ರಾಧಿಕಾ ಪಂಡಿತ್ ಗೆ ಮೊದಲ ಚೂಡಿ ಸಂಭ್ರಮ!
ಕನ್ನಡದಲ್ಲಿ ರಾಧಿಕಾ ಪಂಡಿತ್ ಯಾರಿಗೆ ಗೊತ್ತಿಲ್ಲ, ಹೇಳಿ. ಕನ್ನಡ ಸಿನೆಮಾವನ್ನು ನೋಡುವವರಿಗೂ, ಟಿವಿಯಲ್ಲಿ ಕನ್ನಡ ಚಿತ್ರಗೀತೆಗಳನ್ನು ವೀಕ್ಷಿಸುವವರಿಗೂ ರಾಧಿಕಾ ಪಂಡಿತ್ ಗೊತ್ತೆ ಇದೆ. ಯಶ್ ಅವರೊಂದಿಗೆ ಮೊಗ್ಗಿನ ಮನಸ್ಸು ಸಿನೆಮಾದ ಮೂಲಕ ಚಿತ್ರರಂಗ ಪ್ರವೇಶಿಸಿದ ರಾಧಿಕಾ ಪಂಡಿತ್ ಈಗ ಯಶ್ ಅವರ ಮನೆ ಮತ್ತು ಮನದೊಡತಿಯೂ ಹೌದು. ಇತ್ತೀಚೆಗಷ್ಟೇ ಸಪ್ತಪದಿ ತುಳಿದಿರುವ ಯಶ್-ರಾಧಿಕಾ ದಂಪತಿಗಳಿಗೆ ಈ ಬಾರಿ ಹೊಸ ಚೂಡಿಯ ಸಂಭ್ರಮ.
ಕೊಂಕಣಿ ಸಾರಸ್ವತ ಬ್ರಾಹ್ಮಣ ಕುಟುಂಬದಿಂದ ಬಂದಿರುವ ರಾಧಿಕಾ ಪಂಡಿತ್ ಈ ಬಾರಿ ತಮ್ಮ ಜೀವನದ ಮೊದಲ ಚೂಡಿ ಸಂಭ್ರಮದಲ್ಲಿ ಇದ್ದಾರೆ. ಈ ಕುರಿತು ಫೇಸ್ ಬುಕ್ ನಲ್ಲಿ ಫೋಟೋ ಹಾಕಿರುವ ರಾಧಿಕಾ ಪಂಡಿತ್ ಅವರು “ನನ್ನ ಮೊದಲ ಚೂಡಿ ಪೂಜಾ” ಎಂದು ಹಾಕಿದ್ದಾರೆ. ಅದರೊಂದಿಗೆ ಬ್ಲಾಕೆಟ್ ನಲ್ಲಿ ಚೂಡಿಯನ್ನು ತುಳಸಿಗೆ ಅರ್ಪಿಸುವುದು ಎಂದು ಕೂಡ ಸೇರಿಸಿದ್ದಾರೆ. ಕಳೆದ ಶುಕ್ರವಾರದಿಂದ ನಾಡಿದ್ದು ಅಗಸ್ಟ್ 20 ರ ತನಕದ ಶುಕ್ರವಾರ ಮತ್ತು ಭಾನುವಾರ ಸಾರಸ್ವತ ಬ್ರಾಹ್ಮಣ ಕುಟುಂಬದ ಮುತೈದೆಯರು ಈ ಚೂಡಿ ಪೂಜೆಯನ್ನು ಆಚರಿಸಿಕೊಂಡು ಬರುತ್ತಾರೆ. ಇದನ್ನು ಈ ಬಾರಿ ತನ್ನ ಜೀವನದಲ್ಲಿ ಪ್ರಪ್ರಥಮವಾಗಿ ಆಚರಿಸಲು ಬಂದಿರುವ ಭಾಗ್ಯದ ಕುರಿತು ಸಂಭ್ರಮಿಸಿರುವ ರಾಧಿಕಾ ಪಂಡಿತ್ ಅವರು, ನನ್ನ ಜೀವನದ ವೈವಾಹಿಕ ಬದುಕಿನ ಮೊದಲ ಅದ್ಭುತ ಎಂದು ವ್ಯಾಖ್ಯಾನಿಸಿದ್ದಾರೆ. ತಮ್ಮ ಸನಾತನ ಧರ್ಮದ ಅನೇಕ ವೈಶಿಷ್ಟಗಳನ್ನು ಒಂದೊಂದಾಗಿ ಅನುಭವಿಸಲು ಸಿಕ್ಕಿರುವ ಭಾಗ್ಯ ಎಂದು ತಮ್ಮ ಫೇಸ್ ಬುಕ್ ವಾಲ್ ನಲ್ಲಿ ಬರೆದಿದ್ದಾರೆ.
ತನ್ನ ತಾಯಿ ಮನೆಯ ಆಚಾರ-ವಿಚಾರ, ಸಂಪ್ರದಾಯವನ್ನು ಮುಂದುವರೆಸಿಕೊಂಡು ಬರುವ ಖುಷಿಯನ್ನು ಹಂಚಿಕೊಂಡಿರುವ ರಾಧಿಕಾ ಪಂಡಿತ್ ಅವರು ತುಳಸಿಗೆ ಚೂಡಿ ಅರ್ಪಿಸಿ ಪೂಜಿಸುವ ಫೋಟೋ ಈಗಾಗಲೇ ವೈರಲ್ ಆಗಿದೆ. ಸಾಂಪ್ರದಾಯಿಕ ಸೀರೆಯಲ್ಲಿ ಅದಕ್ಕೆ ಒಪ್ಪುವ ಕುಪ್ಪಸ ಧರಿಸಿ, ಕೈ ಬಳೆ, ಕಿವಿಗೆ ಝುಂಕಿ ಧರಿಸಿರುವ ರಾಧಿಕಾ ಪಂಡಿತ್ ತುಳಸಿ ಎಲೆಗಳಿಗೆ ಕುಂಕುಮ, ಅರಸಿನ ಹಚ್ಚುವಲ್ಲಿ ಮಗ್ನರಾಗಿರುವ ಫೋಟೋ ಸಾಮಾಜಿಕ ತಾಣಗಳಲ್ಲಿ ಹಾಕಿಕೊಂಡಿದ್ದಾರೆ. ಅಲ್ಲಿಯೇ ಪಕ್ಕದ ತಟ್ಟೆಯಲ್ಲಿ ವೀಳ್ಯದ ಎಲೆ, ಅಡಿಕೆ, ಹೂ ಹಣ್ಣು, ಬಿಂದಿಗೆಯಲ್ಲಿ ನೀರು ತಂದಿಟ್ಟು ಪೂಜೆ ಮಾಡುವ ಫೋಟೋ ರಾಧಿಕಾ ಪಂಡಿತ್ ಅವರು ಧಾರ್ಮಿಕ ಆಚರಣೆಯಲ್ಲಿ ಎಷ್ಟು ಶ್ರದ್ಧೆಯಿಂದ ತೊಡಗಿದ್ದಾರೆ ಎಂದು ತೋರಿಸುತ್ತದೆ.
ಸಾಮಾನ್ಯವಾಗಿ ಮದುವೆಯಾದ ನಂತರ ಈ ಪ್ರಥಮ ಚೂಡಿ ಪೂಜೆಯನ್ನು ವಧುವಿನ ಮನೆ ಮತ್ತು ವರನ ಮನೆ ಎರಡು ಕಡೆ ಸಾಂಪ್ರದಾಯಿಕವಾಗಿ ಆಚರಿಸಲಾಗುತ್ತದೆ. ಆ ಸಂದರ್ಭದಲ್ಲಿ ಸಂಬಂಧದ ಕನಿಷ್ಟ ಐದು ಜನ ಮುತೈದೆಯನ್ನು ಕರೆಸಿ ಅವರನ್ನು ಸತ್ಕರಿಸಲಾಗುತ್ತದೆ. ಅದರೊಂದಿಗೆ ಹತ್ತಿರದ ಸಂಬಂಧಿಗಳನ್ನು ಕರೆಸಿ ಊಟೋಪಚಾರದ ಸಂಭ್ರಮ ಸಾರಸ್ವತ ಕುಟುಂಬಗಳಲ್ಲಿ ಖಂಡಿತ ಇದ್ದೇ ಇರುತ್ತದೆ. ಅದರ ಬಳಿಕ ಪ್ರತಿ ಶ್ರಾವಣ ಮಾಸದಲ್ಲಿ ಮುತೈದೆ ಪ್ರತಿ ಶುಕ್ರವಾರ ಮತ್ತು ಭಾನುವಾರ ಬೆಳಿಗ್ಗೆ ಬೇಗ ಎದ್ದು ತಲೆಸ್ನಾನ ಮಾಡಿ ಚೂಡಿಯನ್ನು ತುಳಸಿಗೆ ಅರ್ಪಿಸಿ ಪೂಜೆ ಮಾಡಿ ಆಹಾರವನ್ನು ಸೇವಿಸುತ್ತಾಳೆ. ಚೂಡಿ ಪೂಜೆ ಆದ ತಕ್ಷಣ ಒಂದು ಚೂಡಿಯನ್ನು ಗಂಡನ ಕೈಗೆ ನೀಡಿ ಆರ್ಶೀವಾದ ಕೋರುತ್ತಾಳೆ. ಅದರ ನಂತರ ತನ್ನ ಸಮುದಾಯದ ಬೇರೆ ಹಿರಿಯ ಮುತೈದೆಯರ ಮನೆಗೆ ಹೋಗಿ ಅವರಿಗೂ ಚೂಡಿ ಕೊಟ್ಟು ಆಶೀರ್ವಾದ ಕೋರುವ ಸಂಪ್ರದಾಯವಿದೆ. ಅದರ ಬಳಿಕ ಶ್ರಾವಣ ಮಾಸದಲ್ಲಿ ಯಾವುದಾದರೂ ಒಂದು ಶುಕ್ರವಾರ ಅಥವಾ ಭಾನುವಾರ ತನ್ನ ಊರಿನ ಕನಿಷ್ಟ ಐದು ದೇವಿಯ ದೇವಸ್ಥಾನಕ್ಕೆ ಹೋಗಿ ಅಲ್ಲಿ ದೇವಿಯ ಬಳಿ ಆರ್ಶೀವಾದ ಕೋರುವ ಕ್ರಮ ಕಡ್ಡಾಯ. ಚೂಡಿಯೊಂದಿಗೆ ಕುಂಕುಮವನ್ನು ದೇವಿಗೆ ಅರ್ಪಿಸಿ ತನ್ನ ಮುತೈದೆತನಕ್ಕೆ ಧೀರ್ಘ ರಕ್ಷೆಯನ್ನು ಬೇಡುತ್ತಾಳೆ. ಈಗಿನ ಆಧುನಿಕ ಕಾಲದಲ್ಲಿಯೂ ಸಾರಸ್ವತ ಕುಟುಂಬಗಳಲ್ಲಿ ಇದನ್ನು ಮಹಿಳೆಯರು ಪಾಲಿಸಿಕೊಂಡು ಬರುತ್ತಿದ್ದಾರೆ. ಹೆಣ್ಣು ಎಷ್ಟೇ ಆಧುನಿಕವಾಗಿ ಮುಂದುವರೆಯಲಿ, ಈ ಶ್ರಾವಣ ಮಾಸ ಅವಳ ಪಾಲಿಗೆ ಪ್ರಕೃತಿ ಕೊಡುವ ತಾಯ್ತನದ ನೆನಪು, ಪತಿ ಪರಮಾತ್ಮ ಎನ್ನುವ ಧೈರ್ಯ ಮತ್ತು ಸಂಪ್ರದಾಯಗಳ ರಕ್ಷೆ ಒದಗಿಸುತ್ತದೆ. ಈಗೀಗ ಅನೇಕ ಮನೆಗಳಲ್ಲಿ ಈ ಚೂಡಿಯನ್ನು ಕಟ್ಟುವುದಕ್ಕೆ ಪುರುಸೋತ್ತು ಮತ್ತು ಆಸಕ್ತಿ ಎರಡೂ ಇಲ್ಲವಾಗಿರುವುದರಿಂದ ಮಾರುಕಟ್ಟೆಗಳಲ್ಲಿ ರೆಡಿಮೇಡ್ ಚೂಡಿಗಳು ಸಿಗಲು ಶುರುವಾಗಿದೆ. ಒಂದು ಚೂಡಿಗೆ ಹತ್ತು ರೂಪಾಯಿಯಲ್ಲಿ ಮಾರಲ್ಪಡುತ್ತಿವೆ. ಆ ಚೂಡಿಗಳಲ್ಲಿ ಐದು ಗರಿಕೆ ಗರಿ, ಐದು ನಮೂನೆಯ ಹೂಗಳು ಇರುತ್ತವೆ.
Leave A Reply