ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಪಕ್ಷದವರಿಗೆ ನಿಜಕ್ಕೂ ತಲೆ ಇಲ್ಲವಾ ಅಥವಾ ಅತೀ ಬುದ್ಧಿವಂತಿಕೆಯಾ ಎನ್ನುವುದು ಗೊತ್ತಾಗುತ್ತಿಲ್ಲ. ಇಲ್ಲದೇ ಹೋದರೆ ಇವರು ಜನರಿಗೆ ಅನಗತ್ಯವಾಗಿ ತೊಂದರೆ ಕೊಡುವ ಕೆಲಸಕ್ಕೆ ಕೈ ಹಾಕುವುದನ್ನು ನೋಡಿದಾಗ ಆಶ್ಚರ್ಯವಾಗುತ್ತದೆ. ಮಂಗಳೂರು ನಗರ ಬೆಳೆಯುತ್ತಿದ್ದಂತೆ ಇಲ್ಲಿ ವ್ಯಾಪಾರ, ವಹಿವಾಟುಗಳು ಕೂಡ ಬೆಳೆಯುತ್ತಿವೆ. ಪ್ರತಿಯೊಂದು ಉದ್ಯಮಕ್ಕೂ ಉದ್ದಿಮೆ ಪರವಾನಿಗೆ ಎನ್ನುವುದು ಬೇಕೆ ಬೇಕು. ಅದನ್ನು ಪ್ರಾರಂಭದಲ್ಲಿ ಹೊಸದಾಗಿ ಮಾಡಿದ ನಂತರ ಪ್ರತಿ ವರ್ಷ ನವೀಕರಣ ಮಾಡಬೇಕು. ಅದನ್ನು ನಮ್ಮ ಪಾಲಿಕೆಯಲ್ಲಿಯೇ ಮಾಡಬೇಕು. ಉದ್ದಿಮೆ ಪರವಾನಿಗೆ ನವೀಕರಣ ಮಾಡಲು ಯಾರಾದರೂ ಹೋದರೆ ಪಾಲಿಕೆಯಲ್ಲಿ ಏನು ಹೇಳುತ್ತಾರೆ ಎಂದರೆ ಖಾತಾ ತೆಗೆದುಕೊಂಡು ಬನ್ನಿ, ಅದರೊಂದಿಗೆ ಟ್ಯಾಕ್ಸ್ ರಸೀದಿ ತೆಗೆದುಕೊಂಡು ಬನ್ನಿ ಎನ್ನುವಂತಹ ಬೇಡಿಕೆ ಇಡುತ್ತಾರೆ. ಹೊಸದಾಗಿ ಟ್ರೇಡ್ ಲೈಸೆನ್ಸ್ ಮಾಡುವಾಗ ಅದನ್ನೆಲ್ಲ ತರಬೇಕು ಎಂದು ಹೇಳಿದರೆ ಅದರಲ್ಲಿ ಅರ್ಥ ಇದೆ. ಆದರೆ ಅದೇ ಹಳೆ ಟ್ರೇಡ್ ಲೈಸೆನ್ಸ್ ನವೀಕರಣ ಮಾಡುವಾಗ ಖಾತಾ, ಟ್ಯಾಕ್ಸ್ ರಸೀದಿ ತರಬೇಕು ಎಂದು ಹೇಳುವುದರಲ್ಲಿ ಏನು ವಿಷಯ ಇದೆ.
ಮಾಹಿತಿ ತಂತ್ರಜ್ಞಾನದ ಕೊರತೆ ಕಾರಣ..
ಇವರಿಗೆ ಏನು ಕಥೆ ನಿಮ್ಮದು, ನವೀಕರಣ ಮಾಡುವಾಗ ಏಕೆ ಅದೆಲ್ಲಾ ಕೇಳುತ್ತೀರಿ ಎಂದು ಪ್ರಶ್ನಿಸಿದರೆ ಇವರ ಉತ್ತರ ಏನು ಎಂದರೆ ” ಅನೇಕರದ್ದು ಅಂಗಡಿ ದೊಡ್ಡದಿರುತ್ತದೆ. ಆದರೆ ನವೀಕರಣ ಮಾಡುವಾಗ ಅದನ್ನು ಅಷ್ಟು ತೋರಿಸುವುದಿಲ್ಲ. ಕಡಿಮೆ ಚದರ ಅಡಿ ತೋರಿಸುತ್ತಾರೆ. ಅದಕ್ಕಾಗಿ ಖಾತಾ, ಟ್ಯಾಕ್ಸ್ ರಸೀದಿ ತೋರಿಸಲು ಕೇಳುತ್ತೇವೆ” ಎಂದು ಹೇಳುತ್ತಾರೆ. ಕೆಲವರು ಶುಲ್ಕ ಕಡಿಮೆ ಆಗಲು ಕಡಿಮೆ ವಿಸ್ತ್ರೀರ್ಣ ಹೇಳುತ್ತಾರೆ ಎಂದು ಇವರ ಅಭಿಪ್ರಾಯ. ಇದು ಎಷ್ಟು ಮೂರ್ಖತನದ ಉತ್ತರ ಎಂದರೆ ಪಾಲಿಕೆಯವರಿಗೆ ಇನ್ನು ನಮ್ಮ ಆಧುನಿಕ ತಂತ್ರಜ್ಞಾನದ ಪರಿಚಯ ಏನು ಆಗಿಲ್ಲ ಎನ್ನುವುದಕ್ಕೆ ಇದೇ ಸಾಕ್ಷಿ.
ಇವರು ನಿಜವಾಗಿ ಏನು ಮಾಡಬೇಕು ಎಂದರೆ ಕಂದಾಯ ವಿಭಾಗ ಮತ್ತು ಆರೋಗ್ಯ ವಿಭಾಗಕ್ಕೆ ಪರಸ್ಪರ ಲಿಂಕ್ ಮಾಡಬೇಕು. ಆಗ ಒಬ್ಬ ಉದ್ದಿಮೆದಾರನ ಅಂಗಡಿಯ ಡೋರ್ ನಂಬ್ರ ಹಾಕಿದರೆ ನವೀಕರಣ ಮಾಡಲು ಬಂದ ವ್ಯಕ್ತಿಯ ಅಂಗಡಿ ಎಷ್ಟು ಚದರ ಅಡಿ ವಿಸ್ತ್ರೀರ್ಣದ್ದು ಎನ್ನುವುದು ಗೊತ್ತಾಗುತ್ತದೆ. ಅದನ್ನು ಬಿಟ್ಟು ಪ್ರತಿ ಸಲ ಖಾತಾ ತನ್ನಿ, ಟ್ಯಾಕ್ಸ್ ರಸೀದಿ ತನ್ನಿ ಎಂದರೆ ಏನಾಗುತ್ತದೆ ಎಂದರೆ ಒಬ್ಬ ವ್ಯಕ್ತಿ ಒಂದು ಕಟ್ಟಡದಲ್ಲಿ ಬಾಡಿಗೆಗೆ ಇದ್ದಾರೆ ಎಂದು ಅಂದುಕೊಳ್ಳೋಣ. ಹತ್ತು ವರ್ಷದಿಂದ ಆ ವ್ಯಾಪಾರಿ ತಿಂಗಳಿಗೆ ಐದು ಸಾವಿರದಂತೆ ಬಾಡಿಗೆ ಕೊಡುತ್ತಿದ್ದಾರೆ ಎಂದು ಅಂದುಕೊಳ್ಳೋಣ. ಆದರೆ ಟ್ಯಾಕ್ಸ್ ರಸೀದಿ, ಖಾತಾ ಎಂದು ಅದರ ಮಾಲೀಕ ಈ ಬಾಡಿಗೆದಾರನಿಗೆ ಏನನ್ನೂ ಕೊಡಲು ತಯಾರಿರುವುದಿಲ್ಲ. ಅಂತಹ ಸಂದರ್ಭದಲ್ಲಿ ಟ್ಯಾಕ್ಸ್ ರಸೀದಿ ಕೊಡಿ ಎಂದು ಬಾಡಿಗೆದಾರನಿಗೆ ಕೇಳಿದರೆ ಆತ ಎಲ್ಲಿಂದ ತರುವುದು. ಕಟ್ಟಡದ ಮಾಲೀಕ ಬೇರೆ. ತನ್ನದು ಉದ್ದಿಮೆ ಮಾತ್ರ. ಕಟ್ಟಡದ ಧಣಿ ಟ್ಯಾಕ್ಸ್ ರಸೀದಿ, ಖಾತಾ ಕೊಡದಿದ್ದರೆ ಬಾಡಿಗೆದಾರನ ಉದ್ದಿಮೆ ಪರವಾನಿಗೆ ನವೀಕರಣ ಆಗಲ್ಲ ಎಂದರೆ ಬಾಡಿಗೆದಾರ ಆಕಾಶ ನೋಡಬೇಕಾ?
ಗೋಲ್ ಮಾಲ್ ಆದ ಹಣ ಬರಲು ಇನ್ನೆಷ್ಟು ದಿನ ಬೇಕು?
ಐದು ವರ್ಷ ಮೊದಲು ಮಂಗಳೂರು-ಒನ್ ಎನ್ನುವ ನಮ್ಮ ತೆರಿಗೆ, ಬಿಲ್ ಇಂತಹುಗಳನ್ನು ಸ್ವೀಕರಿಸುವ ಸಂಸ್ಥೆಯಲ್ಲಿ ಆದ ಗೋಲ್ ಮಾಲ್ ಅನ್ನು ನಿಮ್ಮ ಗಮನಕ್ಕೆ ತರುತ್ತೇನೆ. ಅಲ್ಲಿ ಆಗಿರುವ ಗೋಲ್ ಮಾಲ್ ನಿಂದ ಪಾಲಿಕೆಗೆ ಬರಬೇಕಾಗಿದ್ದ ಒಂದೂವರೆ-ಎರಡು ಕೋಟಿ ರೂಪಾಯಿಗಳು ಇನ್ನೂ ಕೂಡ ಬಂದಿಲ್ಲ. ಅದನ್ನು ಇನ್ನೂ ಕೂಡ ಪಾಲಿಕೆಗೆ ವಸೂಲಿ ಮಾಡಲು ಆಗಲಿಲ್ಲ. ಅದನ್ನು ವಸೂಲಿ ಮಾಡಲು ಆಗದವರಿಗೆ ಈಗ ಉದ್ದಿಮೆ ಪರವಾನಿಗೆ ನವೀಕರಣದಲ್ಲಿ ಜನರನ್ನು ಸತಾಯಿಸುವುದು ಎಷ್ಟು ಸರಿ? ಅಷ್ಟಲ್ಲದೇ ಇದೇ ಫೆಬ್ರವರಿ 28 ರ ಒಳಗೆ ಎಲ್ಲಾ ಉದ್ದಿಮೆ ಪರವಾನಿಗೆಯನ್ನು ನವೀಕರಣ ಮಾಡಲೇಬೇಕು ಎನ್ನುವ ಸೂಚನೆ ಇದೆ. ಹಾಗಂತ ಈ ಬಗ್ಗೆ ಪಾಲಿಕೆಯ ಕಡೆಯಿಂದ ಇಲ್ಲಿಯ ತನಕ ಯಾವುದೇ ಪತ್ರಿಕೆಯಲ್ಲಿ ಪ್ರಕಟನೆ ಕೊಟ್ಟಿಲ್ಲ. ಅದರ ನಡುವೆ ನವೀಕರಣದ ದಿನ ಹತ್ತಿರ ಬರುತ್ತಿದ್ದಂತೆ ಅದು, ಇದು ತನ್ನಿ ಎಂದು ವ್ಯಾಪಾರಿಗಳಿಗೆ ತೊಂದರೆ ಕೊಡುವಂತಹ ಕೆಲಸ ನಡೆಯುತ್ತಿದೆ. ಇನ್ನೆಷ್ಟು ದಿನ ಇಂತಹ ಉಪಟಳ ಸಹಿಸಬೇಕೋ!!
Leave A Reply