ಮಹಾಲಕ್ಷ್ಮಿ ರೈಲು, ದಾದರ್-ಮಂಗಳೂರು, ವಿಶ್ವದರ್ಜೆಯ ಬೇಡಿಕೆ ಎದುರಿಗಿಟ್ಟೆ!!
ನನ್ನ ಮನವಿ ಪತ್ರದಲ್ಲಿ ಇದ್ದ ಮೊದಲ ಅಂಶವೇ ಮಂಗಳೂರಿನಿಂದ ಮೀರಜ್ ಗೆ ಹೋಗುತ್ತಿದ್ದ ಮಹಾಲಕ್ಷ್ಮಿ ರೈಲಿನ ಬಗ್ಗೆ. ಮಂಗಳೂರಿನ ಯುವ ಪೀಳಿಗೆಗೆ ಈ ಟ್ರೇನ್ ಗೊತ್ತಿರಲಿಕ್ಕಿಲ್ಲ. ಯಾಕೆಂದರೆ ಈ ಟ್ರೇನ್ 1994 ರಲ್ಲಿ ನಿಂತು ಹೋಗಿದೆ. ಮಹಾಲಕ್ಷ್ಮಿ ಟ್ರೇನ್ ಮಂಗಳೂರಿನಿಂದ ಮೀರಜ್ ಗೆ ಹಾಸನ-ಅರಸಿಕೆರೆ ಮಾರ್ಗವಾಗಿ ಹೋಗುತ್ತಿತ್ತು. ಆದರೆ 1994 ರಲ್ಲಿ ಮೀಟರ್ ಗೇಜ್ ಮಾಡುವ ಉದ್ದೇಶದಿಂದ ಈ ಟ್ರೇನ್ ನನ್ನು ನಿಲ್ಲಿಸಲಾಗಿತ್ತು. ಅದರ ನಂತರ 2008 ರಲ್ಲಿ ಮೀಟರ್ ಗೇಜ್ ಕೆಲಸ ಮುಗಿದು ಹೋಗಿದ್ದರೂ ಈ ರೈಲು ಮತ್ತೆ ಪ್ರಾರಂಭವಾಗಲೇ ಇಲ್ಲ. ಈ ರೈಲನ್ನು ಮತ್ತೆ ಪ್ರಾರಂಭಿಸಿ ಎಂದು ರೈಲ್ವೆ ಸಹಾಯಕ ಸಚಿವ ಸುರೇಶ್ ಅಂಗಡಿಯವರಿಗೆ ಮನವಿ ಸಲ್ಲಿಸಿದೆ. ಈ ರೈಲು ಆರಂಭವಾದರೆ ಹುಬ್ಬಳ್ಳಿ, ಧಾರವಾಡಕ್ಕೆ ಹೋಗುವ ನಮ್ಮವರಿಗೆ ಅಥವಾ ಅಲ್ಲಿಂದ ಇಲ್ಲಿ ಬರುವವರಿಗೂ ತುಂಬಾ ಅನುಕೂಲವಾಗುತ್ತದೆ ಎನ್ನುವುದನ್ನು ಒತ್ತಿ ಹೇಳಿದೆ. ನಿಜಕ್ಕೂ ಆ ರೈಲು ಕರ್ನಾಟಕದ ಉತ್ತರ ಧ್ರುವದಿಂದ ದಕ್ಷಿಣ ಧ್ರುವಕ್ಕೆ ಸೇರಿಸುವ ಕೊಂಡಿಯಂತೆ ಕೆಲಸ ಮಾಡುತ್ತಿತ್ತು. ಆ ರೈಲು ನಿಂತು ಹೋದ ಬಳಿಕ ಅದಕ್ಕೆ ಸಮನಾಗಿ ಯಾವುದೇ ಪರ್ಯಾಯ ರೈಲು ಆರಂಭವಾಗಲೇ ಇಲ್ಲ. ಅದಕ್ಕೆ ಸುರೇಶ್ ಅಂಗಡಿಯವರು ಏನು ಹೇಳಿದ್ರು ಎಂದರೆ ಆ ಭಾಗದಲ್ಲಿ ಡಬ್ಲಿಂಗ್ ಕೆಲಸ ಆಗುತ್ತಿರುವುದರಿಂದ ಆ ರೈಲು ಸದ್ಯ ಓಡಿಸುವುದು ಕಷ್ಟಸಾಧ್ಯ ಎಂದರು. ಅದಕ್ಕೆ ನಾನು ಹೇಳಿದೆ, ಪ್ರಸ್ತುತ ಆ ರೈಲು ಓಡಿಸಲು ದಕ್ಷಿಣ ನೈರುತ್ಯ ರೈಲ್ವೆ ವಿಭಾಗ ತಯಾರಾಗಿದೆ. ಆದರೆ ಓಡಿಸಲು ಯಾವುದೇ ಆದೇಶ ಇಲ್ಲದೆ ಇರುವುದರಿಂದ ಸಾಧ್ಯವಾಗಿಲ್ಲ ಎಂದೆ. ಆ ಬಗ್ಗೆ ವರದಿ ತರಿಸಿ ಪರಿಶೀಲಿಸುವುದಾಗಿ ಸಚಿವರು ಹೇಳಿದರು.
ನನ್ನ ಮುಂದಿನ ಕೋರಿಕೆ ಇದ್ದದ್ದು ದಾದರ್ ನಿಂದ ಮಡಗಾಂಗೆ ಬರುವ ರೈಲನ್ನು ಮಂಗಳೂರು ತನಕ ವಿಸ್ತರಿಸಿ ಎನ್ನುವುದಾಗಿತ್ತು. ಯಾಕೆಂದರೆ ಮಂಗಳೂರಿನಿಂದ ಮುಂಬೈಗೆ ಹೋಗುವ ರೈಲುಗಳು ಯಾವುದೂ ಕೂಡ ದಾದರ್ ತನಕ ಹೋಗುವುದಿಲ್ಲ. ಹಾಗಿರುವಾಗ ದಾದರ್ ನಿಂದ ಮಡಗಾಂ ತನಕ ಬರುವ ರೈಲನ್ನು ಮಂಗಳೂರಿನ ತನಕ ವಿಸ್ತರಿಸಿದರೆ ಅದರಿಂದ ಎರಡೂ ಕಡೆಯವರಿಗೂ ಅನುಕೂಲವಾಗುತ್ತದೆ ಎಂದೆ. ಅದಕ್ಕೆ ಸುರೇಶ್ ಅಂಗಡಿಯವರು ಏನು ಹೇಳಿದ್ರು ಎಂದರೆ ಗೋವಾದಿಂದ ಮಂಗಳೂರು ತನಕ ಸಿಂಗಲ್ ಟ್ರಾಕ್ ಇರುವುದರಿಂದ ಹೆವಿ ಟ್ರಾಫಿಕ್ ಆಗುವುದರಿಂದ ಆ ರೈಲು ವಿಸ್ತರಿಸುವ ಗ್ಯಾರಂಟಿ ಕೊಡಲು ಆಗುವುದಿಲ್ಲ ಎಂದರು. ಆದರೂ ಪರಿಶೀಲನೆ ಮಾಡುವುದಾಗಿ ಭರವಸೆ ಕೊಟ್ಟಿದ್ದಾರೆ.
ಇನ್ನು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣವನ್ನು ವಿಶ್ವದರ್ಜೆಗೆ ಏರಿಸಲಾಗುವುದು ಎಂದು ಹಿಂದೊಮ್ಮೆ ರೈಲ್ವೆ ಸಚಿವೆಯಾಗಿದ್ದ ಮಮತಾ ಬ್ಯಾನರ್ಜಿ ಹೇಳಿದ ನೆನಪು. ಆದರೆ ವರ್ಡ್ ಕ್ಲಾಸ್ ಬಿಡಿ, ಓಲ್ಡ್ ಕ್ಲಾಸ್ ಆಗಿಯೇ ನಮ್ಮ ರೈಲು ನಿಲ್ದಾಣ ಉಳಿದಿದೆ. ಅದರ ನಡುವೆ ಕಂಕನಾಡಿ ಅಂದರೆ ಮಂಗಳೂರು ಜಂಕ್ಷನ್ ವಿಶ್ವದರ್ಜೆ ಮಾಡುವುದೋ, ಸೆಂಟ್ರಲ್ ರೈಲು ನಿಲ್ದಾಣ ವಿಶ್ವದರ್ಜೆ ಮಾಡುವುದೋ ಎನ್ನುವ ಬಗ್ಗೆ ಗೊಂದಲ ಏರ್ಪಟ್ಟಿತ್ತು. ಕೇಂದ್ರದಿಂದ ಕಿಸ್ಕೋ ಎನ್ನುವ ಸಂಸ್ಥೆ ಇಲ್ಲಿ ಬಂದು ಪರಿಶೀಲನೆ ಮಾಡಿತ್ತು. ಆ ಬಳಿಕ ವಿಶ್ವದರ್ಜೆ ಮಾಡಬೇಕಾದರೆ ಅಂತಹ ನಿಲ್ದಾಣದಲ್ಲಿ ಕನಿಷ್ಟ ಎಂಟು ಫ್ಲಾಟ್ ಫಾರಂ ಇರಬೇಕು ಎನ್ನುವ ನಿಯಮ ಇದೆ ಎನ್ನುವ ಕಾರಣಕ್ಕಾಗಿ ಸೆಂಟ್ರಲ್ ರೈಲು ನಿಲ್ದಾಣದ ವಿಶ್ವದರ್ಜೆಯ ಕನಸು ಮೂಲೆ ಸೇರಿತ್ತು. ಆದರೆ ನಂತರ ಕಿಸ್ಕೋ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದ ಸಮಗ್ರ ಅಧ್ಯಯನ ಮಾಡಿ ಅಲ್ಲಿ ಎಂಟು ಫ್ಲಾಟ್ ಫಾರಂ ಮಾಡುವಷ್ಟು ಅನುಕೂಲತೆ ಇದೆ ಎಂದು ವರದಿ ನೀಡಿದೆ. ಆ ಬಗ್ಗೆ ಗಮನ ಹರಿಸಬೇಕು ಎಂದು ಮನವಿ ಮಾಡಿದೆ.
ಇನ್ನು ಮಂಗಳೂರು-ಬೆಂಗಳೂರು ರೈಲು ಹೋಗುವಾಗ ಸಕಲೇಶಪುರ-ಸುಬ್ರಹ್ಮಣ್ಯದ ಬಳಿ ಹಾಸನ-ಮಂಗಳೂರು ಭಾಗದಲ್ಲಿ ರೈಲ್ವೆ ಸುರಕ್ಷತಾ ವಿಭಾಗದವರು ವಿಧಿಸಿರುವ ನಿಯಮಗಳ ಪ್ರಕಾರ ಹೆಚ್ಚಿನ ರೈಲು ಸಂಚಾರ ಅಲ್ಲಿ ಆಗುತ್ತಿಲ್ಲ. ಘಾಟ್ ಸೆಕ್ಷನ್ ನಲ್ಲಿ ಸುರಕ್ಷತಾ ದೃಷ್ಟಿಯಿಂದ ಹಾಕುವ ಕ್ಯಾಚ್ ಸ್ಲೈಡಿಂಗ್ ಆ ಭಾಗದ ಎಲ್ಲಾ ರೈಲ್ವೆ ನಿಲ್ದಾಣಗಳಲ್ಲಿ ಅಳವಡಿಸಿದರೆ ಆಗ ರೈಲುಗಳ ಪ್ರಯಾಣಕ್ಕೆ ಅನುಕೂಲ ಮಾತ್ರವಲ್ಲ, ಇನ್ನಷ್ಟು ಹೊಸ ರೈಲುಗಳು ಓಡಾಡಲು ಸುಲಭ ಎಂದು ಮನವಿ ಮಾಡಿದ್ದೇನೆ ..
Leave A Reply