ಮಳೆಗಾಲದಲ್ಲಿಯೇ ಮಂಗಳೂರಿಗೆ ನೀರಿಲ್ಲದಿರುವುದಕ್ಕೆ ಕಾರಣ ಪೈಪು ಮತ್ತು ಅದರ ಮೇಲೆ ಮಣ್ಣು!!

ಮಂಗಳೂರು ಮಹಾನಗರಕ್ಕೆ ಮತ್ತೆ ಮೂರು ದಿನಗಳಿಂದ ನೀರು ಇಲ್ಲ. ಮಳೆಗಾಲದಲ್ಲಿ ನೀರಿನ ಸಮಸ್ಯೆ ಇದೆಯಾ ಎಂದು ಮಂಗಳೂರಿನಲ್ಲಿ ವಾಸಿಸುತ್ತಿರುವವರು ಅಂದರೆ ನೀರಿನ ಕೊರತೆ ಅನುಭವಿಸುತ್ತಿರುವವರು ಮತ್ತು ಮಂಗಳೂರಿನ ಹೊರಗೆ ವಾಸಿಸುತ್ತಿರುವವರು ಕೇಳಬಹುದು. ಆದರೆ ನಮ್ಮ ಪಾಲಿಕೆಯ ಅಧಿಕಾರಿಗಳ ತಲೆ ಎಷ್ಟರ ಮಟ್ಟಿಗೆ ಖಾಲಿ ಇದೆ ಎಂದರೆ ಒಂದು ವಸ್ತುವಿನ ಮೇಲೆ ನಿರಂತರವಾಗಿ ಭಾರ ಬಿದ್ದರೆ ಅದು ಒಡೆಯುತ್ತೆ ಎಂದು ಗೊತ್ತಿಲ್ಲದಷ್ಟು ಇವರು ದಡ್ಡರೋ, ಅಜ್ಞಾನಿಗಳೋ, ಮೂರ್ಖರೋ ಗೊತ್ತಾಗುತ್ತಿಲ್ಲ. ಮಂಗಳೂರಿಗೆ ತುಂಬೆಯಿಂದ ನೀರು ಸರಬರಾಜು ಆಗುತ್ತೆ. ಅದು ಆಗುವುದು ನೀರಿನ ಕೊಳವೆ ಪೈಪುಗಳ ಮೂಲಕ. ಆ ಪೈಪುಗಳು ಅಡ್ಯಾರ್ ಆಗಿ ಪಡೀಲ್ ಮತ್ತು ಬೆಂದೂರ್ ವೆಲ್ ನಲ್ಲಿರುವ ನೀರಿನ ಸಂಗ್ರಹಾರವನ್ನು ಸೇರುತ್ತವೆ. ಈ ನೀರಿನ ಪೈಪುಗಳು ಸಾಗುವ ಎರಡು ಬದಿಗಳಲ್ಲಿ ಕನಿಷ್ಟ ಒಂದು ಮೀಟರ್ ಜಾಗ ಸರಕಾರ ಸ್ವಾಧೀನಪಡಿಸಿಕೊಂಡಿರುತ್ತದೆ.
ಆದರೆ ದುರಂತ ಎನೆಂದರೆ ಈ ಪೈಪುಗಳ ಮೇಲೆ ಎಷ್ಟು ಮಣ್ಣನ್ನು ಸುರಿದಿದ್ದಾರೆ ಎಂದರೆ ಒಂದು ವೇಳೆ ಪೈಪು ಅಡಿಯಲ್ಲಿ ಒಡೆದರೆ ಮೇಲೆ ಬಿದ್ದಿರುವ ಮಣ್ಣನ್ನು ತೆಗೆಯಲು ಜೆಸಿಬಿಗಳಿಗೆ ಮೂರು ದಿನ ತಗಲುತ್ತದೆ. ಕಳೆದ ಮೂರ್ನಾಕು ದಿನಗಳಿಂದ ಮಂಗಳೂರು ಮಹಾನಗರದ ಜನರಿಗೆ ಯಾಕೆ ನೀರು ಇಲ್ಲ ಎಂದರೆ ಅಡ್ಯಾರ್ ಬಳಿ ನೀರಿನ ಪೈಪು ಒಡೆದು ನೀರು ಚಿಮ್ಮುತ್ತಿತ್ತು. ಇದು ಪಾಲಿಕೆಯ ನೀರಿನ ವಿಭಾಗಕ್ಕೆ ಗೊತ್ತಾಗಿ ಅವರು ಗುತ್ತಿಗೆದಾರರಿಗೆ ಹೇಳಿ ಅವರು ಜೆಸಿಬಿಯನ್ನು ತಯಾರು ಮಾಡಿ ಅದು ನೀರು ಲೀಕ್ ಆಗುತ್ತಿರುವ ಸ್ಥಳವನ್ನು ಗುರುತಿಸಿ ಅಲ್ಲಿ ಅಗೆದು ಮಣ್ಣನ್ನು ತೆಗೆದು ನಂತರ ಆ ರಂಧ್ರವನ್ನು ಮುಚ್ಚುವಾಗ ನಾಲ್ಕು ದಿನ ಆಗಿತ್ತು. ಅದು ಸರಿಯಾದ ತಕ್ಷಣ ನೀರು ಬರುತ್ತದಾ? ಇಲ್ಲ. ಮತ್ತೆ ನೀರು ಪಂಪ್ ಮಾಡಿ ಅದನ್ನು ಹೋಗಲು ಇನ್ನೊಂದು ದಿನ ಹಿಡಿಯುತ್ತದೆ. ಅದರೊಂದಿಗೆ ಮಂಗಳೂರಿನ ಅನೇಕ ಭಾಗಗಳಲ್ಲಿ ಎರಡು, ಮೂರು ದಿನಗಳಿಗೊಮ್ಮೆ ನೀರು ಸಿಗುವ ಏರಿಯಾಗಳಿದ್ದು ಅಂತಹ ಪ್ರದೇಶಗಳಿಗೆ ನೀರು ತಲಪುವಾಗ ಒಂದು ವಾರ ಹಿಡಿಯಬಹುದು. ಆದ್ದರಿಂದ ಒಂದು ಸಣ್ಣ ರಂಧ್ರ ಮಂಗಳೂರಿನ ಜನ ಒಂದೊಂದು ಹನಿ ನೀರಿಗೂ ಪರಿತಪಿಸುವಂತೆ ಮಾಡುತ್ತದೆ.
ತುಂಬೆಯಿಂದ ಬರುವ ನೀರು ಒಟ್ಟು ಎರಡು ಪೈಪುಗಳ ಮೂಲಕ ಮಂಗಳೂರಿನ ಎರಡು ನೀರು ಸಂಗ್ರಹಕಾರವಾದ ಪಡೀಲ್ ಹಾಗೂ ಬೆಂದೂರ್ ವೆಲ್ ನೀರಿನ ಸಂಗ್ರಹಗಾರಕ್ಕೆ ಸೇರುತ್ತದೆ. ಎರಡು ಪೈಪುಗಳಲ್ಲಿ ಒಂದು ಹೊಸ ಪೈಪು ಮತ್ತು ಹಳೆ ಪೈಪು. ಹೊಸ ಪೈಪು ಸಂಪೂರ್ಣವಾಗಿ ನೆಲದ ಮೇಲೆ ಹಾಕಲಾಗಿದೆ. ಅದರ ಮೇಲಿರುವ ಹಳೆ ಪೈಪನ್ನು ಅಲ್ಲಲ್ಲಿ ಬ್ಯಾಲೆನ್ಸ್ ಮಾಡಿ ಇಡಲಾಗಿದೆ. ಈ ಎರಡು ಪೈಪುಗಳ ಮೇಲೆ ತುಂಬೆಯಿಂದ ಪಡೀಲ್ ಗೆ ಬರುವಷ್ಟರಲ್ಲಿ ಬಳಿ ಕೆಲವು ಕಿಲೋ ಮೀಟರ್ ಗಳಷ್ಟು ದೂರ ಮಣ್ಣು ಹಾಕಿರುವುದರಿಂದ ಅದೇ ಜಾಗದಲ್ಲಿ ಪ್ರತಿ ವರ್ಷ ಪೈಪು ತೂತಾಗುತ್ತದೆ. ಅಷ್ಟಕ್ಕೂ ಮಣ್ಣು ಹಾಕಿರುವುದು ಯಾರು ಎಂದು ನೋಡಿದರೆ ಮಂಗಳೂರಿನ ಕೆಲವು ಪ್ರಭಾವಿ ಬಿಲ್ಡರ್ ಗಳು. ಅವರು ರಸ್ತೆಯ ಆ ಬದಿಯಲ್ಲಿ ಪೈಪು ಹಾಕಿರುವ ಜಾಗದ ಪಕ್ಕದ ಜಮೀನನ್ನು ಖರೀದಿಸಿದ್ದಾರೆ. ಒಂದು ಕಾಲದಲ್ಲಿ ಅವೆಲ್ಲ ಫಲವತ್ತಾದ ಜಮೀನುಗಳಾಗಿದ್ದವು. ಆದರೆ ಕಾಲಕ್ರಮೇಣ ಅವು ಬಿಲ್ಡರ್ ಗಳಿಗೆ ಮಾರಲ್ಪಟ್ಟಿದೆ. ಈಗ ಅಲ್ಲಿ ಬಿಲ್ಡಿಂಗ್ ಗಳು ನಿರ್ಮಾಣವಾಗಲು ನೆಲವನ್ನು ಸಮತಟ್ಟು ಮಾಡುವ ಪ್ರಕ್ರಿಯೆಗಳು ಶುರುವಾಗುತ್ತಿದೆ. ಈಗಾಗಲೇ ರಸ್ತೆಗೆ ಸಮನಾಗಿ ಮಣ್ಣನ್ನು ತುಂಬಿಸಲಾಗುತ್ತಿದೆ. ಆ ಲಾರಿಗಳು ಮಣ್ಣನ್ನು ಹೊತ್ತುಕೊಂಡು ರಾಷ್ಟ್ರೀಯ ಹೆದ್ದಾರಿಯಿಂದ ತಮ್ಮ ಬಿಲ್ಡರ್ ಗಳ ಜಾಗಕ್ಕೆ ಹೋಗಬೇಕಾದರೆ ಈ ಪೈಪುಗಳ ಮೂಲಕವೇ ಹೋಗಬೇಕು. ಅದಕ್ಕಾಗಿ ಪೈಪುಗಳ ಮೇಲೆ ಮಣ್ಣನ್ನು ಹಾಕಿ ಅದನ್ನು ರಸ್ತೆಯ ಸಮಕ್ಕೆ ತರಬೇಕು. ಇದರಿಂದ ಏನಾಗುತ್ತದೆ ಎಂದರೆ ಭಾರದ ಲಾರಿಗಳು ಮಣ್ಣನ್ನು ಹೊತ್ತುಕೊಂಡು ಹೋಗುವುದರಿಂದ ಪೈಪುಗಳ ಮೇಲೆ ಒತ್ತಡ ಬೀಳುತ್ತದೆ. ಇದರಿಂದ ಪೈಪುಗಳ ನಡುವೆ ಹಾಕಿರುವ ಜೋಡಣೆಯ ನಡುವೆ ಒತ್ತಡ ಬಿದ್ದು ಅವು ಸಹಿಸಲು ಅಸಾಧ್ಯವಾದಾಗ ಬಿರುಕು ಮೂಡಿಸುತ್ತವೆ. ಇದರ ಪರಿಣಾಮದಿಂದ ಈಗ ಎಲ್ಲಾ ಸಮಸ್ಯೆಗಳು ಶುರುವಾಗಿರುವುದು.
ಹಾಗಾದರೆ ಇದನ್ನು ತಡೆಯುವುದು ಹೇಗೆ? ಸಂಶಯವೇ ಇಲ್ಲ, ಮಣ್ಣು ಪೈಪುಗಳ ಮೇಲೆ ಹಾಕದಂತೆ ತಡೆಯುವುದು. ಈಗಾಗಲೇ ಹಾಕಿರುವ ಮಣ್ಣನ್ನು ತೆಗೆಸುವುದು. ಹಾಗಾದರೆ ನಾನು ಹೇಳುತ್ತಿರುವುದು ಪಾಲಿಕೆಗೆ ಗೊತ್ತಿಲ್ವಾ? ಗೊತ್ತಿದೆ, ಸ್ವತ: ಆಗ ಜಿಲ್ಲಾಧಿಕಾರಿಯಾಗಿದ್ದ ಎಬಿ ಇಬ್ರಾಹಿಂ ಅವರು ಯಾವ ಬಿಲ್ಡರ್ ಗಳು ಮಣ್ಣು ಹಾಕಿದ್ರೋ ಅವರಿಗೆ ತೆಗೆಯಲು ಹೇಳಿದ್ರು. ಅದರೊಂದಿಗೆ ಪಾಲಿಕೆ ಕಡೆಯಿಂದ ಅಸಿಸ್ಟೆಂಟ್ ಕಮೀಷನರ್ ಪ್ರಮೀಳಾ ಅವರು ಕೂಡ ನೋಟಿಸ್ ಕೊಟ್ಟಿದ್ದರು. ಆದರೆ ಮಣ್ಣು ತೆಗೆಯುವುದು ಬಿಡಿ, ನೋಟಿಸ್ ಕೊಟ್ಟ ನಿಷ್ಠಾವಂತ ಅಧಿಕಾರಿಗೆ ತಿರುಗುಮಂತ್ರ ಹಾಕಿದ ಬಿಲ್ಡರ್ ಗಳು ಪ್ರಮೀಳಾ ಅವರನ್ನು ಪಾಲಿಕೆಯಿಂದ ಎತ್ತಂಗಡಿ ಮಾಡಿಸಿದ್ರು. ಯಾವ ಕಡೆ ವರ್ಗಾಯಿಸಿದರು ಎಂದರೆ ಧಾರ್ಮಿಕ ದತ್ತಿ ಇಲಾಖೆಗೆ. ಅಲ್ಲಿಗೆ ಓರ್ವ ಪ್ರಾಮಾಣಿಕ ಅಧಿಕಾರಿಗೆ ಒಳ್ಳೆಯ ಕೆಲಸ ಮಾಡಿದ್ದಕ್ಕೆ ಸಿಕ್ಕ ಪ್ರತಿಫಲ. ಮಣ್ಣು ಇವತ್ತಿಗೂ ಹಾಗೆ ಇದೆ. ಪೈಪು ಹಾಗೆ ಸೋರುತ್ತಿದೆ. ವರ್ಷಕ್ಕೊಮ್ಮೆ ಲಕ್ಷಗಟ್ಟಲೆ ಬಿಲ್ ಮಾಡಿ ಅದನ್ನು ಸರಿಪಡಿಸುವ ಕೆಲಸ ನಡೆಯುತ್ತಿದೆ. ನಾವು ಅನುಭವಿಸುವುದು ಅನುಭವಿಸುತ್ತಾ ಇದ್ದೆವೆ!
Leave A Reply