ತುಂಬೆಯ ಹೊಸ ಡ್ಯಾಂನ ಮರಳು ಎತ್ತಲು 2ಕೋಟಿ 86 ಲಕ್ಷ ಎತ್ತಿಡಲಾಗಿದೆ!!

ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಯುಟಿ ಖಾದರ್ ಅವರು ಕೂಡ ಕುಡಿಯುವ ನೀರಿನ ವಿಷಯದಲ್ಲಿ ರಾಜಕೀಯ ಮಾಡಬಹುದು ಎನ್ನುವ ನಿರೀಕ್ಷೆಯನ್ನು ಯಾರೂ ಮಾಡಿರಲಿಲ್ಲ. ಆದರೆ ಅವರು ಕೂಡ ತಾವು ಅಪ್ಪಟ ರಾಜಕಾರಣಿ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಒಂದು ಸಲ ತುಂಬೆಗೆ ಹೋಗಿ ಅಲ್ಲಿ ನಿಂತು ಫೋಟೋ ತೆಗೆಸಿ ಬಂದ ಮಾನ್ಯ ಸಚಿವರು ನಂತರ ನೀರಿನ ವಿಷಯದಲ್ಲಿ ಬಾಯಿ ತೆರೆದದ್ದು ಮೊನ್ನೆಯೇ. ಹೇಳಿದ್ದು ಕೂಡ ಏನೂ ಪ್ರಾಕ್ಟಿಕಲ್ ಪರಿಹಾರವಲ್ಲ. ಅಧಿಕಾರಿಗಳು ವಾಸ್ತವವನ್ನು ಮುಚ್ಚಿ ಉಪ್ಪು, ಹುಳಿ, ಖಾರ ಹಾಕಿ ರಂಗುರಂಗಾಗಿ ಬರೆದು ಕೊಟ್ಟಿದ್ದನ್ನು ಖಾದರ್ ಸಾಹೇಬ್ರು ಓದಿ ಹೇಳಿದ್ದಾರೆ. ಅದನ್ನೇ ಮಾಧ್ಯಮಗಳಿಗೆ ಕೊಟ್ಟಿದ್ದಾರೆ. ಹಿಂದೆ ಕೂಡ ನಮ್ಮ ಮಂಗಳೂರು ಮಹಾನಗರ ಪಾಲಿಕೆಯ ಕಾಂಗ್ರೆಸ್ ಆಡಳಿತದ ಕೊನೆಯ ಮೇಯರ್ ಭಾಸ್ಕರ್ ಅವರು ಕೂಡ ಹೀಗೆ ಮಾಡಿದ್ದರು. ಸುದ್ದಿಗೋಷ್ಟಿಯನ್ನು ಮಾಡಿ ಜೂನ್ ತನಕ ನೀರು ಬೇಕಾಗುವಷ್ಟು ತುಂಬೆಯಲ್ಲಿ ಇದೆ. ಏನೂ ಸಮಸ್ಯೆ ಇಲ್ಲ ಎಂದು ಹೇಳಿದ್ದರು. ಅವರು ಹಾಗೆ ಹೇಳುವುದಕ್ಕೆ ಕಾರಣ ಅಧಿಕಾರಿಗಳು. ಅಧಿಕಾರಿಗಳು ಹೇಳಿದ್ದನ್ನೇ ವಾಸ್ತವ ಪರಿಶೀಲಿಸದೇ ಜನಪ್ರತಿನಿಧಿಗಳು ಹೇಳುವುದರಿಂದ ಏನು ಆಗುತ್ತದೆ ಎನ್ನುವುದನ್ನು ನಾವು ಈಗ ಅನುಭವಿಸುತ್ತಿದ್ದೇವೆ. ಈಗ ಅದೇ ಅಧಿಕಾರಿಗಳು ಉಸ್ತುವಾರಿ ಸಚಿವರನ್ನು ಕೂಡ ದಾರಿ ತಪ್ಪಿಸುತ್ತಿದ್ದಾರೆ. ಅದರೊಂದಿಗೆ ನೀರಿನ ಕೊರತೆಯ ವಿಷಯದಲ್ಲಿ ಹಣ ಕೊಳ್ಳೆಯುವುದಕ್ಕೂ ವ್ಯವಸ್ಥೆ ಮಾಡಲಾಗಿದೆ ಎನ್ನುವುದು ಇವರ ಹೊಸ ಯೋಜನೆಯಿಂದ ಸ್ಪಷ್ಟವಾಗುತ್ತಿದೆ. ಅದು ಹೇಗೆ ಎನ್ನುವುದನ್ನು ವಿವರಿಸುತ್ತೇನೆ.
ತುಂಬೆಯಲ್ಲಿ ಹಳೆ ಡ್ಯಾಂ ಇದೆಯಲ್ಲ. ಅದರಲ್ಲಿ ಹಿಂದೆ ಮಳೆಗಾಲ ಶುರುವಾಗಿ ಡ್ಯಾಂ ತುಂಬುತ್ತಿದ್ದಂತೆ ಎಲ್ಲಾ ಗೇಟ್ ಗಳನ್ನು ತೆರೆಯಲಾಗುತ್ತಿತ್ತು. ಆದರೆ ಹೊಸ ಡ್ಯಾಂ ನಿರ್ಮಾಣವಾದಾಗ ಡ್ಯಾಂ ತುಂಬಿದರೂ ಎಲ್ಲಾ ಬಾಗಿಲುಗಳನ್ನು ತೆರೆಯುವ ಕ್ರಮ ಇಲ್ಲ. ಅದರಿಂದ ಸಾಮಾನ್ಯವಾಗಿ ಏನಾಗುತ್ತದೆ ಎಂದರೆ ಮಳೆಯ ನೀರು ಹರಿದು ಬರುವಾಗ ಅದರೊಂದಿಗೆ ಬರುವ ಮಣ್ಣು, ಮರಳು ಬಂದು ಆ ತೆರೆಯದ ಬಾಗಿಲುಗಳ ಬಳಿ ಸೇರಿಕೊಳ್ಳುತ್ತದೆ. ಈಗ ಆ ಮರಳನ್ನು ತೆಗೆಯುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಅದಕ್ಕೆ ಇಟ್ಟಿರುವ ಹಣ ಎಷ್ಟು ಗೊತ್ತೆ? ಬರೋಬ್ಬರಿ ಎರಡು ಕೋಟಿ ಎಂಭತ್ತಾರು ಲಕ್ಷ ರೂಪಾಯಿಗಳು.
ತಜ್ಞರ ಸಮಿತಿ ರಚಿಸಿ ಖಾದರ್…
ನಾವು ನೀರಿನ ಸಮಸ್ಯೆಗಳನ್ನು ನೀಗಿಸಲು ಹನ್ನೆರಡು ಬೋರ್ ವೆಲ್ ಗಳನ್ನು ಕೊರೆಸುತ್ತೇವೆ ಎಂದು ಸಚಿವ ಖಾದರ್ ಹೇಳಿದ್ದಾರೆ. ಅದರಲ್ಲಿ ಆರು ಈಗಾಗಲೇ ಕೊರೆದು ಆಗಿದೆ. ಉಳಿದದ್ದನ್ನು ಬೇಗ ಕೊರೆಯಲಾಗುವುದು ಎಂದಿದ್ದಾರೆ. ಸದ್ಯ ನಮ್ಮ ಮಹಾನಗರದಲ್ಲಿ 156 ಬೋರ್ ವೆಲ್ ಗಳು ಇವೆ. ಇಲ್ಲಿ ಹೆಚ್ಚೆಚ್ಚು ಬೋರ್ ವೆಲ್ ಗಳನ್ನು ತೆಗೆದು ನಂತರ ಹಾಗೇ ಬಿಟ್ಟರೆ ಸಮಸ್ಯೆ ಪರಿಹಾರವಾಗುವುದಿಲ್ಲ. ಬೋರ್ ವೆಲ್ ಗಳಿಗೆ ನೀರಿನ ಪೈಪ್ ಜೋಡಿಸಿ ಲೈನ್ ವ್ಯವಸ್ಥೆ ಮಾಡಬೇಕು. ಅದಕ್ಕೆ ವಿದ್ಯುತ್ ಸಂಪರ್ಕ ಅಳವಡಿಸಬೇಕು. ಅದೆಲ್ಲ ಸರಿಯಾಗಿ ಮಾಡದೇ ಕೇವಲ ಕೊಳವೆ ಬಾವಿಗಳನ್ನು ಇವರು ತೋಡಿ ಬಿಡುವುದರಿಂದ ಸಂಖ್ಯೆ ಹೆಚ್ಚುತ್ತದೆ ವಿನ: ಬೇರೆ ಏನೂ ಆಗುವುದಿಲ್ಲ. ನಾನು ಹೇಳುವುದೇನೆಂದರೆ ನೀವು ಜನಪ್ರತಿನಿಧಿಗಳಿಗೆ ನಿಜಕ್ಕೂ ಯಾವುದೇ ಸಮಸ್ಯೆ ಬಗೆಹರಿಯಲೇಬೇಕು ಎಂದಿದ್ದರೆ ಅಧಿಕಾರಿಗಳನ್ನು ಕರೆದು ನಿಮಗೆ ಮತ್ತು ಅವರಿಗೆ ಬೇಕಾದ ಹಾಗೆ ಪ್ರೆಸ್ ನೋಟ್ ಸಿದ್ಧಪಡಿಸಿ ಕೊಟ್ಟರೆ ಸಮಸ್ಯೆ ಪರಿಹಾರವಾಗಲ್ಲ. ಅದರ ಬದಲು ಅಧಿಕಾರಿಗಳಲ್ಲದವರನ್ನು ಕರೆದು ಮಾತನಾಡಿಸಬೇಕು. ಉದಾಹರಣೆಗೆ ಈಗ ನೀರಿನ ಸಮಸ್ಯೆ ಇದೆ. ಇದು ಇನ್ನು ಹತ್ತು ದಿನಗಳ ನಂತರ ಎಲ್ಲರಿಗೂ ಮರೆತು ಹೋಗಬಹುದು. ನಂತರ ಇದು ನೆನಪಾಗುವುದು ಮಳೆ ಕಡಿಮೆ ಆದ ನಂತರ. ಅದರ ಬದಲು ಸಚಿವರು ತಜ್ಞರ ಸಮಿತಿಯನ್ನು ರಚಿಸಬೇಕು. ಅದರಲ್ಲಿ ನೀರಿನ ಬಗ್ಗೆ ನಿಜಕ್ಕೂ ತುಂಬಾ ಕಳಕಳಿ ಇರುವ ಕೆಲವು ವ್ಯಕ್ತಿಗಳನ್ನು ಆಹ್ವಾನಿಸಬೇಕು. ಸರಕಾರಗಳು ಮಾಡಲಾಗದ ಕೆಲಸವನ್ನು ಆ ವಿಷಯದ ಮೇಲೆ ಪ್ರೀತಿ ಇರುವವರು ಮಾಡುತ್ತಾರೆ. ಅವರು ರಾಜಕಾರಣಿಗಳಂತೆ ಪಬ್ಲಿಸಿಟಿ ಕೂಡ ಬಯಸಲ್ಲ. ಲಕ್ಷಗಟ್ಟಲೆ ಬಿಲ್ ಕೂಡ ತಯಾರಿಸುವುದಿಲ್ಲ. ಜನಪ್ರತಿನಿಧಿಗಳಿಗೆ ಮನಸ್ಸು ಬೇಕು ಅಷ್ಟೇ!!
Leave A Reply