ಭ್ರಷ್ಟ, ಕೈಲಾಗದ ಕಾರ್ಪೋರೇಟರ್ ಗಳು ಮುಂದಿನ ಬಾರಿ ಆಯ್ಕೆಯಾಗಲೇಬಾರದು!!
ಕಳೆದ ಅಗಸ್ಟ್ ನಲ್ಲಿ ಮೇಯರ್ ಆಗಿದ್ದ ಭಾಸ್ಕರ್ ಅವರು ಏನು ಹೇಳಿದ್ರು ಎಂದರೆ ಮಳೆಗಾಲದ ನಂತರ ಮಂಗಳೂರಿನಲ್ಲಿ ಹೊಂಡ, ಗುಂಡಿ ಬಿದ್ದಿರುವ, ಮಳೆಯಿಂದ ಹಾನಿಗೊಳಗಾಗಿರುವ ರಸ್ತೆಗಳಿಗೆ ಪ್ಯಾಚ್ ಅಪ್ ವರ್ಕ್ ಮಾಡಲಾಗುವುದು. ಅದಕ್ಕಾಗಿ ನಾಲ್ಕು ಕೋಟಿ ರೂಪಾಯಿ ಹಣ ಬಿಡುಗಡೆಯಾಗಿದೆ ಎಂದು ಹೇಳಿದ್ರು. ಸರಿ, ಒಳ್ಳೆಯ ವಿಷಯ ಎಂದು ನಾವು ಸುಮ್ಮನಾಗಿದ್ವಿ. ಮೇಯರ್ ಅಗಸ್ಟ್ ನಲ್ಲಿ ಘೋಷಣೆ ಮಾಡಿದ್ದದ್ದು. ಮಳೆಗಾಲ ಮುಗಿದ ನಂತರ ಕೆಲಸ ಶುರು ಎಂದು ಹೇಳಿದ್ದ ಕಾರಣ ನವೆಂಬರ್ ಒಂದರಿಂದ ಕಾಮಗಾರಿ ಪ್ರಾರಂಭವಾಗಬೇಕಿತ್ತು. ಆದರೆ ನವೆಂಬರ್ ನಲ್ಲಿ ಆರಂಭವಾಗಲಿಲ್ಲ. ಈಗ ಮಾರ್ಚ್ ಅರ್ಧ ಮುಗಿಯುತ್ತಾ ಬರುತ್ತಿದೆ. ಇನ್ನು ಕೂಡ ಎಷ್ಟೋ ರಸ್ತೆಗಳ ಹೊಂಡ, ಗುಂಡಿಗಳನ್ನು ಸರಿಪಡಿಸಲಾಗಿಲ್ಲ. ಇನ್ನೊಂದೆರಡು ತಿಂಗಳ ಬಳಿಕ ಮಳೆಗಾಲ ಶುರುವಾಗುತ್ತದೆ. ಮೇ ಅರ್ಧದ ನಂತರ ಹಾಕಿದ್ರೂ ಕೂಡ ಅದು ನೀರಿನ ಮೇಲೆ ಹೋಮ ಮಾಡಿದ ಹಾಗೆ.
ಹಾಗಾದರೆ ಪಾಲಿಕೆಯವರು ಏನು ಮಾಡುತ್ತಿದ್ದರು?
ನವೆಂಬರ್ ಒಂದರಂದು ಪಾಲಿಕೆಯ ಕಡೆಯಿಂದ ಕಾಮಗಾರಿಯನ್ನು ಶಿಸ್ತಿನಿಂದ ಪ್ರಾರಂಭಿಸಿದರೆ ಜನವರಿ ಅಂತ್ಯದೊಳಗೆ ಮುಗಿಯುತ್ತಿತ್ತು. ಆದರೆ ಇವರು ಆರಂಭಿಸಿಲ್ಲ. ಹಾಗೂ ಹೀಗೂ ಆರಂಭಿಸಿದ ಬಳಿಕ ಈಗ ನೋಡಿದರೆ ನಾಲ್ಕು ಕೋಟಿಯಲ್ಲಿ ಅರ್ಧದಷ್ಟು ಹಣ ಕೂಡ ಖರ್ಚಾಗಿಲ್ಲ. ಹಾಗಾದರೆ ಇವರು ಹೇಳುವುದು ಯಾಕೆ? ಪಾಲಿಕೆಯ ಎದುರಿಗೆ ಇರುವ ಎಂಜಿ ರಸ್ತೆಯಲ್ಲಿಯೇ ಕಾಂಕ್ರೀಟ್ ಹಾಕಿರುವ ಜಾಗಗಳನ್ನು ಬಿಟ್ಟು ಆಚೀಚೆ ಇರುವ ಅನೇಕ ಕಡೆ ಪ್ಯಾಚ್ ವರ್ಕ್ ಮಾಡಿಲ್ಲ. ಹಾಗಿರುವಾಗ ಅನೇಕ ವಾರ್ಡುಗಳ ಒಳರಸ್ತೆಗಳ ಪರಿಸ್ಥಿತಿ ಹೇಗಿರಬಹುದು. ಹಾಗಾದರೆ ಇದನ್ನೆಲ್ಲ ನೋಡಿಕೊಳ್ಳಬೇಕಾದವರು ಯಾರು?
ಮೊದಲನೇಯದಾಗಿ ಸಂಶಯವೇ ಇಲ್ಲ. ಪಾಲಿಕೆಯ ಮನಪಾ ಸದಸ್ಯರೇ ಇದಕ್ಕೆ ನೇರ ಜವಾಬ್ದಾರರು. ಯಾಕೆಂದರೆ ಪ್ಯಾಚ್ ಅಪ್ ಗಾಗಿ ಇಟ್ಟ ನಾಲ್ಕು ಕೋಟಿ ಅನುದಾನವನ್ನು ಯಾವೆಲ್ಲ ವಾರ್ಡುಗಳಿಗೆ ಎಷ್ಟೆಷ್ಟು ಹಂಚಬೇಕು ಎಂದು ಮೇಯರ್ ಅಥವಾ ಪಾಲಿಕೆಯ ಕಮೀಷನರ್ ಅವರಿಗೆ ಕುಳಿತ ಕಡೆಯಲ್ಲಿಯೇ ಕನಸು ಬೀಳುವುದಿಲ್ಲ. ನಿಮ್ಮ ನಿಮ್ಮ ವಾರ್ಡುಗಳಲ್ಲಿ ರಸ್ತೆಗಳ ಪ್ಯಾಚ್ ಅಪ್ ವರ್ಕ್ ಮಾಡಲು ಇದ್ದರೆ ಪಟ್ಟಿ ಕೊಡಿ ಎಂದು ಕೇಳಲಾಗಿರುತ್ತದೆ. ಕಾರ್ಪೋರೇಟರ್ ಗಳು ಕೊಟ್ಟಿರುತ್ತಾರೆ ಅಥವಾ ಕೊಡದೇ ಮಲಗಿರುತ್ತಾರೆ. ಅದರ ನಂತರ ಅದನೆಲ್ಲ ಒಟ್ಟು ಮಾಡಿ ಇಷ್ಟು ಹಣ ಎಂದು ನಿಗದಿಪಡಿಸಲಾಗಿರುತ್ತದೆ. ಹಾಗೇ ನಿಗದಿಯಾದದ್ದೇ ನಾಲ್ಕು ಕೋಟಿ. ಯಾವಾಗ ತಮ್ಮ ವಾರ್ಡುಗಳ ಹೊಂಡ,ಗುಂಡಿಗಳನ್ನು ಮುಚ್ಚುವ ಕಾಮಗಾರಿ ಪ್ರಾರಂಭವಾಗಿಲ್ಲವೋ ಆಗ ತಕ್ಷಣ ಧ್ವನಿ ಎತ್ತಬೇಕಾದವರು ಆ ವಾರ್ಡಿನ ಕಾರ್ಫೋರೇಟರ್ .
ಅವರು ಮಾತನಾಡುತ್ತಿಲ್ಲ …
ಅವರು ಮಾತನಾಡುತ್ತಿಲ್ಲ ಎಂದರೆ ಕಾಮಗಾರಿ ಮಾಡದೇಯೇ ಬಿಲ್ ಆಗಿರಬಹುದಾ ಎನ್ನುವ ಸಂಶಯ ನಿಮ್ಮನ್ನು ಕಾಣಬಹುದು. ಅದಕ್ಕಾಗಿ ನೀವು ಧ್ವನಿ ಎತ್ತಬೇಕು. ನಿಮ್ಮ ತೆರಿಗೆಯ ಹಣ ನಿಮ್ಮ ಉಪಯೋಗಕ್ಕೆ ಬೀಳದೇ ಕೇವಲ ಕೆಲವರ ಜೇಬಿಗೆ ಹೋಗುತ್ತಾ ಇದ್ದರೆ ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವೇ? ಅದಕ್ಕೆ ನೀವು ನಿಮ್ಮ ಕಾರ್ಪೋರೇಟರ್ ಗಳನ್ನು ದಾರಿಯಲ್ಲಿ ನಿಲ್ಲಿಸಿ ಇಂತಿಂತಹ ರೋಡುಗಳ ರಿಪೇರಿಗಳ ಕೆಲಸ ಯಾಕೆ ಆಗಿಲ್ಲ ಎಂದು ಮುಖದ ಮೇಲೆಯೇ ಕೇಳಬೇಕು. ಅವರು ಪಾಲಿಕೆಯ ಇಂಜಿನಿಯರ್ ಗಳ ಹೆಸರನ್ನು ಹೇಳಿ ಅವರೇ ಕಾರಣ ಎನ್ನಬಹುದು. ಇಂಜಿನಿಯರ್ಸ್ ಗಳ ಫೋನ್ ನಂಬ್ರ ಕೇಳಿ, ಕರೆ ಮಾಡಿ. ನಮ್ಮ ರಸ್ತೆಗೆ ಯಾವಾಗ ಪ್ಯಾಚ್ ಅಪ್ ವರ್ಕ್ ಎಂದು ಕೇಳಿ. ಒಂದೋ ನಿಮ್ಮ ಕಾರ್ಪೋರೇಟರ್ ಹಣ ತಿಂದು ಸುಮ್ಮನೆ ಕುಳಿತಿರಬೇಕು. ಇಲ್ಲ ಅಸಹಾಯಕನಾಗಿರಬೇಕು. ಆಗ ಮಾತ್ರ ನಿಮ್ಮ ಹೊಂಡದ ಕೆಲಸ ಆಗಿರುವುದಿಲ್ಲ. ಭ್ರಷ್ಟ, ಕೈಲಾಗದವರು ಕಾರ್ಪೋರೇಟರ್ ಗಳಾಗಿ ಮುಂದಿನ ಬಾರಿ ಆಯ್ಕೆಯಾಗದೇ ಇರುವ ಹಾಗೆ ನೋಡುವ ಜವಾಬ್ದಾರಿ ಮಾತ್ರ ನಿಮ್ಮದು!
Leave A Reply