ಯಾರದ್ದೋ ನಿರ್ಲಕ್ಷ್ಯ, ಇನ್ಯಾರೋ ತಲೆ ಕೊಡಬೇಕು ಎನ್ನುವುದಕ್ಕೆ ಉದಾಹರಣೆ ಪಚ್ಚನಾಡಿ!!
ಪಚ್ಚನಾಡಿಯ ದುರಂತಕ್ಕೆ ಸಂಶಯವೇ ಬೇಡಾ. ಅದು ಪಾಲಿಕೆಯ ಕಳೆದ ಅವಧಿಯಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷ ಎನ್ನುವುದು ದಾಖಲೆಯೊಂದಿಗೆ ಗ್ಯಾರಂಟಿಯಾಗಿದೆ. ಆ ಬಗ್ಗೆ ಯಾರು ನನ್ನೊಂದಿಗೆ ವಾದ ಮಾಡಲು ಬಂದರೂ ನನ್ನ ಬಳಿ ಸಾಕ್ಷ್ಯಗಳಿವೆ ಎಂದು ಕೆಲವು ದಿನಗಳ ಮೊದಲು ವಾಹಿನಿಯೊಂದರಲ್ಲಿ ಬಹಿರಂಗವಾಗಿ ಚಾಲೆಂಜ್ ನೀಡಿದ್ದೆ. ಅದನ್ನು ಇವತ್ತು ನಿಮಗೆ ದಾಖಲೆ ಸಮೇತ ಹೇಳಲಿದ್ದೇನೆ.
ಮೊದಲನೇಯದಾಗಿ ಮಂಗಳೂರು ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿಗಳ ವಿಷಯಕ್ಕೆ ಬರೋಣ. ಕಳೆದ ವರ್ಷದ ಫೆಬ್ರವರಿಯಲ್ಲಿಯೇ ಅವರು ಪಚ್ಚನಾಡಿಯಲ್ಲಿ ಆಗಲೇಬೇಕಾದ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ವರದಿ ನೀಡಿದ್ದರು. ಅವರು ಒಟ್ಟು ಏಳು ಅಂಶಗಳನ್ನು ಪಟ್ಟಿ ಮಾಡಿ ಪಾಲಿಕೆಯ ಆಡಳಿತಕ್ಕೆ ಕೊಟ್ಟಿದ್ದರು. ಅದರಲ್ಲಿ ಏಳು ಬರೆಯುವ ಅವಶ್ಯಕತೆ ಇಲ್ಲ. ಬೇಕಾದರೆ ಒಂದು ಪಾಯಿಂಟ್ ತೆಗೆದುಕೊಳ್ಳೋಣ. ಅದೇನೆಂದರೆ ಘನತ್ಯಾಜ್ಯ ವಿಲೇವಾರಿ ಘಟಕದ ಕೆಳಭಾಗದಲ್ಲಿ ಕಾಂಕ್ರೀಟ್ ತಡೆಗೋಡೆ ನಿರ್ಮಾಣ ಕಾಮಗಾರಿ ಆಗಲೇಬೇಕು ಎಂದು ಕೂಡ ಹೇಳಿದ್ದರು. ಅದು ಆಗಲಿಲ್ಲ. ಈಗ ಪರಿಸ್ಥಿತಿ ಏನಾಗಿದೆ ಎಂದು ನಮಗೆಲ್ಲರಿಗೂ ಗೊತ್ತು.
ಅದರ ನಂತರ ಮಂಗಳೂರು ಮಹಾನಗರ ಪಾಲಿಕೆಯ ಪರಿಸರ ಅಭಿಯಂತರರು ಒಂದು ವರದಿ ಕೊಡುತ್ತಾರೆ. ಅದು ಅವರು ಕೊಟ್ಟಿದ್ದು ಜನವರಿಯಲ್ಲಿ. ಅವರು ಆಗಲೇ ಈಗ ಆಗಿರುವ ದುರಂತದ ಬಗ್ಗೆ ಮುನ್ಸೂಚನೆ ಕೊಟ್ಟಿದ್ದರು. ಆದರೂ ಪಾಲಿಕೆಯಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರಕಾರ ಕ್ಯಾರೇ ಅನ್ನಲ್ಲಿಲ್ಲ. ಇನ್ನು ಪಚ್ಚನಾಡಿಯ ಡಂಪಿಂಗ್ ಯಾರ್ಡ್ ಅಭಿವೃದ್ಧಿಗಾಗಿ ಕೇಂದ್ರ ಸರಕಾರ 14 ನೇ ಹಣಕಾಸು ಯೋಜನೆಯಡಿಯಲ್ಲಿ ಡಂಪಿಂಗ್ ಯಾರ್ಡ್ ಗಾಗಿಯೇ ನೀಡಿದ ಹಣವನ್ನು ನಮ್ಮ ಪಾಲಿಕೆ ಆಡಳಿತ ಡಂಪಿಂಗ್ ಯಾರ್ಡ್ ಅಭಿವೃದ್ಧಿ ಮಾಡಲೇ ಇಲ್ಲ. ಪಚ್ಚನಾಡಿಯ ಆ ಭಾಗದಿಂದ ಇಬ್ಬರು ಪಾಲಿಕೆಯ ಸದಸ್ಯರು ಮೇಯರ್ ಆಗಿ ಆಡಳಿತ ಮಾಡಿದ್ರು ಪಚ್ಚನಾಡಿಯ ಡಂಪಿಂಗ್ ಯಾರ್ಡ್ ಕಡೆ ತಿರುಗಿ ನೋಡಲಿಲ್ಲ. ಡಂಪಿಂಗ್ ಯಾರ್ಡ್ ಸರಿ ಮಾಡಿಕೊಳ್ಳಿ ಎಂದು ಹಣ ಕೊಟ್ಟರೆ ಅದನ್ನು ರಸ್ತೆ ನಿರ್ಮಾಣ ಮಾಡಿ ವೋಟ್ ಬ್ಯಾಂಕ್ ರಾಜಕಾರಣ ಮಾಡಿದವರು ಮೇಯರ್ ಆಗಿದ್ದ ಕವಿತಾ ಸನಿಲ್. ಇನ್ನೊರ್ವ ಮೇಯರ್ ಆಗಿದ್ದ ಭಾಸ್ಕರ್ ಕೆ ಅವರು ಕೂಡ ಪಚ್ಚನಾಡಿಯ ಅಭಿವೃದ್ಧಿಗೆ ಗಮನ ಹರಿಸಲೇ ಇಲ್ಲ.
ಇನ್ನು 150 ಟನ್ ತ್ಯಾಜ್ಯವನ್ನು ಮಾತ್ರ ಸಂಸ್ಕರಿಸುವ ಸಾಮರ್ತ್ಯ ಇರುವ ಘಟಕದಲ್ಲಿ ದಿನಕ್ಕೆ 400 ಟನ್ ತ್ಯಾಜ್ಯ ಬಂದು ಬೀಳುತ್ತದೆ. ಅದನ್ನು ಸಂಸ್ಕರಿಸಲಾಗದೇ ಹಾಗೆ ಡಂಪ್ ಮಾಡುವುದರಿಂದ ಆಗಿರುವ ಸಮಸ್ಯೆ ಅತ್ಯಂತ ಹೆಚ್ಚು ತೊಂದರೆಯನ್ನು ಉಂಟು ಮಾಡಿರುವುದು. ಮತ್ತೊಂದೆಡೆ ಆ 400 ಟನ್ ತ್ಯಾಜ್ಯ ಎಲ್ಲಿಂದ ಬಂದು ಬೀಳುತ್ತದೆ ಎನ್ನುವ ಪ್ರಶ್ನೆ ಕೂಡ ಉದ್ಭವಿಸುತ್ತದೆ. ನಮ್ಮ ಪಾಲಿಕೆ ವ್ಯಾಪ್ತಿಯಲ್ಲಿ ಹೆಚ್ಚೆಂದರೆ 200 ಟನ್ ಸರಾಸರಿ ತ್ಯಾಜ್ಯ ಬರಬೇಕು. ಒಂದಿಷ್ಟು ಹೆಚ್ಚು ಎಂದುಕೊಂಡರೂ 220 ಟನ್ ಮೀರುವುದು ಸಾಧ್ಯವಿಲ್ಲ. ಹಾಗಿರುವಾಗ 350 ರಿಂದ 400 ಟನ್ ಬರುತ್ತದೆ ಎಂದರೆ ಎಲ್ಲಿಂದ ಆಕಾಶದಿಂದ ಬಂದು ಬೀಳುತ್ತದಾ ಎನ್ನುವ ಪ್ರಶ್ನೆ ಬರುತ್ತದೆ. ಸಂಶಯವೇ ಇಲ್ಲ. ಉಳ್ಳಾಲದಲ್ಲಿ ಡಂಪಿಂಗ್ ಯಾರ್ಡ್ ಮಾಡಲು ಅಲ್ಲಿ ದಶಕಗಳಿಂದ ಅಧಿಕಾರದಲ್ಲಿರುವ ಹಾಲಿ ಶಾಸಕರಿಗೆ, ಮಾಜಿ ಸಚಿವರಿಗೆ ಸಾಧ್ಯವೇ ಆಗಿಲ್ಲ. ಯುಟಿ ಖಾದರ್ ಅವರ ಕ್ಷೇತ್ರದ ತ್ಯಾಜ್ಯ ಬಂದು ಪಚ್ಚನಾಡಿಗೆ ಹಾಕುವುದು ನಿಯಮಬಾಹಿರ. ಒಂದು ವೇಳೆ ನಮ್ಮಲ್ಲಿ ಅವಕಾಶ ಇಲ್ಲ. ತಂದು ಹಾಕುತ್ತೇವೆ ಎಂದು ಜಿಲ್ಲಾಧಿಕಾರಿಯವರಿಂದ ಒಪ್ಪಿಗೆ ಪಡೆದರೂ ಅದಕ್ಕೆ ಪಾಲಿಕೆಗೆ ಶುಲ್ಕ ಕಟ್ಟಬೇಕು. ಆದರೆ ಇಲ್ಲಿಯ ತನಕ ಉಳ್ಳಾಲ ನಗರಸಭೆಯಿಂದ 45 ಲಕ್ಷ ರೂಪಾಯಿ ಶುಲ್ಕ ಬಾಕಿ ಇದೆ. ಅದನ್ನು ಪಾಲಿಕೆ ವಸೂಲಿ ಮಾಡಲಿಲ್ಲ. ಇನ್ನು ಮೂಲ್ಕಿ, ಬಂಟ್ವಾಳದಿಂದ ಕೂಡ ತ್ಯಾಜ್ಯ ಬಂದು ಬೀಳುತ್ತದೆ. ಆದರೆ ಕಳೆದ ಅವಧಿಯಲ್ಲಿ ಪಾಲಿಕೆ ಕಾಂಗ್ರೆಸ್, ಎಂಟರಲ್ಲಿ ಏಳು ಕಾಂಗ್ರೆಸ್ ಶಾಸಕರು ಇದ್ದರಲ್ಲ, ಯಾರ ಕಸ ಯಾರ ಕ್ಷೇತ್ರದಲ್ಲಿ ಹಾಕಿದ್ರು ಕೇಳುವವರಿರಲಿಲ್ಲ.
ಈ ಎಲ್ಲಾ ಸಂಗತಿಗಳು ಸೇರಿ ಮಂದಾರ ಎನ್ನುವ ಪ್ರದೇಶವನ್ನು ಇತಿಹಾಸದ ಪುಟಕ್ಕೆ ಸೇರಿಸಿಬಿಟ್ಟಿವೆ. ಇನ್ನು ಇದನ್ನೆಲ್ಲಾ ಸರಿ ಮಾಡಲು ಕನಿಷ್ಟ 120 ಕೋಟಿ ಬೇಕು. ಅದನ್ನು ರಾಜ್ಯ ಸರಕಾರ ಕೊಡದಿದ್ದರೆ ಬಿಜೆಪಿ ಶಾಸಕರು ವಿಪಕ್ಷಗಳ ಬಾಯಿಂದ ಕೇಳಬೇಕಾಗುತ್ತದೆ. ಒಟ್ಟಿನಲ್ಲಿ ಯಾರದ್ದೋ ತಪ್ಪಿಗೆ ಇನ್ಯಾರೋ ಅನುಭವಿಸಬೇಕು. ಈ ಎಲ್ಲದರ ನಡುವೆ ಚುನಾವಣೆಗೆ ನಿಂತು ಸೋತು ಮುಖಭಂಗ ಅನುಭವಿಸಿ ಸೋತ ಕಾರ್ಪೋರೇಟರ್ ಅನಿಸಿಕೊಳ್ಳುವುದಕ್ಕಿಂತ ಚುನಾವಣೆಗೆ ನಿಲ್ಲಲ್ಲ, ಪಕ್ಷ ಕಟ್ಟುತ್ತೇನೆ ಎಂದು ಹೊರಟ ಕವಿತಾ ಸನಿಲ್ ಜಾಣ್ಮೆ ನೋಡಿ ಕಾಂಗ್ರೆಸ್ಸಿಗರೇ ನಗುತ್ತಿದ್ದಾರೆ!!
Leave A Reply