ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋದರೆ ಕುಮಾರಧಾರದಲ್ಲಿ ಸ್ನಾನ ಮಾಡುವ ಮುನ್ನ ಜಾಗ್ರತೆ!!
ಕುಕ್ಕೆ ಸುಬ್ರಹ್ಮಣ್ಯಕ್ಕೆ ಟೂರ್ ಹೋಗಲು ಪ್ಲಾನ್ ಮಾಡುತ್ತಿದ್ದಿರಾ, ದೇವಸ್ಥಾನ ಪ್ರವೇಶಿಸುವ ಮೊದಲು ಕುಮಾರಧಾರಾ ನದಿಯಲ್ಲಿ ಸ್ನಾನ ಮಾಡಿಯೇ ಶುದ್ಧರಾಗಿ ಹೋಗೋಣ ಎಂದು ನೀವು ಸ್ಕೆಚ್ ಹಾಕಿದ್ದಿರಿ ಎಂದಾದರೆ ನೀರಿಗೆ ಇಳಿಯುವ ಮೊದಲು ಅದು ಎಷ್ಟು ಶುದ್ಧವಾಗಿದೆ ಎನ್ನುವುದನ್ನು ನೋಡಿ. ಮೇಲ್ನೋಟಕ್ಕೆ ಕುಮಾರಾಧಾರ ತಿಳಿಬೆಳಂದಿಗಳಂತೆ ಕಾಣುತ್ತದೆ. ಆದರೆ ಅದರ ಕೆಳಗೆ ಅಪ್ಪಟ ಅಮಾವಾಸ್ಯೆಯಂತೆ ಕಶ್ಮಲ ತುಂಬಿಕೊಂಡಿದೆ. ನೀವು ನೀರಿಗೆ ಇಳಿದು ಸ್ನಾನ ಮಾಡಲು ಮುಳುಗುವಾಗ ಯಾವ ಚರಂಡಿಯ ನೀರು ನಿಮ್ಮ ಮೂಗಿನ ಒಳಗೆ ಹೋಯಿತು ಎನ್ನುವುದೇ ನಿಮಗೆ ಗೊತ್ತಾಗುವುದಿಲ್ಲ. ನೀವು ನೀರ ಒಳಗೆ ಕಾಲಿಟ್ಟರೆ ಯಾರೋ ನೀರಿಗೆ ಬಿಟ್ಟ ದೇವರ ಫೋಟೋ ಮೇಲೆ ನೀವೆ ನಿಂತಿರಬಹುದು. ಆ ಫೋಟೋಗೆ ಫ್ರೇಮ್ ಕೂಡ ಹಾಕಿರಲಿಕ್ಕಿಲ್ಲ. ದೇವರ ಫೋಟೋ ಇರುವ ಚೀಲ, ಪ್ರಸಾದದ ಪ್ಯಾಕೇಟು, ಶಬರಿಮಲೆ ಸ್ವಾಮಿಗಳು ಧರಿಸುವ ಹಾರ ಸಹಿತ ಯಾವ ವಸ್ತುವಿನ ನಿಂತು ನೀವು ಸ್ನಾನ ಮಾಡುತ್ತಿದ್ದಿರಿ ಎನ್ನುವುದು ನಿಮಗೆ ಗೊತ್ತಾಗಲಿಕ್ಕಿಲ್ಲ. ನಿಮ್ಮ ಗ್ರಹಚಾರಕ್ಕೆ ಆ ಫೋಟೋಗಳ ಫ್ರೇಮುಗಳ ಮೊಳೆಗಳು ಹೊರಗೆ ಬಂದಿದ್ದರೆ ನಿಮ್ಮನ್ನು ದೇವರೇ ಕಾಪಾಡಬೇಕು. ಅದರೊಂದಿಗೆ ಯಾರೋ ಕುಡಿದು ಬಿಸಾಡಿದ ಮದ್ಯದ ಬಾಟಲಿಗಳು, ಕಾರು, ಜೀಪು ತೊಳೆದ ಸಾಬೂನಿನ ನೀರು, ಯಾವುದೋ ಲಾಡ್ಜ್ ನ ಡ್ರೈನೇಜ್ ನೀರು, ಪಾಯಿಖಾನೆಗಳ ಗಲೀಜು ಎಲ್ಲವೂ ಕುಮಾರಧಾರೆಯ ಒಡಲನ್ನು ಸೇರುತ್ತಿದೆ. ಅದರ ಒಳಗೆ ನಿಂತು ನೀವು ಸ್ನಾನ ಮಾಡುತ್ತೀರಿ. ನಿಮ್ಮನ್ನು ದೇವರೇ ರಕ್ಷಿಸಬೇಕು.
ಯುವ ಬ್ರಿಗೇಡ್ ಕಾರ್ಯಕ್ಕೆ ಜೈ…
ಇದೆಲ್ಲ ನೋಡಿಯೇ ಯುವ ಬ್ರಿಗೇಡ್ ತಂಡ ಈ ಬಾರಿ ಕುಮಾರಧಾರವನ್ನು ಶುದ್ಧಿಕರಿಸಬೇಕು ಎಂದು ಹೊರಟಿತ್ತು. ಅದರ ನೇತೃತ್ವವನ್ನು ವಹಿಸಿದವರು ಚಕ್ರವರ್ತಿ ಸೂಲಿಬೆಲೆ. ಸೋದರಿ ನಿವೇದಿತಾ ಪ್ರತಿಷ್ಟಾನ, ನಮ್ಮ ಸುಬ್ರಹ್ಮಣ್ಯ, ಸ್ಥಳೀಯ ಸಮಾನ ಮನಸ್ಕರು ಇವರೊಂದಿಗೆ ಸೇರಿ ಕುಮಾರಧಾರದ ಒಂದಿಷ್ಟು ಕಶ್ಮಲವನ್ನು ಹೊರಗೆ ತೆಗೆದರು. ಒಂದಷ್ಟು ಎಂದರೆ ಕನಿಷ್ಟ 20 ಟ್ರ್ಯಾಕ್ಟರ್ ಗಳು. ನೀರಿಗೆ ಇಳಿಯುವಾಗ ಹೆಚ್ಚೆಂದರೆ ಮೂರ್ನಾಕು ಟ್ರ್ಯಾಕ್ಟರ್ ಗಲೀಜು ಇರಬಹುದು ಎಂದು ಅಂದಾಜಿತ್ತು. ಆದರೆ ಇಳಿದ ಮೇಲೆ ಗೊತ್ತಾಯ್ತು ಇದು ಸಣ್ಣ ಪೆಟ್ಟಿಗೆ ಸರಿಯಾಗುವ ಕೆಲಸವಲ್ಲ. ಉದಾಹರಣೆಗೆ ಕುಮಾರಧಾರಾದ ದರ್ಪಣ ತೀರ್ಥ ಎನ್ನುವ ಏರಿಯಾದಲ್ಲಿ 250 ಮಂದಿ ನೀರಿಗೆ ಇಳಿದು ಅಂದಾಜು 20 ಟ್ರ್ಯಾಕ್ಟರ್ ಗಲೀಜು ತೆಗೆಯುತ್ತಾರೆ ಎಂದರೆ ಅದೆಷ್ಟು ನಿರ್ಲಕ್ಷ್ಯವನ್ನು ಅಲ್ಲಿನ ಆಡಳಿತ ಮಂಡಳಿ ಇಲ್ಲಿಯ ತನಕ ತೋರಿಸಿತ್ತು ಎನ್ನುವುದು ಅರ್ಥ ಮಾಡಿಕೊಳ್ಳಿ. ಅದರಲ್ಲಿ ಹತ್ತು ಸಾವಿರ ಬಾಟಲಿಗಳೇ ಇದ್ದವು. ಆ ಬಾಟಲಿಗಳಲ್ಲಿ ಹೆಚ್ಚು ಕಡಿಮೆ ಮೂರು ಸಾವಿರ ಮದ್ಯದ ಬಾಟಲಿಗಳು. ದರ್ಪಣ ತೀರ್ಥದ ಒಡಲಿನಲ್ಲಿ ಮದ್ಯದ ಬಾಟಲಿಗಳದ್ದೇ ಕಾರುಬಾರು. ಹಾಗಾದರೆ ಭಕ್ತರ ಹಣ ಹುಂಡಿಯಲ್ಲಿ ಧಾರಾಕಾರವಾಗಿ ಬಿದ್ದಾಗ ಅದನ್ನು ಲೆಕ್ಕ ಹಾಕಿ ತೆಗೆದುಕೊಂಡು ಹೋಗಲು ಇಲ್ಲಿಯ ಆಡಳಿತ ಮಂಡಳಿಗೆ ಅಂದರೆ ರಾಜ್ಯ ಸರಕಾರದ ಮುಜುರಾಯಿ ಇಲಾಖೆಗೆ ಗೊತ್ತಿದೆ. ಅದೇ ಭಕ್ತರು ಪವಿತ್ರ ಸ್ನಾನ ಮಾಡುವ ನದಿಯನ್ನು ಸ್ವಚ್ಚ ಮಾಡಬೇಕೆಂದು ಗೊತ್ತಿಲ್ಲವಾ?
ತ್ಯಾಜ್ಯ ಶುದ್ಧಿಕರಣದ ಯಂತ್ರ ಮೊರಿಯಲ್ಲಿದೆಯಾ…
ಮುಖ್ಯವಾಗಿ ದೇವಳದ ವ್ಯಾಪ್ತಿಯ ಮತ್ತು ಆಸುಪಾಸಿನ ಗಲೀಜು ನೀರನ್ನು ಶುದ್ಧಿಕರಿಸಿ ನಂತರ ಅದನ್ನು ನದಿಗೆ ಬಿಡಬೇಕೆಂಬ ನಿಯಮವಿದೆ. ಅದಕ್ಕಾಗಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ತ್ಯಾಜ್ಯ ಸಂಸ್ಕರಣ ಘಟಕದ ನಿರ್ಮಾಣವಾಗಿತ್ತು. ಆದರೆ ಅದು ಹಾಳಾಗಿ ರಿಪೇರಿಯಾಗದೇ ಪಾಳು ಬಿದ್ದಿದೆ. ಆದ್ದರಿಂದ ಎಲ್ಲಾ ಗಲೀಜು ಕುಮಾರಧಾರದ ಹೊಟ್ಟೆಯನ್ನು ಸೇರಿ ಅಲ್ಲಿಯೇ ಸೆಟಲ್ ಆಗುತ್ತಿದೆ. ಅದನ್ನು ಸರಿಪಡಿಸಬೇಕಾದ ಮುಜುರಾಯಿ ಇಲಾಖೆ ಮಲಗಿದೆ. ಅದೇ ಮುಖ್ಯಮಂತ್ರಿ ಕುಮಾರಸ್ವಾಮಿಯವರು ತಮ್ಮ ಮಗ ಗೆಲ್ಲಬೇಕೆಂದರೆ ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಬಂಗಾರದ ರಥ ಮಾಡಿಸಬೇಕು ಎಂದು ಯಾರೋ ಕೆಲಸವಿಲ್ಲದ ಜ್ಯೋತಿಷಿ ಹೇಳಿದ ಕೂಡಲೇ ಸಿಎಂ ಮೌಖಿಕ ಸೂಚನೆಗೆ ದಡಬಡಿಸಿ ಎದ್ದ ಸಿಎಂ ಬೆಂಬಲಿಗ ಆಡಳಿತ ಮಂಡಳಿ ಸದಸ್ಯರು ತಕ್ಷಣ ಬಂಗಾರದ ರಥಕ್ಕೆ ಮುಂದಾಗಿದ್ದಾರೆ. ಅದರ ಬದಲು ತ್ಯಾಜ್ಯ ಸಂಸ್ಕರಣ ಘಟಕ ರಿಪೇರಿ ಮಾಡಿದ್ರೆ ನದಿಯೂ ಉಳಿಯುತ್ತಿತ್ತು ಮತ್ತೊಂದು ಕಡೆಯಲ್ಲಿ ಭಕ್ತರ ಆರೋಗ್ಯದ ಮೇಲೆಯೂ ದುಷ್ಪರಿಣಾಮ ಆಗುವುದು ತಪ್ಪುತ್ತಿತ್ತು. ತಮ್ಮ ಪಾಪ ತೊಳೆಯುವ ಆಗಮಿಸುವ ಭಕ್ತರು ನದಿಯ ಗಲೀಜನ್ನು ಮೈಮೇಲೆ ಸುರಿದು ದೇವಸ್ಥಾನಕ್ಕೆ ಹೋಗುವಂತಾಗಿದೆ. ಇದನ್ನೇ ಕಲಿಯುಗ ಎನ್ನುವುದಾ!!
Leave A Reply