ಟ್ರೇಡ್ ಲೈಸೆನ್ಸ್ ನವೀಕರಣ ಎನ್ನುವುದು ಪಾಲಿಕೆಯಲ್ಲಿ ಗಜಪ್ರಸವ ಅದಂತೆ!!
ಮಗು ಮೊದಲು ಅಂಬೆಗಾಲು ಇಡುತ್ತದೆ. ನಂತರ ದೊಡ್ಡದಾಗಿ ನಡೆಯುತ್ತದೆ. ನಂತರ ಓಡುತ್ತದೆ. ಬಳಿಕ ಮತ್ತೆ ಇದು ಜೀವನದ ಕೊನೆಯಲ್ಲಿ ಮರುಕಳಿಸುತ್ತದೆ. ಓಡುತ್ತಿದ್ದವರು ನಡೆಯುವ ಹಂತಕ್ಕೆ ಬರುತ್ತಾರೆ. ನಂತರ ಕೊನೆಗೆ ಹಾಸಿಗೆ. ಮಂಗಳೂರು ಮಹಾನಗರ ಪಾಲಿಕೆ ಸದ್ಯ ಹಾಸಿಗೆಯಲ್ಲಿದೆಯೋ ಅಥವಾ ಅಂಬೆಗಾಲು ಇಡುತ್ತಿದೆಯೋ ಎನ್ನುವುದನ್ನು ಅವರೇ ಹೇಳಬೇಕು. ಇದು ಹೇಳಲು ಕಾರಣ ಕುಂಟುತ್ತಿರುವ ಉದ್ದಿಮೆ ಪರವಾನಿಗೆ ನವೀಕರಣದ ಕೆಲಸ. ಮೊನ್ನೆ ಫೆಬ್ರವರಿ 28 ಉದ್ದಿಮೆ ಪರವಾನಿಗೆ ನವೀಕರಣ ಮಾಡುವವರಿಗೆ ಕೊನೆಯ ಗಡುವಾಗಿತ್ತು. ಅದರ ನಂತರ ಮಾಡುವವರಿಗೆ ಒಟ್ಟು ಶುಲ್ಕದ 25% ದಂಡ ವಿಧಿಸುವ ಪ್ರಕ್ರಿಯೆ ನಡೆಯುತ್ತದೆ. ಆದರೆ ವಿಷಯವಿರುವುದು ತುಂಬಾ ಉದ್ದಿಮೆದಾರರು ಫೆಬ್ರವರಿ ಕೊನೆಯ ತನಕ ಕಾಯುವುದು ಯಾಕೆ ಎಂದು ಜನವರಿಯಲ್ಲಿಯೇ ನವೀಕರಣಕ್ಕೆ ಮುಂದಾಗಿ ತಮ್ಮ ಕಡೆಯಿಂದ ಕೊಡಬೇಕಾಗಿರುವ ದಾಖಲೆಗಳನ್ನು ಕೊಟ್ಟು ಪ್ರಕ್ರಿಯೆಗಳನ್ನು ಮುಗಿಸಿದ್ದಾರೆ ಹಾಗೂ ನವೀಕರಣವಾಗಿರುವ ಪ್ರಮಾಣಪತ್ರ ಯಾವಾಗ ತಮ್ಮ ಕೈ ಸೇರುತ್ತದೆ ಎಂದು ಕಾಯುತ್ತಾ ಕುಳಿತಿದ್ದಾರೆ. ಆದರೆ ಅವರಿಗೆ ಇಲ್ಲಿಯ ತನಕ ಅಂದರೆ ಮಾರ್ಚ್ ಅರ್ಧ ಮುಗಿದರೂ ಇನ್ನೂ ಪರವಾನಿಗೆ ನವೀಕರಣ ಮಾಡಿ ಕೊಟ್ಟೇ ಇಲ್ಲ. ಹಣ ಕಟ್ಟಿದರೂ ಚಲನ್ ಕೊಟ್ಟಿಲ್ಲ. ಹಿಂದೆ ಈ ಕೆಲಸಗಳಿಗೆ ಹೆಚ್ಚೆಂದರೆ ಒಂದು ವಾರ ಸಾಕಾಗುತ್ತಿತ್ತು. ಈಗ ಇದಕ್ಕೆ ಒಂದೂವರೆ ತಿಂಗಳು ಆದರೂ ನವೀಕರಣವಾಗಿರುವ ಪ್ರಮಾಣಪತ್ರ ಉದ್ಯಮಿಗಳ ಕೈಗೆ ಸಿಗುತ್ತಿಲ್ಲ.
ಮೇಲಿನಿಂದ ಕೆಳಗೆ, ಕೆಳಗಿನಿಂದ ಮೇಲೆ ಓಡಾಟ…
ಉದ್ದಿಮೆ ಪರವಾನಿಗೆ ನವೀಕರಣ ಮಾಡುವ ಪ್ರಕ್ರಿಯೆ ಏನೂ ಕಬ್ಬಿಣದ ಕಡಲೆಕಾಯಿ ಅಲ್ಲ. ಈ ಕೆಲಸ ಹೇಗೆ ನಡೆಯುತ್ತದೆ ಎಂದು ಮೊದಲು ಅದನ್ನು ವಿವರಿಸುತ್ತೇನೆ. ಉದ್ದಿಮೆದಾರರು ಮೊದಲಿಗೆ ತಮ್ಮ ಹಿಂದಿನ ಟ್ರೇಡ್ ಲೈಸೆನ್ಸ್ ಪತ್ರ, ತೆರಿಗೆ ಕಟ್ಟಿರುವ ರಸೀದಿಯ ಪ್ರತಿಯನ್ನು ಪಾಲಿಕೆಗೆ ಸಲ್ಲಿಸಬೇಕು. ಅದರೊಂದಿಗೆ ನಿಶ್ಚಿತ ಮೊಬಲಗನ್ನು ಕೊಡಬೇಕು. ನಿಮ್ಮ ಜಾಗದ ಪರಿಶೀಲನೆ ನಡೆಸಿದ ಬಳಿಕ ಆರೋಗ್ಯ ವಿಭಾಗದಿಂದ ಚಲನ್ ಸಿಗುತ್ತದೆ. ಹಿಂದೆ ವಾರದ ಒಳಗೆ ನವೀಕರಣವಾದ ಪತ್ರ ಸಿಗುತ್ತಿದ್ದ ಕಾರಣ ಇದೊಂದು ಇಶ್ಯೂ ಆಗಿರಲಿಲ್ಲ. ಚಲನ್ ಕಟ್ಟಿ, ಟ್ರೇಡ್ ಲೈಸೆನ್ಸ್ ಪ್ರಿಂಟ್ ಉದ್ದಿಮೆದಾರರ ಕೈಯಲ್ಲಿ ಬರುತ್ತಿತ್ತು. ಆದರೆ ಈಗ ಹಾಗೆ ಆಗುತ್ತಿಲ್ಲ.
ಈಗ ಹಳೆ ಟ್ರೇಡ್ ಲೈಸೆನ್ಸ್ ಪ್ರತಿ, ತೆರಿಗೆ ಕಟ್ಟಿದ ರಸೀದಿಯ ಪ್ರತಿ ಕೊಟ್ಟ ಬಳಿಕವೂ ಟ್ರೇಡ್ ಲೈಸೆನ್ಸ್ ನವೀಕರಣವಾದ ಸರ್ಟಿಫೀಕೇಟ್ ಸಿಗುವುದು ಮರೀಚಿಕೆಯಾಗುತ್ತಿದೆ. ವ್ಯಾಪಾರಿಗಳು ಪಾಲಿಕೆಗೆ ಬಂದು ಕೇಳಿದರೆ ಮೇಲಿನ ಮಹಡಿಗೆ ಹೋಗಿ ಎಂದು ಕೆಳಗೆ ಕುಳಿತವರು ಹೇಳುತ್ತಾರೆ. ಮೇಲೆ ಕೋಣೆಗಳನ್ನು ಹುಡುಕಿ ಹೋದ ನಂತರ ಇಲ್ಲಿ ಅಲ್ಲ ಅಲ್ಲಿ, ಅಲ್ಲಿ ಅಲ್ಲ ಇಲ್ಲಿ ಎಂದು ಓಡಾಡಿಸಲಾಗುತ್ತದೆ. ಒಬ್ಬ ವ್ಯಾಪಾರಿ ಎಷ್ಟು ಸಲ ಎಂದು ತನ್ನ ವ್ಯಾಪಾರವನ್ನು ಬಿಟ್ಟು ಪಾಲಿಕೆಗೆ ಓಡಿಬರುವುದು. ಆತ ಸಹಜವಾಗಿ ಆರೋಗ್ಯ ವಿಭಾಗದ ಹೆಲ್ತ್ ಇನ್ಸಪೆಕ್ಟರ್ ಗಳ ಮೊರೆ ಹೋಗುತ್ತಾನೆ.
ಹೆಲ್ತ್ ಇನ್ಸಪೆಕ್ಟರ್ ಜೊತೆ ಚೆನ್ನಾಗಿದ್ದರೆ…
ಹಾಗಂತ ಆರೋಗ್ಯ ವಿಭಾಗದ ಹೆಲ್ತ್ ಇನ್ಸಪೆಕ್ಟರ್ ಗಳು ತಮ್ಮ ವಾರ್ಡಿನ ತಮಗೆ ಪರಿಚಯ ಇರುವ ಮಳಿಗೆಗಳಿಂದ ತಾವೇ ದಾಖಲೆಗಳನ್ನು ಸಂಗ್ರಹಿಸಿ ಎರಡು ದಿನಗಳೊಳಗೆ ಟ್ರೇಡ್ ಲೈಸೆನ್ಸ್ ನವೀಕರಣ ಮಾಡಿಸಿ ಪ್ರಿಂಟ್ ತಂದುಕೊಡುತ್ತಾರೆ. ಅಲ್ಲಿ ಅವರಿಗೆ ಉದ್ದಿಮೆಯ ಮಾಲೀಕರ ವಿಶೇಷವಾದ “ಪ್ರೀತಿ” ಸಿಗುವುದರಿಂದ ಅವರೇ ಮಾಡಿಸಿಕೊಡುತ್ತಾರೆ. ಅದೇ ನೀವಾಗಿ ಪಾಲಿಕೆಗೆ ಹೋದರೆ ವ್ಯಾಪಾರ ಸೆಟ್ ಮಾಡುವಾಗ ಆದ ಕಿರಿಕಿರಿಗಿಂತ ಈಗ ಉಪದ್ರವ ಜಾಸ್ತಿಯಾಗಿರುತ್ತದೆ.
ಅಷ್ಟಕ್ಕೂ ಈ ಸಮಸ್ಯೆ ಶುರುವಾದದ್ದು ಹೇಗೆ ಎಂದರೆ ಉದ್ದಿಮೆದಾರರು ಪರವಾನಿಗೆಯನ್ನು ನವೀಕರಣ ಮಾಡುವಾಗ ತಮ್ಮ ವ್ಯಾಪಾರ ಮಳಿಗೆಯ ವಿಸ್ತ್ರೀರ್ಣವನ್ನು ಕಡಿಮೆ ಬರೆಯುತ್ತಾರೆ ಎಂದು ಆರೋಗ್ಯ ಅಧಿಕಾರಿಗಳು ತಾವೇ ಅಲ್ಲಿಗೆ ಹೋಗಿ ಪರಿಶೀಲನೆ ಮಾಡಿ ನಂತರ ನವೀಕರಣದ ಪ್ರಕ್ರಿಯೆ ಮಾಡಬೇಕು ಎನ್ನುವುದು ಐಡಿಯಾವಾಗಿತ್ತು. ಆದರೆ ಐಡಿಯಾ ಏನೋ ಚೆನ್ನಾಗಿದೆ. ಆದರೆ ಇದರಿಂದ ಪಾಲಿಕೆಗೆ ಏನೂ ಉಪಯೋಗವಾಗಿಲ್ಲ. ಸುಳ್ಳು ಹೇಳಿ ನವೀಕರಣ ಮಾಡಿದ ಒಬ್ಬನೇ ಒಬ್ಬ ಉದ್ದಿಮೆದಾರನನ್ನು ಪಾಲಿಕೆಯ ಅಧಿಕಾರಿಗಳು ಇಲ್ಲಿಯ ತನಕ ಹಿಡಿದಿಲ್ಲ. ಆದರೆ ಜನರಿಗೆ ಮಾತ್ರ ಇದರಿಂದ ತೊಂದರೆಯಾಗುತ್ತಿದೆ ಎನ್ನುವುದು ಸುಳ್ಳಲ್ಲ. ಒಂದೋ ನೀವು ಉದ್ದಿಮೆದಾರರಲ್ಲಿ ಕಳ್ಳರು ಇದ್ದಾರೆ ಎಂದು ಅಂದುಕೊಂಡಿದ್ದೀರಿ ಎಂದಾದರೆ ಅವರನ್ನು ಹಿಡಿಯಿರಿ ಅಥವಾ ಏನೂ ಸಿಗಲಿಲ್ಲವಾ, ಬೇರೆಯವರಿಗಾದರೂ ಸುಲಭವಾಗಿ ಕೆಲಸ ಮಾಡಿಕೊಡಿ. ನೀವು ಏನೂ ಮಾಡುತ್ತಿಲ್ಲ. ಆದರೆ ಹೆಲ್ತ್ ಇನ್ಸಪೆಕ್ಟರ್ ಗಳು ತಮಗೆ ಬೇಕಾದವರಿಗೆ ತಾವೇ ಮುಂದೆ ನಿಂತು ಮಾಡಿಕೊಡುತ್ತಿದ್ದಾರೆ. ಇದರ ಅರ್ಥ ಏನು? ಇನ್ನಾದರೂ ಪಾಲಿಕೆಯಲ್ಲಿ ಉದ್ದಿಮೆ ಪರವಾನಿಗೆ ನವೀಕರಣಕ್ಕೆ ಬರುವ ಜನರಿಗೆ ಅಧಿಕಾರಿಗಳು ಯಾವುದೇ ಕಿರಿಕಿರಿ ಮಾಡದೇ ಕೆಲಸ ಮಾಡಿಕೊಡಲಿ ಎಂದು ಹಾರೈಸೋಣ
Leave A Reply