ಅಗರಿ ರಘುರಾಮ ಭಾಗವತರು ಇನ್ನಿಲ್ಲ! ನಿಧನದಲ್ಲೂ ಒಂದು ಪವಾಡ!
ಸುಪ್ರಸಿದ್ಧ ಹಿರಿಯ ಯಕ್ಷಗಾನ ಭಾಗವತರಾದ ಅಗರಿ ರಘುರಾಮ ಭಾಗವತರು ಅಲ್ಪಕಾಲದ ಅಸೌಖ್ಯದಿಂದಾಗಿ ನಿಧನರಾದರು . ವರ್ತಮಾನ ಕಾಲದಲ್ಲಿ ತೆಂಕುತಿಟ್ಟಿನ ಅತೀ ಹಿರಿಯ ಭಾಗವತರು , ಹಿಂದಿನ ಹಾಗೂ ಈಗಿನ ಕಾಲದ ಭಾಗವತರ ನಡುವಿನ ಕೊಂಡಿಯಂತಿದ್ದ ಅಗರಿ ರಘುರಾಮ ಭಾಗವತರ ನಿಧನ ಯಕ್ಷರಂಗಕ್ಕೊಂದು ಅತೀ ದೊಡ್ಡ ನಷ್ಟ .ಅಗರಿಶೈಲಿ ಯ ಸಮರ್ಥ ಪ್ರತಿನಿಧಿಗಳಾದ ರಘುರಾಮ ಭಾಗವತರು ಎಲ್ಲಾ ಪ್ರಸಂಗಗಳ ನಡೆ ಅರಿತಿದ್ದ , ಹೊಸ ಪ್ರಸಂಗಗಳಿಗೆ ನಿರ್ದೇಶನ ನೀಡುತ್ತಿದ್ದ , ಪರಂಪರೆ ಹಾಗೂ ಸಂಗೀತ ಶೈಲಿ – ಎರಡನ್ನೂ ಅರಿತಿರುವ ಅಪರೂಪದ ಭಾಗವತರೆನಿಸಿಕೊಂಡಿದ್ದರು .
ನಿಧನದಲ್ಲೂ ಒಂದು ಪವಾಡ – ಸತ್ತು ಬದುಕಿದ ಅಗರಿ ರಘುರಾಮ ಭಾಗವತರು :
ಹೌದು , ಇದೊಂದು ಪವಾಡ ನಿನ್ನೆ ಜರುಗಿತ್ತು .ಭಾಗವತರು ನಿಧನರಾದುದು ಇಂದು ಬೆಳಿಗ್ಗೆ 10.30 ಕ್ಕೇ ಆದರೂ ನಿನ್ನೆ ರಾತ್ರಿ ಒಂದೂವರೆ ಘಂಟೆಗೇ ಕೆಲವು ವಾಟ್ಸಾಪ್ ವೇದಿಕೆಗಳಲ್ಲಿ ಅಗರಿ ರಘುರಾಮ ಭಾಗವತರು ಇನ್ನಿಲ್ಲ ಎಂಬ ಬ್ರೇಕಿಂಗ್ ಸುದ್ದಿ ಹರಿದಾಡಲಾರಂಭಿಸಿತ್ತು .ನಾನೂ ಇದನ್ನು ಓದಿ ” ವಿಷಯ ಧೃಢೀಕರಿಸದೇ ಜಾಲತಾಣಗಳಲ್ಲಿ ಪೋಸ್ಟ್ ಮಾಡಬೇಡಿ ” ಎಂದು ರಾತ್ರಿಯೇ ಪ್ರತಿಕ್ರಿಯೆಯನ್ನೂ ಕೊಟ್ಟಿದ್ದೆ . ಆದರೆ ನಂತರ ನನಗೆ ತಿಳಿದದ್ದು ಈ ಪವಾಡ . ರಾತ್ರಿ ಸುಮಾರು 12.30 ಕ್ಕೆ ರಘುರಾಮ ಭಾಗವತರ ಹೃದಯ ಬಡಿತ , ರಕ್ತದ ಒತ್ತಡ , ನಾಡಿಬಡಿತ ಎಲ್ಲವೂ ಸಂಪೂರ್ಣವಾಗಿ ಸ್ಥಬ್ದವಾಗಿತ್ತು . ವೈದ್ಯರೂ ” ಕ್ಷಮಿಸಿ , ಮುಗಿಯಿತು ” ಎಂದಿದ್ದರು . ಕುಟುಂಬದ ಸದಸ್ಯರೆಲ್ಲರೂ ಆಸ್ಪತ್ರೆಗೆ ಬಂದೂ ಆಗಿತ್ತು . ಆದರೆ , ವಿಚಿತ್ರ ಎಂಬಂತೆ ಸ್ವಲ್ಪ ಸಮಯದ ಬಳಿಕ ಭಾಗವತರ ಹೃದಯ ,ನಾಡಿ ಬಡಿತ , ರಕ್ತದ ಒತ್ತಡ ಪುನಃ ಆರಂಭವಾಯಿತು . ಇದೊಂದು ಪವಾಡವೇ ಸರಿ . ವೈದ್ಯರು ಪುನಃ ಶುಶ್ರೂಶೆ ನೀಡಲಾರಂಭಿಸಿದರು .ಉಸಿರಾಟವೂ ಪುನರಾರಂಭವಾಯಿತು . ಆದರೂ ಬೆಳಿಗ್ಗೆ 10.30 ಕ್ಕೆ ನಿಧನರಾದರು .ವೈದ್ಯಕೀಯ ಕ್ಷೇತ್ರದಲ್ಲಿ ಇಂತಹ ಘಟನೆ ಎಷ್ಟೋ ಲಕ್ಷಕ್ಕೊಂದರಂತೆ ಜರಗುವುದುಂಟು .
ತೆಂಕು ತಿಟ್ಟಿನಲ್ಲಿ ಪ್ರಾತಃಸ್ಮರಣೀಯರು ಎನಿಸಿದ್ದ ಸುಪ್ರಸಿದ್ಧ ಭಾಗವತರು , ದಕ್ಷ ನಿರ್ದೇಶಕರು ದಿ.ಅಗರಿ ಶ್ರೀನಿವಾಸ ಭಾಗವತರು – ರುಕ್ಮಿಣಿ ಅಮ್ಮನವರ ಸುಪುತ್ರರಾಗಿ ಅಗರಿ ರಘುರಾಮರು 07 .02 .1935 ರಂದು ಜನಿಸಿದರು . ಸುರತ್ಕಲ್ ವಿದ್ಯಾದಾಯಿನಿ ವಿದ್ಯಾ ಸಂಸ್ಥೆಯಲ್ಲಿ ಇಂಟರ್ ಮೀಡಿಯೆಟ್ , ಮಂಗಳೂರಿನ ಅಲೋಶಿಯಸ್ ಕಾಲೇಜಿನಲ್ಲಿ FA ವ್ಯಾಸಂಗ ಪೂರೈಸಿ ಕರ್ನಾಟಕ ಸರಕಾರದ ಶಿಕ್ಷಣ ಇಲಾಖೆಯಲ್ಲಿ ನೌಕರಿಗೆ ಸೇರಿದರು . ತಂದೆ ಸುಪ್ರಸಿದ್ಧ ಭಾಗವತರಾಗಿದ್ದ ಕಾರಣ , ರಘುರಾಮರಿಗೂ ಬಾಲ್ಯದಲ್ಲೇ ಯಕ್ಷಗಾನದ ಆಸಕ್ತಿ ಬೆಳೆದಿತ್ತು . ತಂದೆಯವರಂತೆ ತಾನೂ ಭಾಗವತನಾಗಬೇಕೆಂಬ ಆಕಾಂಕ್ಷೆ ಬಾಲ್ಯದಲ್ಲೇ ಮೊಳಕೆ ಒಡೆದಿದ್ದ ಕಾರಣ , ತಮ್ಮ ತಂದೆಯವರನ್ನೇ ಗುರುವಾಗಿ ಸ್ವೀಕರಿಸಿ ಭಾಗವತಿಕೆಯ ಪಟ್ಟುಗಳನ್ನು ಕರಗತ ಮಾಡಿಕೊಂಡರು .ತಂದೆಯವರು ಹೇಳಿ ಕೊಟ್ಟದ್ದಕ್ಕಿಂತಲೂ ನೋಡಿಯೇ ಭಾಗವತಿಕೆ ಕಲಿತದ್ದು ಜಾಸ್ತಿ ಎನ್ನಬಹುದಾದರೂ , ತಂದೆಯವರ ಕಡು ನಿರ್ದೇಶನ , ಸಲಹೆಗಳ ಅನುಷ್ಠಾನದಿಂದಲೇ ” ಭಾಗವತರು ” ಎನಿಸಿಕೊಂಡರು . ಸರಕಾರಿ ನೌಕರಿಯಲ್ಲಿದ್ದರೂ , ಯಕ್ಷಗಾನ ಪ್ರದರ್ಶನಗಳಲ್ಲಿ ಭಾಗವಹಿಸಿ ಜನಪ್ರಿಯತೆ ಪಡೆದರು .ಆದರೂ ಮೇಳದ ಪೂರ್ಣಕಾಲಿಕ ತಿರುಗಾಟದ ಭಾಗವತರಾದುದು ಒಂದು ಆಕಸ್ಮಿಕ ಘಟನೆಯಿಂದಾಗಿ . ಸುಮಾರು 1965 – 66 ರ ಕಾಲ . ಅಗರಿ ಶ್ರೀನಿವಾಸ ಭಾಗವತರು ಕಸ್ತೂರಿ ಪೈ ಸಹೋದರರ ಸುರತ್ಕಲ್ ಮೇಳದ ಪ್ರಧಾನ ಭಾಗವತರಾಗಿದ್ದ ಸಮಯವದು .
ಮೇಳಗಳೊಳಗೇ ತೀವ್ರ ಪೈಪೋಟಿಯ ಕಾಲ . ತುಳು ಪ್ರಸಂಗಗಳು ಯಕ್ಷರಂಗ ಪ್ರವೇಶದ ಪ್ರಾಥಮಿಕ ಹಂತದಲ್ಲಿತ್ತು . ಸುರತ್ಕಲ್ ಮೇಳಕ್ಕೂ ಉಳಿದ ಮೇಳಗಳಂತೆಯೇ ತುಳುನಾಡ ಸಿರಿ , ಕೋಟಿಚೆನ್ನಯ , ಕೋರ್ದಬ್ಬು ಬಾರಗ ಮುಂತಾದ ಪಾಡ್ದನ ಆಧರಿತ ಪ್ರಸಂಗಗಳಿಗೆ ಹೊಂದಿಕೊಳ್ಳಬೇಕಾದ ಅನಿವಾರ್ಯತೆ . ಪೈ ಸಹೋದರರು ಆದಷ್ಟು ಹೆಚ್ಚು ಪೌರಾಣಿಕ ಪ್ರಸಂಗಗಳನ್ನೇ ಪ್ರದರ್ಶಿಸಲು ಕಂಟ್ರಾಕ್ಟುದಾರರ ಮನ ಒಲಿಸುತ್ತಿದ್ದರೂ , ಕೆಲವೊಂದು ಕಡೆಗಳಲ್ಲಿ ತುಳು ಪ್ರಸಂಗವೇ ಬೇಕೆಂಬ ಬೇಡಿಕೆಯಿತ್ತು . ಆದರೆ ಈ ಸಂದರ್ಭದಲ್ಲಿ ಪೈ ಸಹೋದರರಿಗೊಂದು ಸಂಕಷ್ಟ ಎದುರಾಯಿತು . ಮೇಳದ ಪ್ರಧಾನ ಭಾಗವತರಾದ ಅಗರಿಯವರು ” ತುಳುನಾಡ ಸಿರಿ ” ತುಳು ಪ್ರಸಂಗವನ್ನು ಬರೆದಿದ್ದರೂ , ಅವರಿಗೆ ತುಳು ಪ್ರಸಂಗಗಳ ಬಗ್ಗೆ ಒಲವಿರಲಿಲ್ಲ . ತಾವು ತುಳು ಪ್ರಸಂಗಗಳಿಗೆ ಭಾಗವತಿಕೆ ಮಾಡಲಾರೆ ಎಂದು ಪೈ ಸಹೋದರರಲ್ಲಿ ಖಡಾ ಖಂಡಿತವಾಗಿ ತಿಳಿಸಿದರು .ಅಗರಿಯವರು ಕಟ್ಟುನಿಟ್ಟಿನ ಶಿಸ್ತಿನ ಭಾಗವತರು . ಒಮ್ಮೆ ಹೇಳಿದ ಮಾತು, ಅದೇ ಅಂತಿಮ . ಪೈಗಳು ಇಕ್ಕಟ್ಟಿಗೆ ಸಿಲುಕಿದರು . ಪ್ರಸಿದ್ಧಿಯ ತುತ್ತ ತುದಿಯಲ್ಲಿದ್ದ ಅಗರಿ ಶ್ರೀನಿವಾಸ ಭಾಗವತರು ಇಲ್ಲದಿದ್ದರೆ ಕಲೆಕ್ಷನ್ ಗೆ ತೊಂದರೆ , ಹಾಗೆಂದು ತುಳು ಪ್ರಸಂಗ ಆಡಿಸದಿದ್ದರೆ ಕಂಟ್ರಾಕ್ಟುದಾರರನ್ನು ಕಳೆದುಕೊಳ್ಳುವ ಅಪಾಯ . ಕೊನೆಗೆ ಅಗರಿಯವರೇ ಪೈಗಳಿಗೆ ಒಂದು ಸಲಹೆ ಕೊಟ್ಟರು . ಪೌರಾಣಿಕ ಪ್ರಸಂಗಗಳಿಗೆ ತಾನೇ ಭಾಗವತಿಕೆ ಮಾಡುವುದು , ತುಳು ಪ್ರಸಂಗಗಳು ಇದ್ದ ದಿನ , ತನ್ನ ಭಾಗವತಿಕೆಯ ಪಡಿಯಚ್ಚಿನಂತಿರುವ ತನ್ನ ಮಗನಾದ ಅಗರಿ ರಘುರಾಮ ಭಾಗವತರನ್ನು ಬರ ಹೇಳುವುದು , ಆ ಮೂಲಕ ಅಗರಿ ಶ್ರೀನಿವಾಸ ಭಾಗವತರ ಕೊರತೆ ಕಾಣದಂತೆ ನಿಭಾಯಿಸುವುದು . ಹೀಗೆ ಆರು ತಿಂಗಳ ಕಾಲ ರಘುರಾಮರು ವೃತ್ತಿಗೆ ರಜೆ ಹಾಕಿ ಸುರತ್ಕಲ್ ಮೇಳದ ತಿರುಗಾಟ ನಡೆಸಿದರು . ಮುಂದಿನ ವರ್ಷ ಅಗರಿಯವರು ಕೂಡ್ಲು ಮೇಳ ಸೇರಿದಾಗ , ರಘುರಾಮ ಭಾಗವತರು ಪೈಗಳ ಒತ್ತಾಯಕ್ಕೆ ಮಣಿದು , ತಾವು 9 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಸರಕಾರೀ ನೌಕರಿಗೆ ರಾಜೀನಾಮೆ ಕೊಟ್ಟು ಸುರತ್ಕಲ್ ಮೇಳಕ್ಕೆ ಪ್ರಧಾನ ಭಾಗವತರಾಗಬೇಕಾಯಿತು . ಹೀಗೆ ತೆಂಕು ತಿಟ್ಟಿಗೆ ಒಬ್ಬ ಪ್ರತಿಭಾವಂತ , ದಕ್ಷ ಭಾಗವತರ ಪ್ರವೇಶ , ಮುಂದೆ ಯಕ್ಷರಂಗಕ್ಕೆ ದೊಡ್ಡ ಲಾಭ ತಂದು ಕೊಟ್ಟಿತು .ಅಗರಿ ರಘುರಾಮ ಭಾಗವತರು ಶುದ್ಧ ಅಗರಿ ಶೈಲಿಯ , ಪರಂಪರೆಯ ಭಾಗವತರು . ತಂದೆಯನ್ನೇ ಗುರುವಾಗಿ ಪಡಕೊಂಡ ಭಾಗ್ಯಶಾಲಿಗಳು . ತಮ್ಮ ತಂದೆಯವರಂತೆಯೇ ಆಶು ಕವಿಗಳು . ಹೆಚ್ಚಿನ ಎಲ್ಲಾ ಪ್ರಸಂಗಗಳ ಪದ್ಯ ಕಂಠ ಪಾಟವಿದ್ದ ಕಾರಣ ಪ್ರಸಂಗ ನೋಡದೇ ಪದ್ಯ ಹೇಳುವುದು ರಘರಾಮರಿಗೆ ಸಿದ್ದಿಸಿತ್ತು.ಉತ್ತಮ ಸ್ಮರಣ ಶಕ್ತಿ , ಕವಿತಾ ಶಕ್ತಿ ಹೊಂದಿದ್ದು , ಛಂದಸ್ಸು , ರಾಗ – ತಾಳಗಳ ಕುರಿತು ಆಳವಾದ ಜ್ಞಾನ ಹೊಂದಿದ್ದರು . ರಘುರಾಮರು , ಈ ಮೊದಲೇ ಉಲ್ಲೇಖಿಸಿದಂತೆ , ಸುರತ್ಕಲ್ ಮೇಳ ಸೇರುವಾಗ ಹೊಸ ಪ್ರಸಂಗಗಳ ಪ್ರವೇಶದ ಕಾಲ . ಹೊಸ ಪ್ರಸಂಗಗಳಾದ ಕಾರಣ , ಇದರ ರಂಗ ನಡೆ , ಪಾತ್ರ ಚಿತ್ರಣ , ನಿರ್ದೇಶನ ಎಲ್ಲವೂ ರಘುರಾಮರ ಹೆಗಲಿಗೆ ಬಿತ್ತು .
ರಘುರಾಮರು ಈ ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸಿ ಪ್ರಸಂಗಗಳು ಯಶಸ್ವಿಯಾಗಲು ಕಾರಣರಾದರು . ಈ ಅವಧಿಯಲ್ಲಿ ತುಳುನಾಡ ಸಿರಿ , ಶನೀಶ್ವರ ಮಹಾತ್ಮೆ , ಪಾಪಣ್ಣ ವಿಜಯ , ಸಾಧ್ವಿ ಸದಾರಮೆ , ತಿರುಪತಿ ಕ್ಷೇತ್ರ ಮಹಾತ್ಮೆ , ಬೇಡರ ಕಣ್ಣಪ್ಪ , ಚಂದ್ರಾವಳಿ ವಿಲಾಸ , ಬಪ್ಪನಾಡು ಕ್ಷೇತ್ರ ಮಹಾತ್ಮೆ , ಕೋಟಿ ಚೆನ್ನಯ , ಕೋರ್ದಬ್ಬು ಬಾರಗ , ಸತಿ ಶೀಲವತಿ , ಕಡುಗಲಿ ಕುಮಾರ ರಾಮ , ನಾಟ್ಯರಾಣಿ ಶಾಂತಲಾ , ಶೀಂತ್ರಿದ ಚೆನ್ನಕ್ಕೆ , ಬಲ್ಮೆದ ಭಟ್ರ್ , ಸರ್ಪ ಸಂಕಲೆ , ರಾಜಾ ಯಯಾತಿ ಮುಂತಾದ ಪ್ರಸಂಗಗಳು ಸುರತ್ಕಲ್ ಮೇಳದಲ್ಲಿ ಜಯಭೇರಿ ಬಾರಿಸಲು ಅಗರಿಯವರ ಕೊಡುಗೆ ಅಪಾರವಾಗಿದೆ . ಸುರತ್ಕಲ್ ಮೇಳದಲ್ಲಿ ಪ್ರಾರಂಭದ ಕಾಲದಲ್ಲಿ ರಾತ್ರಿಯಿಡೀ ರಘುರಾಮ ಭಾಗವತರು ಒಬ್ಬರೇ ಭಾಗವತಿಕೆಯನ್ನು ಮಾಡುತ್ತಿದ್ದರು .ಮುಂದಕ್ಕೆ ಪದ್ಯಾಣ ಗಣಪತಿ ಭಟ್ಟರು ಸುರತ್ಕಲ್ ಮೇಳ ಸೇರಿ ರಘುರಾಮ ಭಾಗವತರಿಗೆ ಸಹಕಾರಿಯಾದರು . ಅಗರಿ ರಘುರಾಮ ಭಾಗವತರ ಭಾಗವತಿಕೆಯು ಅಗರಿ ಶ್ರೀನಿವಾಸ ಭಾಗವತರದ್ದೇ ಶೈಲಿ . ದೊಡ್ಡ ಅಗರಿಯವರು ಕೋಪಿಷ್ಟ ಸ್ವಭಾವದವರಾದರೆ , ರಘುರಾಮರು ಅಷ್ಟೇ ಮೃದು ಸ್ವಭಾವ ಹೊಂದಿದ್ದು ಕಲಾವಿದರಲ್ಲಿ ಸ್ನೇಹಿತರಂತೆಯೇ
ವರ್ತಿಸುವ ಸ್ವಭಾವದವರು . ಕಲಾವಿದರಿಗೆ ಹೇಳಿ ಕೊಡುವ , ತಿದ್ದುವ ಗುಣ ಹೊಂದಿದ್ದರು . ದೊಡ್ಡ ಸಾಮಗರು , ಶೇಣಿ , ರಾಮದಾಸ ಸಾಮಗ , ಕುಂಬ್ಳೆ , ಕೊಳ್ಯೂರು , ಗೋವಿಂದ ಭಟ್ಟ , ಜಲವಳ್ಳಿ , ವಾಸುದೇವ ಸಾಮಗ , ಶಿವರಾಮ ಜೋಗಿ , ಪೂಕಳ , ಕುಡ್ತಡ್ಕ , ಪಾತಾಳ , ವಿಟ್ಲ ಜೋಷಿ , ಎಂ.ಕೆ.ರಮೇಶಾಚಾರ್ಯ , ವೇಣೂರು ಸುಂದರಾಚಾರ್ಯ , ಕೊಕ್ಕಡ ಈಶ್ವರ ಭಟ್ , ರಂಥಹ ದಿಗ್ಗಜರನ್ನು ರಂಗದಲ್ಲಿ ಕುಣಿಸಿದವರು . ವರದರಾಯ ಪೈಗಳಿಗೆ ಅತೀವವಾದ ಗೌರವ ನೀಡುತ್ತಿದ್ದಂತೆ , ಪೈಗಳೂ ರಘುರಾಮರಲ್ಲಿ ಅದೇ ರೀತಿಯಲ್ಲಿ ಇದ್ದವರು . ಸುರತ್ಕಲ್ ಮೇಳದ ಸ್ವಂತ ಪ್ರದರ್ಶನವಾದರೆ , ಟಿಕೇಟ್ ಕೌಂಟರ್ ತೆರೆಯುವಾಗ , ಪ್ರಥಮವಾಗಿ ರಘುರಾಮರೇ ಕೌಂಟರ್ ನಲ್ಲಿ ಕುಳಿತು ಟಿಕೇಟ್ ನೀಡಬೇಕು . ಒಂದು ಘಂಟೆಯ ನಂತರವೇ ಪೈಗಳು ಕುಳಿತುಕೊಳ್ಳುವುದು .
ಒಂದು ಕ್ಯಾಂಪ್ ನಿಂದ ಇನ್ನೊಂದು ಕ್ಯಾಂಪ್ ಗೆ ತೆರಳುವಾಗ ರಘುರಾಮರು ಪೈಗಳೇ ಚಲಾಯಿಸುವ ಜೀಪಿನಲ್ಲೇ ಇರಬೇಕು , ಪೈಗಳೊಂದಿಗೇ ಬೆಳಗ್ಗಿನ ಉಪಾಹಾರ ಸೇವಿಸಬೇಕು . ಅಷ್ಟರ ಮಟ್ಟಿಗೆ ಪೈಗಳಿಗೆ ರಘುರಾಮರ ಮೇಲಿರುವ ಗೌರವ. ಪದ್ಯಾಣರನ್ನು ತಮ್ಮ ಶಿಷ್ಯರೆಂದೇ ಪರಿಗಣಿಸಿ ಭಾಗವತಿಕೆಗೆ ಉತ್ತಮ ಅವಕಾಶ ಕಲ್ಪಿಸಿ ಕೊಡುತ್ತಿದ್ದರು .ಪದ್ಯಾಣರೂ ಸಹಾ ರಘುರಾಮರನ್ನು ” ಗುರುಗಳೇ ” ಎಂದೇ ಸಂಬೋದಿಸುವುದಾಗಿತ್ತು . ಸತ್ಯ ಹರಿಶ್ಚಂದ್ರ ,ನಳದಮಯಂತಿ , ಶನೀಶ್ವರ ಮಹಾತ್ಮೆ ಮುಂತಾದ ಪೌರಾಣಿಕ ಪ್ರಸಂಗಗಳನ್ನು ತುಳು ಭಾಷೆಯಲ್ಲಿ ಪ್ರದರ್ಶಿಸಲು ಯೋಚಿಸಿ , ಸೂಕ್ತ ನಿರ್ದೇಶನ ನೀಡಿ ಅದರಲ್ಲಿ ಯಶಸ್ವಿಯೂ ಆಗಿ , ಸುರತ್ಕಲ್ ಮೇಳದಲ್ಲಿ ಇದೊಂದು ಹೊಸತನದ ಪ್ರಯೋಗ ಎನಿಸಿತ್ತು . ರಘುರಾಮರ ಭಾಗವತಿಕೆ ಆಕರ್ಷಕವಾಗಿತ್ತು .ಪ್ರೇಕ್ಷಕರ ಅಪಾರ ಮೆಚ್ಚುಗೆಗೆ ಪಾತ್ರವಾಗಿತ್ತು . ಕಲಾವಿದರ ಮನೋಧರ್ಮವನ್ನರಿತು , ಪಾತ್ರಗಳ ಸಂದರ್ಭಕ್ಕನುಗುಣವಾಗಿ , ರಸೋತ್ಕರ್ಷವಾಗುವ ವಾತಾವರಣ ನಿರ್ಮಿಸುವಲ್ಲಿ ರಘುರಾಮರು ಪರಿಣತರಾಗಿದ್ದರು . ಸುರತ್ಕಲ್ ಮೇಳದಲ್ಲಿ ಜಯಭೇರಿ ಭಾರಿಸಿದ ರಾಜಾ ಯಯಾತಿ ಯ ಇಂದು ದೂರವಿರುವೆ | ಕುಡಿಯದೆ | ಬಂದರೆ ಬಳಿ ಬರುವೆ , ಇಂದಿನ ಜಲಕ್ರೀಡೆ | ಮನದಾನಂದವಾಯ್ತು ನೋಡೆ | , ಶನೀಶ್ವರ ಮಹಾತ್ಮೆಯ ಘೋಡಾ ಸುಂದರ್ ಹೈ , ನಳ ದಮಯಂತಿಯ ವರ ಕಾರ್ಕೋಟಕ ಕಚ್ಚಿದ ದೆಸೆಯಿಂ , ದೇವಿ ಮಹಾತ್ಮೆಯ ಯಾತಕೆ ಜನ್ಮವನಿತ್ತೆ ,
ಸಿಕ್ಕಿದಿರಿ ಕೈಯೊಳಗೆ ಮುಂತಾದ ಪದ್ಯಗಳು ನಿತ್ಯ ನೂತನ ಹಾಗೂ ಒಮ್ಮೆ ಕೇಳಿದವರು ಮತ್ತೆಂದೂ ಮರೆಯಲಾಗದ ಅನುಭೂತಿ ನೀಡಿದ್ದವು . ಅಗರಿಯವರ ಈ ಶೈಲಿಯ ಭಾಗವತಿಕೆ ಕೇಳಲೆಂದೇ ಎಷ್ಟೋ ದೂರದ ಊರುಗಳಿಂದ ಪ್ರೇಕ್ಷಕರು ನೆರೆಯತ್ತಿದ್ದುದು ಈಗ ಇತಿಹಾಸ . ರಘುರಾಮರು ಶೃಂಗಾರ , ಕರುಣ , ಶಾಂತ , ಹಾಸ್ಯರಸಗಳಲ್ಲಿ ಹಾಡುವಾಗ ಒಂದು ಅಲೌಕಿಕ ವಾತಾವರಣವೇ ಸೃಷ್ಟಿಯಾಗುತ್ತಿತ್ತು . ಸುರುಟಿ , ಮಧ್ಯಮಾವತಿ , ಶಂಕರಾಭರಣ , ಪೀಲು , ಅರಭಿ , ಮೋಹನ , ಆನಂದಭೈರವಿ , ಹಿಂದೋಳ , ಪಂತುವರಾಳಿ , ಭೀಂಪಲಾಸ್ ರಾಗಗಳಲ್ಲಿ ಅಪಾರ ಸಿದ್ಧಿ ಹೊಂದಿದ್ದು , ಪ್ರೇಕ್ಷಕರೂ ಅತೀವವಾಗಿ ಮೆಚ್ಚುವ ಆಕರ್ಷಣೆಯಾಗಿತ್ತು . ರಂಗದ ನಡೆಯ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ರಘುರಾಮರು , ಈ ವಿಚಾರದಲ್ಲಿ ಮಾತ್ರ ತಮ್ಮ ತಂದೆಯವರಂತೆ , ಬಿಗು ನಿರ್ಧಾರ ತಾಳುತ್ತಿದ್ದರು . ಕಳೆದ ವರ್ಷ ವರದರಾಯ ಪೈಯವರ ಪ್ರಥಮ ಸಂಸ್ಮರಣೆಯಂದು ಸಂಮಾನಿತರಾಗಿದ್ದಾಗ ನಾನೂ ವೇದಿಕೆಯಲ್ಲಿ ಇದ್ದೆ . ಆಗ ನನ್ನೊಂದಿಗೆ ಮಾತಾಡುತ್ತಾ ಕುಡ್ವರೇ , ಭಾಗವತರು ಎಂದರೆ ಪುಸ್ತಕ ನೋಡದೇ ಪದ್ಯ ಹೇಳುವವ ಆದರೆ ಮಾತ್ರ ಆ ಸ್ಥಾನಕ್ಕೆ ಭೂಷಣ. ಸಂದರ್ಭೋಚಿತವಲ್ಲದ ಕಡೆ ಪದ್ಯಗಳನ್ನು ಆಲಾಪನೆಯ ಮೂಲಕ ಲಂಬಿಸುವುದು ಒಂದು ದೊಡ್ಡ ದೋಷ . ಪಾತ್ರಗಳ ಮನೋಭಾವವನ್ನು ಅರಿತು ಭಾಗವತರು ಅದೇ ಭಾವದಲ್ಲಿ ಪದ್ಯ ಹೇಳಿದರೆ , ವೇಷಧಾರಿಯಲ್ಲೂ ಆ ಭಾವ ಮೂಡಿ ಪ್ರಸಂಗ ಯಶಸ್ವಿಯಾಗುತ್ತದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು .
ಅಗರಿ ರಘುರಾಮ ಭಾಗವತರ ವಿದ್ವತ್ತನ್ನು ಲಕ್ಷಿಸಿ ನೂರಾರು ಕಡೆ ಸಂಮಾನ ನಡೆದಿವೆ . ವಿಟ್ಲ ಜೋಷಿ ಪ್ರಶಸ್ತಿ , ಕುರಿಯ ಪ್ರಶಸ್ತಿ , ಉಳ್ಳಾಲ ಶ್ರೀನಿವಾಸ ಮಲ್ಯ ಪ್ರಶಸ್ತಿ , ತ್ರಿಕಣ್ಣೇಶ್ವರ ಪ್ರಶಸ್ತಿ ,ಪದ್ಯಾಣ ಪ್ರಶಸ್ತಿ , ಪೊಲ್ಯ ದೇಜಪ್ಪ ಶೆಟ್ಟಿ ಪ್ರಶಸ್ತಿ , ಜಗದಂಬಾ ಯಕ್ಷಗಾನ ಪ್ರಶಸ್ತಿ , ಮುಂಬೈ ,ಕರಾವಳಿ ಯಕ್ಷಗಾನ ಪ್ರಶಸ್ತಿ , ಯಕ್ಷಲಹರಿ ಪ್ರಶಸ್ತಿ ಯಂಥಹ ಹಲವಾರು ಪ್ರಶಸ್ತಿ ಪಡೆದಿದ್ದಾರೆ . 2015 ರಲ್ಲಿ ಮೂಡಬಿದಿರೆಯ ನನ್ನ ಸಂಚಾಲಕತ್ವದ ಯಕ್ಷಸಂಗಮ ಪ್ರಶಸ್ತಿ ಯನ್ನೂ ಸ್ವೀಕರಿಸಿದ್ದಾರೆ . ಅಂದು ಮೂಡಬಿದಿರೆಯಲ್ಲಿ ಭಾಗವತಿಕೆಯನ್ನೂ ಮಾಡಿ ಪ್ರೇಕ್ಷಕರನ್ನು ರಂಜಿಸಿದ್ದರು . ಅಂದು ನಾನು ಅವರಿಗೆ ಕರೆ ಮಾಡಿ ಸಂಮಾನ ಸ್ವೀಕರಿಸಬೇಕು ಎಂದಾಗ ಕುಡ್ವರೇ , ನನಗಿಂದು ನಿಮ್ಮ ಕರೆ ಕೇಳಿ ತುಂಬಾ ಸಂತೋಷವಾಯಿತು . ನೀವು ಸಂಮಾನ ಮಾಡುತ್ತೀರಿ ಎಂಬ ಸಂತೋಷಕ್ಕಿಂತಲೂ , ಇಷ್ಟು ವರ್ಷಗಳ ನಂತರವೂ ನೀವು ನನ್ನ ನೆನಪು ಉಳಿಸಿಕೊಂಡಿದ್ದೀರಲ್ಲಾ ? ಅದೇ ನನಗೆ ದೊರೆತ ದೊಡ್ಡ ಸಂಮಾನ ಎಂದಿದ್ದರು . 2006 ರಿಂದ ತಮ್ಮ ಸಹೋದರರು ಹಾಗೂ ಮಕ್ಕಳ ಸಹಕಾರದಲ್ಲಿ ತಮ್ಮ ತಂದೆ ಅಗರಿ ಶ್ರೀನಿವಾಸ ಭಾಗವತರ ಸಂಸ್ಮರಣೆ ಕಾರ್ಯಕ್ರಮ ಹಾಗೂ “ಅಗರಿ ಪ್ರಶಸ್ತಿ ” ಯನ್ನು ಪ್ರತೀವರ್ಷ ತಮ್ಮ ಪುತ್ರರ ಸಂಸ್ಥೆಯಾದ ” ಅಗರಿ ಎಂಟರ್ ಪ್ರೈಸಸ್ ” ಮೂಲಕ ನೀಡುವ ಸಂಪ್ರದಾಯ ಪ್ರಾರಂಭಿಸಿದ್ದರು . ” ಅಗರಿ ಶೈಲಿ ” ಯು ಮುಂದಿನ ಪೀಳಿಗೆಗೂ ಹರಿದು ಹೋಗಬೇಕು ಎಂಬ ಉದ್ದೇಶದಿಂದ , ಅಗರಿಶೈಲಿಯ ಭಾಗವತಿಕೆ ಹಾಡುವವರಿಗೆ , ಕಲಿಯುವವರಿಗೆ ಅಪಾರ ಪ್ರೋತ್ಸಾಹ ನೀಡುತ್ತಿದ್ದರು .
84 ವರ್ಷದ ಅಗರಿ ರಘುರಾಮ ಭಾಗವತರು 3 ಮಂದಿ ಸುಪುತ್ರರಾದ ಅಗರಿ ರಾಘವೇಂದ್ರ ರಾವ್ , ಶ್ರೀನಿವಾಸ ರಾವ್ ,ವಾದಿರಾಜ ರಾವ್ ಹಾಗೂ ಸುಪುತ್ರಿ ಶ್ರೀಮತಿ ಮಂಗಳಾ ಹಾಗೂ ಅಳಿಯ ಶೇಷಶಯನ ಕಾರಿಂಜೆ ಸಹೋದರರಾದ ಪ್ರಸಂಗಕರ್ತ ಅಗರಿ ಭಾಸ್ಕರ ರಾವ್ , ಅಗರಿ ದಿನೇಶ್ ರಾವ್ ಹಾಗೂ ಅಪಾರ ಬಂಧುಬಳಗ , ಅಭಿಮಾನಿಗಳನ್ನು ಅಗಲಿದ್ದಾರೆ . ಅಂತಿಮ ಸಂಸ್ಕಾರವು ಇಂದು ಸಂಜೆ 4.30 ಕ್ಕೆ ಸುರತ್ಕಲ್ ನ ಸ್ವಗೃಹದಲ್ಲಿ ಜರಗಲಿದೆ . ಅಗರಿ ರಘುರಾಮ ಭಾಗವತರಿಗೆ ಅಂತಿಮ ನಮನ ಸಲ್ಲಿಸುತ್ತಾ ಅವರಿಗೆ ಸದ್ಗತಿ ದೊರಕಲಿ ಎಂದು ಪ್ರಾರ್ಥಿಸುತ್ತೇನೆ .
Leave A Reply