ಮಂಗಳೂರಿನ ಹೊಸ ಮಾರುಕಟ್ಟೆಗಳ ಒಳಗೆ ಎಲ್ಲವೂ ನಡೆಯುತ್ತದೆ, ಫ್ರೀಯಾಗಿ!!
ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಯುಟಿ ಖಾದರ್ ಅವರು ಉರ್ವಾದಲ್ಲಿ ಸೊಳ್ಳೆ ಉತ್ಪಾದನಾ ಕೇಂದ್ರವನ್ನು ಉದ್ಘಾಟನೆಗೊಳಿಸಿದ್ದಾರೆ. ಅಲ್ಲಿ ಈಗ ಯಥೇಚ್ಚವಾಗಿ ಸೊಳ್ಳೆ ಉತ್ಪಾದನೆಯಾಗುತ್ತಿವೆ. ಅದನ್ನು ಜನರು ಉರ್ವಾದ ನೂತನ ಮಾರುಕಟ್ಟೆ ಸಂಕಿರ್ಣ ಎಂದು ಹೊರಗಿನ ಬೋರ್ಡ್ ನೋಡಿ ಅಂದುಕೊಂಡಿದ್ದಾರೆ. ಆದರೆ ಅದು ಬೋರ್ಡಿಗೆ ಮಾತ್ರ ಸೀಮಿತವಾಗಿದೆ. ಒಳಗೆ ಸೊಳ್ಳೆಗಳು, ಕ್ರಿಮಿಕೀಟಗಳು ತಮಗಾಗಿಯೇ ಜನರ ತೆರಿಗೆಯ ಕೋಟಿಗಟ್ಟಲೆ ಹಣ ಖರ್ಚು ಮಾಡಿ ಕಟ್ಟಿರುವ ಕಟ್ಟಡದ ನಿರ್ಮಾತರಿಗೆ ಧನ್ಯವಾದ ಅರ್ಪಿಸುತ್ತಿವೆ. ಅಷ್ಟೇ ಅಲ್ಲ, ಹೊರಗಿನಿಂದ ಭವ್ಯವಾಗಿ ಕಾಣುತ್ತಿರುವ ಮಾರುಕಟ್ಟೆ ಸಂಕೀರ್ಣದ ಒಳಗೆ ಫ್ರೀ ಬಾರ್ ಕೂಡ ಇದೆ. ನೀವು ಹೊರಗಿನಿಂದ ಮಾಲ್ ತಂದರೆ ಇಲ್ಲಿ ಆರಾಮವಾಗಿ ಕುಳಿತು ಕುಡಿಯುತ್ತಾ, ಲಲ್ಲೆ ಹೊಡೆಯುತ್ತಾ ಹೋಗಬಹುದು. ಸಿಗರೇಟು ಸೇದುತ್ತಾ ಎಷ್ಟು ಹೊಗೆ ಬಿಟ್ಟರೂ ಯಾರೂ ಕೆಮ್ಮುವುದಿಲ್ಲ, ಆಕ್ಷೇಪ ಮಾಡುವುದಿಲ್ಲ. ಯಾಕೆಂದರೆ ಅಷ್ಟು ಮಹಡಿಗಳ ವ್ಯವಸ್ಥೆ ಒಳಗೆ ಇದೆ. ಅಂತಹ ವ್ಯವಸ್ಥೆ ಮಾಡಿಕೊಟ್ಟದ್ದಾಗಿ ಕುಡುಕರು ಕೂಡ ಧನ್ಯವಾದ ಅರ್ಪಿಸುತ್ತಿದ್ದಾರೆ. ಇಷ್ಟೇನಾ ಅಂದುಕೊಳ್ಳಿ, ನೀವು ಒಳಗೆ ಹೋಗಿ ಒಂದು ಸುತ್ತು ನೋಡಿ ಬಂದರೆ ಬಳೆಗಳ ಚೂರುಗಳು ಕೂಡ ಬಿದ್ದಿರುತ್ತವೆ. ಅದು ಹೇಗೆ ಬಂದವು ಎನ್ನುವುದು ನಿಮ್ಮ ಯೋಚನೆಗೆ ಬಿಟ್ಟ ವಿಚಾರ. ಆದ್ದರಿಂದ ಫ್ರೀಯಾಗಿ ಲಾಡ್ಜ್ ಕೂಡ ಕಟ್ಟಿಸಿಕೊಟ್ಟಿರುವ ನಮ್ಮ ಆಡಳಿತಕ್ಕೆ ಕಾಮಾತುರರು ಕೂಡ ಧನ್ಯವಾದ ಅರ್ಪಿಸುತ್ತಿದ್ದಾರೆ. ಇನ್ನು ತಮ್ಮ ಅಂಗಡಿ, ಸ್ಟಾಲ್ ನಿಂದ ಉತ್ಪತ್ತಿಯಾಗುವ ತ್ಯಾಜ್ಯವನ್ನು ಎಲ್ಲಿ ಬಿಸಾಡುವುದು ಎಂದು ಯೋಚನೆಯಲ್ಲಿದ್ದ ಕೆಲವರು, ವ್ಯಾಪಾರಿಗಳು ತ್ಯಾಜ್ಯವನ್ನು ಇದೇ ಕಟ್ಟಡದ ಒಳಗೆ ಸುರಿಯುತ್ತಿದ್ದಾರೆ. ಒಟ್ಟಿನಲ್ಲಿ ಅದು ತ್ಯಾಜ್ಯ ಶೇಖರಣಾ ಘಟಕ ಕೂಡ ಆಗಿ ಬದಲಾಗಿದೆ. ಅಷ್ಟೇ ಅಲ್ಲ, ಬೀದಿ ನಾಯಿಗಳಿಗೆ ಈಗ ಮಳೆಗಾಲದಲ್ಲಿ ಎಲ್ಲಿ ಮಲಗುವುದು ಎನ್ನುವ ಟೆನ್ಷನ್ ಕೂಡ ಈಗ ಇಲ್ಲ. ಯಾಕೆಂದರೆ ಆ ಪರಿಸರದ ಅನೇಕ ಬೀದಿನಾಯಿಗಳು ಇದೇ ಕಟ್ಟಡದ ಒಳಗೆ ಮೈಚಾಚಿ ಮಲಗಿಕೊಳ್ಳುತ್ತಿವೆ. ಆ ಮೂಲಕ ನಾಯಿಗಳ ಯೋಗಕ್ಷೇಮ ವಿಚಾರಿಸಿದ ಮಂತ್ರಿಯಾಗಿ ಖಾದರ್ ಅವುಗಳ ಪ್ರೀತಿಯನ್ನು ಕೂಡ ಗಳಿಸಿಕೊಂಡಿದ್ದಾರೆ. ಇನ್ನೇನೂ ಬೇಕು? ಮಾರುಕಟ್ಟೆಯೊಂದನ್ನು ಬಿಟ್ಟು ಉಳಿದ ಎಲ್ಲಾ ವ್ಯವಸ್ಥೆ ಮಾಡಿಕೊಟ್ಟಿರುವ ಜಿಲ್ಲಾ ಉಸ್ತುವಾರಿ ಸಚಿವರು ಮಾರುಕಟ್ಟೆಯನ್ನು ಯಾವಾಗ ಮಾಡಿಕೊಡುತ್ತಾರೋ ಎಂದು ಅಲ್ಲಿನ ವ್ಯಾಪಾರಿಗಳು ನೋವಿನಿಂದ ಹೇಳಿಕೊಡುತ್ತಿದ್ದಾರೆ.
ಇದು ಕೇವಲ ಉರ್ವಾ ಮಾರುಕಟ್ಟೆ ಸಂಕೀರ್ಣ ಒಂದರ ವಿಷಯವೇನಲ್ಲ. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿರ್ಮಾಣವಾಗಿರುವ ಮತ್ತು ನಿರ್ಮಾಣ ಹಂತದಲ್ಲಿರುವ ಹೆಚ್ಚಿನ ಮಾರುಕಟ್ಟೆ ಸಂಕೀರ್ಣಗಳ ಕಥೆಗಳು ಹೆಚ್ಚು ಕಡಿಮೆ ಇದೇ ರೀತಿಯಲ್ಲಿವೆ. ಅದು ಸುರತ್ಕಲ್, ಕೃಷ್ಣಾಪುರ, ಜೆಪ್ಪು, ಕದ್ರಿ, ಕಂಕನಾಡಿ, ಕಾವೂರು ಎಲ್ಲವೂ ಒಳಗೊಂಡಿದೆ. ಉದ್ಘಾಟನೆಗೊಂಡಿರುವ ಎಲ್ಲ ಕಟ್ಟಡಗಳು ಹೊರಗಿನಿಂದ ನೋಡಲು ಚೆನ್ನಾಗಿಯೇ ಇವೆ. ಅದನ್ನು ಉದ್ಘಾಟನೆ ಮಾಡುವಾಗ ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡಿದ್ದರು. ಆದರೆ ಕಾಲಕ್ರಮೇಣ ಅದನ್ನು ಅವರು ಮರೆತರೋ ಅಥವಾ ರಾಜ್ಯ ಸರಕಾರ ಉಳಿಸುವ ಭರದಲ್ಲಿ ಈ ಮಾರುಕಟ್ಟೆಗಳಿಗೆ ಕೊಡಲು ಸಮಯ ಇಲ್ಲವೋ ಗೊತ್ತಾಗುತ್ತಿಲ್ಲ, ಕಟ್ಟಡಗಳು ಪಾಳುಬಿದ್ದಂತೆ ಕಾಣುವ ಪರಿಸ್ಥಿತಿಗೆ ಬಂದು ಮುಟ್ಟಿವೆ. ಒಂದು ಸರಕಾರಿ ಕಟ್ಟಡ ಕಟ್ಟುವುದರಿಂದ ಅದರಲ್ಲಿ ಅನೇಕ ಅಧಿಕಾರಿಗಳಿಗೆ ಪರೋಕ್ಷವಾಗಿ ಲಾಭ ಇದೆ. ಈಗ ಕಟ್ಟಿ ಆಗಿರುವುದರಿಂದ, ಯಾರ್ಯಾರಿಗೆ ಎಷ್ಟೇಷ್ಟು ಸಿಗಬೇಕು ಅಷ್ಟು ಸಿಕ್ಕಿರುವುದರಿಂದ ಇನ್ನು ಅವರಿಗೆ ಅದರ ಅವಶ್ಯಕತೆ ಇಲ್ಲ. ಇನೈದು ತಿಂಗಳಿನ ನಂತರ ಅದನ್ನು ವ್ಯಾಪಾರಿಗಳಿಗೆ ಹಂಚುವುದು ಎಂದು ನಿರ್ಧಾರವಾದರೆ ಆಗ ಅದು ಒಳಗಿನಿಂದ ಮತ್ತೆ ರಿಪೇರಿ ಮಾಡಲು ಇನ್ನಷ್ಟು ಖರ್ಚು ಮಾಡಿಸಿ ಅದರ ಬಿಲ್ ಕೂಡ ತೋರಿಸಿದರೆ ಆಯಿತು. ಒಟ್ಟಿನಲ್ಲಿ ಲಾಭ ಇಲ್ಲದೆ ಏನೂ ನಡೆಯುವುದಿಲ್ಲ, ನಾವು ಹೊಸ ಮಾರುಕಟ್ಟೆಯ ಒಳಗೆ ಇವತ್ತು ಕಾಲಿಡುವುದು, ನಾಳೆ ಕಾಲಿಡುವುದು ಎನ್ನುವ ಆಸೆಯಿಂದ ನೋಡುತ್ತಾ ಇದ್ದೆವೆ. ಕಟ್ಟಡಗಳು ತಮ್ಮ ದುರಾದೃಷ್ಟಕ್ಕೆ ತಮ್ಮನ್ನೇ ನೋಡಿ ಬೇಸರಗೊಳ್ಳುತ್ತಿವೆ!
Leave A Reply