ ಇದೆ ಎನ್ನುವುದು ಗೊತ್ತಾಗಬೇಕು. ಆದರೆ ಇವರು ಅದನ್ನು ಕೂಡ ಮಾಡುವುದಿಲ್ಲ. ಅದರಿಂದ ಎಷ್ಟೋ ಬಾರಿ ನೀವು ನೋಡಿರಬಹುದು ಅಥವಾ ಅನುಭವಿಸಿರಬಹುದು. ಹಂಪ್ ಇದೆ ಎಂದು ಗೊತ್ತಾಗದೇ ನೀವೆ ಒಮ್ಮೆ ಸೀಟಿನಿಂದ ಒಂದಿಚು ಮೇಲೆ ಹಾರಿರಬಹುದು. ಕೆಲವರಿಗೆ ಕಾರಿನಲ್ಲಿ ಒಳಗೆ ಕುಳಿತ ಕಡೆ ತಲೆಗೆ ತಾಗಿರಬಹುದು. ಇದಕ್ಕೆಲ್ಲ ಇವರು ಬಿಳಿಬಣ್ಣ ಬಳಿಯದೇ ಇರುವುದೇ ಕಾರಣ. ಇಂಟರ್ ಲಾಕ್ ಹಂಪ್ ಹೇಗಿರುತ್ತವೆ… ಇನ್ನು ಹಂಪ್ ನಿರ್ಮಾಣಕ್ಕೆ ನಮ್ಮ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಪ್ರತಿ ವರ್ಷ ಲಕ್ಷಗಟ್ಟಲೆ ರೂಪಾಯಿ ಹಣ ಖರ್ಚು ಮಾಡಲಾಗುತ್ತದೆ. ಆದರೆ ಅದು ನಿಜಕ್ಕೂ ಅನೇಕ ವರ್ಷ ಬಾಳಿಕೆ ಬರುತ್ತಾ ಎನ್ನುವುದನ್ನು ಗಮನಿಸಿದರೆ ಇಲ್ಲವೇ ಇಲ್ಲ. ಇತ್ತೀಚೆಗೆ ನಾನು ಬೆಂಗಳೂರಿನಿಂದ ಮಂಗಳೂರಿಗೆ ಬರುವಾಗ ಗೋರುರು ಡ್ಯಾಂ ಬಳಿ ಕೆಲವು ಹಂಪ್ಸ್ ನೋಡಿದ್ದೇನೆ. ಅದರ ಫೋಟಗಳನ್ನು ಇವತ್ತು ಈ ಜಾಗೃತ ಅಂಕಣದೊಂದಿಗೆ ಪೋಸ್ಟ್ ಮಾಡುತ್ತಿದ್ದೇನೆ. ಆ ಹಂಪ್ ಗಳಲ್ಲಿ ಮೇಲ್ಭಾಗಕ್ಕೆ ಇಂಟರ್ ಲಾಕ್ ಅಳವಡಿಸಿರುತ್ತಾರೆ. ಇದಕ್ಕೆ ಒಂದಿಷ್ಟು ಹೆಚ್ಚು ಖರ್ಚಾಗಬಹುದು. ಆದರೆ ಇವು ದೀರ್ಘ ಬಾಳಿಕೆ ಬರುತ್ತವೆ. ನಮ್ಮಲ್ಲಿ ಡಾಮರು, ಜಲ್ಲಿ ಬಳಸಿ ಮಾಡುವ ಹಂಪ್ಸ್ ಬೇಗನೆ ಹಾಳಾಗುತ್ತವೆ. ನೀವು ಮಂಗಳೂರಿನ ಹಂಪನಕಟ್ಟೆಯಲ್ಲಿ ಸಿಗ್ನಲ್ ಲೈಟ್ ಬಳಿ ಒಂದು ಹಂಪ್ ಇದೆ. ಅದರ ಮೇಲ್ಭಾಗದಲ್ಲಿ ನಾನು ಫೋಟೋದಲ್ಲಿ ಹಾಕಿರುವಂತಹ ಇಂಟರ್ ಲಾಕ್ ಬಳಸಿದ್ದಾರೆ. ಅದು ಮಾತ್ರ ಮಂಗಳೂರಿನ ಮಟ್ಟಿಗೆ ನಾಲ್ಕು ವರ್ಷಗಳಿಂದ ಹಾಗೆ ಚೆನ್ನಾಗಿ ಇರುವಂತಹ ಹಂಪ್. ಉಳಿದ ಎಲ್ಲಾ ಹಂಪ್ಸ್ ಗಳು ಹಾಳಾಗಿ ಹೋಗಿ ಮತ್ತೆ ಮತ್ತೆ ನಿರ್ಮಾಣಕ್ಕೆ ಲಕ್ಷಗಟ್ಟಲೆ ಹಣವನ್ನು ನುಂಗಿಹಾಕಿವೆ. ಕೆಲವೊಮ್ಮೆ ಸಣ್ಣ ಸಣ್ಣ ವಿಯಗಳು ಹೇಗೆ ಪ್ರಾಮುಖ್ಯ ಪಡೆದಿರುತ್ತವೆ ಎಂದು ಅಂದುಕೊಳ್ಳುತ್ತವೆ. ಆದರೆ ಒಂದು ಹಂಪ್ ನಿಮ್ಮ ನಮ್ಮ ತೆರಿಗೆಯ ಹಣದಿಂದ ಪಾಲಿಕೆಯ ಕೆಲವರಿಗೆ ಭರ್ಜರಿ ಲಾಭ ಕೊಟ್ಟಿರಬಹುದು. ನಾವು ಮಾತ್ರ ಹಂಪಲ್ಲಿ ಏನು ಆಗುತ್ತದೆ ಎಂದುಕೊಂಡು ಸುಮ್ಮನೆ ಗಾಡಿ ಓಡಿಸುತ್ತೇವೆ!! �
Leave A Reply