ಮುಳುಗುವ ಹಡಗಿನಲ್ಲಿ ತೂತು ಕೊರೆದ ಪಾಲಿಕೆಯ ಕೊನೆಯ ಬಜೆಟ್!!
ಹತ್ತು ರೂಪಾಯಿ ಆದಾಯ ಇರುವ ಒಬ್ಬ ವ್ಯಕ್ತಿ ಹದಿಮೂರು ರೂಪಾಯಿ ಖರ್ಚು ಮಾಡಿದರೆ ಅವನನ್ನು ಏನು ಹೇಳಬೇಕೋ ಅದನ್ನೇ ಇವತ್ತು ಮಂಗಳೂರು ಮಹಾನಗರ ಪಾಲಿಕೆಗೆ ಹೇಳಬಹುದು. ಹಾಗಂತ ಜೀವನದಲ್ಲಿ ಕೆಲವೊಮ್ಮೆ ಅನಾರೋಗ್ಯದಿಂದ ಹಾಸಿಗೆ ಹಿಡಿದು ಮನೆಯ ಯಜಮಾನ ಮಲಗಿದರೆ ಆದಾಯಕ್ಕಿಂತ ಖರ್ಚು ಹೆಚ್ಚಾಗುವುದು ಸಹಜ. ಆದರೆ ಒಬ್ಬ ಆಲಸಿ ಯಜಮಾನ ಕೇವಲ ಟೈಂಪಾಸ್ ಮಾಡುತ್ತಾ ದಿನ ದೂಡುತ್ತಾ ಇದ್ದರೆ ಆಗ ಖರ್ಚು ನಿಶ್ಚಿಂತವಾಗಿ ಹೆಚ್ಚಾಗುತ್ತದೆ ಮತ್ತು ಆದಾಯ ಖಂಡಿತವಾಗಿ ಕಡಿಮೆ ಇದ್ದೇ ಇರುತ್ತದೆ. ಪಾಲಿಕೆ ಕಳೆದ ನಾಲ್ಕೈದು ವರ್ಷಗಳಿಂದ ಅನಾರೋಗ್ಯಕ್ಕಿಂತ ಹೆಚ್ಚಾಗಿ ವಿಲಾಸಿ ಜೀವನದಲ್ಲಿ ಕಾಲ ಕಳೆದ ಕಾರಣ ಖರ್ಚು ಹೆಚ್ಚಾಗಿದೆ ಮತ್ತು ಆದಾಯದ ಮೂಲ ಗೊತ್ತಿದ್ದರೂ ಕಠಿಣವಾಗಿ ದುಡಿಯದ ಪರಿಣಾಮವಾಗಿ ಆದಾಯದಲ್ಲಿ ಕೊರತೆ ಕಂಡು ಬಂದಿದೆ. ಒಟ್ಟಿನಲ್ಲಿ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಈ ಬಾರಿಯ ಬಜೆಟ್ ಮಂಡಿಸಲಾಗಿದೆ. ಕಾಂಗ್ರೆಸ್ ತನ್ನ ಅಧಿಕಾರಾವಧಿಯ ಕೊನೆಯ ಬಜೆಟನ್ನು ಕೊರತೆ ಬಜೆಟಾಗಿ ಮಂಡಿಸಿ ಚುನಾವಣೆಯ ಹೊಸ್ತಿಲಿಗೆ ಹೋಗಿ ನಿಂತಿದೆ. ಸದ್ಯ ಈ ಬಾರಿಯ ಬೇಸಿಗೆ ಮತ್ತು ಮಳೆಗಾಲದಲ್ಲಿ ಪಾಲಿಕೆಯಲ್ಲಿ ಯಾವುದೇ ಚುನಾಯಿತ ಸರಕಾರ ಇರುವುದಿಲ್ಲವಾದ್ದರಿಂದ ಸೆಪ್ಟೆಂಬರ್ ಅಷ್ಟರಲ್ಲಿ ಜನರಿಗೆ ಎಲ್ಲವೂ ಮರೆತು ಹೋಗಿರುತ್ತದೆ ಎನ್ನುವ ಧೈರ್ಯದಲ್ಲಿ ಕಾಟಾಚಾರಕ್ಕೆ ಲೇಖಾನುದಾನವನ್ನು ಮಂಡಿಸಿ ಕಾಂಗ್ರೆಸ್ಸಿಗರು ಕೈ ತೊಳೆದುಕೊಂಡಿದ್ದಾರೆ. ಅಂಕಿ ಅಂಶಗಳ ಆಟದಲ್ಲಿ ಏನೇನೋ ತೋರಿಸಿ ಒಂದು ಕೊರತೆ ಬಜೆಟ್ ಮಂಡಿಸುವಲ್ಲಿ ಯಶಸ್ವಿಯಾಗಿರುವ ಕಾಂಗ್ರೆಸ್ ಅದೃಷ್ಟ ಇದ್ದರೆ ಮುಂದಿನ ಬಾರಿ ಮತ್ತೆ ಬರುತ್ತೇವೆ ಎನ್ನುವ ನಿರ್ಧಾರಕ್ಕೆ ಬಂದಂತೆ ಇದೆ.
ಬಿಲ್ ಪಾವತಿ ಆಗದೇ ಇರುವುದೇ 25 ಕೋಟಿ ಇದೆ…
ಇವರು ಕೆಲವು ಕಡೆ ಜಾಣ ಮರೆವು ತೋರಿಸುವ ಮೂಲಕ ಜನರಿಗೆ ಏನೂ ಗೊತ್ತಾಗುವುದಿಲ್ಲ ಎಂದು ಅಂದುಕೊಂಡಿದ್ದಾರೆ. ಮೊದಲನೇಯದಾಗಿ ಹಲವು ವಾರ್ಡುಗಳಲ್ಲಿ ಆಗಿರುವ ಕಾಮಗಾರಿಯ ಬಿಲ್ ಗುತ್ತಿಗೆದಾರರಿಗೆ ಇನ್ನೂ ಪಾವತಿಯಾಗಿಲ್ಲ. ಅಂತವುದೇ 25 ಕೋಟಿ ಬಾಕಿ ಇದೆ. ಅದನ್ನು ಕೂಡ ಇಲ್ಲಿ ತೋರಿಸಿದರೆ ಬಜೆಟ್ ಇನ್ನು ದೊಡ್ಡ ಕೊರತೆಯ ಲೆವೆಲ್ಲಿಗೆ ಬರುತ್ತಿತ್ತು. ಇವರು ಸೇರಿಸಲು ಹೋಗಲಿಲ್ಲ. 2018-2019 ರಲ್ಲಿ ಇವರು ಗೊತ್ತಿರುವ ಎಲ್ಲಾ ಮೂಲಗಳನ್ನು ಸೇರಿಸಿದರೂ ಇವರು ಸಂಗ್ರಹಿಸಲಿರುವ ಮೊತ್ತ 642.90 ಕೋಟಿ. ಅದೇ 677.27 ಕೋಟಿ ರೂಪಾಯಿ ಖರ್ಚಿದೆ ಎಂದು ತೋರಿಸಲಾಗಿದೆ. ಇವರು ಬಜೆಟ್ ಈಗ ಮಂಡಿಸಿದರೂ ಅದು ಜಾರಿಗೆ ಬರುವುದು ಎಪ್ರಿಲ್ ಮೊದಲ ವಾರದಿಂದ. ಅದಕ್ಕೆ ಇನ್ನು ಭರ್ತಿ ಎರಡು ತಿಂಗಳು ಇದೆ. ಈ ಎರಡು ತಿಂಗಳಲ್ಲಿ ಆಗುವ ಕೆಲಸದ ಲೆಕ್ಕವನ್ನು ಇವರು ಇಟ್ಟಿಲ್ಲ. ಆದ್ದರಿಂದ ಎಲ್ಲವನ್ನು ಸೇರಿಸಿದರೆ 35 ಕೋಟಿ ಇನ್ನು ಬೇಕಾಗಬಹುದು.
ಹಾಗಾದರೆ ಆದಾಯ ನಿಜಕ್ಕೂ ಕಡಿಮೆ ಆಗಲು ಏನು ಕಾರಣ. ಮೊದಲನೇಯದಾಗಿ ಸಂಶಯವೇ ಇಲ್ಲ. ಇವರಿಗೆ ಯಾರ ತಿಜೋರಿಗೆ ಕೈ ಹಾಕಬೇಕು ಎಂದು ಗೊತ್ತೆ ಇಲ್ಲ. ಮಂಗಳೂರಿನಲ್ಲಿ ಮತ್ತೆ ಕಟ್ಟಡ ನಿರ್ಮಾಣಕಾರರು ತಲೆ ಎತ್ತುತ್ತಿದ್ದಾರೆ. ಪಾಲಿಕೆಯ ಹತ್ತಿರದಲ್ಲಿಯೇ ಕೆಲವು ಹೆಜ್ಜೆಗಳ ಅಂತರದಲ್ಲಿ ಹೊಸ ಕಟ್ಟಡವೊಂದು ಇತ್ತೀಚೆಗೆ ಭೂಮಿಪೂಜೆ ನೆರವೇರಿಸಿಕೊಂಡಿತ್ತು. ಅಲ್ಲಿ ಚದರ ಅಡಿಗೆ ಬೆಲೆ ಹದಿನೆಂಟು ಸಾವಿರ ಎಂದು ಹೇಳಲಾಗುತ್ತಿದೆ. ನೀವು ಅವರಿಂದ ತೆಗೆದುಕೊಳ್ಳುವ ಕಟ್ಟಡ ನಿರ್ಮಾಣ ಪರವಾನಿಗೆ ಶುಲ್ಕ ಎಷ್ಟು? ಕೇವಲ ಜುಜುಬಿ ಮೊತ್ತ. ಒಬ್ಬ ಕೋಟ್ಯಾಂತರ ರೂಪಾಯಿಯ ಕಟ್ಟಡ ಕಟ್ಟುವಾಗ ನೀವು ಅವನಿಂದ ಪಾಲಿಕೆಗೆ ಬರಬೇಕಾದ ಆದಾಯವನ್ನು ಹೆಚ್ಚಿಸದಿದ್ದರೆ ಬಜೆಟ್ ಕೊರತೆ ಆಗದೇ ಇನ್ನೇನು ಆಗುತ್ತದೆ? ಬೇಕಾದರೆ ಸ್ವತಂತ್ರವಾಗಿ ಮನೆ ಕಟ್ಟುವ ಮಧ್ಯಮ ವರ್ಗದವನ ಬಳಿ ನೀವು ಹಣ ಹೆಚ್ಚು ಕೇಳಬೇಡಿ. ಹಾಗಂತ ಈ ಶ್ರೀಮಂತ ಬಿಲ್ಡರ್ ಗಳ ಬಗ್ಗೆ ಕನಿಕರ ಯಾಕೆ?
ಸರಕಾರದ ಅನುದಾನ ನಂಬಿ ಜೋಳಿಗೆ ರೆಡಿ..
ಇನ್ನು ಜಾಹೀರಾತು ಹೋರ್ಡಿಂಗ್ ಗಳ ಏಜೆನ್ಸಿಗಳಿಂದ ನೀವು ಹಣ ಸುಲಿದರೂ ಯಾವ ನಾಗರಿಕ ಕೂಡ ಮಾತನಾಡಲಾರ. ಆದರೆ ನೀವು ಹಾಗೆ ಮಾಡುತ್ತಿಲ್ಲ, ಯಾಕೆ? ಇನ್ನು ರೋಡ್ ಕಟ್ಟಿಂಗ್ ಮಾಡುವವರ ಬಳಿ ನೀವು ಯಾವುದೇ ದಾಕ್ಷಿಣ್ಯ ಇಟ್ಟುಕೊಳ್ಳಬೇಡಿ. ಅವರು ಡ್ರೈನೇಜ್, ವಿದ್ಯುತ್, ನೀರಿನ ಕನೆಕ್ಷನ್ ಎಂದು ರೋಡ್ ಕಟ್ಟಿಂಗ್ ಗೆ ಕೇಳುವಾಗ ಅವರಿಂದ ಸರಿಯಾಗಿ ವಸೂಲಾತಿ ನಡೆಯಲಿ. ಇನ್ನು ಉದ್ದಿಮೆ ಪರವಾನಿಗೆ, ಉದ್ದಿಮೆ ನವೀಕರಣ ಶುಲ್ಕ ಹೆಚ್ಚು ಮಾಡಿ, ಯಾರು ಬೇಡಾ ಹೇಳಿದವರು? ಹೀಗೆ ಹಣ ಬರುವ ಆದಾಯ ಮೂಲವನ್ನು ಪತ್ತೆ ಹಚ್ಚಬೇಕಾಗಿರುವ ಜವಾಬ್ದಾರಿ ನಿಮ್ಮ ಮೇಲಿದೆ. ಇವರು ಹೆಚ್ಚಾಗಿ ಈಗ ನಂಬಿಕೊಂಡಿರುವುದು ಸರಕಾರದ ಅನುದಾನವನ್ನು. ನಿರೀಕ್ಷಿತ ಆದಾಯದ 50% ಸರಕಾರದ ಅನುದಾನದಿಂದಲೇ ಬರಬೇಕಿದೆ. ಅದು ಎಲ್ಲಿಯಾದರೂ ಕೈ ಕೊಟ್ಟರೆ ಪಾಲಿಕೆಯ ಗತಿ ಗೋವಿಂದ!!
Leave A Reply