ಜನವರಿಯಲ್ಲಿ ನೀರು ಸಾಕಷ್ಟಿದೆ ಎಂದಿದ್ದ ಮೇಯರ್, ಕಮೀಷನರ್, ಈಗ ಯಾಕಿಲ್ಲ!!
ಊರು ಕೊಳ್ಳೆ ಹೊಡೆದು ಹೋದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎನ್ನುವ ಗಾದೆ ಮಾತು ಇದೆ. ಅದು ನಮ್ಮ ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಸರಿಯಾಗಿ ಹೊಂದುತ್ತದೆ. ನೀವೆನೆ ಸರ್ಕಸ್ ಮಾಡಿ. ಅವರನ್ನು ಸುಧಾರಿಸಲು ಸಾಧ್ಯವಿಲ್ಲ. ಏಕೆಂದರೆ ಅವರದ್ದು ಬಹುಕೃತ ವೇಷ. ಸದ್ಯ ಪಾಲಿಕೆಯ ಅಧಿಕಾರಿಗಳು ಅಚಾನಕ್ ಆಗಿ ನೀರನ್ನು ಉಳಿಸುವ ಆಪತ್ ಬಾಂದವರ ಗೆಟಪ್ಪಿನಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ನೀರನ್ನು ರೇಶನಿಂಗ್ ಮೂಲಕ ಕೊಡುವ ಕೆಲಸಕ್ಕೆ ಕೈ ಹಾಕಿದ್ದಾರೆ. ಅಷ್ಟಕ್ಕೂ ಇದು ಅಗತ್ಯವೇ ಎಂದು ಹೇಳುವ ಮೊದಲು ನಾನು ಸಣ್ಣ ಫ್ಲಾಶ್ ಬ್ಯಾಕ್ ಗೆ ನಿಮ್ಮನ್ನು ಕರೆದುಕೊಂಡು ಹೋಗುತ್ತೇನೆ.
ಎರಡು ಎಂಜಿಡಿ ಕುಡಿಯುವ ಕಳ್ಳಬೇಕು ಯಾವುದು..
ಮಂಗಳೂರಿಗೆ ನಿತ್ಯ ತುಂಬೆಯಿಂದ 21 ಎಂಜಿಡಿ ನೀರು ಪಂಪ್ ಆಗುತ್ತಾ ಇರುತ್ತದೆ. ಮಂಗಳೂರು, ಮೂಲ್ಕಿ, ಉಳ್ಳಾಲ ಏನೇ ಹಿಡಿದರೂ ನಾಗರಿಕರ ಪೂರೈಕೆಗೆ ನಿಜವಾಗಿಯೂ ಬೇಕಾಗಿರುವುದು 19 ಎಂಜಿಡಿ ನೀರು ಮಾತ್ರ. ಹಾಗಾದರೆ ಉಳಿದ 2 ಮಿಲಿಯನ್ ಗ್ಯಾಲನ್ ಹೆಚ್ಚು ನೀರು ಏನು ಪಂಪ್ ಆಗ್ತಾ ಕೊಳವೆಗಳ ಮೂಲಕ ಹೊರಗೆ ಹೋಗುತ್ತಿದೆಯಲ್ಲ, ಅದು ಎಲ್ಲಿ ಮಾಯವಾಗುತ್ತಿದೆ ಎನ್ನುವುದನ್ನು ಯಾರಾದರೂ ಪತ್ತೆ ಮಾಡಿದ್ದಾರಾ? ಮೊದಲು ಅದನ್ನು ಜಿಲ್ಲಾಧಿಕಾರಿಗಳು ಪತ್ತೆ ಹಚ್ಚಬೇಕು. ಅಧಿಕಾರಿಗಳ ಸಭೆ ಕರೆದು ನಿಜಕ್ಕೂ ಪಂಪ್ ಆಗುತ್ತಿರುವ ನೀರು ಎಷ್ಟು ಮತ್ತು ಎಷ್ಟು ನೀರು ಜನರಿಗೆ ಬೇಕು ಎನ್ನುವುದನ್ನು ತಿಳಿದುಕೊಳ್ಳಬೇಕು. ಆ ಬಗ್ಗೆ ಶಾಸಕರು, ಜನಪ್ರತಿನಿಧಿಗಳು ಜಿಲ್ಲಾಧಿಕಾರಿಯವರ ಮೇಲೆ ಒತ್ತಡ ಹಾಕಿ ಸತ್ಯ ಬಹಿರಂಗ ಆಗಲು ಪ್ರಯತ್ನಿಸಬೇಕು. ನೀರು ಸರಬರಾಜು ಏಜೆನ್ಸಿಯ ಲೆಕ್ಕಾಚಾರದ ಪ್ರಕಾರ ಒಬ್ಬ ಮನುಷ್ಯ ಎಷ್ಟೇ ಸಲ ಸ್ನಾನ, ತಂಡಾಸು ಎಂದು ಮಾಡಿದರೂ ಸರಾಸರಿ 135 ಲೀಟರ್ ಗಿಂತ ಹೆಚ್ಚು ನೀರು ಒಬ್ಬನಿಗೆ ಬೇಡಾ. ಹಾಗಿರುವುದರಿಂದ ನೀರು ಪೂರೈಕೆ ಜಾಸ್ತಿ ಇರುವಾಗ ಯಾಕೆ ನೀರಿನ ಕೊರತೆ ಮಂಗಳೂರಿಗೆ ಬರುತ್ತದೆ ಎನ್ನುವುದರ ಗಮನವನ್ನು ಯಾರೂ ಕೂಡ ನೀಡುವುದಿಲ್ಲ.
ಏಳು ಮೀಟರ್ ಎತ್ತರ ವೇಸ್ಟಾ…
ಮಂಗಳೂರು ಮಹಾನಗರದಲ್ಲಿ ಎರಡು ಟೈಪಿನ ಜಾಗಗಳನ್ನು ಗುರುತಿಸಬಹುದು. ಒಂದು ತಗ್ಗು ಪ್ರದೇಶ ಮತ್ತೊಂದು ಎತ್ತರದ ಪ್ರದೇಶ. ತಗ್ಗು ಪ್ರದೇಶಗಳೆಂದರೆ ಉದಾಹರಣೆಗೆ ಮಣ್ಣಗುಡ್ಡೆ, ಉರ್ವಾ, ಲೇಡಿಹಿಲ್, ಅಶೋಕನಗರ ಹೀಗೆ ಇದ್ದರೆ ಎತ್ತರದ ಪ್ರದೇಶ ಎಂದರೆ ಕೋಡಿಕಲ್, ಶಕ್ತಿನಗರ, ಬಂಗ್ರಕೂಳೂರು ಹೀಗೆ ಹಲವು ಪ್ರದೇಶಗಳಿವೆ. ಹೈ ಲೆವೆಲ್ ಏರಿಯಾಗಳಲ್ಲಿ ಹಲವು ಕಡೆ ಎರಡು ದಿನಗಳಿಗೊಮ್ಮೆ ನಾಲ್ಕು ಗಂಟೆ ಮಾತ್ರ ನೀರು ಬರುವುದು. ಹಾಗಿದ್ದರೆ ಏಶಿಯನ್ ಡೆವಲಪ್ ಮೆಂಟ್ ಬ್ಯಾಂಕಿನವರು ಹಿಂದಿನ ಬಾರಿ ನಮ್ಮ ಮಂಗಳೂರಿಗೆ 180 ಕೋಟಿ ರೂಪಾಯಿ ಸಾಲ ನೀಡಿ 2024 ರ ತನಕ ಎಲ್ಲರಿಗೂ 24*7 ನೀರು ಕೊಡಿ ಎಂದು ಹೇಳಿದ್ದರಲ್ಲ, ಹಾಗಾದರೆ ಯಾಕೆ ನಮಗೆ ಇವತ್ತಿಗೂ ಸರಿಯಾಗಿ ಮಂಗಳೂರಿನ ಒಂದೇ ಒಂದು ಬೀದಿಯಲ್ಲಿ ಇಡೀ ದಿನ ನೀರು ಸಿಗುತ್ತಾ ಇಲ್ಲ. ಹಾಗಾದರೆ ಆ ಹಣ 180 ಕೋಟಿ ಎಲ್ಲಿ ನೀರಿನೊಂದಿಗೆ ಕೊಚ್ಚಿ ಹೋಯಿತು. ಯಾಕೆ ಆ ಬಗ್ಗೆ ಯಾರೂ ಕೂಡ ಕೇಳುವುದಿಲ್ಲ. ಮೇಯರ್ ಆಗಿದ್ದ ಭಾಸ್ಕರ್ ಕೆ ಮೊಯಿಲಿ ಹಾಗೂ ಆಗ ಕಮೀಷನರ್ ಆಗಿದ್ದ ಮೊಹಮ್ಮದ್ ನಝೀರ್ ಅವರು ಇದೇ ಜನವರಿಯಲ್ಲಿ ಒಂದು ಸುದ್ದಿಗೋಷ್ಟಿ ಮಾಡಿ ನಮ್ಮ ತುಂಬೆಯಲ್ಲಿ ಆರು ಮೀಟರ್ ನೀರು ಇದೆ. ಎಎಂಆರ್ ಡ್ಯಾಂನಲ್ಲಿಯೂ ನೀರಿನ ಸಂಗ್ರಹ ಸಾಕಷ್ಟಿದೆ. ಮೇ ಕೊನೆಯ ತನಕ ನಮಗೆ ಯಾವುದೇ ಸಮಸ್ಯೆ ಇಲ್ಲ ಎಂದು ಘಂಟಾಘೋಷವಾಗಿ ಹೇಳಿರುವಾಗ ಈಗ ಸಮಸ್ಯೆ ಎಲ್ಲಿಂದ ಬಂತು? ಅವರು ಯಾವ ಆಧಾರದ ಮೇಲೆ ಆ ಹೇಳಿಕೆಯನ್ನು ಕೊಟ್ಟಿದ್ದರು ಎಂದು ಈಗ ಪರಿಶೀಲಿಸಬೇಕು. ಜಿಲ್ಲಾಧಿಕಾರಿಯವರು ಅದನ್ನು ಕೂಡ ಚರ್ಚೆ ಮಾಡಬೇಕು.
ಇನ್ನೊಂದು ಬಹಳ ಮುಖ್ಯ ವಿಷಯ ಏನೆಂದರೆ ತುಂಬೆಯ ಹೊಸ ವೆಂಟೆಂಡ್ ಡ್ಯಾಂ ಏಳು ಮೀಟರ್ ಎತ್ತರ ಕಟ್ಟಲಾಗಿದೆ. ಆದರೆ ಅಷ್ಟು ಎತ್ತರ ಬಳಕೆಯಾಗುತ್ತಿಲ್ಲ. ಯಾಕೆಂದರೆ ಏಳು ಮೀಟರ್ ಎತ್ತರ ನೀರು ನಿಲ್ಲಿಸುವ ಯೋಗ್ಯತೆಯನ್ನು ನಮ್ಮ ಮಂಗಳೂರು ಮಹಾನಗರ ಪಾಲಿಕೆ ಹೊಂದಿಲ್ಲ. ಏಳು ಮೀಟರ್ ಎತ್ತರ ನೀರು ನಿಲ್ಲಿಸುವುದೇ ಇಲ್ಲ ಎಂದಾದರೆ ಕಟ್ಟುವುದು ಯಾಕೆ? ಸಿನೆಮಾದ ಪೋಸ್ಟರ್ ಅಂಟಿಸುವುದಕ್ಕಾ ಅಥವಾ ರಾಜಕೀಯ ಬ್ಯಾನರ್ ಕಟ್ಟುವುದಕ್ಕಾ? ಅದನ್ನು ನಮ್ಮ ಜಿಲ್ಲಾ ಉಸ್ತುವಾರಿ ಸಚಿವರು ಉತ್ತರಿಸಬೇಕು. ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಕೂಡ ನಮ್ಮ ಮಂಗಳೂರಿನವರು. ಅವರು ಹೇಳಬೇಕು. ಈ ವಿಷಯಗಳು ಕೂಡ ಹಾಗೇ ಮುಚ್ಚಿಹೋಗುತ್ತಿವೆ. ಇನ್ನೂ ಸಾಕಷ್ಟು ಸಂಗತಿಗಳು ಈ ನೀರಿನ ರಾಜಕೀಯದ ಹಿಂದೆ ಇದೆ. ನಾಳೆ ಸಿಗೋಣ!
Leave A Reply