ವಾಮಂಜೂರಿನ ತ್ಯಾಜ್ಯಕ್ಕೆ ಬೆಂಕಿ ಬಿದ್ದಿದೆ, ಶಾಶ್ವತ ನಂದಿಸುವವರು ಯಾರು?
ನಾವು ಮನೆಯ ತ್ಯಾಜ್ಯವನ್ನು ನಮ್ಮ ಮನೆಯ ಹೊರಗೆ ಇಟ್ಟ ಕಡೆಯಿಂದ ಎತ್ತಿ ಎಲ್ಲಿ ಹೋಗಿ ತುಂಬಿಸಲಾಗುತ್ತದೆ ಎನ್ನುವ ವಿಷಯ ನಿಮಗೆ ಗೊತ್ತಿರಬಹುದು. ನೀವು ವಾಮಂಜೂರಿನ ಕಡೆಯಿಂದ ಯಾವತ್ತಾದರೂ ಹಾದು ಹೋದರೆ ತ್ಯಾಜ್ಯ ಸಂಗ್ರಹಣಾ ಘಟಕ ಅಲ್ಲೆಲ್ಲೋ ಇದೆ ಎನ್ನುವುದು ನಿಮ್ಮ ಮೂಗಿಗೆ ಗೊತ್ತಾಗುತ್ತದೆ. ಆದರೆ ನಿಮ್ಮ ಕಣ್ಣಿಗೆ ಇದು ಗೊತ್ತಾಗುವುದು ಯಾವಾಗ ಎಂದರೆ ವಾಮಂಜೂರಿನ ತ್ಯಾಜ್ಯ ಸಂಗ್ರಹಣಾ ಸ್ಥಳದಲ್ಲಿ ಬೆಂಕಿ ಬಿದ್ದಾಗ. ಅಲ್ಲಿ ಆಗಾಗ ಕ್ಯಾಂಪ್ ಫೈಯರ್ ನಡೆಯುವುದುಂಟು. ಅದು ಯಾವ ಪೂರ್ವ ತಯಾರಿಯ ಕ್ಯಾಂಪ್ ಫೈಯರ್ ಅಲ್ಲ. ಅದು ಪ್ರಕೃತಿ ಮುನಿದಾಗ ಉಂಟಾಗುವ ಕ್ಯಾಂಪ್ ಫೈಯರ್. ಅದು ಮತ್ತೆ ಸೃಷ್ಟಿಯಾಗಿದೆ. ಅಷ್ಟಕ್ಕೂ ತ್ಯಾಜ್ಯ ಸಂಗ್ರಹಣಾ ಸ್ಥಳದಲ್ಲಿ ಬೆಂಕಿ ಕಾಣಿಸಿಕೊಂಡರೆ ದೊಡ್ಡ ವಿಷಯ ಏನು ಎನ್ನುವ ಪ್ರಶ್ನೆ ಉದ್ಭವವಾಗಬಹುದು. ಬೆಂಕಿ ಸುಮ್ಮನೆ ಹುಟ್ಟಿಕೊಳ್ಳುವುದಿಲ್ಲ. ಇನ್ನು ಬೆಂಕಿ ಹುಟ್ಟಿಕೊಳ್ಳುವುದು ನಮ್ಮ ಪಾಲಿಕೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದ ದ್ಯೋತಕ ಎಂದು ಗೊತ್ತಾದರೆ ನಿಮಗೆ ಆಶ್ಚರ್ಯವಾಗಬಹುದು.
ಪಾಲಿಕೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದ ದ್ಯೋತಕ
ಸರಿಯಾಗಿ ನೋಡಿದರೆ ತ್ಯಾಜ್ಯ ವೇಸ್ಟ್ ಅಲ್ಲ. ನಾವು ನಮ್ಮ ಮನೆಯಲ್ಲಿ ವೇಸ್ಟ್ ಎಂದು ಅಂದುಕೊಂಡು ಬಿಸಾಡುವ ತ್ಯಾಜ್ಯ ರಾಶಿ ಸರಿಯಾಗಿ ಯೋಚನೆ ಮಾಡಿದರೆ ಅದು ಅತ್ಯುತ್ತಮ ಗೊಬ್ಬರವೂ ಹೌದು. ಅಷ್ಟೇ ಏಕೆ, ಕೇಂದ್ರ ಸಚಿವ ನಿತಿನ್ ಗಡ್ಕರಿಯಂತವರು ತ್ಯಾಜ್ಯದಿಂದ ಉಂಟಾಗುವ ವಸ್ತುವನ್ನು ಬಳಸಿ ರಸ್ತೆಯನ್ನು ನಿರ್ಮಿಸುತ್ತಾರೆ ಎಂದರೆ ನೀವೆ ಅರ್ಥ ಮಾಡಿಕೊಳ್ಳಿ, ತ್ಯಾಜ್ಯ ಹೇಗೆ ವೇಸ್ಟ್ ಆಗುತ್ತದೆ ಎನ್ನುವುದನ್ನು.
ಹಾಗಿರುವಾಗ ಅದಕ್ಕೆ ಬೆಂಕಿ ಕೊಡುವುದರಿಂದ ನಷ್ಟವಾಗುವುದು ನಿಜ ತಾನೆ. ಹಾಗಾದರೆ ಬೆಂಕಿ ತ್ಯಾಜ್ಯದ ರಾಶಿಯಲ್ಲಿ ಹೇಗೆ ಹುಟ್ಟಿಕೊಳ್ಳುತ್ತದೆ ಎನ್ನುವುದನ್ನು ನೋಡೋಣ. ಮೊದಲನೇಯದಾಗಿ ನಮ್ಮ ನಿಮ್ಮ ಏರಿಯಾದಿಂದ ತ್ಯಾಜ್ಯ ಸಂಗ್ರಹಿಸಿಕೊಂಡು ಹೋಗುವ ಗುತ್ತಿಗೆದಾರರು ಅಲ್ಲಿ ವಾಮಂಜೂರಿನಲ್ಲಿ ನಿರ್ದಿಷ್ಟ ಪ್ರದೇಶದಲ್ಲಿ ರಾಶಿ ಹಾಕುತ್ತಾರೆ. ಇದು ಏನಾಗುತ್ತದೆ ಎಂದರೆ ನಿರಂತರವಾಗಿ ಒಂದರ ಮೇಲೆ ಮತ್ತೊಂದು ರಾಶಿ ಹಾಕುತ್ತಾ ಹೋಗುವುದರಿಂದ ತಳಮಟ್ಟದಲ್ಲಿ ಬಯೋಗ್ಯಾಸ್ ನ ಉತ್ಪತ್ತಿ ಆಗುತ್ತದೆ. ಬಯೋಗ್ಯಾಸ್ ಉತ್ಪತ್ತಿ ಆಯಿತು ಎಂದರೆ ಅದರ ಮೇಲೆ ಬಿಸಿಲಿನ ಪ್ರಖರತೆಯ ಒಂದು ಕಿರಣ ಬಿದ್ದರೂ ಸಾಕು ಅದು ಭಗ್ಗನೆ ಉರಿಯಲು ಶುರುವಾಗುತ್ತದೆ. ಅದರಿಂದ ಅಲ್ಲಿ ಬೆಂಕಿಯ ಕೆನ್ನಾಲಿಗೆ ಕಾಣಿಸಿಕೊಳ್ಳುತ್ತದೆ.
ಹಾಗಾದರೆ ಬೆಂಕಿ ಬರದಂತೆ ಮಾಡುವುದು ಹೇಗೆ?
ಯಾವಾಗ ತ್ಯಾಜ್ಯವನ್ನು ದಿನಗಟ್ಟಲೆ ರಾಶಿ ಹಾಕಲಾಗುತ್ತದೆಯೋ ಆಗ ಈ ಬೆಂಕಿಯ ಅಪಾಯ ಸೃಷ್ಟಿಯಾಯಿತು ಎಂದೇ ಅರ್ಥ. ಅದರ ಬದಲಿಗೆ ಒಂದಿಷ್ಟು ರಾಶಿ ಆದ ಕೂಡಲೇ ಅಲ್ಲಿ ಮರಳು, ಮಣ್ಣು ಸುರಿಯಬೇಕು. ಇದರಿಂದ ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆ ಕಡಿಮೆ ಮತ್ತು ಹೊತ್ತಿಕೊಂಡರೂ ಹರಡುವ ಸಾಧ್ಯತೆ ಇನ್ನೂ ಕಡಿಮೆ.
ಇನ್ನು ತ್ಯಾಜ್ಯ ಯಾಕೆ ಜಾಸ್ತಿಯಾಗಿ ಉಳಿದುಬಿಡುತ್ತದೆ. ಅಲ್ಲೊಂದು ತ್ಯಾಜ್ಯದಿಂದ ಗೊಬ್ಬರ ತಯಾರಿಸುವ ಘಟಕ ಪ್ರಾರಂಭಿಸಬಹುದಲ್ಲ ಎಂದು ನೀವು ಕೇಳಬಹುದು. ಅಲ್ಲಿ ತ್ಯಾಜ್ಯದಿಂದ ಗೊಬ್ಬರ ತಯಾರಿಸುವ ಘಟಕ ಇದೆ. ಆದರೆ ಅದು ಕೆಲವು ವರ್ಷಗಳಷ್ಟು ಹಳೆಯದು. ಈಗ ಮಂಗಳೂರು ಬೆಳೆದಿದೆ. ತ್ಯಾಜ್ಯ ಕೂಡ ಜಾಸ್ತಿಯಾಗಿದೆ. ಅಷ್ಟು ತ್ಯಾಜ್ಯದಿಂದ ಗೊಬ್ಬರ ತಯಾರಿಸುವಷ್ಟು ಆಧುನಿಕತೆ ಗೊಬ್ಬರ ತಯಾರಿಕಾ ಘಟಕ ನಮ್ಮಲ್ಲಿಲ್ಲ. ಹಾಗಂತ ಹೊಸ ಯಂತ್ರವನ್ನು ಹಾಕಿಸುವಂತಹ ಇಚ್ಚಾಶಕ್ತಿ ನಮ್ಮ ಪಾಲಿಕೆಯ ಅಧಿಕಾರಿಗಳಲ್ಲಿ ಇಲ್ಲ. ಅಲ್ಲಿ ಬಂದು ಬೀಳುವ ತ್ಯಾಜ್ಯದಲ್ಲಿರುವ ಪ್ಲಾಸ್ಟಿಕ್ ನಿಂದ ರಸ್ತೆಗಳಿಗೆ ಟಾರು ಅಂದರೆ ಡಾಮರು ತಯಾರಿಸುವಷ್ಟು ದೂರ ನಮ್ಮಲ್ಲಿ ಯಾರೂ ಯೋಚಿಸಿಯೇ ಇಲ್ಲ. ಇನ್ನು ಅಲ್ಲಿ ಬೆಂಕಿ ಬಿದ್ದು ಅಕ್ಕಪಕ್ಕದ ಕೆಲವು ಮನೆಗಳಿಗೆ ತೊಂದರೆ ಆದ ತಕ್ಷಣ ಅಲ್ಲಿಂದ ಶಾಸಕರಿಗೆ, ಸಚಿವರಿಗೆ, ಜಿಲ್ಲಾಧಿಕಾರಿಗಳಿಗೆ ಮೇಲಿನಿಂದ ಮೇಲೆ ಕಾಲ್ ಹೋಗುತ್ತದೆ. ಆದ್ರೆ ಯಾವಾಗ ಬೆಂಕಿ ನಂದಿತ್ತೋ ಆಗ ನಾಲ್ಕು ದಿನಗಳ ನಂತರ ಎಲ್ಲರಿಗೂ ಮರೆತು ಹೋಗುತ್ತದೆ. ಮುಂದಿನ ಬೆಂಕಿ ಹೊತ್ತಿಕೊಳ್ಳುವ ತನಕ. ಇನ್ನು ಬೆಂಕಿ ಬಿದ್ದರೆ ಅಧಿಕಾರಿಗಳಿಗೆ ಲಾಭ. ನಂದಿಸುವ ಖರ್ಚಿನಲ್ಲಿ ಅವರು ತಮ್ಮ ಜೇಬು ತುಂಬಿಸಿಕೊಳ್ಳುತ್ತಾರೆ!
Leave A Reply