ಸ್ಮಾರ್ಟ್ ಸಿಟಿಯ ಹಣದ ಮೇಲೆ ಹದ್ದಿನ ಕಣ್ಣಿಡಲು ಸಾರ್ವಜನಿಕ ಸಮಿತಿ ಆಗಬೇಕಿದೆ!!
ಮಂಗಳೂರಿನ ಅತ್ಯುತ್ತಮ ರಸ್ತೆಯನ್ನೇ ಆಯ್ದುಕೊಂಡು ಅದನ್ನು ಅಭಿವೃದ್ಧಿ ಮಾಡಿ ಎಂದು ಮೋದಿಯವರು ಹೇಳಿಲ್ಲ. ಅದಕ್ಕಾಗಿ ನಾಗರಿಕರ ಸ್ಮಾರ್ಟ್ ಸಿಟಿ ಹಣವನ್ನು ಪೋಲು ಮಾಡಿ ಎಂದು ಕೂಡ ಹೇಳಿಲ್ಲ. ನಗರದ ಸುಂದರೀಕರಣದ ಜೊತೆಗೆ ವೈಜ್ಞಾನಿಕವಾಗಿ ಅಭಿವೃದ್ಧಿ ಮಾಡಿ ಎಂದು ಹೇಳಿದ್ದಾರೆ. ನಮ್ಮ ಮಂಗಳೂರಿನ ಸ್ಮಾರ್ಟ್ ಸಿಟಿ ಆಡಳಿತ ಮಂಡಳಿಯ ಔಟ್ ಡೇಟೆಡ್ ಪ್ರಾಡಕ್ಟ್ ಗಳಂತಿರುವ ಕೆಲವು ಇಂಜಿನಿಯರ್ಸ್ ಆರ್ ಟಿಒದಿಂದ ಕ್ಲಾಕ್ ಟವರ್ ತನಕ ಇರುವ ರಸ್ತೆಯನ್ನೇ ಸ್ಮಾರ್ಟ್ ಸಿಟಿ ಹೆಸರಿನಲ್ಲಿ ಅಭಿವೃದ್ಧಿ ಮಾಡಲು ಹೊರಟಿದ್ದಾರೆ. ಆ ರಸ್ತೆಯನ್ನು ಅಭಿವೃದ್ಧಿ ಮಾಡಲು ಏನು ಇದೆ ಎನ್ನುವುದು ಪ್ರಶ್ನೆ. ಆ ರಸ್ತೆಗೆ ಕೋಟಿ ಸುರಿಯುವ ಬದಲು ಮಂಗಳೂರಿನ ಮೂಲಭೂತ ಅಭಿವೃದ್ಧಿಗೆ ಏನು ಆಗಬೇಕೋ ಅದನ್ನು ಮಾಡಬೇಕಾದ ಅವಶ್ಯಕತೆ ಇತ್ತು. ಯಾರೂ ಮಾತನಾಡದಿದ್ದರೆ ಅಲ್ಲಿಯೇ ಹಣವನ್ನು ಮರಳಿನಂತೆ ಸುರಿದು ರಸ್ತೆಗೆ ಹಾಕಿಬಿಡುತ್ತಿದ್ದರೇನೋ. ಒಂದಿಷ್ಟು ನಮ್ಮ ವಿರೋಧಗಳು ಬಂದ ಹಿನ್ನೆಲೆಯಲ್ಲಿ ಕಾಮಗಾರಿ ನಿಲ್ಲಿಸಲಾಗಿದೆ. ಮಂಗಳೂರು ನಗರಕ್ಕೆ ಮೊದಲು ಆಗಬೇಕಾಗಿರುವುದು ಮೂಲಭೂತ ಸೌಕರ್ಯ. ಸುಂದರೀಕರಣ ಎರಡನೇ ಆದ್ಯತೆ. ಇಲ್ಲಿ ಕುಡಿಯುವ ನೀರಿಗೆ ಮೊದಲು ಕೆಲಸ ಆಗಬೇಕು. ಅದಕ್ಕಾಗಿ ಅನುದಾನವನ್ನು ತೆಗೆದಿಡಬೇಕು. ನಂತರ ಒಳಚರಂಡಿ ಕಾಮಗಾರಿಯ ಕೆಲಸ ಮುಗಿಸಬೇಕು. ಪಾಲಿಕೆ ವ್ಯಾಪ್ತಿಯ ಎಷ್ಟೋ ಕಡೆಗಳಲ್ಲಿ ಒಳಚರಂಡಿ ಕಾಮಗಾರಿಗಳು ಅರ್ಧಂಬರ್ಧ ನಡೆದಿರುವುದರಿಂದ ಮುಂದಿನ ಮಳೆಗಾಲದಲ್ಲಿ ಮತ್ತೆ ಅಲ್ಲಲ್ಲಿ ಕೃತಕ ಖರ್ಚಿಲ್ಲದ ಕಾರಂಜಿಗಳು ಹುಟ್ಟಿಕೊಳ್ಳುತ್ತವೆ. ಈಗ ಕದ್ರಿ ಉದ್ಯಾನವನದಲ್ಲಿರುವ ಒಂದು ಕಾರಂಜಿ ನಿಮ್ಮನ್ನು ಆಕರ್ಷಿಸುತ್ತಿದ್ದರೆ ಇನ್ನೂ ಒಂದು ತಿಂಗಳ ನಂತರ ಒಂದೊಂದು ರಸ್ತೆಯಲ್ಲಿ ನಾಲ್ಕು ನಾಲ್ಕು ಕಾರಂಜಿಗಳು ನಿಮ್ಮ ಮೈಮೇಲೆ ಉಚಿತವಾಗಿ ಚಿತ್ತಾರವನ್ನು ಬಿಡಿಸಲಿವೆ. ಅದನ್ನು ನಿಲ್ಲಿಸಬೇಕಾದರೆ ಮೊದಲು ಒಳಚರಂಡಿ ಕಾಮಗಾರಿಗಳಿಗೆ ಒಂದು ಶಾಶ್ವತ ಕಾಯಕಲ್ಪ ನಡೆಯಬೇಕು.
ಉದಾಹರಣೆ ಸಾವಿರ ಇದೆ…
ಬಿಇಎಂ ಸ್ಕೂಲ್ ಅಡ್ಡರಸ್ತೆಯಲ್ಲಿ ಮ್ಯಾನ್ ಹಾಲ್ ಕ್ಯೂರಿಂಗ್ ಮಾಡದೇ ಅದು ಒಡೆದು ಹೋಗಿದೆ. ಅದರ ಫೋಟೋವನ್ನು ಇವತ್ತು ಇಲ್ಲಿ ಪೋಸ್ಟ್ ಮಾಡಿದ್ದೇನೆ. ಇಂತಹುದು ಒಂದೆರಡಲ್ಲ. ಮಂಗಳೂರಿನಲ್ಲಿ ಲೆಕ್ಕವಿಲ್ಲದಷ್ಟು ಇದೆ. ಇನ್ನು ಮೈದಾನದ ಮೂರನೇ ಮತ್ತು ನಾಲ್ಕನೇ ಅಡ್ಡರಸ್ತೆಯಲ್ಲಿ ಒಳಚರಂಡಿ ಕಾಮಗಾರಿ ಕೆಲಸ ಆಗಿದೆ. ಅದರ ಮಣ್ಣು ತೆಗೆದು ಹತ್ತಿರದ ತೋಡಿನಲ್ಲಿ ಹಾಕಿದ್ದಾರೆ. ಕೆಲಸ ಆಗಿ ಮೂರು ತಿಂಗಳು ಕಳೆದಿದೆ. ಗುತ್ತಿಗೆದಾರರು ಹೀಗೆ ಒಂದು ಕಡೆಯ ಮಣ್ಣನ್ನು ಪಕ್ಕದ ತೋಡಿನಲ್ಲಿ ಹಾಕಿ ಹತ್ತಿರದ ಪೈಪಿನಲ್ಲಿ ಕೈ ತೊಳೆದು ಹೋಗುತ್ತಾರೆ. ಆದರೆ ನಂತರ ಅನುಭವಿಸುವವರು ಯಾರು? ಮೂರು ವಾರಗಳ ಅಂತರದಲ್ಲಿ ಮಂಗಳೂರಿಗೆ ಮಳೆ ಕಾಲಿಡಲಿದೆ. ಅಲ್ಲಿ ಮಳೆಯ ನೀರು ಹರಿದು ಹೋಗಲು ಜಾಗ ಇಲ್ಲ. ಅದರ ಪರಿಣಾಮ ಮಳೆಯ ನೀರು ರಸ್ತೆಯ ಮೇಲೆ ಹರಿಯಲಿದೆ. ಕೃತಕ ನೆರೆ ಕೂಡ ಬಂದು ಬ್ಲಾಕ್ ಆಗಬಹುದು. ಆಗ ಅಲ್ಲಿ ಸರಿ ಮಾಡಲು ಆಗುತ್ತದೆಯಾ? ಅದರ ಬದಲು ಈಗಲೇ ಆ ಮಣ್ಣು ತೆಗೆಯುವುದು ಒಳ್ಳೆಯದಲ್ವಾ? ಎಲ್ಲವನ್ನೂ ಮೋದಿಯವರೇ ನೋಡಲು ಆಗುತ್ತದೆಯಾ?
ಇನ್ನು ಕಾರ್ಪೋರೇಟರ್ ಗಳು ಸ್ಮಾರ್ಟ್ ಸಿಟಿ ಕಚೇರಿಯಲ್ಲಿ ಈ ಬಗ್ಗೆ ದೂರು ಕೊಟ್ಟರೆ ಅಧಿಕಾರಿಗಳಿಗೆ ಗುತ್ತಿಗೆದಾರರನ್ನು ಜೋರು ಮಾಡಿ ಹೇಳುವ ಕ್ಯಾಪೆಸಿಟಿ ಇಲ್ಲ. ಹೀಗೆ ಒಳ್ಳೆಯ ಯೋಜನೆಯೊಂದು ಹಳ್ಳ ಹಿಡಿದು ಹೋದರೆ ಮೋದಿಯವರು ಹತ್ತು ವರ್ಷ ಅಲ್ಲ, ಐವತ್ತು ವರ್ಷ ಪ್ರಧಾನಿಯಾದರೂ ನಮ್ಮವರು ಏನೂ ಮಾಡದಿದ್ದರೆ ಏನೂ ಪ್ರಯೋಜನ ಹೇಳಿ.
ಸಾರ್ವಜನಿಕ ಸಮಿತಿ ಬೇಕು…
ಕೊನೆಯದಾಗಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಸಾರ್ವಜನಿಕರ ಸಹಭಾಗಿತ್ವ ಬೇಕು ಎನ್ನುವ ಕಾರಣಕ್ಕೆ ಸಾರ್ವಜನಿಕರನ್ನು ಒಳಗೊಂಡ ಒಂದು ಸಮಿತಿ ಮಾಡಬೇಕಿದೆ. ಅದನ್ನು ಕಳೆದ ಬಾರಿ ಅಧಿಕಾರದಲ್ಲಿದ್ದಾಗ ಕೊನೆಯ ಅವಧಿಯಲ್ಲಿಯಲ್ಲಾದರೂ ಕಾಂಗ್ರೆಸ್ ಆಡಳಿತದಲ್ಲಿ ಮಾಡಬೇಕಿತ್ತು. ಮೇಯರ್ ಆಗಿದ್ದ ಭಾಸ್ಕರ್ ಅವರು ಅದನ್ನು ಮಾಡಲು ಹೋಗಲೇ ಇಲ್ಲ. ಈಗ ಜಿಲ್ಲಾಧಿಕಾರಿಗಳೇ ಪಾಲಿಕೆಯ ಆಡಳಿತಾಧಿಕಾರಿ. ಮನಸ್ಸು ಮಾಡಿದರೆ ಜನರ ತೆರಿಗೆಯ ಹಣದ ಮೌಲ್ಯ ಗೊತ್ತಿರುವ ಕೆಲವು ಸಾರ್ವಜನಿಕರನ್ನು ಸೇರಿಸಿ ಒಂದು ಸಮಿತಿ ಮಾಡಬಹುದು. ಆಗ ಅಧಿಕಾರಿಗಳ ಬಂಡವಾಳ, ಗುತ್ತಿಗೆದಾರ ಹಿತಾಸಕ್ತಿ ಎಲ್ಲವೂ ಗೊತ್ತಾಗುತ್ತದೆ. ಮಾಡುತ್ತಾರಾ ಜಿಲ್ಲಾಧಿಕಾರಿ??
Leave A Reply