ಮಿಸೆಸ್ ಇಂಡಿಯಾ ವಲ್ಡ್ ವೈಡ್ ಆಗಲು ಸೌಜನ್ಯಳಿಗೆ ಒಂದೇ ಮೆಟ್ಟಿಲು ಬಾಕಿ!
ಮದುವೆ ಆದ ಮೇಲೆ ಎಲ್ಲವೂ ಮುಗಿಯಿತು ಎಂದು ಅಂದುಕೊಳ್ಳುವ ಹೆಣ್ಣುಮಕ್ಕಳೇ ಹೆಚ್ಚು. ಮದುವೆ ಆಯ್ತು, ಮಕ್ಕಳಾಯ್ತು. ಇನ್ನೇನೂ ಉಳಿದಿದೆ, ಇನ್ನು ಯಾರಿಗೆ ಚೆಂದ ಕಾಣಬೇಕು ಎಂದು ಬಹುತೇಕ ಮಹಿಳೆಯರು ನಿರ್ಧಾರಕ್ಕೆ ಬಂದು ಬಿಡುತ್ತಾರೆ. ಕಾಲೇಜಿಗೆ ಹೊರಡುವಾಗ ಅರ್ಧ ಗಂಟೆ ಕನ್ನಡಿ ಮುಂದೆ ನಿಲ್ಲುವ ತರುಣಿ ಮದುವೆಯಾಗಿ ಐದು ವರ್ಷಗಳ ನಂತರ ಐದು ನಿಮಿಷ ನಿಂತರೆ ಅದೇ ಹೆಚ್ಚು. ಕಾಲೇಜಿನಲ್ಲಿ ಕಾರ್ಯಕ್ರಮ ಇದ್ದಾಗ ತಿಂಗಳ ಮೊದಲೇ ಯಾವ ಡ್ರೆಸ್ ಉಡಬೇಕು ಎಂದು ಪ್ಲಾನ್ ಹಾಕುವ ಯುವತಿ ಮದುವೆಯಾದ ನಂತರ ಚೆನ್ನಾಗಿ ಕಾಣುವುದು ಮಗನ ಅಥವಾ ಮಗಳ ಮೊದಲ ಹುಟ್ಟಿದ ಹಬ್ಬದ ಸಂಭ್ರಮದಂದು ಫೋಟೋಗೋಸ್ಕರ ಮಾತ್ರ. ಹಾಗಾದರೆ ಬ್ರಹ್ಮ ಫ್ರೀ ಇದ್ದಾಗ ಕುಳಿತು ಡಿಸೈನ್ ಮಾಡಿ ಭೂಲೋಕಕ್ಕೆ ಬಿಡುವ ಹೆಣ್ಣು ಜೀವಕ್ಕೆ ಮದುವೆ ತನ್ನ ಸೌಂದರ್ಯದ ಬಗ್ಗೆ ಹೆಮ್ಮೆ ಪಡಲು ಗಡಿರೇಖೆಯಾಗಿ ಹೋಗುತ್ತಾ ಎನ್ನುವ ಪ್ರಶ್ನೆ ಉದ್ಘವಿಸುತ್ತದೆ.
ಆದರೆ ಅಲ್ಲೊಬ್ಬರು ಇಲ್ಲೊಬ್ಬರು ಹೆಣ್ಣು ತಾನೇ ಹಾಕಿಕೊಂಡ ಗಡಿರೇಖೆಯನ್ನು ಉಲ್ಲಂಘಿಸಿ ತನ್ನ ಸೌಂದರ್ಯ ಮತ್ತು ಸೃಜನಶೀಲತೆ ಹಾಗೂ ಕ್ರಿಯಾತ್ಮತೆಗೆ ಹೊಸ ಭಾಷ್ಪ ಬರೆಯಲು ಹೊರಡುತ್ತಾಳೆ. ಸಪ್ತಸಾಗರ ದಾಟಿ ತನ್ನ ಬುದ್ಧಿಮತ್ತೆಗೆ ಚೆಲುವಿನ ಚಿತ್ತಾರ ಬೆಸೆಯಲು ಹೋಗುತ್ತಾಳೆ. ತನ್ನ ಕನಸಿಗೆ ಬಾಂದಳದಲ್ಲಿ ಚಿತ್ತಾರ ಬಿಡಿಸಲು ತಯಾರಾಗುತ್ತಾಳೆ. ತನ್ನ ಕಣ್ಣನೋಟಕ್ಕೆ ತೀರ್ಪುಗಾರರು ಮಣಿಯುವಂತೆ ಮಾಡುತ್ತಾಳೆ. ಹೂ ಮುಡಿಯಲು ಮಾತ್ರ ಎಂದುಕೊಂಡಿದ್ದ ಮುಡಿಗೆ ಸೌಂದರ್ಯದ ಕಿರೀಟ ತಾಗಿಸಲು ನಿರ್ಧರಿಸುತ್ತಾಳೆ. ಅಂತಹ ಚೆಲುವು ಮತ್ತು ಬುದ್ಧಿಯ ಪರಾಕಾಷ್ಟೆಯನ್ನು ಮುಟ್ಟುವುದು ಕಷ್ಟವೇನಲ್ಲ. ಅದಕ್ಕೆ ಬೇಕಾಗಿರುವುದು ಕೇವಲ ಗಡಿರೇಖೆಯ ಉಲ್ಲಂಘನೆ ಮಾಡಿ ಸಾಧಿಸಿ ತೋರಿಸುತ್ತೇನೆ ಎನ್ನುವ ಛಲ ಮಾತ್ರ.
ಆ ಛಲವನ್ನು ಬೆನ್ನಿಗೆ ಕಟ್ಟಿ, ಮನಸ್ಸನ್ನು ಆಗಸಕ್ಕೆ ನೆಟ್ಟು, ಅಭಿರುಚಿಯನ್ನು ಬತ್ತಳಿಕೆಯಲ್ಲಿ ಇಟ್ಟು ದೆಹಲಿಯ ಅಂಗಣದಲ್ಲಿ ಮಿಸೆಸ್ ಇಂಡಿಯಾ ವರ್ಡ್ ವೈಡ್ ಆಗಲು ತುದಿಗಾಲಲ್ಲಿ ನಿಂತಿರುವ ಸ್ಫೂರ್ತಿಯ ಹೆಸರು ಶ್ರೀಮತಿ ಸೌಜನ್ಯ ಹೆಗ್ಡೆ. ಎರಡು ಮುದ್ದು ಮಕ್ಕಳ ತಾಯಿಯಾಗಿರುವ ಸೌಜನ್ಯ ಅವರಿಗೆ ಮಿಸ್ ಇಂಡಿಯಾ ಆಗಬೇಕೆನ್ನುವ ಗುರಿ ಇತ್ತಂತೆ. ಆದರೆ ಅದಕ್ಕೆ ಅನುವಾಗುವಷ್ಟರಲ್ಲಿ ಮದುವೆ ಕೈಬೀಸಿ ಕರೆಯಿತು. ನಂತರ ದಕ್ಷಿಣ ಆಫ್ರಿಕಾದಲ್ಲಿ ಪತಿ ಮತ್ತು ಮಕ್ಕಳೊಂದಿಗೆ ನೆಲೆಸಿದ ಮಿಸೆಸ್ ಸೌಜನ್ಯ ಹೆಗ್ಡೆ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸದ್ಯ ಮಂಗಳೂರಿನಲ್ಲಿ ನೆಲೆಸಿದ್ದಾರೆ. ಹಾಟ್ ಮೊಂಡೆ ಸಂಸ್ಥೆ ನಡೆಸುವ ಮಿಸಸ್ ಇಂಡಿಯಾ ವಲ್ಡ್ ವೈಡ್ರ್ ಗೆ ಆಯ್ಕೆಯಾಗಿರುವ ಮಂಗಳೂರಿನ ಏಕೈಕ ಅಭ್ಯರ್ಥಿಯಾಗಿದ್ದಾರೆ. ಭಾರತ ಸೇರಿದಂತೆ ಪ್ರಪಂಚದ ವಿವಿಧ ರಾಷ್ಟ್ರಗಳಲ್ಲಿ ವಾಸಿಸುವ ಭಾರತೀಯ ವಿವಾಹಿತ ಮಹಿಳೆಯರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಇಲ್ಲಿ 45 ವರ್ಷ ವಯಸ್ಸಿನ ವರೆಗೆ ಸೌಂದರ್ಯವನ್ನು ಕಾಪಾಡಿಕೊಂಡು ಬಂದಿರುವ ಮಹಿಳೆಯರು ಭಾಗವಹಿಸುತ್ತಾರೆ. ಈಜುಡುಗೆಯನ್ನು ಧರಿಸಿ ರ್ಯಾಂಪ್ ವಾಕ್ ಮಾಡುವ ಕ್ಯಾಟಗರಿ ಕೂಡ ಇದ್ದು ಇದು ಮಾತ್ರ ಐಚ್ಛಿಕವಾಗಿದೆ. ಒಂದು ವೇಳೆ ಸ್ವಿಮ್ಮಿಂಗ್ ಸೂಟ್ ಧರಿಸಿ ನಡೆಯಲು ಮುಜುಗರವಾಗುತ್ತದೆ ಎಂದರೆ ಈ ಒಂದು ವಿಭಾಗದಿಂದ ವಿನಾಯಿತಿ ಪಡೆಯಬಹುದು. ಅದು ಬಿಟ್ಟರೆ ಬೇರೆಲ್ಲವೂ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಇದ್ದಂತೆ ಇರುತ್ತದೆ.
ಮೇಲ್ನೋಟಕ್ಕೆ ಈ ಸ್ಪರ್ಧೆಯಲ್ಲಿ ಭಾಗವಹಿಸುವ ಮಹಿಳೆಯರನ್ನು ನೋಡುವುದಕ್ಕೆ ಚೆಂದ. ಆದರೆ ಅದಕ್ಕೆ ಸ್ಪರ್ಧಿಸುವುದು ಇದೆಯಲ್ಲ, ಅದು ಹೇಳಿದಷ್ಟು ಸುಲಭವೂ ಅಲ್ಲ. ಕನಿಷ್ಟ 6 ಇಂಚು ಉದ್ದದ ಹೀಲ್ಡ್ ಧರಿಸಿ ನಡೆಯುವ ಅಭ್ಯಾಸ ಮಾಡಬೇಕಾಗುತ್ತದೆ. ಒಂದು ರೀತಿಯಲ್ಲಿ ಕಾಲಿಗೆ ಒಂದು ಮೆಟ್ಟಿಲು ಕಟ್ಟಿ ನಡೆದಂತೆ. ಅದರೊಂದಿಗೆ ಒಂದು ನೃತ್ಯ ಅಥವಾ ಸಂಗೀತದ ಪ್ರಾಕಾರವನ್ನು ಪ್ರದರ್ಶಿಸಬೇಕಾಗುತ್ತದೆ. ಇನ್ನೂ ಉತ್ತರ ಭಾರತದ ಹೆಣ್ಣುಮಕ್ಕಳೇ ಹೆಚ್ಚಾಗಿ ಭಾಗವಹಿಸುವುದರಿಂದ ಅವರಿಗೆ ಈ ಸ್ಪರ್ಧೆಯನ್ನು ಆಯೋಜಿಸುವವರಿಂದ ಜಾಹೀರಾತು ಕೂಡ ಸಿಗುವ ಸಾಧ್ಯತೆ ಜಾಸ್ತಿ ಇದೆ. ಯಾಕೆಂದರೆ ಆಯೋಜಕರು ಕೂಡ ಉತ್ತರ ಭಾರತದವರೇ ಆಗಿರುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ಮನೆಯಲ್ಲಿ ಗಂಡನಿಂದ ಇಂತಹ ಸ್ಪರ್ಧೆಯಲ್ಲಿ ಭಾಗವಹಿಸಲು ಒಪ್ಪಿಗೆಯನ್ನು ಹೇಗೆ ಕೂಡ ಪಡೆಯಬಹುದು. ಆದರೆ ಅತ್ತೆ,ಮಾವ ಅವರ ಪ್ರೋತ್ಸಾಹ ಕೂಡ ಮುಖ್ಯ. ಆ ನಿಟ್ಟಿನಲ್ಲಿ ತಾನು ಲಕ್ಕಿ ಎಂದು ಹೇಳಿ ಎಲ್ಲರಿಂದಲೂ ಸಹಕಾರವನ್ನು ನಿರೀಕ್ಷಿಸುವುದಾಗಿ ಹೇಳಿದರು ಸೌಜನ್ಯ ಹೆಗ್ಡೆ.
Leave A Reply