ಫಾಗಿಂಗ್ ಮಲಗಿದ್ದ ಅಧಿಕಾರಿಗಳ ಮುಖಕ್ಕೆ ಆವತ್ತೆ ಮಾಡಬೇಕಿತ್ತು!!
ಫಾಗಿಂಗ್ ಎಂಬ ಶಬ್ದವನ್ನು ನೀವು ಕೇಳಿರಬಹುದು. ಮಲೇರಿಯಾ, ಡೆಂಗ್ಯೂ ಕಾಯಿಲೆಗಳ ವಿಷಯಕ್ಕೆ ಬಂದಾಗ ಫಾಗಿಂಗ್ ಶಬ್ದ ಹೆಚ್ಚೆಚ್ಚು ಕೇಳಲ್ಪಡುತ್ತದೆ. ಈಗಂತೂ ಡೆಂಗ್ಯೂ ಕಾಯಿಲೆ ಮಂಗಳೂರಿನಲ್ಲಿ ತನ್ನ ಕದಂಬಬಾಹುವನ್ನು ಚಾಚುವಾಗ ಫಾಗಿಂಗ್ ಶಬ್ದ ಇನ್ನಷ್ಟು ಹೆಚ್ಚು ಕೇಳುತ್ತದೆ. ಮಂಗಳೂರು ಮಹಾನಗರ ಪಾಲಿಕೆಯ ಅರವತ್ತು ವಾರ್ಡ್ ಗಳಲ್ಲಿ ಫಾಗಿಂಗ್ ಮಾಡಬೇಕು ಎನ್ನುವ ಕೂಗು ಜನರಿಂದ ಕೇಳಿಬರುತ್ತಿವೆ. ಎಲ್ಲರೂ ಫಾಗಿಂಗ್ ಬೇಕು ಎಂದು ಹೇಳುತ್ತಾರೆ ವಿನ: ಪಾಲಿಕೆಯಲ್ಲಿ ಎಷ್ಟು ಫಾಗಿಂಗ್ ಮೆಶಿನ್ ಎಷ್ಟಿದೆ ಎನ್ನುವುದು ನಿಮಗೆ ಗೊತ್ತಾದರೆ ನಿಮಗೆ ಆಶ್ಚರ್ಯವಾಗಬಹುದು. ನಮ್ಮ ಮಂಗಳೂರಿನಲ್ಲಿ ಇರುವ ಒಟ್ಟು ಫಾಗಿಂಗ್ ಯಂತ್ರಗಳ ಸಂಖ್ಯೆ ಏಳು. ನಮ್ಮ ಪಾಲಿಕೆಯಲ್ಲಿ ಯಾವ್ಯಾವುದಕ್ಕೆ ಹಣ ವೇಸ್ಟ್ ಮಾಡುತ್ತಾರೆ, ಆದರೆ ಫಾಗಿಂಗ್ ಯಂತ್ರ ಮಾತ್ರ ಏಳೇ ಇರುವುದು. ಇನ್ನು ಫಾಗಿಂಗ್ ಬಗ್ಗೆ ತಜ್ಞರಲ್ಲಿ ಒಂದೇ ರೀತಿಯ ಅಭಿಪ್ರಾಯವಿಲ್ಲ. ಏನೆಂದರೆ ಫಾಗಿಂಗ್ ಹೊರಗೆ ಮಾಡಿದಾಗ ಡೆಂಗ್ಯೂ ಸೊಳ್ಳೆಗಳು ಹೊರಗಿನಿಂದ ಮನೆಗಳ ಒಳಗೆ ಬರಬಹುದು ಎಂದು ಹೇಳಲಾಗುತ್ತದೆ. ಹಾಗಂತ ಮನೆಗಳ ಒಳಗೆ ಫಾಗಿಂಗ್ ಮಾಡಲು ಹೋದರೆ ಈ ಏಳು ಫಾಗಿಂಗ್ ಮಿಷಿನ್ ಗಳಿಂದ ಫಾಗಿಂಗ್ ಮಾಡಿದರೆ ಪಾಲಿಕೆಯ ಅರವತ್ತು ವಾರ್ಡುಗಳ ಮನೆಗಳ ಒಳಗೆ ಮಾಡಬೇಕಾದರೆ ಎಷ್ಟು ದಿನಗಳು ಬೇಕಾಗಬಹುದು, ನೀವೆ ಯೋಚಿಸಿ. ಅದು ಬಿಡಿ. ನಮ್ಮ ಅಧಿಕಾರಿಗಳು ಎರಡು ತಿಂಗಳ ಮೊದಲು ಮಲಗಿದ್ದಾಗ ಅವರ ಮುಖಕ್ಕೆ ಫಾಗಿಂಗ್ ಮಾಡಿದ್ದಿದ್ದರೆ ಆವತ್ತೆ ಎಚ್ಚರಗೊಳ್ಳುತ್ತಿದ್ದರೋ, ಏನೋ, ಮೂರು ಜೀವಗಳನ್ನು ನಾವು ಉಳಿಸಬಹುದಿತ್ತೋ ಏನೋ.
ಕೆಲವು ವರ್ಷಗಳ ಹಿಂದೆ ಒಬ್ಬ ವ್ಯಕ್ತಿಯನ್ನು ನೀವು ನೋಡಿರಬಹುದು. ಖಾಕಿ ಪ್ಯಾಂಟ್, ಖಾಕಿ ಶರ್ಟ್ ಧರಿಸಿದ, ಒಂದು ಸಿಲಿಂಡರ್ ತರಹದ್ದು ಬೆನ್ನಿಗೆ ಹಾಕಿ ಒಂದು ಪೈಪು ತರಹದ್ದು ಹಿಡಿದು ನಿಮ್ಮ ಅಂಗಳದಲ್ಲಿ ಸ್ಪ್ರೇ ಮಾಡುತ್ತಿದ್ದದ್ದು ನೀವು ನೋಡಿರಬಹುದು. ಸ್ಪ್ರೇ ಮಾಡಿದ ನಂತರ ಅವರು ನಿಮ್ಮ ಬಳಿ ಬಂದು ಒಂದು ಚಿಕ್ಕ ಪುಸ್ತಕದಲ್ಲಿ ಸಹಿ ಹಾಕಿಸುತ್ತಿದ್ದರು. ಆದರೆ ನೀವು ಇತ್ತೀಚೆಗೆ ಅಂತಹ ವ್ಯಕ್ತಿಗಳು ಬಂದು ಸ್ಪ್ರೇ ಮಾಡಿದ್ದನ್ನು ನೋಡಿದ್ದೀರಾ, ಇಲ್ವಲ್ಲಾ? ಇಲ್ಲ, ಯಾಕೆ? ಹಾಗಾದ್ರೆ ಅಂತಹ ಸ್ಪ್ರೇ ಮಾಡುವವರು ಈಗ ಇಲ್ವಾ ಅಥವಾ ಅವರ ಅಗತ್ಯ ಇಲ್ಲ ಎಂದು ನಮ್ಮ ಪಾಲಿಕೆ ಅಧಿಕಾರಿಗಳು ಅಂದುಕೊಂಡಿದ್ದಾರಾ? ಹಾಗಾದರೆ ಯಾಕೆ ಸ್ಪ್ರೇ ಮಾಡುವುದು ಆಗುತ್ತಿಲ್ಲ. ಹಾಗಾದರೆ ನಿರ್ಲಕ್ಷ್ಯ ಅಂದುಕೊಳ್ಳಬೇಕಾ? ಯಾವ ಕಾಟಾಚಾರಕ್ಕೆ ಈಗ ಶುರುಮಾಡಿದ್ದಾರೆ? ಈಗ ಇಷ್ಟು ಜನ ಡೆಂಗ್ಯೂ ಕಾಯಿಲೆಗೆ ನರಳುತ್ತಿದ್ದ ಮೇಲೆ ಅಧಿಕಾರಿಗಳು ಫಾಗಿಂಗ್ ಶುರು ಮಾಡಿದ್ದಾರೆ ವಿನ: ಮೊದಲೇ ಯಾಕೆ ಮಾಡಿಲ್ಲ?
ಈ ನಡುವೆ ಮಳೆಗಾಲ ನಿಜವಾದ ಅರ್ಥದಲ್ಲಿ ಶುರುವಾಗಿದೆ. 60 ಗ್ಯಾಂಗ್ ಹೆಸರಿನ ತಂಡಗಳು ಪ್ರತಿ ವಾರ್ಡ್ ನಲ್ಲಿ ಹೆಸರಿಗೆ ಇದ್ದೇ ಇವೆ. ಎರಡು ತಿಂಗಳಿಗೆ ಒಂದು ಲಕ್ಷ ಹದಿನೈದು ಸಾವಿರದಂತೆ ಅರವತ್ತು ವಾರ್ಡಿಗೆ ಎಷ್ಟು ಆಗುತ್ತೆ ಎನ್ನುವುದು ಎಲ್ಲರಿಗೂ ಗೊತ್ತು. ಆದರೂ ಮಂಗಳೂರಿನ ಅನೇಕ ಪ್ರದೇಶಗಳಲ್ಲಿ ಮಳೆಗಾಲದ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಒಂದು ಮೀಟರ್ ಅಗಲದ ಚರಂಡಿಯಲ್ಲಿ ಇರುವ ಹೂಳು ತೆಗೆಯಬೇಕಾಗಿದ್ದ ಆಂಟೋನಿ ವೇಸ್ಟ್ ಮ್ಯಾನೇಜ್ ಮೆಂಟಿನವರು ಅದನ್ನು ಸರಿಯಾಗಿ ತೆಗೆದಿಲ್ಲ. ಪಾಲಿಕೆಯ ಕಡೆಯಿಂದ ಹೂಳು ತೆಗೆದ ಹಾಗೆ ಮಾಡಿ ಅದನ್ನು ಮೇಲೆ ಹಾಕಿದ್ದು ಅದು ಮಳೆ ಬಂದ ಕೂಡಲೇ ಮತ್ತೆ ತೋಡು ಸೇರಿದೆ. ಇದನ್ನೆಲ್ಲಾ ನೋಡಬೇಕಾಗಿರುವುದು ಯಾರು? ಈಗ ಪಾಲಿಕೆಯಲ್ಲಿ ಜನಪ್ರತಿನಿಧಿಗಳ ಆಡಳಿತ ಇಲ್ಲ. ಹಾಗಾದರೆ ನಿಕಟಪೂರ್ವ ಪಾಲಿಕೆ ಆಡಳಿತದಲ್ಲಿ ಇದ್ದ ಯಾರಿಗೂ ಜವಾಬ್ದಾರಿನೇ ಇಲ್ವಾ? ಅವರು ಮಾಜಿ ಸದಸ್ಯರಾಗಿರಬಹುದು. ಪಾಲಿಕೆಯ ಸದಸ್ಯರು ಈಗ ಅಧಿಕಾರ ಇಲ್ಲ ಎನ್ನುವ ಕಾರಣಕ್ಕೆ ತಮ್ಮ ವಾರ್ಡಿನಲ್ಲಿ ಯಾವ ತೊಂದರೆಯಾದರೂ ಗೊತ್ತಿಲ್ಲ ಎನ್ನುವುದು ಎಷ್ಟು ಸರಿ? ಪಾಲಿಕೆಯ ಸದಸ್ಯರಲ್ಲಿ ನಾನು ಕೇಳುವುದು ಇಷ್ಟೇ, ನೀವು ಮಾಜಿಗಳಾಗಿರಬಹುದು. ಆದರೆ ನೀವು ಕೆಲವು ದಿನಗಳ ಮೊದಲ ತನಕ ಪಾಲಿಕೆಯ ಸದಸ್ಯರಾಗಿದ್ದವರು. ಆಗ ಅಂತೂ ನೀವು ಆಂಟೋನಿ ವೇಸ್ಟ್ ನವರ ಕೆಲಸದಲ್ಲಿನ ಲೋಪದ ಬಗ್ಗೆ ಧ್ವನಿ ಎತ್ತಿಲ್ಲ, ಆಗ ನಿಮಗೆ ಲಾಭ ಇದ್ದಿರಬಹುದು ಎಂದೇ ಅಂದುಕೊಳ್ಳೋಣ, ಆದರೆ ಈಗ ನೀವು ಮಾಜಿಗಳಾಗಿದ್ದಿರಿ ಎಂದರೆ ನೀವು ನಮ್ಮ ಹಾಗೆ ಜನಸಾಮಾನ್ಯರು. ನೀವು ಆಂಟೋನಿ ವೇಸ್ಟ್ ವಿರುದ್ಧ ಧ್ವನಿ ಎತ್ತಬಹುದಲ್ಲಾ!
Leave A Reply