ಟಿಕೆಟ್ ಕೊಡದಿದ್ದ ಬಸ್ಸುಗಳನ್ನು ಆರ್ ಟಿ ಒ ವಶಕ್ಕೆ ಪಡೆದುಕೊಳ್ಳುತ್ತದೆ!
ಮಂಗಳೂರಿನ ಸಿಟಿ ಬಸ್ ಗಳಲ್ಲಿ (ನಗರ ಮತ್ತು ಗ್ರಾಮಾಂತರ) ಟಿಕೆಟ್ ಕೊಡುವುದು ಕಡ್ಡಾಯವಾಗಿದೆ. ಯಾವ ಬಸ್ಸಿನಲ್ಲಿ ಟಿಕೆಟ್ ಕೊಡುವುದಿಲ್ಲವೋ ಆ ಬಸ್ಸಿನ ವಿರುದ್ಧ ನೀವು ದೂರು ಕೊಡಬಹುದು. ಆದರೆ ಯಾರು ಕೂಡ ಈ ಬಗ್ಗೆ ದೂರು ಕೊಡುವುದಿಲ್ಲ, ಏಕೆಂದರೆ ಯಾರಿಗೂ ಅದರ ಮಹತ್ವ ಗೊತ್ತಿಲ್ಲ. ಜನರಿಗೆ ಬಿಡಿ, ಬಸ್ಸಿನ ಕಂಡಕ್ಟರ್ ಗಳಿಗೂ ತಾವು ಯಾಕೆ ಟಿಕೇಟ್ ಕೊಡಬೇಕು ಎಂದು ಗೊತ್ತಿಲ್ಲ. ಹೆಚ್ಚಿನ ಕಂಡಕ್ಟರ್ ಗಳು ಅದೊಂದು ಹೆಚ್ಚುವರಿ ಕಿರಿಕಿರಿಯ ಹೊರೆ ಎಂದು ಅಂದುಕೊಂಡಿದ್ದಾರೆ. ಈ ಟಿಕೆಟ್ ವೆಂಡಿಂಗ್ ಮಿಶಿನ್ ಕೈಯಲ್ಲಿ ಹಿಡಿದುಕೊಳ್ಳುವುದು ಎಂದರೆ ಚಿಕ್ಕ ಮಗುವನ್ನು ಕಂಕುಳಲ್ಲಿ ಹಿಡಿದುಕೊಳ್ಳುವುದು ಎನ್ನುವುದು ಅವರ ಅಭಿಪ್ರಾಯ. ಹೇಗೂ ನಾವು ಟಿಕೆಟ್ ಕೊಡದಿದ್ದರೂ, ಕೊಟ್ಟರೂ ಏನೂ ಬದಲಾವಣೆ ಆಗುವುದಿಲ್ಲ, ಆದ್ದರಿಂದ ಒಂದು ಎಕ್ಸಟ್ರಾ ಕೆಲಸ ಯಾಕೆ ಮಾಡಬೇಕು ಎನ್ನುವುದು ಅವರ ಧೋರಣೆ. ಆದರೆ ಹೀಗೆ ಟಿಕೆಟ್ ಕೊಡುವ ಅಭ್ಯಾಸ ಮರೆತಿದ್ದ ಕೆಲವು ಬಸ್ಸುಗಳನ್ನು ಪೊಲೀಸರು ವಶಕ್ಕೆ ಪಡೆದು ಅವರಿಗೆ ಬುದ್ಧಿ ಕಲಿಸಿದ್ದಾರೆ. ಅಷ್ಟಕ್ಕೂ ಟಿಕೆಟ್ ಕೊಡುವ ಕ್ರಮ ಮಂಗಳೂರು ಸಿಟಿ ಬಸ್ ಗಳಲ್ಲಿ ನಿಂತದ್ದೇಕೆ?ಮೊದಲನೇಯದಾಗಿ ಒಂದು ಕಾಲದಲ್ಲಿ ಹಿಂದೆ ಬಸ್ಸುಗಳನ್ನು ಅದರ ಮಾಲೀಕರೇ ನಡೆಸಿಕೊಂಡು ಹೋಗುತ್ತಿದ್ದರು. ಅಂದರೆ ಅವರಿಗೆ ಟಿಕೆಟ್ ಎಷ್ಟು ಹರಿಯಲ್ಪಡುತ್ತದೆಯೋ ಅಷ್ಟು ಆದಾಯ ಹೋಗುತ್ತಿತ್ತು. ಅವರಿಗೆ ತಮ್ಮ ಬಸ್ಸಿನಲ್ಲಿ ನಿತ್ಯ ಸರಾಸರಿ ಇಷ್ಟು ಪ್ರಯಾಣಿಕರು ಪ್ರಯಾಣಿಸುತ್ತಾರೆ ಎನ್ನುವ ಅಂದಾಜು ಇತ್ತು. ತಾವು ಆಫೀಸಿನಲ್ಲಿ ಕುಳಿತುಕೊಂಡೇ ತಮ್ಮ ಮನಸ್ಸಿನ ಸಿಸಿ ಕ್ಯಾಮೆರಾದಿಂದ ಬಸ್ಸು ಈಗ ಎಲ್ಲಿದೆ, ಎಷ್ಟು ಜನ ಬಸ್ಸಿನಲ್ಲಿ ಇದ್ದಾರೆ ಎಂದು ಲೆಕ್ಕ ಹಾಕುವ ಕಲೆ ಗೊತ್ತಿತ್ತು. ಅನೇಕ ಬಸ್ಸುಗಳನ್ನು ಹೊಂದಿದ್ದ ಸಂಸ್ಥೆಗಳು ಮಂಗಳೂರಿನಲ್ಲಿ ಚಾಲಕ, ನಿರ್ವಾಹಕರಿಗೆ ತಿಂಗಳ ಸಂಬಳ ಕೊಟ್ಟು ಕೆಲಸಕ್ಕೆ ಇಟ್ಟುಕೊಂಡಿದ್ದರು. ಆದರೆ ಬರುಬರುತ್ತಾ ಈ ನಿರ್ವಾಹಕರು, ಚಾಲಕರು ಆಯಾ ದಿನ ಸಿಕ್ಕಿದ ಆದಾಯವನ್ನು ಹೆಚ್ಚು ಕಡಿಮೆ ತೋರಿಸಲು ಶುರು ಮಾಡಿದ ನಂತರ ಅನೇಕ ಬಸ್ಸು ಮಾಲೀಕರು ನಷ್ಟದ ಕಡೆ ಮುಖ ಮಾಡಲು ಶುರು ಮಾಡಿದರು. ಇಷ್ಟು ಆದಾಯ ಬರುತ್ತೆ ಎಂದು ಗೊತ್ತಿದೆ, ಯಾಕೆ ಕಾರಣಗಳನ್ನು ಕೊಟ್ಟು ಸುಳ್ಳು ಹೇಳುತ್ತಿದ್ದಿಯಾ ಎಂದು ಮಾಲೀಕ-ನಿರ್ವಾಹಕ ನಡುವೆ ಗಲಾಟೆ ಕೂಡ ನಡೆದಿರುವುದುಂಟು. ಒಂದೆರಡು ಬಸ್ಸು ಮಾತ್ರ ಇಟ್ಟುಕೊಂಡಿದ್ದ ಮಾಲೀಕರು ಬಸ್ಸಿನ ಸಾಲ, ಡಿಸೀಲ್, ಕಂಡಕ್ಟರ್, ಚಾಲಕ ಸಂಬಳ, ಇನ್ಯೂರೆನ್ಸ್, ಬಿಡಿಭಾಗಗಳು ಹೀಗೆ ಬೇರೆ ಖರ್ಚುಗಳನ್ನು ಹೊಂದಿಸುವಾಗ ಈ ನಡುವೆ ಆದಾಯ ಕೂಡ ಸೋರಿಕೆಯಾಗಲು ಶುರುವಾದರೆ ಏನೂ ಮಾಡುವುದು ಎಂದು ಆಲೋಚಿಸುವಾಗಲೇ ಶುರುವಾದದ್ದು ಹೊಸ ಲೆಕ್ಕಾಚಾರ. ನೀವು ನನಗೆ ಇಷ್ಟು ಎಂದು ದಿನ ಹಣ ಕೊಟ್ಟರೆ ಸಾಕು, ಅದರ ಮೇಲೆ ಎಷ್ಟು ಬಂದರೂ ನಿಮಗೆ, ಕಡಿಮೆ ಬಂದರೂ ನಿಮಗೆ ಎನ್ನುವ ಲೆಕ್ಕ ಶುರುವಾಯಿತು. ಇದರಿಂದ ಬಸ್ ಮಾಲೀಕರು ಸೇಫ್ ಆದರು. ಕಂಡಕ್ಟರ್ , ಡ್ರೈವರ್ ಚುರುಕಾದರು. ಟಿಕೆಟ್ ಮೂಲೆ ಸೇರಿತು, ಯಾರಾದರೂ ಕೈ ತೋರಿಸಿದರೆ ತಕ್ಷಣ ನಿಲ್ಲುವುದು, ಜನ ಹೆಚ್ಚು ಸಿಗುತ್ತಾರೆ ಎನ್ನುವ ಕಡೆ ಬೇರೆ ಸ್ಟಾಪ್ ಗಳನ್ನು ಜಂಪ್ ಮಾಡಿ ತುಂಬಾ ಹೊತ್ತು ನಿಲ್ಲುವುದು, ಲೇಡಿಗೋಶನ್ ನಿಂದ ವಿಶ್ವಭವನದ ತನಕ ಗಂಟೆಗೆ 20 ಕಿಲೋ ಮೀಟರ್ ವೇಗದಲ್ಲಿ ನಿಧಾನವಾಗಿ ಚಲಿಸುವುದು ಎಲ್ಲಾ ಶುರುವಾಯಿತು. ಏಕೆಂದರೆ ಎಷ್ಟು ಹೆಚ್ಚು ತಾನು ಸಂಪಾದಿಸಿದರೆ ಅಷ್ಟು ತನಗೆ ಲಾಭ ಎಂದು ನಿರ್ವಾಹಕ ನಿರ್ಧಾರ ಮಾಡಿ ಆಗಿತ್ತು. ಇದೆಲ್ಲಾ ಸಮಸ್ಯೆ ಶುರುವಾಗಿ ಈಗ ಒಂದಿಷ್ಟು ವರ್ಷಗಳಾಗಿವೆ. ಅದರ ಸೈಡ್ ಇಫೆಕ್ಟ್ ಆಗಿ ಶುರುವಾದದ್ದೇ ಟಿಕೆಟ್ ಕೊಡುವ ಸಂಪ್ರದಾಯಕ್ಕೆ ಎಳ್ಳು ನೀರು ಬಿಡಲಾಯಿತು. ಹೇಗೂ ದಿನಕ್ಕೆ ಇಷ್ಟು ಎಂದು ಹಣ ಕೊಡಲು ಇದೆ, ಹಾಗಿರುವಾಗ ಪುನ: ವೆಂಡಿಂಗ್ ಮಿಶಿನ್ ಖರೀದಿಗೆ ಹಣ ಯಾಕೆ ಖರ್ಚು ಮಾಡುವುದು ಎಂದು ಅಂದುಕೊಂಡ ಕಂಡಕ್ಟರ್ ಗಳು ಅದಕ್ಕೆ ಬಾಯ್ ಬಾಯ್ ಹೇಳಿದರು.
ಅಷ್ಟಕ್ಕೂ ಟಿಕೆಟ್ ಕೊಡದಿದ್ರೆ ಜನರಿಗೆ ಏನು ನಷ್ಟ? ಈ ಬಗ್ಗೆ ಹಿಂದೆನೂ ಒಮ್ಮೆ ಹೇಳಿದ್ದೆ. ನೀವು ವೆಂಡಿಂಗ್ ಮಿಶಿನ್ ನಲ್ಲಿ ಹೊರಬರುವ ಟಿಕೆಟ್ ತೆಗೆದುಕೊಳ್ಳದಿದ್ದರೆ ಒಂದು ವೇಳೆ ನೀವು ಪ್ರಯಾಣಿಸುವ ಬಸ್ಸು ಅಪಘಾತಕ್ಕೆ ಒಳಗಾದರೆ ಆಗ ನಿಮಗೆ ಪರಿಹಾರ ಬೇಕು ಎಂದಾದರೆ ನಿಮ್ಮ ಬಳಿ ಏನು ಸಾಕ್ಷ್ಯ ಇದೆ. ನೀವು ಅಪಘಾತಕ್ಕೆ ಒಳಗಾದ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಿರಿ ಎಂದು ನಿಮ್ಮ ಬಳಿ ಸಾಕ್ಷ್ಯ ಇಲ್ಲದೆ ಹೋದರೆ ನಿಮಗೆ ಯಾಕೆ ಪರಿಹಾರ ಕೊಡಬೇಕು ಎಂದು ಕೂಡ ಇನ್ಸೂರೆನ್ಸ್ ಕಂಪೆನಿಯವರು ಯೋಚಿಸುತ್ತಾರೆ. ಇದರಿಂದ ನೀವು ಕಳೆದುಕೊಳ್ಳುವುದು ಏನು ಎಂದು ನಿಮಗೆ ಬೇರೆ ಹೇಳಬೇಕಿಲ್ಲ. ಏನೂ, ಇಲ್ಲಿಂದ ಇಲ್ಲಿಗೆ ಪ್ರಯಾಣಿಸುವಾಗ ಆಕ್ಸಿಡೆಂಟ್ ಆಗುತ್ತಾ ಎನಿಸಬಹುದು. ಆದರೆ ಗ್ರಹಚಾರ ನಿಮ್ಮ ಕೈಯಲ್ಲಿಯೇ ಇದೆ ಎಂದು ನಿಮಗೆ ಗ್ಯಾರಂಟಿ ಇದ್ದರೆ ಅದು ನಿಮ್ಮ ಧೈರ್ಯ!
Leave A Reply