ತೆರಿಗೆ, ಬಿಲ್ ವಸೂಲಿ ಮಾಡುವುದು ಪಾಲಿಕೆಯ ಹಕ್ಕು, ಭಿಕ್ಷೆ ತೆಗೆದುಕೊಂಡ ಹಾಗೆ ಅಂಗಲಾಚಬಾರದು!!
ನೇರವಾಗಿ ತಿನ್ನುವುದನ್ನು ಬಿಟ್ಟು ಸುತ್ತಿ ಬಳಸಿ ತಿನ್ನುವುದಕ್ಕೆ ಮಂಗಳೂರು ಮಹಾನಗರ ಪಾಲಿಕೆಯಿಂದ ಕಲಿಯಬೇಕು. ಇತ್ತೀಚೆಗೆ ಮಂಗಳೂರು ಮಹಾನಗರ ಪಾಲಿಕೆಯ ಕಮೀಷನರ್ ಮಂಗಳೂರು ನಗರದ ಕೆಲವು ಅಂಗಡಿಗಳ ಮೇಲೆ ರೇಡ್ ಮಾಡುತ್ತಿದ್ದಾರೆ. ಅವರು ರೇಡ್ ಮಾಡುತ್ತಿರುವುದರ ಬಗ್ಗೆ ನನ್ನ ಆಕ್ಷೇಪಗಳಿಲ್ಲ. ಅವರು ರೇಡ್ ಮಾಡಲಿ, ಅವರು ರೇಡ್ ಮಾಡುತ್ತಿರುವ ಉದ್ದೇಶವಾದರೂ ಏನು? ಅಂಗಡಿಯವರು ಸರಿಯಾಗಿ ಉದ್ದಿಮೆ ಪರವಾನಿಗೆ ನವೀಕರಣ ಮಾಡುತ್ತಿಲ್ಲ. ಕಟ್ಟಡ ತೆರಿಗೆ ಕಟ್ಟುತ್ತಿಲ್ಲ, ನೀರಿನ ಬಿಲ್ ಕಟ್ಟುತ್ತಿಲ್ಲ, ಇಷ್ಟೇ ತಾನೆ. ಇದನ್ನು ಮಾಡಲು ಅವರು ರೇಡ್ ಮಾಡಲೇ ಬೇಕಂತಿಲ್ಲ. ಅವರು ತಮ್ಮ ಚೇಂಬರಿನಲ್ಲಿಯೇ ಕುಳಿತುಕೊಂಡು ಹಾಗೆ ಪಾಲಿಕೆಗೆ ತೆರಿಗೆ ಹಿಡಿಸುತ್ತಿರುವವರ ಮೇಲೆ ಕ್ರಮ ತೆಗೆದುಕೊಳ್ಳಬಹುದು. ಅದು ಹೇಗೆ?
ಅಧಿಕಾರಿಗಳಿಗೆ ಗೊತ್ತೆ ಇರುತ್ತದೆ..
ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಅದಾಯ ವಸೂಲಿಯ ವಿಷಯ ಬಂದಾಗ ಮೂರು ಸ್ತರದ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಕ್ರಮಬದ್ಧವಾಗಿ ನಿರ್ವಹಿಸಿದರೆ ಕಮೀಷನರ್ ಅವರು ಹೀಗೆ ರೇಡ್ ಮಾಡುವಂತಹ ಅಗತ್ಯವೂ ಇಲ್ಲ. ಆದಾಯ ವಸೂಲಿಯಲ್ಲಿ ಮೋಸವೂ ಆಗುವುದಿಲ್ಲ. ಉದಾಹರಣೆಗೆ ಉದ್ದಿಮೆ ಪರವಾನಿಗೆ ಮಾಡುವುದು ಅಥವಾ ಅದರ ನವೀಕರಣವನ್ನು ಮಾಡುವುದು ಎಲ್ಲಾ ಬರುವುದು ಹೆಲ್ತ್ ಇನ್ಸಪೆಕ್ಟರ್ ಅವರ ಕೆಳಗೆ. ಹಾಗೆ ನೀರಿನ ಬಿಲ್ ಸಂಗ್ರಹದ ಜವಾಬ್ದಾರಿ ಎಲ್ಲ ಬರುವುದು ನೀರಿನ ವಿಭಾಗದ ಜ್ಯೂನಿಯರ್ ಇಂಜಿನಿಯರ್ಸ್ ಅವರ ಅಧೀನದಲ್ಲಿ. ಇನ್ನು ಕಟ್ಟಡ ತೆರಿಗೆ ಬರುವುದು ಬಿಲ್ ಕಲೆಕ್ಟರ್ ಅವರ ವ್ಯಾಪ್ತಿಯಲ್ಲಿ. ಈ ಮೂರು ಸ್ತರದ ಅಧಿಕಾರಿಗಳ ಕೆಲಸವೇ ಅವರಿಗೆ ಸಂಬಂಧಪಟ್ಟ ಜವಾಬ್ದಾರಿಗಳನ್ನು ಸರಿಯಾಗಿ ನಿರ್ವಹಿಸುವುದು. ಅದಕ್ಕಾಗಿ ಅವರಿಗೆ ಮಧ್ಯಾಹ್ನ ಮೂರು ಗಂಟೆಗೆ ಪಾಲಿಕೆಯ ತಮ್ಮ ಕಚೇರಿಗೆ ಬಂದರೆ ಸಾಕು ಎನ್ನುವ ಅವಕಾಶ ಕೊಡಲಾಗಿದೆ. ಒಬ್ಬೊಬ್ಬ ಇಂತಹ ಅಧಿಕಾರಿಗಳಿಗೆ ಏಳೆಂಟು ವಾರ್ಡ್ ಗಳನ್ನು ಹಂಚಿ ಕೊಡಲಾಗಿದೆ. ಅವರು ತಮ್ಮ ವ್ಯಾಪ್ತಿಯಲ್ಲಿ ಬರುವ ಅಂಗಡಿಗಳ ಪರವಾನಿಗೆ ನವೀಕರಣ ಆಗಿದೆಯಾ, ಕಟ್ಟಡ ತೆರಿಗೆ ಸರಿಯಾಗಿ ಸಂಗ್ರಹವಾಗುತ್ತದೆಯಾ ಅಥವಾ ನೀರಿನ ಬಿಲ್ ಸರಿಯಾಗಿ ಬರುತ್ತಿದೆಯಾ ಎಂದು ನೋಡಬೇಕು. ಈಗ ಉದಾಹರಣೆಗೆ ಬಂದರು ವಾರ್ಡಿನಲ್ಲಿ ಒಂದು ಅಂಗಡಿಯವರು ಟ್ರೇಡ್ ಲೈಸೆನ್ಸ್ ಇಲ್ಲದೆಯೇ ವ್ಯಾಪಾರ ಮಾಡುತ್ತಿದ್ದಾರೆ ಎಂದು ಅಂದುಕೊಳ್ಳೋಣ. ಆಗ ಆ ವ್ಯಾಪ್ತಿಯ ಹೆಲ್ತ್ ಇನ್ಸಪೆಕ್ಟರ್ ಅವರಿಗೆ ಅದು ಚೆನ್ನಾಗಿ ಗೊತ್ತಿರುತ್ತೆ. ಒಂದು ವೇಳೆ ಕೊಡಿಯಾಲ್ ಬೈಲ್ ವಾರ್ಡಿನಲ್ಲಿ ಒಂದು ಕಟ್ಟಡದ ಮಾಲೀಕರು ಕಟ್ಟಡ ತೆರಿಗೆ ಕಟ್ಟುತ್ತಿಲ್ಲ ಎಂದಾದರೆ ಬಿಲ್ ಕಲೆಕ್ಟರ್ ಅವರಿಗೆ ಅದು ತಿಳಿದಿರುತ್ತದೆ. ನೀರಿನ ಬಿಲ್ ಕೂಡ ಹಾಗೆಯೇ. ಯಾವ ಉದ್ಯಮಿ ಎಷ್ಟು ಲಕ್ಷ ನೀರಿನ ಬಿಲ್ ಬಾಕಿ ಇಟ್ಟಿದ್ದಾರೆ ಎಂದು ನೀರಿನ ಜೆಇ ಅವರಿಗೆ ಗೊತ್ತೆ ಇರುತ್ತದೆ. ಅದು ಹೇಗೆಂದರೆ ಈಗ ಎಲ್ಲವೂ ಕಂಪ್ಯೂಟರ್ ನಲ್ಲಿ ದಾಖಲಾಗಿರುತ್ತದೆ.
ಶ್ರೀಮಂತರ ಮೇಲೆ ಕ್ರಮ ಆಗಲಿ…
ಕಂಪ್ಯೂಟರ್ ನಲ್ಲಿ ಪೋಲ್ಡರ್ ಒಪನ್ ಮಾಡಿದರೆ ಯಾವ ಬಿಲ್ ಯಾರು ಬಾಕಿ ಇಟ್ಟಿದ್ದಾರೆ ಎಂದು ಗೊತ್ತಾಗಿ ಬಿಡುತ್ತದೆ. ಅದರ ನಂತರ ಕಮೀಷನರ್ ಅವರು ಸಂಬಂಧಪಟ್ಟ ವಿಭಾಗದ ಅಧಿಕಾರಿಗಳಿಗೆ ಕರೆದು ಯಾಕೆ ವಸೂಲಿ ಆಗಿಲ್ಲ ಎಂದು ಪ್ರಶ್ನಿಸಬಹುದು. ಅವರಿಂದ ಉತ್ತರ ಸಿಕ್ಕಿದ ನಂತರ ಆ ಅಂಗಡಿಯವರಿಗೆ ನೋಟಿಸು ಕೊಟ್ಟು ನಂತರ ಏನೂ ಆಗದೇ ಇದ್ದರೆ ಮುಚ್ಚುವ ಕ್ರಮ ತೆಗೆದುಕೊಂಡರೆ ಆಯಿತು. ಒಂದು ವೇಳೆ ಯಾವ ವಿಭಾಗದ ಅಧಿಕಾರಿ ತಮ್ಮ ವ್ಯಾಪ್ತಿಯಲ್ಲಿ ಸರಿಯಾಗಿ ತೆರಿಗೆ, ಬಿಲ್ ಯಾಕೆ ಸಂಗ್ರಹವಾಗುವುದಿಲ್ಲ ಎಂದು ಉತ್ತರ ಕೊಡುವಲ್ಲಿ ವಿಫಲವಾದರೆ ಆಗ ಆ ಅಧಿಕಾರಿಯ ಮೇಲೆಯೂ ಕ್ರಮ ತೆಗೆದುಕೊಳ್ಳಬೇಕು. ಯಾವಾಗ ತಮ್ಮ ಕರ್ತವ್ಯಲೋಪಕ್ಕೆ ತಮ್ಮ ಮೇಲೆ ಕೂಡ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಅಧಿಕಾರಿಗಳಿಗೆ ಗೊತ್ತಾಗುತ್ತೋ ಆಗ ಅವರು ಎಚ್ಚರಿಕೆ ವಹಿಸುತ್ತಾರೆ.
ಇನ್ನು ಜನವರಿ ಬಂತೆಂದರೆ ಜೀಪಿನಲ್ಲಿ ಸೌಂಡ್ ಬಾಕ್ಸ್ ಇಟ್ಟು ಮೈಕ್ ಹಿಡಿದು ಕಟ್ಟಡ ತೆರಿಗೆ ಕಟ್ಟಿ ಎಂದು ಹೇಳುತ್ತಾ ಹೋಗುವ ಜೀಪನ್ನು ತಾವು ನೋಡಿರಬಹುದು. ಇದು ಕೂಡ ಬರಿ ಹಣ ವೇಸ್ಟ್. ಇದರಿಂದ ಆಗುವುದು ಏನಿಲ್ಲ. ಅದರ ಬದಲು ಸೀದಾ ಕಂಪ್ಯೂಟರ್ ಒನ್ ಮಾಡುವುದು ಅಲ್ಲಿ ಲಿಸ್ಟ್ ಇರುತ್ತದೆ. ಅಲ್ಲಿ ಯಾರು ತೆರಿಗೆ ಕಟ್ಟಿದ್ದಾರೆ, ಯಾರು ಕಟ್ಟುವುದಿಲ್ಲ ಎಂದು ಗೊತ್ತಾಗುತ್ತೆ.
ಇನ್ನು ಸಾಮಾನ್ಯವಾಗಿ ನೀರಿನ ಬಿಲ್ ಬಾಕಿ ಇಡುವುದು ಶ್ರೀಮಂತ ಉದ್ದಿಮೆದಾರರು ಮಾತ್ರ. ಪಾಪದವರು ಬಿಲ್ ಸಿಕ್ಕಿದ ತಕ್ಷಣ ಕಟ್ಟುವ ತನಕ ಚಡಪಡಿಸುತ್ತಲೇ ಇರುತ್ತಾರೆ. ಶ್ರೀಮಂತರು ಎರಡು ವರ್ಷಗಳಿಂದ ನೀರಿನ ಬಿಲ್ ಕಟ್ಟದಿದ್ದರೂ ಆರಾಮವಾಗಿಯೇ ಇರುತ್ತಾರೆ. ಇನ್ನು ಕಟ್ಟಡ ತೆರಿಗೆಯನ್ನು 25 ರಿಂದ 30 ಲಕ್ಷದ ತನಕ ಬಾಕಿ ಇಡುವವರು ಇದ್ದಾರೆ. ಅವರನ್ನು ಟಚ್ ಮಾಡುವ ಧೈರ್ಯ ಪಾಲಿಕೆಯವರಿಗೆ ಇರಲ್ಲ. ಅಷ್ಟಕ್ಕೂ ತೆರಿಗೆ ಪಾಲಿಕೆ ತೆಗೆದುಕೊಳ್ಳುವ ಭಿಕ್ಷೆ ಅಲ್ಲ. ಹಕ್ಕು. ಅದನ್ನು ಅಷ್ಟೇ ಘನಂಧಾರಿಯಿಂದ ಪಡೆದುಕೊಳ್ಳಬೇಕು. ಅಂಗಡಿಯ ಮುಂದೆ ನಿಂತು ಅಂಗಲಾಚುವ ಹಾಗೆ ಕಾಣಬಾರದು!
Leave A Reply