ಜಿಲ್ಲಾಧಿಕಾರಿಯವರೇ, ನೀವಾದರೂ ಮಣ್ಣು ತೆಗೆಸಿ ಪುಣ್ಯ ಕಟ್ಟಿಕೊಳ್ಳಿ!!
ಅಪರೂಪಕ್ಕೆ ಈ ಬಾರಿ ಬುಧವಾರ ಒಂದಿಷ್ಟು ಜೋರು ಮಳೆ ಬಂದಿತ್ತು. ಆದರೆ ಅದು ಮಂಗಳೂರಿನ ಜನರಿಗೆ ಕನ್ನಡಿಯೊಳಗಿನ ಗಂಟು ಆಗಿತ್ತು. ಯಾಕೆಂದರೆ ಹೊರಗೆ ಮಳೆ ಬರುತ್ತಿತ್ತಾದರೂ ಒಳಗೆ ಪೈಪುಗಳಲ್ಲಿ ನೀರು ಬರುತ್ತಿರಲಿಲ್ಲ. ಜನರು ತಮ್ಮ ಮನೆಯ ಬಾಲ್ದಿಗಳಲ್ಲಿ ಮನೆಯ ಮಾಡಿನಿಂದ ಇಳಿಯುತ್ತಿರುವ ನೀರನ್ನು ತುಂಬಿಸಿ ಟಾಯ್ಲೆಟ್ ಸಹಿತ ಬಾತ್ ರೂಂಗೆ ಬಳಸಬೇಕಾಯಿತು. ಇದು ಕಳೆದ ನಾಲ್ಕೈದು ದಿನಗಳಿಂದ ಮಂಗಳೂರಿನ ಪರಿಸ್ಥಿತಿ. ಕಾರಣ ಮಂಗಳೂರಿಗೆ ಬರುವ ನೀರಿನ ಕೊಳವೆ ಪೈಪು ಕಣ್ಣೂರಿನ ಹತ್ತಿರ ರಂಧ್ರ ಆಗಿತ್ತು. ಇದು ಪ್ರತಿ ವರ್ಷ ಆಗುತ್ತಿರುವ ಸಂಪ್ರದಾಯ. ಅದಕ್ಕೆ ಶಾಶ್ವತ ಪರಿಹಾರ ಇಲ್ವಾ? ಹೀಗೆ ಆದರೆ ಖಂಡಿತ ಮುಂದಿನ ವರ್ಷವೂ ಹೀಗೆ ಜುಲೈಯಲ್ಲಿ ನಮ್ಮ ಮಂಗಳೂರಿಗೆ ನೀರು ಬರುವುದು ನಾಲ್ಕೈದು ದಿನ ನಿಂತು ಹೋಗಲಿದೆ. ಕುಡಿಯಲೂ ಕೂಡ ನೀರು ಇರುವುದಿಲ್ಲ. ಹಾಗಂತ ನಾಲ್ಕೈದು ಮಾತ್ರ ನೀರು ಬರಲಿಕ್ಕಿಲ್ಲ ಎಂದು ಅಂದುಕೊಳ್ಳಬೇಡಿ. ಒಂದು ಕಡೆ ರಂಧ್ರವನ್ನು ಮುಚ್ಚಿದರೆ ಮತ್ತೊಂದು ಕಡೆ ಲೀಕ್ ಆಗಲು ಶುರುವಾದರೆ ನಾವು ಮತ್ತೆ ಹೆಚ್ಚುವರಿ ನಾಲ್ಕೈದು ದಿನ ನೀರು ಇಲ್ಲದ ದಿನಗಳನ್ನು ಕಾಣಬೇಕಾಗಬಹುದು. ಯಾಕೆಂದರೆ ತುಂಬೆಯಿಂದ ನಂತೂರು ಬರುವಷ್ಟರಲ್ಲಿ ಎಲ್ಲೆಲ್ಲಿ ಈ ಪೈಪು ಮುಂದಿನ ದಿನಗಳಲ್ಲಿ ಒಡೆಯುತ್ತೆ ಎನ್ನುವುದು ಯಾವ ಜ್ಯೋತಿಷಿಗಳಿಗೂ ಗೊತ್ತಾಗಲಿಕ್ಕಿಲ್ಲ. ಯಾಕೆಂದರೆ ಪೈಪುಗಳ ಮೇಲೆ ಸಂಪೂರ್ಣವಾಗಿ ಮಣ್ಣು ತುಂಬಿ ಹೋಗಿದೆ. ನೀವು ಒಂದು ವೇಳೆ ಈ ರಂಧ್ರ ಮುಚ್ಚುವ ಕಾಮಗಾರಿ ಆಗುವ ಕಣ್ಣೂರಿನ ಆ ಜಾಗಕ್ಕೆ ಹೋದರೆ ನಿಮಗೆ ಅಲ್ಲಿನ ವಸ್ತುಸ್ಥಿತಿ ಗೊತ್ತಾಗುತ್ತೆ. ಎಷ್ಟು ಮಣ್ಣು ತೆಗೆದರೂ ಅಲ್ಲಿ ಅಷ್ಟು ಮಣ್ಣು ಇತ್ತು.
ಹಾಗಾದರೆ ಈಗ ಪ್ರಪ್ರಥಮವಾಗಿ ನಮ್ಮ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ಏನು ಮಾಡಬೇಕು? ಸಸಿಕಾಂತ್ ಸೆಂಥಿಲ್ ಅವರಿಗೆ ದಕ್ಷ ಜಿಲ್ಲಾಧಿಕಾರಿ ಎನ್ನುವ ಹೆಸರಿದೆ. ಅವರು ಮೊದಲಿಗೆ ತಮ್ಮ ಹಿಂದಿನ ಜಿಲ್ಲಾಧಿಕಾರಿ ಎಬಿ ಇಬ್ರಾಹಿಂ ಅವರು ಆ ಅವಧಿಯಲ್ಲಿ ನೀರಿನ ಕೊಳವೆ ಪೈಪುಗಳ ಮೇಲೆ ಬಿದ್ದಿರುವ ಮಣ್ಣನ್ನು ಹಾಕಿದವರಿಗೆ ನೋಟಿಸ್ ಜಾರಿಗೊಳಿಸಿ ಅದನ್ನು ತೆಗೆಸಲು ಸೂಚನೆ ನೀಡಿದ್ದರು. ಆ ಲಿಸ್ಟ್ ನ್ನು ಮತ್ತೆ ತರಿಸಬೇಕು. ಅದನ್ನು ಮತ್ತೆ ಜಾರಿಗೊಳಿಸಬೇಕು. ಈ ಬಾರಿ ತೆಗೆಯುವ ತನಕ ಅದಕ್ಕೆ ಒಬ್ಬ ಅಧಿಕಾರಿಯನ್ನು ನೇಮಿಸಿ ಫಾಲೋ ಅಪ್ ಮಾಡಲು ಸೂಚಿಸಬೇಕು. ಇಷ್ಟೇ ಅಲ್ಲ, ಆ ಕೆಲಸ ಆದ ನಂತರ ಕಳೆದ ಬಾರಿ ನೋಟಿಸ್ ಸಿಕ್ಕಿದರೂ ತೆಗೆಯದಿದ್ದ ಬಿಲ್ಡರ್ ಗಳನ್ನು ಮತ್ತು ಹಾಗೆ ಬಿಟ್ಟ ಅಧಿಕಾರಿಯ ಮೇಲೆ ಕರ್ತವ್ಯಲೋಪಕ್ಕೆ ಸಂಬಂಧಪಟ್ಟಂತೆ ಶಿಸ್ತುಕ್ರಮ ಜಾರಿಗೊಳಿಸಬೇಕು.
ಮಾತನಾಡಿದರೆ ಕಮೀಷನರ್ ಅವರು ನಾವು ಮಣ್ಣು ತೆಗೆದರೆ ಅಲ್ಲಿ ಪೈಪುಗಳು ನೆಲಮಟ್ಟದಿಂದ ಸಾಕಷ್ಟು ಆಳದಲ್ಲಿವೆ. ಯಾರಾದರೂ ಜನರು ರಾಷ್ಟ್ರೀಯ ಹೆದ್ದಾರಿಯ ಬಳಿ ಇರುವ ಆ ಆಳದಲ್ಲಿ ಬೀಳುವ ಸಾಧ್ಯತೆ ಇದೆ ಎನ್ನುತ್ತಾರೆ. ಆದರೆ ನಾನು ಕೇಳುವುದು ನೀವು ಪೈಪುಗಳು ಕಾಣದೇ ಮಣ್ಣು ತುಂಬಿಸಿ ನಿಮ್ಮ ತಪ್ಪುಗಳನ್ನು ಮರೆಮಾಚಲು ಆಳ ಇದ್ದರೆ ಜನ ಬೀಳುತ್ತಾರೆ ಎಂದು ಹೇಳುತ್ತಿರಲ್ಲ, ಹಾಗಾದರೆ ಮುಂಬೈಯಲ್ಲಿ ಪೈಪುಗಳು ಹೀಗೆ ಬಹಿರಂಗವಾಗಿ ಕಾಣುತ್ತಿದೆಯಲ್ಲ, ಅದಕ್ಕೆ ಏನು ಹೇಳುತ್ತೀರಿ. ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡೂ ಬದಿಗೆ ತಗಡಿನ ಪಟ್ಟಿಯನ್ನು ಹಾಕಿರುವುದನ್ನು ನೀವು ನೋಡಿರಬಹುದು. ಅದು ಯಾಕೆ ಹಾಕುವುದು? ಒಂದು ವೇಳೆ ಆಳ ಇದೆ ಎನ್ನುವುದಾದರೆ ಕೆಲವು ಭಾಗಗಳಲ್ಲಿ ನಾಗರಿಕರು ತಮ್ಮ ಜಮೀನಿಗೆ ಹೋಗಲು ಅನುಕೂಲ ಮಾಡಲು ಕಿರುಸೇತುವೆಯನ್ನು ಕಟ್ಟಬಹುದು. ಅದು ಬಿಟ್ಟು ಸಂಪೂರ್ಣವಾಗಿ ಮಣ್ಣು ಹಾಕಿದರೆ ಪ್ರತಿ ಬಾರಿ ಪೈಪು ಒಡೆದರೆ ಆಗ ಅದನ್ನು ಹುಡುಕಲು ಎಷ್ಟು ಸಮಯ ಹಿಡಿಯುತ್ತದೆ. ಮಳೆ ಬರುತ್ತಿದ್ದ ಕಾರಣ ರಂಧ್ರ ಮುಚ್ಚಲು ತುಂಬಾ ಸಮಯ ಬೇಕಾಗಿದೆ ಎನ್ನುತ್ತಿರಿ. ಆದರೆ ಅಲ್ಲಿ ಕಣ್ಣೂರಿನಲ್ಲಿ ನೋಡಿದರೆ ನೀರು ಕಡಿಮೆ, ಮಣ್ಣು ಜಾಸ್ತಿ ಇದೆ. ಪೈಪಿನ ಕೆಳಗೆ ನೀರಿದೆ ವಿನ: ಎಲ್ಲಾ ಕಡೆ ಮಣ್ಣು ಇದೆ. ಜನರು ಮಾತ್ರ ಇದ್ಯಾವುದೋ ಗೊತ್ತಿಲ್ಲದೇ ನೀರಿಲ್ಲದೆ ಒದ್ದಾಡುತ್ತಾರೆ. ನೀರು ಲೀಕ್ ಆದರೆ ಹಬ್ಬ ಆದಂತೆ ಅಧಿಕಾರಿಗಳು ಖುಷಿ ಪಡುತ್ತಾರೆ!
Leave A Reply