ಶೇವ್ ಮಾಡಲು ಗಡ್ಡ ಬೆಳೆದಿರಬೇಕು, ನೀರು ಉಳಿಸಲು ತಲೆಯ ಒಳಗೆ ಮೆದುಳು ಬೆಳೆದಿರಬೇಕು!!!
ನೀರಿನ ಬೆಲೆ ನಮಗೆ ಗೊತ್ತಾಗುವುದು ಒಂದು ಲೀಟರ್ ಬಿಸ್ಲೆರಿ ಅಥವಾ ಅಂತಹುದೇ ಯಾವುದಾದರೂ ನೀರಿನ ಬಾಟಲಿ ಕೊಂಡು ಕೊಂಡಾಗ. ಆಗ ಮಾತ್ರ ನಾವು ಛೇ, ನೀರಿಗೆ ಎಷ್ಟು ಬೆಲೆಯಲ್ವಾ? ಎನ್ನುವ ಉದ್ಘಾರವನ್ನು ತೆಗೆಯುತ್ತೇವೆ. ಅದು ಬಿಟ್ಟು ಉಳಿದ ಎಲ್ಲಾ ಸಮಯದಲ್ಲಿ ನಮಗೆ ನೀರು ಒಂದು ಅಮೂಲ್ಯ ದ್ರವ ಪದಾರ್ಥ ಎನ್ನುವುದು ಗೊತ್ತೆ ಆಗುವುದಿಲ್ಲ. ಅದರಲ್ಲಿಯೂ ಕೆಲವು ವ್ಯಕ್ತಿಗಳು ತಲೆಯಲ್ಲಿ ದೊಡ್ಡ ದೊಡ್ಡ ಡಿಗ್ರಿಗಳನ್ನು ಹೊಂದಿರುತ್ತಾರೆ ಆದರೆ ನೀರಿನ ವಿಷಯ ಬಂದಾಗ ಪರಮ ಮೂರ್ಖರಂತೆ ವರ್ತಿಸುತ್ತಾರೆ. ಬೇಕಾದರೆ ನೀವೆ ನೋಡಿರಬಹುದು. ಶೇವಿಂಗ್ ಮಾಡಲು ವಾಶ್ ಬೇಸಿನ್ ಹತ್ತಿರ ನಿಂತಿರುತ್ತಾರೆ. ಕನ್ನಡಿ ನೋಡುತ್ತಾ ಶೇವ್ ಮಾಡುತ್ತಾ ಇರುತ್ತಾರೆ. ಆದರೆ ಕೆಳಗೆ ಪೈಪಿನಲ್ಲಿ ನೀರು ಹೋಗ್ತಾ ಇರುತ್ತದೆ. ಇವರು ಶೇವ್ ಮಾಡಿ ನಾಲ್ಕು ಸಲ ಮುಖವನ್ನು ಒರೆಕೋರೆ ನೋಡಿ ಕೊನೆಗೆ ಪೈಪ್ ಬಂದ್ ಮಾಡುವಾಗ ಇಪ್ಪತ್ತು ಲೀಟರ್ ನೀರು ವೇಸ್ಟ್ ಆಗಿರುತ್ತದೆ. ಅದರ ಬದಲು ಒಂದು ಮಗ್ ನಲ್ಲಿ ಅರ್ಧ ಲೀಟರ್ ನೀರಿನಲ್ಲಿ ಶೇವ್ ಮುಗಿಸಬಾರದಾ? ಗಡ್ಡ ಎಲ್ಲರಿಗೂ ಬೆಳೆಯುತ್ತದೆ. ಆದರೆ ಅದನ್ನು ತೆಗೆಯುವವರಿಗೆ ತಲೆಯ ಒಳಗೆ ಮೆದುಳು ಎಷ್ಟು ಬೆಳೆದಿದೆ ಎನ್ನುವುದು ಕೂಡ ಬಹಳ ಮುಖ್ಯ.
ಇನ್ನು ಕೆಲವರಿಗೆ ತಮಷ್ಟೇ ತಮ್ಮ ಕಾರು ಮುಖ್ಯ. ಅದು ಫಳಫಳ ಹೊಳೆದರೆ ಅವರಿಗೆ ಹೆಮ್ಮೆ. ಅದಕ್ಕಾಗಿ ಕಾರು ನಾಲ್ಕು ದಿನ ಓಡಾಡಿದರೆ ಕಾರುಗೆನೆ ಮುಜುಗರ ಆಗಬೇಕು. ಆ ರೀತಿಯಲ್ಲಿ ಸ್ನಾನ ಮಾಡಿಸುತ್ತಾರೆ. ಇವರು ಅರ್ಧ ಬಕೆಟ್ ನೀರು ತೆಗೆದುಕೊಂಡು ಕಾರು ತೊಳೆಯುವುದಾದರೆ ಯಾರ ಅಭ್ಯಂತರ ಇಲ್ಲ. ಆದರೆ ಮಹಾನುಭಾವರು ಕೈಯಲ್ಲಿ ನೀರಿನ ರಬ್ಬರ್ ಪೈಪ್ ಹಿಡಿದು ಕಾರಿನ ಮುಂದೆ ನಿಲ್ಲುತ್ತಾರೆ. ನೀರು ಆನ್ ಮಾಡುತ್ತಾರೆ. ಇವರು ಕಾರು ತೊಳೆದು ಮುಗಿಯುವಾಗ ಮುಗಿಯುವ ನೀರಿನ ಲೆಕ್ಕ ಇಲ್ಲ. ಅದೇ ವಿಧಾನವನ್ನು ಹಲವರು ಬೈಕ್, ಸ್ಕೂಟರ್ ತೊಳೆಯುವಾಗಲೂ ಮಾಡುತ್ತಾರೆ. ಕಾರು, ಬೈಕ್ ತೊಳೆಯಲು ಕಿಸೆಯಲ್ಲಿ ಹಣ ಇದ್ದರೆ ಸಾಕಾಗುವುದಿಲ್ಲ. ತಲೆಯಲ್ಲಿ ಮೆದುಳು ಈ ವಿಷಯದಲ್ಲಿಯೂ ಬೆಳೆದಿರಬೇಕು.
ಇನ್ನು ಕೆಲವರು ಇದ್ದಾರೆ. ಮನೆಯ ಅಂಗಳದಲ್ಲಿ ನಾಲ್ಕು ತೆಂಗಿನಮರ ಸಹಿತ ಒಂದಿಷ್ಟು ಹೂವಿನ ಗಿಡಗಳು ಇರುತ್ತವೆ. ನೀರಿನ ಪೈಪನ್ನು ತೆಂಗಿನಮರದ ಕೆಳಗೆ ಹೇಗೆ ಬಿಡುತ್ತಾರೆ ಎಂದರೆ ಮರಕ್ಕೆ ಶೀತ ಆಗಬೇಕು. ಅಷ್ಟರಮಟ್ಟಿಗೆ ನೀರು ಕುಡಿಸುತ್ತಾರೆ. ಅದರ ಬದಲು ನೀರು ಕಡಿಮೆ ಇರುವಾಗ ಲೆಕ್ಕದ ಎರಡು ಬಕೆಟ್ ಸುರಿದರೆ ಸಾಕಲ್ವ? ಇಂತಹ ಹಲವು ಸೂಕ್ಷ್ಮಗಳು ನೀರಿನ ವಿಷಯದಲ್ಲಿ ಇವೆ. ನೀವು ಕೂಡ ಇಂತಹ ಯಾವುದಾದರೂ ವಿಧಾನದ ಮೂಲಕ ನೀರು ಪೋಲು ಮಾಡುತ್ತಾ ಇದ್ದರೆ ದಯವಿಟ್ಟು ಅದನ್ನು ಕೈಬಿಡಿ. ಯಾರಾದರೂ ನಿಮ್ಮ ಆತ್ಮೀಯರು ಹೀಗೆ ನೀರು ಪೋಲು ಮಾಡುತ್ತಾ ಇದ್ದರೆ ಅವರಿಗೆ ಬುದ್ಧಿ ಹೇಳಿ. ಸುಧಾರಿಸುವುದಾದರೆ ಆಗಲಿ.
ಇನ್ನು ನೀರು ಉಳಿಯಬೇಕಾದರೆ ಅಂತರ್ಜಲ ಹೆಚ್ಚಾಗಬೇಕು. ಈಗಾಗಲೇ ಮಂಗಳೂರಿನ ಬಿಲ್ಡರ್ಸ್ ಸಿಕ್ಕಿದ ಕಡೆ ಬೋರ್ ವೆಲ್ ಕೊರೆದು ತಮ್ಮ ಕಟ್ಟಡಗಳ ಗೋಡೆಗಳ ಮೇಲೆ ಸುರಿದು ಗೋಡೆ ಕಟ್ಟಿ ಮಾಡಿಕೊಂಡಿದ್ದಾರೆ. ಆದರೆ ಒಳಗಿನಿಂದಲೇ ಭೂಮಿಯಲ್ಲಿ ಅಂತರ್ಜಲ ಕುಸಿತ ಕಾಣುತ್ತಾ ಇದೆ. ಇದು ಭವಿಷ್ಯಕ್ಕೆ ದೊಡ್ಡ ಎಚ್ಚರಿಕೆ ಘಂಟೆ. ಇನ್ನು ಎಲ್ಲಿಯಾದರೂ ಬೋರ್ ವೆಲ್ ಕೊರೆಯಲಾಗುತ್ತಿರುವ ದೃಶ್ಯ ನಿಮ್ಮ ಕಣ್ಣಿಗೆ ಬಿದ್ದರೆ ಆ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತನ್ನಿ. ಯಾಕೆಂದರೆ ಬೋರ್ ವೆಲ್ ಕೊರೆಯಬೇಕಾದರೆ ಕಡ್ಡಾಯವಾಗಿ ಜಿಲ್ಲಾಧಿಕಾರಿಗಳ ಅನುಮತಿ ಬೇಕು. ಅನುಮತಿ ತೆಗೆದುಕೊಳ್ಳದೆ ಯಾರಾದರೂ ಕೊರೆಯುತ್ತಿದ್ದರೆ ಒಬ್ಬ ಜವಾಬ್ದಾರಿಯುತ ನಾಗರಿಕನಾಗಿ ನಿಮ್ಮ ಜವಾಬ್ದಾರಿ ಸಾಕಷ್ಟಿದೆ. ಕೊನೆಯದಾಗಿ ಏನೆಂದರೆ ಎಲ್ಲಿಯಾದರೂ ನೀರು ಲಿಕೇಜ್ ಆಗಿ ಹೋಗುತ್ತಿದ್ದರೆ ನಾನು ಕೊಡುವ ಈ ಎರಡು ಸಂಖ್ಯೆಗಳಿಗೆ ಕರೆ ಮಾಡಲು ಮರೆಯಬೇಡಿ.
0824 2220306, 2220319. ಮಾಡುತ್ತಿರಲ್ಲ!!!
Leave A Reply