ಸೀಝ್ ಮಾಡಿದ್ರೆ ಸಾಕಾ, ದಂಡ ಕಕ್ಕಿಸಲ್ವಾ ಅಧಿಕಾರಿಗಳೇ!!
ಸೀಝ್ ಮಾಡಿದ್ರೆ ಸಾಕಾ, ದಂಡ ಕಕ್ಕಿಸಲ್ವಾ ಅಧಿಕಾರಿಗಳೇ!ಕೊನೆಗೂ ನಮ್ಮ ಮಂಗಳೂರು ಮಹಾನಗರ ಪಾಲಿಕೆಯ ಆರೋಗ್ಯ ಅಧಿಕಾರಿಗಳು ಒಂದಿಷ್ಟು ಉತ್ಸಾಹದಿಂದಲೇ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಕೊಡುತ್ತಿರುವ ಅಂಗಡಿಗಳ ಮೇಲೆ ದಾಳಿ ಮಾಡಿ ಪ್ಲಾಸ್ಟಿಕ್ ವಶಪಡಿಸುತ್ತಿದ್ದಾರೆ. ರಾಜ್ಯ ಸರಕಾರ ಈಗಾಗಲೇ ಎಲ್ಲಾ ರೀತಿಯ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ಗಳನ್ನು , ಪ್ಲೆಕ್ಸ್, ಕ್ಯಾಟರಿಂಗ್ ನವರು ಟೇಬಲಿಗೆ ಬಳಸುವ ಪ್ಲಾಸ್ಟಿಕ್ , ಪ್ಲಾಸ್ಟಿಕ್ ಸ್ಪೂನ್ ಸಹಿತ ಎಲ್ಲವನ್ನು ಬ್ಯಾನ್ ಮಾಡಿದ್ದಾರೆ. ಪ್ಲಾಸ್ಟಿಕ್ ನಮ್ಮ ಪರಿಸರಕ್ಕೆ ಎಷ್ಟು ಮಾರಕ ಎನ್ನುವುದು ಎಲ್ಲರಿಗೂ ಗೊತ್ತು. ಆದ್ದರಿಂದ ಅದನ್ನು ಒಂದನೇ ತರಗತಿಯ ಮಕ್ಕಳಿಗೆ ಅರ್ಥವಾಗುವಂತೆ ವಿವರಿಸುವ ಅಗತ್ಯ ಇಲ್ಲ. ಆದರೆ ಪ್ಲಾಸ್ಟಿಕ್ ಬ್ಯಾನ್ ಘೋಷಣೆ ಆದ ತಕ್ಷಣ ಒಂದಿಷ್ಟು ದಿನ ಎಲ್ಲ ಮಳಿಗೆಗಳ ಹೊರಗೆ ಒಂದು ಬೋರ್ಡ್ ಕಾಣಿಸುತ್ತಿತ್ತು. ಅದರಲ್ಲಿ ಬಟ್ಟೆಯ ಬ್ಯಾಗ್ ಗಳನ್ನು ಬಳಸೋಣ, ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಕೊಡಲಾಗುವುದಿಲ್ಲ ಎಂದು ಬೋರ್ಡ್ ಹಾಕಲಾಗುತ್ತಿತ್ತು. ಆದರೆ ಕೆಲವು ದಿನಗಳ ನಂತರ ಆ ಬೋರ್ಡ್ ಹೆಚ್ಚಿನ ಮಳಿಗೆಗಳಿಂದ ಮಾಯವಾಗಿದೆ. ಯಥಾಪ್ರಕಾರ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಗಳು ಹೊರಗೆ ಬಂದಿವೆ. ಕೆಲವರು ಇವತ್ತಿಗೂ 40 ಎಂಎಂ ಗಿಂತ ಹೆಚ್ಚಿನ ಮೈಕ್ರೋನ್ ಇರುವ ಪ್ಲಾಸ್ಟಿಕ್ ಅನ್ನು ಬಳಸಬಹುದು ಎನ್ನುವ ಸಮರ್ಥನೆ ನೀಡುತ್ತಾರೆ. ಆದರೆ ಅಂತಹ ಯಾವುದೇ ವಿನಾಯಿತಿ ಈಗ ಇಲ್ಲ. ಪ್ರಾರಂಭದಲ್ಲಿ ಹಾಗೆ ಇತ್ತು. ನಂತರ ಅದನ್ನು ತೆಗೆದು ಹಾಕಿ ಎಲ್ಲಾ ರೀತಿಯ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಗಳನ್ನು ಬಳಸುವುದನ್ನು ನಿಷೇಧಿಸಲಾಗಿದೆ. ಆದರೆ ಇವತ್ತಿಗೂ ಬೀದಿಬದಿ ವ್ಯಾಪಾರಿಗಳು ಅತ್ಯಂತ ಕಡಿಮೆ ದರ್ಜೆಯ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ಗಳನ್ನು ಬಳಸುತ್ತಿದ್ದಾರೆ.
ಬಟ್ಟೆಯ ಉತ್ಪಾದಕರಿಗೆ ಲಾಭ ಆಗುತ್ತಿತ್ತು..
ನಿಜಕ್ಕೂ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಗಳನ್ನು ಕೊಡಲಾಗುವುದಿಲ್ಲ, ಬಟ್ಟೆಯ ಬ್ಯಾಗ್ ಗಳನ್ನು ಮಾತ್ರ ಕೊಡುತ್ತೇವೆ, ಅದಕ್ಕೆ ಹೆಚ್ಚುವರಿ ಐದು ರೂಪಾಯಿ ಆಗುತ್ತೆ ಎಂದು ಅಂಗಡಿಯವರು ಹೇಳಿದ್ರೆ ಗ್ರಾಹಕನಿಗೆ ನಿಜಕ್ಕೂ ಪರಿಸರದ ಮೇಲೆ ಪ್ರೀತಿ ಇದ್ದರೆ ಅದನ್ನು ಕೊಂಡುಕೊಳ್ಳುತ್ತಾನೆ. ಇಲ್ಲದಿದ್ದರೆ ಜಿಪುಣನಾಗಿದ್ದರೆ ಅಥವಾ ಬಟ್ಟೆಯ ಬ್ಯಾಗ್ ಅವಶ್ಯಕತೆ ಇಲ್ಲದಿದ್ದರೆ ತಾನೇ ಮನೆಯಿಂದ ಬ್ಯಾಗ್ ಬರುವಾಗಲೇ ತರುತ್ತಾನೆ. ಆದರೆ ನಮ್ಮ ಅಂಗಡಿಯವರು ಗ್ರಾಹಕನಿಗೆ ಖಡಕ್ಕಾಗಿ ಹೇಳಿದರೆ ಆತ ಮುಂದಿನ ಬಾರಿ ತಮ್ಮ ಅಂಗಡಿಗೆ ಬರಲಿಕ್ಕಿಲ್ಲ ಎಂದು ಹೆದರಿ ಅವನಿಗೆ ಅನುಕೂಲ ಮಾಡಿಕೊಡಲು ಹೋಗುತ್ತಾರೆ.
ದಂಡ ಹಾಕಿ, ಯಾಕೆ ಗೊತ್ತಿಲ್ಲವಾ…
ಅಷ್ಟಕ್ಕೂ ಮಂಗಳೂರು ಮಹಾನಗರ ಪಾಲಿಕೆಯವರು ತಾವು ರೇಡ್ ಮಾಡಿ ಬೇರೆಯವರಿಗೆ ಮಾದರಿಯಾಗುವಂತಹ ಕಾರ್ಯವೇನೂ ಮಾಡುತ್ತಿಲ್ಲ. ಪ್ರಾರಂಭದಲ್ಲಿಯೇ ಸ್ಥಳೀಯ ಪಂಚಾಯತ್ ಗಳಾದ ಮೂಲ್ಕಿ, ಮೂಡಬಿದ್ರೆಯ ಅಧಿಕಾರಿಗಳು ರೇಡ್ ಮೂಲಕ ಸುದ್ದಿಯಾಗಿದ್ದರು. ಆಗೆಲ್ಲ ನಮ್ಮ ಪಾಲಿಕೆಯವರು ಏನೂ ಮಾಡಿರಲಿಲ್ಲ. ಅಷ್ಟೆ ಅಲ್ಲ, ಈಗ ರೇಡ್ ಮಾಡಿ ನಾಲ್ಕು ದಿನ ಟಿವಿ, ಪೇಪರ್ ನಲ್ಲಿ ಬರಲು ಕೆಲಸ ಮಾಡುತ್ತಾರೆ ವಿನ: ಇವರಿಗೆ ನಿಜಕ್ಕೂ ಕಾಳಜಿ ಇದೆ ಎಂದಾದರೆ ಸಣ್ಣ ಪುಟ್ಟ ಮಳಿಗೆಗಳನ್ನು ಬಿಟ್ಟು ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ಗಳನ್ನು ಸೃಷ್ಟಿಸುವ ಕಾರ್ಖಾನೆಗಳ ಮೇಲೆಯೇ ರೇಡ್ ಮಾಡಿ ಅದನ್ನು ನಿಲ್ಲಿಸಬಹುದಲ್ಲ. ಅದು ಯಾಕೆ ಮಾಡಲ್ಲ, ಮೂಲದಲ್ಲಿಯೇ ಹೊಡೆತ ಕೊಟ್ಟರೆ ಅಲ್ಲಿಯೇ ನಿಂತು ಬಿಡುತ್ತದೆ. ಅದು ಬಿಟ್ಟು ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಉತ್ಪಾದನೆಯಾಗುವುದು ಆಗುತ್ತಾ ಇರುತ್ತದೆ, ಇತ್ತ ಅದನ್ನು ತಂದು ಚಿಲ್ಲರೆ ಹಣ ಮಾಡುವವರ ಮೇಲೆ ಇವರು ದಾಳಿ ಮಾಡುತ್ತಾರೆ. ರೇಡ್ ಮಾಡುವುದನ್ನು ನಾನು ತಪ್ಪು ಎನ್ನುವುದಿಲ್ಲ. ಆದರೆ ಯಾವ ರೀತಿಯಲ್ಲಿ ಪ್ಲಾಸ್ಟಿಕ್ ನಿಷೇಧ ಸಮರ್ಪಕವಾಗಿ ಅನುಷ್ಟಾನ ಮಾಡಬೇಕು ಎನ್ನುವ ಗುರಿ ಮತ್ತು ಅದನ್ನು ಹೇಗೆ ಯಶಸ್ವಿ ಮಾಡಬೇಕು ಎನ್ನುವುದನ್ನು ನಮ್ಮ ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕು. ಇವರು ಯಾಕೆ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ಉತ್ಪಾದನೆ ಮಾಡುವ ಕಾರ್ಖಾನೆಗಳ ಮೇಲೆ ರೇಡ್ ಮಾಡಿ ಸೀಝ್ ಮಾಡಲ್ಲ ಎಂದು ಹೇಳಲಿ, ಏನಾದರೂ ಸಮಥಿಂಗ್ ವ್ಯವಹಾರ ನಡೆದಿದೆಯಾ ಅಥವಾ ಧೈರ್ಯ ಇಲ್ಲವಾ? ಅಷ್ಟಕ್ಕೂ ಇವರು ಕೇವಲ ರೇಡ್ ಮಾಡಿ ನಿಷೇಧಿತ ಪ್ಲಾಸ್ಟಿಕ್ ಅನ್ನು ಸೀಝ್ ಮಾಡಿ ಬಂದರೆ ಏನಾಗುತ್ತೆ? ಹೀಗೆ ಸೀಝ್ ಮಾಡಿದ ಪ್ಲಾಸ್ಟಿಕ್ ಇವರ ಗೋಡೌನ್ ಗಳಲ್ಲಿ ಎಷ್ಟಿದೆ? ಎರಡು ವರ್ಷಗಳಿಂದ ಇವರು ಸೀಝ್ ಮಾಡಿ ತಂದು ಗುಡ್ಡೆ ಹಾಕುತ್ತಿದ್ದಾರಾ?ನಿಯಮ ಪ್ರಕಾರ ಪ್ಲಾಸ್ಟಿಕ್ ಸೀಝ್ ಮಾಡಿದ ಅಂಗಡಿಯವರಿಗೆ ಫೈನ್ ಅಂದರೆ ದಂಡ ಕೂಡ ಹಾಕಬೇಕು. ಆದರೆ ಇವರು ಹಾಕುತ್ತಿಲ್ಲ. ಸೀಝ್ ಮಾಡುವುದು, ಬರುವುದು ಇಷ್ಟೇ!
Leave A Reply