ಹೋಟೇಲಿನ ನೀರಿಗೂ, ಮನೆಯಲ್ಲಿ ಕುಡಿಯುವ ನೀರಿಗೂ ಒಂದೇ ದರ, ತಪ್ಪಲ್ವಾ?
ನೀರಿನ ದರ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸರಾಸರಿ 170% ದಷ್ಟು ಹೆಚ್ಚಳವಾಗಿರುವುದು ನಿಮ್ಮ ಅನುಭವಕ್ಕೆ ಬಂದಿರುತ್ತದೆ. ನಾನು ನೀರಿನ ದರ ಹೆಚ್ಚಳಕ್ಕೆ ವಿರೋಧ ಅಲ್ಲ. ಆದರೆ ಹೆಚ್ಚಿಸಿರುವ ರೀತಿ ಅವೈಜ್ಞಾನಿಕವಾಗಿದೆ. ಅದು ಹೇಗೆ ಎಂದು ಹಿಂದಿನ ಜಾಗೃತ ಅಂಕಣದಲ್ಲಿ ವಿವರಿಸಿದ್ದೇನೆ. ನೀರಿನ ದರ ಏರಿಸುವ ಬದಲು ಪಾಲಿಕೆಗೆ ಬೇರೆ ಮೂಲಗಳಿಂದ ಆದಾಯ ಹೆಚ್ಚಿಸಬಹುದಿತ್ತು ಎನ್ನುವುದು ನನ್ನ ಖಡಾಖಂಡಿತ ಅನಿಸಿಕೆ. ಅದು ಹೇಗೆ ಎನ್ನುವುದನ್ನು ಇವತ್ತಿನ ಸಂಚಿಕೆಯಲ್ಲಿ ವಿವರಿಸುತ್ತೇನೆ.
ಮೊದಲನೇಯದಾಗಿ ಇವರು ನೀರಿನ ದರ ಎಲ್ಲರಿಗೂ ಏಕಪ್ರಕಾರವಾಗಿ ಹೆಚ್ಚಿಸಿದ್ದಾರೆ. ಕಮರ್ಶೀಯಲ್ ಗಳಿಗೆ, ಕೈಗಾರಿಕೆಗಳಿಗೆ, ಉತ್ಪಾದನಾ ಸಂಸ್ಥೆಗಳಿಗೆ, ಹೋಟೇಲ್, ಮಾಲ್, ಸರ್ವಿಸ್ ಅಪಾರ್ಟ್ ಮೆಂಟ್ ಗಳಿಗೆ ಎಲ್ಲದಕ್ಕೂ ಏಕ ಪ್ರಕಾರವಾಗಿ ಏರಿಸಿದರೆ ಅನ್ಯಾಯವಾಗುವುದು ಯಾರಿಗೆ? ಸಂಶಯವೇ ಇಲ್ಲ. ಜನಸಾಮಾನ್ಯರಿಗೆ. ಉದಾಹರಣೆಗೆ ಜನರಿಗೆ ಹತ್ತು ರೂಪಾಯಿ ಮತ್ತು ಉಳಿದವರಿಗೂ ಹತ್ತು ರೂಪಾಯಿ ಏರಿಸುವ ಬದಲು ಜನರಿಗೆ ಮೂರು ರೂಪಾಯಿ ಮತ್ತು ವ್ಯವಹಾರಕ್ಕೆ ನೀರು ಬಳಸುವವರಿಗೆ 17 ರೂಪಾಯಿ ಹೆಚ್ಚಿಸಿದ್ದರೆ ಆಗ ಜನಸಾಮಾನ್ಯರಿಗೆ ಹೊರೆಯಾಗುತ್ತಿರಲಿಲ್ಲ. ಹೀಗೆ ಮಾಡದೇ ವ್ಯಾಪಾರಕ್ಕೆ ನೀರು ಬಳಸುವವರಿಗೆ ಮತ್ತು ಕುಡಿಯಲು ನೀರು ಬಳಸುವವರಿಗೆ ಒಂದೇ ಪ್ರಮಾಣದಲ್ಲಿ ಹೆಚ್ಚಳವಾಗಿದೆ.
ಇನ್ನು ಜನಸಾಮಾನ್ಯರಿಗೆ ಒಂದು ರೂಪಾಯಿ ಕೂಡ ಹೆಚ್ಚಳ ಮಾಡದೇ ಬೇರೆ ವಿವಿಧ ಮೂಲಗಳಿಂದ ಹೇಗೆ ಆದಾಯ ತರಬಹುದಿತ್ತು ಎನ್ನುವುದನ್ನು ವಿವರಿಸುತ್ತೇನೆ. ಪಾಲಿಕೆಯಲ್ಲಿ ಕಟ್ಟಡ ಪರವಾನಿಗೆ ಶುಲ್ಕ ಎನ್ನುವುದನ್ನು ಸಂಗ್ರಹ ಮಾಡುತ್ತಾರೆ. ಒಬ್ಬ ಬಿಲ್ಡರ್ ಕಟ್ಟಡ ಕಟ್ಟುವ ಮೊದಲು ಇಂತಿಷ್ಟು ಹಣ ಕಟ್ಟಿ ಅನುಮತಿ ಪಡೆಯಬೇಕಾಗಿರುತ್ತದೆ. ಅದು ಎಷ್ಟು ಜುಜುಬಿ ಇದೆ ಎಂದಾದರೆ ಅದು ಬಿಲ್ಡರ್ ಗಳಿಗೆ ಸಂತೆಯಲ್ಲಿ ಚರುಂಬುರಿ ತಿಂದಷ್ಟೇ ಸಲೀಸು. ಅದನ್ನು ಪಾಲಿಕೆ ಹೆಚ್ಚಳ ಮಾಡಬಹುದಿತ್ತು. ಯಾಕೆಂದರೆ ಬಿಲ್ಡರ್ ಗಳು ಕಟ್ಟಡ ಕಟ್ಟುವುದು ಅಪ್ಪಟ ವ್ಯವಹಾರಿಕ ಉದ್ದೇಶದಿಂದ. ಅಲ್ಲಿ ಮಾಲ್ ಗಳಾದರೆ, ವಸತಿ ಸಂಕೀರ್ಣಗಳಾದರೆ ಬಿಲ್ಡರ್ ಗಳಿಗೆ ಹಣ ಬರುತ್ತದೆ. ಹಾಗಿರುವಾಗ ಪಾಲಿಕೆಗೆ ಒಂದಿಷ್ಟು ಹಣ ಕಟ್ಟಿದರೆ ಬಿಲ್ಡರ್ ನ ಗಂಟು ಕರಗುವುದಿಲ್ಲ. ಆದರೆ ಪಾಲಿಕೆ ಆಡಳಿತ ಪಕ್ಷಗಳು ಬಿಲ್ಡರ್ ಗಳಿಗೆ ಒಂದು ರೂಪಾಯಿ ಹೆಚ್ಚು ಹೊರೆ ಹಾಕುವುದೆಂದರೆ ತಮ್ಮ ಮನೆಯವರಿಗೆನೆ ಬರೆ ಹಾಕಿದ ಹಾಗೆ ಎಂದು ಅಂದುಕೊಂಡಿದ್ದಾರೆ. ಒಂದು ವೇಳೆ ನೀವು ವೈಯಕ್ತಿಕವಾಗಿ ನಿಮ್ಮ ಹಿರಿಯರಿಂದ ಬಳುವಳಿಯಾಗಿ ಬಂದ ಜಾಗದಲ್ಲಿ ಸ್ವಂತ ವಾಸಕ್ಕೆಂದು ಮನೆ ಕಟ್ಟುತ್ತಿದ್ದಿರಿ ಎಂದಾದರೆ ನಿಮಗೆ ಹೆಚ್ಚಳ ಮಾಡುವುದು ಬೇಡಾ. ಆದರೆ ಅದೇ ಆರ್ಥಿಕ ಲಾಭವನ್ನು ಕೋಟಿಯಲ್ಲಿ ಎಣಿಸುವ ಬಿಲ್ಡರ್ ಗಳಿಗೆ ಯಾಕೆ ಇವರು ಶುಲ್ಕವನ್ನು ಹೆಚ್ಚಿಸಬಾರದು. ಪಾಲಿಕೆಗೆ ಆದಾಯ ಅಲ್ವಾ? ಇನ್ನು ಅಪ್ಪಟ ವ್ಯವಹಾರಿಕ ದೃಷ್ಟಿಯನ್ನೇ ಇಟ್ಟುಕೊಂಡು ಅಗಲ, ಉದ್ದವಾಗಿ ಬೆಳೆದಿರುವ ಹೋರ್ಡಿಂಗ್ ಪ್ರಪಂಚದಲ್ಲಿ ಇರುವ ತಿಮಿಂಗಿಲಗಳಿಗೆ ಇವರು ಶುಲ್ಕ ಹೆಚ್ಚಳ ಮಾಡಬಹುದಿತ್ತಲ್ಲ, ಮಾಡಿಲ್ಲ.
ಮೂರನೇಯದಾಗಿ ಅನೇಕ ಟೆಲಿಕಾಂ ಕಂಪೆನಿಗಳು ನಮ್ಮ ಚೆಂದದ ರಸ್ತೆಗಳನ್ನು ಅಗೆದು ಅದರ ಕೆಳಗೆ ತಮ್ಮ ಕೇಬಲ ವೈಯರ್ ಗಳನ್ನು ಹಾಕುತ್ತಾರೆ. ಅದಕ್ಕೆ ಅವರು ಕಟ್ಟುವುದು ಕೇವಲ ನೆಲ ಅಗೆದಾಗ ಕಟ್ಟಬೇಕಾಗಿರುವ ಶುಲ್ಕ ಮಾತ್ರ. ಅದರ ನಂತರ ನಮ್ಮ ನೆಲದ ಅಡಿಯಲ್ಲಿ ಅವುಗಳ ಕೇಬಲ ಇರುತ್ತದೆಯಲ್ಲ, ಅದಕ್ಕೆ ಪಾಲಿಕೆ ಯಾಕೆ ನೆಲಬಾಡಿಗೆ ಎಂದು ವಸೂಲಿ ಮಾಡಬಾರದು. ಪಾಲಿಕೆ ತಮ್ಮ ಜಾಗದಲ್ಲಿ ಒಬ್ಬ ಜನಸಾಮಾನ್ಯ ವ್ಯಕ್ತಿ ಗೂಡಂಗಡಿ ಇಟ್ಟುಕೊಂಡು ಹೊಟ್ಟೆಪಾಡಿಗೆ ಜೀವನ ಮಾಡುತ್ತಿದ್ದರೆ ಸಮಯಕ್ಕೆ ಸರಿಯಾಗಿ ಹಣ ವಸೂಲಿ ಮಾಡುತ್ತಿರಬೇಕಾದರೆ ಯಾಕೆ ಶ್ರೀಮಂತ ಟೆಲಿಕಾಂ ಕಂಪೆನಿಗಳಿಂದ ಬಾಡಿಗೆ ಕೇಳಬಾರದು. ಪಾಲಿಕೆಗೆ ಆದಾಯ ತರುವ ಇನ್ನೂ ಕೆಲವು ಐಡಿಯಾಗಳನ್ನು ಮತ್ತು ಹಣ ಉಳಿಸುವ ಯೋಜನೆಗಳು ಇನ್ನೂ ಇವೆ. ಅದನ್ನು ನಾಳೆ ಚರ್ಚಿಸೋಣ
Leave A Reply