ಖಾಸಗಿ ಮಾಧ್ಯಮದವರ ಕ್ಯಾಮೆರಾ ಒಳಗೆ ಬರಬಾರದು ಎನ್ನಲು ವಿಧಾನಸಭೆ ನಿಮ್ಮ ಬೆಡ್ ರೂಮಾ ಸಭಾಧ್ಯಕ್ಷರೇ!!
ಭಾರತೀಯ ಜನತಾ ಪಾರ್ಟಿಯ ಆಡಳಿತ ರಾಜ್ಯದಲ್ಲಿ ಬಂದ ತಕ್ಷಣ ಈ ಬಾರಿ ಆದ ಒಂದು ಅದ್ಭುತ ಬದಲಾವಣೆ ಎಂದರೆ ಖಾಸಗಿ ಮಾಧ್ಯಮದವರನ್ನು ವಿಧಾನಸಭೆಯ ಅಧಿವೇಶನದಿಂದ ದೂರ ಇಟ್ಟಿದ್ದು. ವಿಶ್ವೇಶ್ವರ ಕಾಗೇರಿ ಸ್ಪೀಕರ್ ಆಗುತ್ತಲೇ ಈ ಘೋಷಣೆ ಹೊರಡಿಸಿಬಿಟ್ಟರು. ಅದನ್ನು ಅವರ ಬಾಯಿಂದ ಹೇಳಿಸಿದ್ದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎನ್ನುವ ಪುಕಾರು ಹಬ್ಬಿತು. ಯಡಿಯೂರಪ್ಪನವರು ತಮಗೆ ಮಾಧ್ಯಮದವರನ್ನು ಹೊರಗೆ ಇಡುವ ಮನಸ್ಸಿಲ್ಲ, ಆದರೆ ಏನು ಮಾಡುವುದು ಎಂದು ಅಸಹಾಯಕತೆ ವ್ಯಕ್ತಪಡಿಸಿದ್ರು. ಈ ಬಗ್ಗೆ ತಮ್ಮ ಟ್ವೀಟರ್ ನಲ್ಲಿ ಬರೆಸಿ ನಂತರ ಅಳಿಸಿ ಹಾಕಿದ್ರು. ಅಲ್ಲಿಗೆ ತಾವು ಅಧಿಕಾರಕ್ಕೆ ಬರಲು ಅಧಿವೇಶನದ ಒಳಗೆ ನಡೆದ ಹೈಡ್ರಾಮವನ್ನು ಇಂಚಿಂಚಾಗಿ ಜನರ ಮುಂದೆ ಇಡಲು ಬೇಕಾಗಿದ್ದ ಮಾಧ್ಯಮಗಳನ್ನು ಬಿಜೆಪಿ ಅಧಿಕಾರಕ್ಕೆ ಬಂದ ಕೂಡಲೇ ಏನು ಮಾಡಿತು ನೋಡಿ ಎಂದು ಟ್ರೋಲ್ ತನಕ ಎಲ್ಲವೂ ನಡೆಯಿತು. ನಾನು ಹೇಳುವುದೇನೆಂದರೆ ಸ್ಪೀಕರ್ ಕಾಗೇರಿಯವರಿಗೆ ಇದು ಬೇಡವಿತ್ತು. ಒಬ್ಬರು ಸಭಾಧ್ಯಕ್ಷರಾಗಿ ಅವರು ಶಾಸಕರುಗಳ ಹಳೆ ಬೇಡಿಕೆಯಾಗಿದ್ದದ್ದನ್ನು ಜಾರಿಗೆ ತಂದಿರಬಹುದು. ಯಾಕೆಂದರೆ ಇದು ಕಾಗೇರಿಯವರ ಐಡಿಯಾ ಅಲ್ಲ. ಆದರೆ ಇದು ಜಾರಿಗೆ ತರುವ ಸಮಯವೂ ಅಲ್ಲ. ಅಷ್ಟಕ್ಕೂ ಇವತ್ತಿನ ದಿನಗಳಲ್ಲಿ ಎಲ್ಲವೂ ಪಾರದರ್ಶಕವಾಗಿರುವಾಗ ಖಾಸಗಿ ಮಾಧ್ಯಮದವರನ್ನು ಹೊರಗೆ ಇಡುವುದರಿಂದ ಸಾಧಿಸುವುದಾದರೂ ಏನು? ಒಂದು ವೇಳೆ ಮಾಧ್ಯಮದವರನ್ನು ಒಳಗೆ ಬಿಟ್ಟರೆ ಒಂದು ಅಧಿವೇಶನಕ್ಕೆ ಐವತ್ತು ಲಕ್ಷ ಹೆಚ್ಚು ಖರ್ಚಾಗುತ್ತದೆ ಎಂದಾದರೆ ಆಗ ಬೇರೆ ವಿಷಯ. ಜನರ ತೆರಿಗೆಯ ಹಣ ಉಳಿಸಲು ಈ ಖರ್ಚನ್ನು ಮಾಡುವುದು ಸರಿಯಲ್ಲ ಎಂದು ಹೇಳಬಹುದಿತ್ತು. ಆದರೆ ಈಗ ಹಾಗೇನೂ ಆಗಿಲ್ಲವಲ್ಲ.
ಖಾಸಗಿ ಮಾಧ್ಯಮಗಳ ಕ್ಯಾಮೆರಾದವರು ಒಳಗೆ ಅಧಿವೇಶನ ಆಗುವಾಗ ಬಂದರೆ ಅವರು ಅಧಿವೇಶನದಲ್ಲಿ ಶಾಸಕರು, ಸಚಿವರು ಮಾಡುವ ಕಪಿಚೇಷ್ಟೆಯನ್ನು ತೋರಿಸುತ್ತಾರೆ ಎನ್ನುವ ಆತಂಕದಿಂದ ಹೀಗೆ ನಿರ್ಭಂದವನ್ನು ಹೇರಲಾಗಿದೆ. ಇಲ್ಲಿರುವ ವಿಷಯ ಏನೆಂದರೆ ವಿಧಾನಮಂಡಲದ ಅಧಿವೇಶನದಲ್ಲಿ ಸಚಿವರನ್ನು, ಶಾಸಕರನ್ನು ಗಂಭೀರವಾಗಿ ಚರ್ಚೆಯಲ್ಲಿ ಪಾಲ್ಗೊಳ್ಳಿ ಎಂದು ಹೇಳಬೇಕಾಗಿದ್ದ ಸ್ಪೀಕರ್ ಅವರು ಸಚಿವರು, ಶಾಸಕರು ಬ್ಲೂಫಿಲ್ಮಂ ನೋಡಬಹುದು, ಗುಟ್ಕಾ ತಿನ್ನಬಹುದು, ರಹಸ್ಯದ ಚೀಟಿಯನ್ನು ಆಚೀಚೆ ಮಾಡಬಹುದು, ಕ್ಯಾಮೆರಾ ಎದುರು ಶರ್ಟ್ ಹರಿದು ಕಿರುಚಾಡಬಹುದು ಎನ್ನುವ ಆತಂಕದಿಂದ ಮಾಧ್ಯಮದವರನ್ನು ಒಳಗೆ ಬಿಡುವುದಕ್ಕೆ ನಿರಾಕರಿಸಿದ್ದಾರೆ. ಅಷ್ಟಕ್ಕೂ ಸದನದಲ್ಲಿ ಬ್ಲೂಂ ಫಿಲ್ಮಂ ನೋಡಿ ನಾವು ಚಿತ್ರೀಕರಿಸುತ್ತೇವೆ ಎಂದು ಸಚಿವರುಗಳಿಗೆ ಹೇಳಿದ್ದು ಮಾಧ್ಯಮದವರಾ ಕಾಗೇರಿಯವರೇ? ಗುಟ್ಕಾ ಪ್ಯಾಕೇಟ್ ಬಾಯಿಗೆ ಹಾಕೊಂಡರೆ ಮಾಧ್ಯಮದವರು ಹೊಣೆಯಾ? ಒಟ್ಟಿನಲ್ಲಿ ಸಚಿವರಿಗೆ, ಶಾಸಕರಿಗೆ ಗಂಭೀರತೆಯ ಪಾಠ ಹೇಳಿಕೊಡಬೇಕಾಗಿದ್ದ ಸಭಾಧ್ಯಕ್ಷರು ಹೀಗೆ ನಡೆದುಕೊಂಡದ್ದು ನೋಡಿ ಜನರಿಗೂ ಆಶ್ಚರ್ಯವಾಗುತ್ತಿದೆ. ಇಷ್ಟಕ್ಕೂ ಸಚಿವರ, ಶಾಸಕರ ಘನಂಧಾರಿ ಚರ್ಚೆಗಳನ್ನು ನೋಡಿ ಜನಸಾಮಾನ್ಯರಿಗೆ ಹೊಟ್ಟೆ ತುಂಬುವುದಿಲ್ಲ. ಆದರೆ ಕನಿಷ್ಟ ಕ್ಯಾಮೆರಾಗಳು ಇದೆಯೆಂದ ಮಾತ್ರಕ್ಕೆ ಒಂದು ಹಿಂಜರಿಕೆ ಸದಸ್ಯರಿಗೆ ಇತ್ತು. ಇನ್ನೇನಿದ್ದರೂ ಸರಕಾರದ್ದೇ ಕ್ಯಾಮೆರಾ. ಅವರು ಕೊಟ್ಟಿದ್ದೇ ಕ್ಲಿಪ್ಪಿಂಗ್. ಸದನದ ಒಳಗೆ ಬೇಕಾದರೆ ಎಲ್ ಇಡಿ ಸ್ಕ್ರೀನ್ ಹಾಕಿ ಯಾವ ಸಿನೆಮಾ ನೋಡಿದರೂ ಹೊರಗಿನವರಿಗೆ ಗೊತ್ತಾಗುವುದಿಲ್ಲ. ಅಷ್ಟರಮಟ್ಟಿಗೆ ಕಾಂಗ್ರೆಸ್, ಜೆಡಿಎಸ್ ತಾವು ಸದನದ ಒಳಗೆ ಆಡುವ ಆಟ ಜನರಿಗೆ ಅಸಹ್ಯ ಕೊಡಬಹುದು ಎಂದು ಗೊತ್ತಿದ್ದೂ ಧೈರ್ಯದಿಂದ ಕ್ಯಾಮೆರಾಗಳ ಎದುರು ತಕಥೈ ಕುಣಿಯುತ್ತಿದ್ದರು. ಆದರೆ ಮರ್ಯಾದಾ ಪುರುಷೋತ್ತಮರ ಆರಾಧಕರು ಮಾತ್ರ ಹೀಗೆ ಮಾಡಿದ್ದು ಸೋಜಿಗ!
Leave A Reply