ಶಾನಾಡಿ, ಕಾಮತ್ ಸೇರಿ ಅರ್ಧರ್ಧ ಉಳಿದಿರುವ ಚರಂಡಿಗಳನ್ನು ಮೊದಲು ಪೂರ್ತಿಗೊಳಿಸಲಿ!!
ಸಿಟಿ ಸೆಂಟರ್ ಎದುರು ಡ್ರೈನೇಜ್ ನೀರು ಹೊರಗೆ ಚಿಮ್ಮಿ ನೀರು ರಸ್ತೆಯಲ್ಲಿ ಹರಿಯುವ ನ್ಯೂಸ್ ಒಂದು ಇತ್ತೀಚೆಗೆ ವಾಹಿನಿಯೊಂದರಲ್ಲಿ ಬಂದಿತ್ತು. ಹೀಗೆ ಯಾಕೆ ಆಗುತ್ತದೆ ಎನ್ನುವುದನ್ನು ನಾವು ಇವತ್ತು ಅರ್ಥ ಮಾಡಿಕೊಳ್ಳೋಣ. ನಮ್ಮ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಇರುವ ಅತೀ ಬುದ್ಧಿವಂತ ಜ್ಯೂನಿಯರ್ ಇಂಜಿನಿಯರ್ಸ್, ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ಸ್ ಏನು ಮಾಡುತ್ತಾರೆ ಎನ್ನುವುದೇ ಇಂಟರೆಸ್ಟಿಂಗ್ ವಿಷಯ.
ಉದಾಹರಣೆಗೆ ಹಂಪನಕಟ್ಟೆ ಸಿಗ್ನಲ್ ನಿಂದ ಕೊಡಿಯಾಲ್ ಬೈಲ್ ನಲ್ಲಿರುವ ಬಿಜೆಪಿ ಆಫೀಸ್ ನ ತನಕ ಒಂದು ಚರಂಡಿ ಮಾಡಬೇಕು ಎನ್ನುವ ಯೋಜನೆ ಇದ್ದರೆ ಅದಕ್ಕೆ ರೂಪುರೇಶೆ ಸಿದ್ಧ ಮಾಡಬೇಕಲ್ಲ. ಇಂಜಿನಿಯರ್ಸ್ ಏನು ಮಾಡುತ್ತಾರೆ ಎಂದರೆ ಕಾಮಗಾರಿ ಎಲ್ಲಿ ನಡೆಯುತ್ತದೆಯೋ ಆ ಪ್ರದೇಶಕ್ಕೆ ಸ್ವತ: ಹೋಗಿ ವಾಸ್ತವವನ್ನು ಪರಿಶೀಲನೆ ಮಾಡುವುದಿಲ್ಲ. ತಮ್ಮ ಕಿಸೆಯಲ್ಲಿ ಇರುವ ಕೆಲವರನ್ನು ನೋಡಿಬರಲು ಕಳುಹಿಸುತ್ತಾರೆ. ಅವರು ಅಲ್ಲಿ ಹೋಗಿ ನೋಡಿ ಬಂದು ಪಾಲಿಕೆಯ ಎಸ್ ಆರ್ ಬುಕ್ ನಲ್ಲಿ ಇಷ್ಟು ಕೆಂಪು ಕಲ್ಲು, ಇಷ್ಟು ಕಾಂಕ್ರೀಟ್ ಹೀಗೆ ನಮೂದಿಸಿ ಕೈ, ಕಾಲು, ಮುಖ ತೊಳೆದು ಹೊರಟು ಹೋಗುತ್ತಾರೆ. ಅಲ್ಲಿಂದ ಇಲ್ಲಿಯ ತನಕ ಆ ಚರಂಡಿ ಕಾಮಗಾರಿಗೆ ಇಷ್ಟು ಖರ್ಚು ಆಗುತ್ತದೆ ಎಂದು ಪಾಲಿಕೆಯಲ್ಲಿ ಕುಳಿತೇ ಅಧಿಕಾರಿಗಳು ಎಸ್ಟೀಮೇಟ್ ಹಾಕುತ್ತಾರೆ. ನಿಜಕ್ಕೂ ಆ ಚರಂಡಿ ಕಾಮಗಾರಿ ಪೂರ್ಣವಾಗಿ ಅನುಷ್ಟಾನಕ್ಕೆ ಬರುತ್ತದಾ ಎಂದು ಯೋಚಿಸುವುದಿಲ್ಲ. ಈಗ ಬೇಕಾದರೆ ನೋಡಿ. ಹಂಪನಕಟ್ಟೆ ಸಿಗ್ನಲ್ ನಿಂದ ಬಂದ ಚರಂಡಿ ಸಿಟಿ ಸೆಂಟರ್ ಮುಂದೆ ಹೋಗಿಲ್ಲ. ಅದು ಮತ್ತೆ ಪ್ರಾರಂಭವಾಗಿರುವುದು ಒಂದಿಷ್ಟು ಹೆಜ್ಜೆಯ ನಂತರ ಇರುವ ಬೇಕರಿಯ ಎದುರಿನಿಂದ. ಅದು ಕೂಡ ಎಸ್ ಸಿಡಿಸಿಸಿ ಬ್ಯಾಂಕ್ ಹತ್ತಿರ ಬರುವಾಗ ಮತ್ತೆ ಚರಂಡಿ ನಿಲ್ಲುತ್ತದೆ. ಅಲ್ಲಿ ಕೋರ್ಟ್ ಗೆ ಹೋಗುವ ದಾರಿ ಶುರುವಾಗುತ್ತದೆಯಲ್ಲ. ಅಲ್ಲಿ ಕೆಳಗೆ ಚರಂಡಿ ಇಲ್ಲ. ನಂತರ ಚರಂಡಿ ಶುರುವಾಗುವುದು ರಾಮಭವನ್ ಕಾಂಪ್ಲೆಕ್ಸ್ ನ ಬಳಿ. ಅಲ್ಲಿ ಕೂಡ ಕಾಮಗಾರಿ ಮೂರು ಕಡೆ ನಿಂತು ಬಳಿಕ ಶುರುವಾಗುತ್ತದೆ. ನಂತರ ಒಶಿಯನ್ ಪರ್ಲ್ ಎದುರಿಗೆ ಇರುವ ಇನ್ ಲ್ಯಾಂಡ್ ಬಿಲ್ಡರ್ ಬಳಿಯಿಂದ ಶುರುವಾಗುವ ಚರಂಡಿ ಮತ್ತೆ ಸ್ವಲ್ಪ ದೂರದಲ್ಲಿ ನಿಲ್ಲುತ್ತದೆ. ಇದರಿಂದ ಏನು ಆಗಿದೆ ಎಂದರೆ ಸಿಟಿ ಸೆಂಟರ್ ನಿಂದ ಬಂದ ತ್ಯಾಜ್ಯ ನೀರು, ಬೇರೆ ಕಡೆಯಿಂದ ಬಂದ ತ್ಯಾಜ್ಯ ನೀರಿನಿಂದ ಸಿಟಿ ಸೆಂಟರ್ ಬಳಿ ಓವರ್ ಫ್ಲಾ ಆಗಿ ನೀರು ಹೊರಗೆ ಚಿಮ್ಮಿತ್ತು. ಇದು ಸಿಟಿ ಸೆಂಟರ್ ಬಳಿ ಮಾತ್ರ ಇರುವ ಸಮಸ್ಯೆ ಅಲ್ಲ. ಮಂಗಳೂರಿನ ಅರ್ಧಕರ್ಧ ತೋಡುಗಳು ಎಲ್ಲಿಂದ ಆರಂಭವಾಗಿ ಎಲ್ಲಿ ಕೊನೆಯಾಗಬೇಕು ಎಂದು ಇದೆಯೋ ಅಷ್ಟು ಕೇವಲ ಪಾಲಿಕೆಯ ದಾಖಲೆಗಳಲ್ಲಿ ಮಾತ್ರ ಇದೆ. ವಾಸ್ತವವಾಗಿ ಅವು ಎಲ್ಲಿಯೂ ಸಂಪೂರ್ಣ ಆಗಿಲ್ಲ. ರಾಮಭವನ ಕಾಂಪ್ಲೆಕ್ಸ್ ಆವರಣ ಗೋಡೆಯ ಹೊರಗೆ, ಪಾಸ್ ಪೋರ್ಟ್ ಆಫೀಸ್ ಎದುರು ಇರುವ ಚರಂಡಿಯ ಮೇಲೆ ಸಾಕಷ್ಟು ಪೊದೆ ಬೆಳೆದಿದ್ದ ಕಾರಣ ಅದು ಗೊತ್ತಾಗುತ್ತಿರಲಿಲ್ಲ. ಇತ್ತೀಚೆಗೆ ಅಲ್ಲಿ ಕ್ಲೀನ್ ಮಾಡಿದ ಬಳಿಕ ಮೂರು ಕಡೆ ಅರ್ಧ ನಿರ್ಮಾಣವಾಗಿರುವ ಚರಂಡಿ ಎದ್ದು ಕಾಣುತ್ತದೆ. ಇದೆಲ್ಲ ಸರಿ ಆಗಬೇಕಾದರೆ ಎನು ಮಾಡಬೇಕು?
ಪಾಲಿಕೆಯ ಕಮೀಷನರ್ ಶಾನಾಡಿ ಅಜಿತ್ ಕುಮಾರ್ ಹೆಗ್ಡೆಯವರು ಆಖಾಡಕ್ಕೆ ಇಳಿಯಬೇಕು. ಅವರು ಈ ಹಿಂದೆಯೂ ಪಾಲಿಕೆಯಲ್ಲಿ ಜಂಟಿ ಆಯುಕ್ತ, ಪ್ರಭಾರ ಆಯುಕ್ತರಾಗಿಯೂ ಕರ್ತವ್ಯ ನಿರ್ವಹಿಸಿದವರು. ಅವರಿಗೆ ಮಂಗಳೂರು ಚೆನ್ನಾಗಿ ಗೊತ್ತಿದೆ. ಅವರು ಸಂಬಂಧಪಟ್ಟ ಅಧಿಕಾರಿಗಳನ್ನು, ಇಂಜಿನಿಯರ್ಸ್ ಕರೆದು ಸಭೆ ಮಾಡಬೇಕು. ಹೀಗೆ ಅರ್ಧ ಆಗಿರುವ ಚರಂಡಿಗಳ ಲಿಸ್ಟ್ ತೆಗೆಯಬೇಕು. ಎಲ್ಲೆಲ್ಲಿ ಮ್ಯಾನ್ ಹೋಲ್ ಬಂದು ಸಮಸ್ಯೆ ಆಗಿದೆ. ಎಲ್ಲೆಲ್ಲಿ ಖಾಸಗಿಯವರ ಬಾವಿ, ಜಾಗ ಅಡ್ಡ ಬಂದು ತೊಂದರೆ ಆಗಿದೆ ಎಂದು ವರದಿ ತರಿಸಬೇಕು. ಖಾಸಗಿಯವರಿಗೆ ಟಿಡಿಆರ್ ಕೊಟ್ಟು ಜಾಗ ಸ್ವಾಧೀನ ಮಾಡಲು ಮುಂದಾಗಬೇಕು. ಖಾಸಗಿಯವರು ನಿರಾಕರಿಸಿದರೆ ಶಾಸಕ ಡಿ ವೇದವ್ಯಾಸ ಕಾಮತ್ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಶಾಸಕ ಕಾಮತ್ ಅವರಿಗೆ ಜನರೊಂದಿಗೆ ಸಂವಹನ ಮಾಡುವ ಕಲೆ ಒಲಿದಿದೆ. ನಗರದ ಅಭಿವೃದ್ಧಿಗೆ ಏನು ಮಾಡಬೇಕು ಎಂದು ಅವರಿಗೆ ಗೊತ್ತಿದೆ. ಎಲ್ಲರೂ ಸೇರಿ ಏನಾದರೂ ಮಾಡಿಬಿಡಿ. ಅದು ಬಿಟ್ಟು ಇನ್ನೆಷ್ಟು ದಿನ ಅರ್ಧ ತೋಡು ಇಟ್ಟು ನೀರು ಕಾರಂಜಿಯಾಗುವುದನ್ನು ಕಾಯುವುದು. ಅಲ್ವಾ?
Leave A Reply