ಕ್ಯಾಟರಿಂಗ್ ನವರ ಮೇಲೆ ರೇಡ್ ಮಾಡಲು ಧೈರ್ಯ ಇಲ್ಲದ ಪಾಲಿಕೆ!
ಪ್ಲಾಸ್ಟಿಕ್ ಉತ್ಪನ್ನಗಳನ್ನು ಬಳಸಬಾರದು ಎನ್ನುವುದನ್ನು ಭಾಷಣದಲ್ಲಿ ಒಂದು ಗಂಟೆ ಮಾತನಾಡುವುದು ಸುಲಭ. ಮಂಗಳೂರು ಮಹಾನಗರ ಪಾಲಿಕೆಯ ಮೇಯರುಗಳು ಕೂಡ ಎರಡ್ಮೂರು ವರ್ಷಗಳ ಹಿಂದೆ ನಾಲ್ಕೈದು ಶಾಲೆಗಳಿಗೆ ಹೋಗಿ ಅಲ್ಲಿ ಬಟ್ಟೆಯ ಚೀಲಗಳನ್ನು ಮಕ್ಕಳಿಗೆ ವಿತರಿಸಿ ಅವರಿಗೆ ಪ್ಲಾಸ್ಟಿಕ್ ಬಳಕೆಯಿಂದ ಆಗುವ ತೊಂದರೆಯನ್ನು ಭಾಷಣದಲ್ಲಿ ಊರು ಹೊಡೆದು ಚಪ್ಪಾಳೆ ಗಿಟ್ಟಿಸಿಕೊಂಡರು. ಮಕ್ಕಳು ಚೀಲ ಸಿಕ್ಕಿದ ಖುಷಿಯಲ್ಲಿ ಇವರ ಭಾಷಣವನ್ನು ಕೇಳಿದ್ದರೋ, ಇಲ್ಲವೋ. ಅದು ಮೇಯರ್ ಗಳಿಗೂ, ಅಧಿಕಾರಿಗಳಿಗೂ ಬೇಕಿರಲಿಲ್ಲ. ಅವರು ಫೋಟೋ ತೆಗಿಸಿ ಪತ್ರಿಕೆ, ಟಿವಿಯಲ್ಲಿ ಬರುವಂತೆ ಮಾಡಿ ಹೊರಟು ಹೋದರು. ನಾಲ್ಕೈದು ಕಡೆ ಬ್ಯಾನರ್ ಬಿತ್ತು. ಅದರ ನಂತರ ಬಿಲ್ ಆಗಿ ಹಣ ಕೆಲವರ ಕಿಸೆಗೆ ಹೋದ ನಂತರ ಎಲ್ಲರೂ ಪ್ಲಾಸ್ಟಿಕ್ ಅನ್ನು ಮರೆತರು. ಪಾಲಿಕೆಯ ಹೊರಗೆ ಬ್ಯಾನ್ ಮಾಡಿದ ಪ್ಲಾಸ್ಟಿಕ್ ನಿಂದ ಉತ್ಪಾದಿಸಲ್ಪಟ್ಟ ಫ್ಲೆಕ್ಸ್, ಹೋರ್ಡಿಂಗ್ ಗಳು ಹಾಕಲ್ಪಟ್ಟವು. ಪ್ಲಾಸ್ಟಿಕ್ ನಿಂದ ಮಾಡಲ್ಪಟ್ಟ ಫ್ಲೆಕ್ಸ್, ಹೋರ್ಡಿಂಗ್ಸ್ ಅನ್ನು ಹಾಕುವ ಮೊದಲು ಅದು ಖಾಸಗಿ ಜಾಗದಲ್ಲಿ, ಸರಕಾರಿ ಜಾಗದಲ್ಲಿ ಎಲ್ಲೇ ಅಳವಡಿಸುವ ಮೊದಲು ಪಾಲಿಕೆ ಕಡೆಯಿಂದ ಅನುಮತಿ ಪಡೆಯಬೇಕು. ಹತ್ತು ಫ್ಲೆಕ್ಸ್, ಹೋರ್ಡಿಂಗ್ಸ್ ಗಳಿಗೆ ಅನುಮತಿ ಪಡೆದು ಐವತ್ತು ಕಡೆ ಹಾಕುವುದು ಜಾಹೀರಾತುದಾರರ ಅಥವಾ ಫ್ಲೆಕ್ಸ್, ಹೋರ್ಡಿಂಗ್ಸ್ ಮಾಡುವ ಏಜೆನ್ಸಿಗಳ ಹಳೆ ಸಂಪ್ರದಾಯ. ಅದಕ್ಕೆ ಮಾಮೂಲಿ ಸಂದಾಯ ಆಗಿ ಅಧಿಕಾರಿಗಳಿಗೆ ಸಮ್ ಥಿಂಗ್ ಹೋಗಿಯೇ ಹೋಗುತ್ತದೆ. ಆದರೆ ಆಶ್ಚರ್ಯ ಎಂದರೆ ಪಾಲಿಕೆಯ ಚೇಂಬರಿನ ಒಳಗೆ ಕುಳಿತು ಫ್ಲೆಕ್ಸ್, ಹೋರ್ಡಿಂಗ್ಸ್ ಗಳಿಗೆ ಅನುಮತಿ ಕೊಡುವ ಅಧಿಕಾರಿಗಳು ಅಪ್ಪಟ ನಿಷೇಧಿತ ಪ್ಲಾಸ್ಟಿಕ್ ನಿಂದ ಉತ್ಪಾದನೆಯಾಗುವ ಫ್ಲೆಕ್ಸ್, ಹೋರ್ಡಿಂಗ್ಸ್ ಗಳಿಗೆ ತಾವು ಅನುಮತಿ ಕೊಡುವುದು ಎಷ್ಟು ಸರಿ ಎಂದು ಯೋಚಿಸುವುದಿಲ್ಲ. ಹಾಗಾದರೆ ನಾಲ್ಕು ಕಡೆ ಹೋಗಿ ಬಟ್ಟೆಯ ಚೀಲ ಕೊಟ್ಟು ಬರುವ ಪಾಲಿಕೆ ಅದೇ ತಮ್ಮದೇ ಕಟ್ಟಡದ ಎದುರಿಗೆ ಸಾಲು ಸಾಲು ನಿಂತಿರುವ ಫ್ಲೆಕ್ಸ್, ಹೋರ್ಡಿಂಗ್ಸ್ ಪ್ಲಾಸ್ಟಿಕ್ ನಿಂದ ಮಾಡಿದ್ದು ಎಂದು ಯೋಚಿಸುವುದೇ ಇಲ್ಲ. ಇದಕ್ಕೆ ಏನು ಹೇಳುವುದು?
ಕ್ಯಾಟರಿಂಗ್ ಅಂಡ್ ಫುಲ್ ಆಫ್ ಪ್ಲಾಸ್ಟಿಕ್..
ಇನ್ನು ನೀವು ಯಾವುದೇ ಮದುವೆ, ಮುಂಜಿಯಿಂದ ಹಿಡಿದು ಶ್ರಾದ್ಧದ ಊಟದ ತನಕ ಹೋಗಿರುವಾಗ ನೋಡಿರಬಹುದು. ಇತ್ತೀಚೆಗೆ ಅಂತೂ ಎಲ್ಲಾ ಊಟಗಳು ನಡೆಯುವುದು ಟೇಬಲ್ ಮೇಲೆನೆ. ನೀವು ಟೇಬಲ್ ಎದುರಿನ ಚೇರ್ ಮೇಲೆ ಊಟಕ್ಕೆ ಕುಳಿತ ತಕ್ಷಣ ಕ್ಯಾಟರಿಂಗ್ ನ ಹುಡುಗರು ಪ್ಲಾಸ್ಟಿಕ್ ಹಾಳೆಯೊಂದನ್ನು ಹರಡುತ್ತಾರೆ. ಅದರ ನಂತರ ಎಲೆ ಬರುತ್ತದೆ. ಎಲೆ ತೆರೆದ ಹಾಗೆ ಒಂದು ಗ್ಲಾಸು ತಂದಿಟ್ಟು ಅದರ ಒಳಗೆ ನೀರು ಸುರಿಯುತ್ತಾರೆ. ಆ ಗ್ಲಾಸು ಅಪ್ಪಟ ಪ್ಲಾಸ್ಟಿಕಿನದ್ದು. ಅದರ ನಂತರ ಊಟದ ಕೊನೆಯಲ್ಲಿ ಮಜ್ಜಿಗೆ ಹಿಡಿದುಕೊಂಡು ಬರುತ್ತಾರೆ. ಅವರ ಕೈಯಲ್ಲಿ ಮತ್ತೆ ಪ್ಲಾಸ್ಟಿಕ್ ಗ್ಲಾಸು. ಊಟದ ಮಧ್ಯದಲ್ಲಿ ಫೂಟ್ ಸಾಲಡ್ ಬರುತ್ತದೆ. ಅದು ಕೂಡ ಪ್ಲಾಸ್ಟಿಕ್ ಬೌಲ್ ನಲ್ಲಿ. ಊಟ ಮಾಡಿ ನೀವು ಹೊರಗೆ ಹೋಗುವಾಗ ಸ್ವೀಟ್ ಬಾಕ್ಸ್ ನಿಮ್ಮ ಕೈಯಲ್ಲಿ ಕೊಡುತ್ತಾರೆ. ಅದು ಕೂಡ ಪ್ಲಾಸ್ಟಿಕ್ ಬಾಕ್ಸ್ ನಲ್ಲಿ. ಅದರೊಂದಿಗೆ ಬೀಡಾ ಪ್ಲಾಸ್ಟಿಕ್ ತೊಟ್ಟೆಯಲ್ಲಿ ಕೊಡುತ್ತಾರೆ. ಐಸ್ ಕ್ರೀಂ ಪ್ಲಾಸ್ಟಿಕ್ ಸ್ಪೂನ್, ತಟ್ಟೆಯಲ್ಲಿ ಕೊಡಲಾಗುತ್ತದೆ. ಅಲ್ಲಿಗೆ ಒಂದು ಊಟಕ್ಕೆ ಒಬ್ಬ ವ್ಯಕ್ತಿಗೆ ಏಳು ಪ್ಲಾಸ್ಟಿಕ್ ಐಟಂಗಳು ಬಲಿಯಾಗುತ್ತವೆ. ಹಾಗಾದರೆ ಕನಿಷ್ಟ 500 ಜನ ಊಟಕ್ಕೆ ಬಂದರೆ ಎಷ್ಟು ಪ್ಲಾಸ್ಟಿಕ್ ಗಳು ಉತ್ಪಾದನೆಯಾಗಬೇಕಾಗುತ್ತದೆ? ಕೊನೆಗೆ ಎಲ್ಲವನ್ನು ಕಪ್ಪು ಮಣಗಾತ್ರದ ಪ್ಲಾಸ್ಟಿಕ್ ಗೋಣಿಯಲ್ಲಿ ತುಂಬಿ ಬಿಸಾಡಿದರೆ ಕ್ಯಾಟರಿಂಗ್ ನವರ ಕೆಲಸ ಮುಗಿಯುತ್ತದೆ. ಆದರೆ ಇಲ್ಲಿಯವರೆಗೆ ಇಂತಹ ಕ್ಯಾಟರಿಂಗ್ ನವರ ಒಂದಾದರೂ ರೇಡ್ ಆಗಿ ಪ್ಲಾಸ್ಟಿಕ್ ಉತ್ಪನ್ನಗಳನ್ನು ಸೀಝ್ ಮಾಡಿರುವುದು ನೋಡಿದ್ದೀರಾ?
ಅದು ಸಾಧ್ಯವಿಲ್ಲ..
ಇಲ್ಲ, ನೀವು ನೋಡಿಲ್ಲ, ಕೇಳಿಲ್ಲ. ಯಾಕೆಂದರೆ ಕ್ಯಾಟರಿಂಗ್ ನವರು ಪಾಲಿಕೆಯವರನ್ನು ಚೆನ್ನಾಗಿ ಇಟ್ಟುಕೊಂಡಿರುತ್ತಾರೆ. ಅಧಿಕಾರಿಗಳ ಮನೆಯ ಕಾರ್ಯಕ್ರಮಗಳಿಗೆ, ನೆಂಟರ, ಬಂಧುಮಿತ್ರರ ಕಾರ್ಯಕ್ರಮಗಳಿಗೆ ಕಡಿಮೆ ದರದಲ್ಲಿ ಊಟ, ತಿಂಡಿ ಸರಬರಾಜು ಮಾಡಿರುತ್ತಾರೆ. ಇನ್ನು ಪ್ರಭಾವಿ ಕ್ಯಾಟರಿಂಗ್ ನವರಿಗೆ ಆಡಳಿತ ಪಕ್ಷದಲ್ಲಿ ಉನ್ನತ ನಾಯಕರ ಸಂಪರ್ಕ ಇರುತ್ತದೆ. ನಾನು ಯಾವುದೇ ಫಂಕ್ಷನ್ ಆಗುವಾಗಲೇ ರೇಡ್ ಮಾಡಬೇಕು ಎಂದು ಹೇಳುವುದಿಲ್ಲ. ಯಾಕೆಂದರೆ ಕ್ಯಾಟರಿಂಗ್ ನವರ ತಪ್ಪಿನಿಂದ ಒಂದು ಕಾರ್ಯಕ್ರಮದ ಮರ್ಯಾದೆ ಬೀದಿಗೆ ಬೀಳಬಾರದು. ಆದರೆ ಕ್ಯಾಟರಿಂಗ್ ನವರ ಗೋಡೌನ್ ಗಳಲ್ಲಿ ಅವರು ಸ್ಟಾಕ್ ಮಾಡಿದ ಪ್ಲಾಸ್ಟಿಕ್ ಗಳನ್ನು ಸೀಝ್ ಮಾಡಬಹುದಲ್ಲ. ಅದು ಯಾಕೆ ಮಾಡಲ್ಲ.
ಪಾಲಿಕೆಯವರು ಫ್ಲೆಕ್ಸ್, ಹೋರ್ಡಿಂಗ್ ಗಳನ್ನು ತೆಗೆಸುವುದಿಲ್ಲ, ಅದರ ಬದಲಿಗೆ ಅವುಗಳಿಗೆ ಅನುಮತಿ ಹೆಚ್ಚೆಚ್ಚು ಕೊಡುತ್ತಾರೆ. ಇನ್ನೊಂದೆಡೆ ಅತೀ ಹೆಚ್ಚು ಪ್ಲಾಸ್ಟಿಕ್ ಬಳಸುವ ಕ್ಯಾಟರಿಂಗ್ ನವರ ಮೇಲೆ ರೇಡ್ ಮಾಡಿ ಸೀಝ್ ಮಾಡುವುದಿಲ್ಲ. ಇವರದ್ದೇನಿದ್ದರೂ ಅದೇ ನಾಲ್ಕು ಸಣ್ಣಪುಟ್ಟ ಮಳಿಗೆಗಳಿಗೆ ರೇಡ್ ಮಾಡುವುದು, ಸೀಝ್ ಮಾಡುವುದು ಮತ್ತು ಪ್ರಚಾರ ಪಡೆಯುವುದು!!
Leave A Reply