ಪ್ರಾಪರ್ಟಿ ಕಾರ್ಡ್ ಸಮಸ್ಯೆ ಬಗೆಹರಿಬೇಕಾ? ಈ ಸೂತ್ರ ಅನುಸರಿಸಿ!!
ಪ್ರಾಪರ್ಟಿ ಕಾರ್ಡ್ ಅವ್ಯವಸ್ಥೆ ಎಷ್ಟರಮಟ್ಟಿಗೆ ಇದೆ ಎನ್ನುವುದು ಎಲ್ಲರಿಗೂ ಗೊತ್ತೆ ಇದೆ. ಅದನ್ನು ಸರಿಪಡಿಸಬೇಕು ಎಂದು ಎಲ್ಲರೂ ಹೇಳುತ್ತಾರೆ ವಿನ: ಏನು ಮಾಡಿದರೆ ಸರಿ ಮಾಡಬಹುದು ಎನ್ನುವುದನ್ನು ಯಾರೂ ಹೇಳುವುದಿಲ್ಲ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹಾಗೂ ಅಧಿಕಾರಿಗಳು ಇಚ್ಚಾಶಕ್ತಿ ತೋರಿಸಿದರೆ ಇದೊಂದು ಬೆಟ್ಟದಂತಹ ಸಮಸ್ಯೆ ಎಂದು ಏನು ಅನಿಸುತ್ತಿದೆ ಅದನ್ನು ಮಂಜಿನಂತೆ ಕರಗಿಸಬಹುದು. ಅದು ಹೇಗೆನ್ನುವುದನ್ನು ನಾನು ಈಗ ವಿವರಿಸುತ್ತೇನೆ.
ಮೊದಲನೇಯದಾಗಿ ಯಾವ ವರ್ಷದ ಅರ್ಜಿಗಳು ಬಂದಿವೆ ಎನ್ನುವುದನ್ನು ಮೊದಲು ಹೊರಗೆ ತೆಗೆದು ಅದನ್ನು ವರ್ಷಗಳ ಆಧಾರದಲ್ಲಿ ವರ್ಗಿಕರಿಸಬೇಕು. ಉದಾಹರಣೆಗೆ ಒಬ್ಬ ವ್ಯಕ್ತಿ 2012 ರಲ್ಲಿ ಅರ್ಜಿ ಕೊಟ್ಟರೆ ಅವರದ್ದು ಮೊದಲು ಮಾಡಿ ಕೊಡಬೇಕು. ಹಾಗೆ 2012, 2013, 2014 ರಿಂದ ಇಲ್ಲಿಯ ತನಕ ಯಾವ ವರ್ಷ ಎಷ್ಟು ಜನ ಅರ್ಜಿ ಹಾಕಿದ್ದಾರೆ ಎನ್ನುವುದನ್ನು ನೋಡಿ ಅದನ್ನು ವಿಂಗಡಿಸಬೇಕು. ನಂತರ ಅರ್ಜಿಗಳು ಬಂದ ವರ್ಷದ ಸಿನಿಯಾರಿಟಿ ಪ್ರಕಾರ ಅರ್ಜಿದಾರರಿಗೆ ಮೇಸೆಜ್ ಕಳುಹಿಸಬೇಕು. ಆ ಮೇಸೆಜ್ ನಲ್ಲಿ ಸರ್ವೆಯರ್ ಗಳು ಯಾವ ದಿನಾಂಕದಂದು, ಎಷ್ಟು ಹೊತ್ತಿಗೆ ನಕ್ಷೆ ತಯಾರಿಸಲು ಅರ್ಜಿದಾರರಿದ್ದಲ್ಲಿಗೆ ಬರುತ್ತಾರೆ ಎನ್ನುವುದನ್ನು ನಮೂದಿಸಬೇಕು. ಈ ಮೂಲಕ ಮೊದಲ ಹಂತ ಪೂರ್ಣಗೊಂಡಂತೆ ಆಗುತ್ತದೆ. ಇನ್ನು ಅರ್ಜಿದಾರರು ಪ್ರಾಪರ್ಟಿ ಕಾರ್ಡ್ ಮಾಡಿಸುವಾಗ ಯಾವ ದಾಖಲೆಗಳನ್ನು ಸಲ್ಲಿಸಬೇಕು ಎನ್ನುವುದನ್ನು ಅದೇ ಮೇಸೆಜ್ ನಲ್ಲಿ ಹೇಳಬೇಕು. ಉದಾಹರಣೆಗೆ ಸೇಲ್ ಡೀಡ್, ಸ್ಕೆಚ್, ಖಾತಾ ತಂದುಕೊಡಲು ಬಾಕಿ ಇದ್ದರೆ ಅದನ್ನು ಮೇಸೆಜ್ ಮಾಡಿ ಅರ್ಜಿದಾರರಿಗೆ ತಿಳಿಸಿಬಿಡಬೇಕು. ಒಂದೇ ಮೇಸೆಜ್ ನಲ್ಲಿ ಲಿಖಿತವಾಗಿ ಪೂರ್ಣ ಮಾಹಿತಿ ಕೊಟ್ಟಾಗ ಅರ್ಜಿದಾರರು ಆಗಾಗ ಕಚೇರಿಗೆ ಬಂದು ಅಲೆದಾಡುವುದು ತಪ್ಪುತ್ತದೆ. ಇನ್ನು ಸರ್ವೆಯರ್ ಸ್ಕೆಚ್ ರೆಡಿ ಮಾಡಿ ಕಚೇರಿಗೆ ತಂದು ಕೊಟ್ಟ ನಂತರ ಇಂತಿಂತಹ ದಿನ ಇಂತಿಂತಿಹ ಘಂಟೆಗೆ ಇಂತಹ ಟೇಬಲ್ ಗೆ ಬಂದು ನಿಮ್ಮ ಡ್ರಾಫ್ಟ್ ಸರಿ ಇದೆಯಾ ಪರಿಶೀಲಿಸಿ ಎಂದು ಮತ್ತೊಂದು ಮೇಸೆಜ್ ಕಳುಹಿಸಬೇಕು. ಹಾಗೆ ಅರ್ಜಿದಾರರು ತಮಗೆ ಹೇಳಿದ ದಿನಾಂಕ, ಹೇಳಿದ ಸಮಯ, ಹೇಳಿದ ಟೇಬಲಿಗೆ ಹೋಗಿ ಡ್ರಾಫ್ಟ್ ಪರಿಶೀಲಿಸಬೇಕು. ಅದರಲ್ಲಿ ಏನಾದರೂ ತಪ್ಪಿದ್ದರೆ ಅದನ್ನು ಲಿಖಿತ ಮನವಿ ಕೂಡ ಕೊಡಬೇಕು. ನಂತರ ಅದು ಕರೆಕ್ಷನ್ ಆದ ನಂತರ ಇನ್ನೊಂದು ಮೇಸೆಜ್ ಹಾಕಿ ಬರುವಾಗ ಅರ್ಜಿದಾರರು ಆಧಾರ್ ಕಾರ್ಡ್ ಮತ್ತು ಎಷ್ಟು ಹಣ ಕಟ್ಟಬೇಕು ಎನ್ನುವುದನ್ನು ಕೂಡ ನಮೂದಿಸಿ ಫೋಟೋ ತೆಗೆಯಲು ಬರಬೇಕಾದ ದಿನಾಂಕ, ಸಮಯ ಬರೆದು ಕಳುಹಿಸಿದರೆ ಅರ್ಜಿದಾರರು ಅದನ್ನು ಅನುಸರಿಸುತ್ತಾರೆ.
ಈಗ ಹಾಗೇ ಆಗುತ್ತಿಲ್ಲ. ಅಲ್ಲಿ ಬಂದ ಮೇಲೆ ಆಧಾರ್ ಕಾರ್ಡ್ ತನ್ನಿ, ಮೂಲಪ್ರತಿ ತನ್ನಿ, ಹಣ ಇಷ್ಟು ಕಟ್ಟಲು ಇದೆ. ಪಾವತಿಸಿ ಹೀಗೆ ಹೇಳಲಾಗುತ್ತಿದೆ. ಇದು ಮತ್ತೊಂದು ಗೊಂದಲಕ್ಕೆ ಕಾರಣವಾಗುತ್ತಿದೆ. ಅದು ಬಿಟ್ಟು ನಾನು ಹೇಳಿದ ಮೂರ್ನಾಕು ಹಂತಗಳನ್ನು ಚಾಚುತಪ್ಪದೆ ಅನುಸರಿಸಿದರೆ ಸಮಸ್ಯೆ ಉದ್ಭವವಾಗುವುದಿಲ್ಲ. ಆಗ ಎಲ್ಲವೂ ಸರಿಯಾಗುತ್ತದೆ. ಈಗ ಏನು ಆಗುತ್ತಿದೆ ಎಂದರೆ 2012 ರಲ್ಲಿ ಅರ್ಜಿ ಕೊಟ್ಟವರು ಅಲ್ಲೇ ಬಾಕಿ ಆಗಿದ್ದಾರೆ. ಸರ್ವೆಯರ್ ಗಳು ತಮ್ಮ ಜೇಬು ತುಂಬಿಸುವ ಬಿಲ್ಡರ್ ಗಳನ್ನು ಹುಡುಕಿಕೊಂಡು ಹೋಗುತ್ತಿದ್ದಾರೆ. ಆದ್ದರಿಂದ ಕೇವಲ 30% ದಷ್ಟು ಮಾತ್ರ ಪ್ರಾಪರ್ಟಿ ಕಾರ್ಡ್ ಆಗಿದೆ. ಉಳಿದವರು ಸರ್ವೆಯರ್ ಗಳಿಗೆ ಕಾಯುತ್ತಾ ಇದ್ದಾರೆ!
Leave A Reply