ಮುಂದಿನ ಆರೋಗ್ಯ, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷರ ಮೇಲೆ ಹೊಸ ಜವಾಬ್ದಾರಿ ಕಾಯುತ್ತಿದೆ, ಮಾಡುತ್ತೀರಾ?
ನೀವು ಒಂದು ಉದ್ಯಮವನ್ನು ನಡೆಸುತ್ತಿದ್ದಿರಿ ಎಂದುಕೊಳ್ಳೋಣ. ನೀವು ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಉದ್ದಿಮೆ ನಡೆಸುವವರಾದರೆ ಅದಕ್ಕೆ ಉದ್ದಿಮೆ ಪರವಾನಿಗೆ ಎನ್ನುವುದನ್ನು ಮಾಡಿಕೊಳ್ಳಬೇಕು. ಅದನ್ನು ಪ್ರತಿ ವರ್ಷ ನವೀಕರಣ ಮಾಡಬೇಕು. ಆದರೆ ನಮ್ಮ ಪಾಲಿಕೆಯಲ್ಲಿ ಇನ್ನು 32% ದಷ್ಟು ವ್ಯಾಪಾರಿಗಳು ತಮ್ಮ ಟ್ರೇಡ್ ಲೈಸೆನ್ಸ್ ನವೀಕರಣ ಮಾಡಿಕೊಂಡಿಲ್ಲ. ಇದರ ಅರ್ಥ ಮಂಗಳೂರು ಮಹಾನಗರದಲ್ಲಿ ಕಾನೂನು ಅನುಮತಿ ಇಲ್ಲದೆ ವ್ಯಾಪಾರ ನಡೆಯುತ್ತಿದೆ. ಒಂದು ಕಡೆ ಉದ್ದಿಮೆ ಪರವಾನಿಗೆ ನವೀಕರಣ ಆಗುತ್ತಿಲ್ಲ ಎನ್ನುವುದು ನಿಜವಾದರೆ ಮತ್ತೊಂದೆಡೆ ಉದ್ದಿಮೆ ಪರವಾನಿಗೆ ಮಾಡಿಸಿಕೊಳ್ಳದೆಯೇ ವ್ಯಾಪಾರ ವಹಿವಾಟು ಮಾಡಲಾಗುತ್ತಿದೆ. ಹಾಗಾದರೆ ಇದನ್ನು ನೋಡಿಕೊಳ್ಳಬೇಕಾದವರು ಯಾರು?
ಪಾಲಿಕೆಯ ಆರೋಗ್ಯ ವಿಭಾಗದ ಹೆಲ್ತ್ ಇನ್ಸಪೆಕ್ಟರ್ಸ್ ಎಂದೆನಿಸಿಕೊಂಡವರು ಹಾಗಾದರೆ ಏನು ಮಾಡುತ್ತಿದ್ದಾರೆ. ಅವರುಗಳಿಗೆ ಮಧ್ಯಾಹ್ನದ ನಂತರ ಪಾಲಿಕೆಗೆ ಬಂದರೆ ಸಾಕು ಎನ್ನುವ ಸಡಿಲಿಕೆ ಇದೆ. ಅವರು ಬೆಳಗ್ಗೆ ತಮಗೆ ನಿಗದಿಪಡಿಸಿರುವ ವಾರ್ಡುಗಳಲ್ಲಿ ಸಂಚರಿಸಿ ಯಾವ ಉದ್ಯಮ, ಅಂಗಡಿಗಳು ಪರವಾನಿಗೆ ಮಾಡಿಸಿಲ್ಲ, ಯಾರ ಅಂಗಡಿ, ಉದ್ಯಮ ಪರವಾನಿಗೆ ನವೀಕರಣ ಮಾಡಿಲ್ಲ ಎನ್ನುವುದನ್ನು ಪರಿಶೀಲಿಸಬೇಕು. ಹೆಲ್ತ್ ಇನ್ಸಪೆಕ್ಟರ್ ಗಳಿಗೆ ಸರಕಾರದ ಗುರುತಿನ ಚೀಟಿ ಇದೆ. ಅವರಿಗೆ ಸೌಲಭ್ಯ ಇದೆ. ಇವರು ಕೇಳಿದ್ರೆ ತೋರಿಸಲ್ಲ ಎಂದು ವ್ಯಾಪಾರಿಗಳು ಹೇಳುವಂತಿಲ್ಲ. ಆದರೂ ಇವರು ಕೇಳಲ್ಲ. ಅದಕ್ಕೊಂದು ಉದಾಹರಣೆ ದಾಖಲೆ ಸಮೇತ ಕೊಡುತ್ತೇನೆ.
ಮಂಗಳೂರಿನ ಹಂಪನಕಟ್ಟೆಯಲ್ಲಿರುವ ಕುನೀಲ್ ಕಾಂಪ್ಲೆಕ್ಸ್ ಕಟ್ಟಡದಲ್ಲಿ ಒಂದು ಅಂಗಡಿ ಇದೆ. ಅಂಗಡಿ ನಂಬ್ರ 13-3-276/13. ಈ ಅಂಗಡಿಯ ಉದ್ದಿಮೆ ಪರವಾನಿಗೆ ನವೀಕರಣ ಆದದ್ದು 2009-10 ರಂದು ಕೊನೆಯ ಬಾರಿಗೆ. ಅದರ ನಂತರ ಹಾಗೆ ಪರವಾನಿಗೆ ಇಲ್ಲದೆ ವ್ಯಾಪಾರ ಮಾಡುತ್ತಿದ್ದಾರೆ. ಬಟ್ಟೆಯ ವ್ಯಾಪಾರ ನಡೆಯುತ್ತಿದೆ. ಹತ್ತು ವರ್ಷದಿಂದ ನವೀಕರಣ ಮಾಡದಿದ್ದರೂ ಆ ಅಂಗಡಿಗೆ ಒಂದೇ ಒಂದು ನೋಟಿಸ್ ಪಾಲಿಕೆಯಿಂದ ಹೋಗಿಲ್ಲ. ಕೆಲವು ಕಡೆ ಒಂದು ವರ್ಷ ಬಾಕಿ ಇರುವ ವ್ಯಾಪಾರಿಗಳಿಗೆ ನೋಟಿಸ್ ಕಳುಹಿಸಿರುವ ಆರೋಗ್ಯ ವಿಭಾಗ ತಮಗೆ “ಲಾಭ” ಇರುವ ಅಂಗಡಿಗಳಿಗೆ ಹತ್ತು ವರುಷವಾದರೂ ನೋಟಿಸ್ ಬಿಟ್ಟಿಲ್ಲ. ಇದು ಕೇವಲ ಒಂದು ಉದಾಹರಣೆ. ಇಂತಹ ಅಸಂಖ್ಯಾತ ಅಂಗಡಿಗಳು ಮಂಗಳೂರಿನಲ್ಲಿವೆ.
ಇದನ್ನು ಸರಿಪಡಿಸುವುದು ಹೇಗೆ?
ಮಂಗಳೂರು ಮಹಾನಗರ ಪಾಲಿಕೆಯ ಕಮೀಷನರ್ ಅಜಿತ್ ಕುಮಾರ್ ಹೆಗ್ಡೆಯವರು ಆರೋಗ್ಯ ವಿಭಾಗದವರಿಗೆ ನೋಟಿಸ್ ನೀಡಬೇಕು. ಅದರಲ್ಲಿ “ಮುಂದಿನ 15 ದಿನಗಳೊಳಗೆ ನೀವು ನಿಮ್ಮ ವ್ಯಾಪ್ತಿಯ ವಾರ್ಡಿನಲ್ಲಿ ಯಾವುದೇ ಅಂಗಡಿ ಅಥವಾ ಉದ್ದಿಮೆಯವರು ಪರವಾನಿಗೆ ಮಾಡಿಸಿದ್ದಾರಾ ಅಥವಾ ನವೀಕರಣ ಮಾಡಿಸಿಲ್ಲವಾ ಎನ್ನುವುದನ್ನು ಪರಿಶೀಲಿಸಬೇಕು. ಮಾಡಿಸಿಲ್ಲವಾದರೆ ತಕ್ಷಣ ಮಾಡಿಸಬೇಕು. 15 ದಿನಗಳ ಬಳಿಕ ತಾನು ಯಾವುದೇ ವಾರ್ಡಿನಲ್ಲಿ ರೇಡ್ ಮಾಡಿದಾಗ ಅಲ್ಲಿ ಯಾವುದೇ ಉದ್ದಿಮೆ ಪರವಾನಿಗೆ ಇಲ್ಲದ್ದು ಅಥವಾ ನವೀಕರಣ ಆಗದ್ದು ಕಂಡುಬಂದರೆ ಆ ವಾರ್ಡಿಗೆ ಸಂಬಂಧಪಟ್ಟ ಹೆಲ್ತ್ ಇನ್ಸಪೆಕ್ಟರ್ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಬೇಕು. ಹದಿನೈದು ದಿನಗಳ ಬಳಿಕ ಪಾಲಿಕೆಯ ಪರಿಷತ್ ಸಭೆ ಇದ್ದರೆ ಆಗ ಮೇಯರ್, ಉಪಮೇಯರ್ ಆಯ್ಕೆ ಬಳಿಕ ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಆಯ್ಕೆ ಕೂಡ ನಡೆಯುತ್ತದೆ. ಅದರಲ್ಲಿ ಆರೋಗ್ಯ ಮತ್ತು ಸಾಮಾಜಿಕ ಸ್ಥಾಯಿ ಸಮಿತಿಯ ಅಧ್ಯಕ್ಷರಾಗುವ ಮನಪಾ ಸದಸ್ಯರು ಕೂಡ ಕಮೀಷನರ್ ಅವರ ಜೊತೆ ಸೇರಿ ರೇಡ್ ಮಾಡಿದರೂ ಅಥವಾ ಪ್ರತ್ಯೇಕವಾಗಿ ಆದರೂ ರೇಡ್ ಮಾಡುವ ಮೂಲಕ ಸರಕಾರದ ಬೊಕ್ಕಸಕ್ಕೆ ಬರುವ ಆದಾಯವನ್ನು ತಪ್ಪಿಸಿ ವ್ಯಾಪಾರ ಮಾಡುವವರನ್ನು ಹಿಡಿಯಬೇಕು. ಅದೇ ರೀತಿ ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕೂಡ ಕ್ರಮ ತೆಗೆದುಕೊಳ್ಳಬೇಕು. ಸಣ್ಣ ಮಾಲ್ ಗೆ ಹೋದರೆ ಕನಿಷ್ಟ ಒಂದೆರಡಾದರೂ ಇಂತಹ ಅಂಗಡಿಗಳು ಇದ್ದೇ ಇರುತ್ತವೆ. ದೊಡ್ಡ ಮಾಲ್ ಗಳಿಗೆ ಹೋದರೆ ಈ ಸಂಖ್ಯೆ ಜಾಸ್ತಿ ಇರುತ್ತದೆ. ಹೊಸ ಸ್ಥಾಯಿ ಸಮಿತಿ ಅಧ್ಯಕ್ಷರುಗಳು ಮುಂದಾಗುತ್ತಾರಾ?
Leave A Reply