ಹೈಕೋರ್ಟ್ ಕೊಟ್ಟಿರುವ ಹೊಸ ಆದೇಶ ಫ್ಲಾಟ್ ಮಾಲೀಕರಲ್ಲಿ ಹೊಸ ಆಶಾಭಾವನೆ ಮೂಡಿಸಿದೆ!!
ಕರ್ನಾಟಕ ರಾಜ್ಯ ಹೈಕೋರ್ಟ್ ಬಹಳ ಪ್ರಮುಖ ಆದೇಶವನ್ನು ನೀಡಿದೆ. ವಸತಿ ಸಮುಚ್ಚಯದಲ್ಲಿ ಮನೆ ಖರೀದಿಸಿದವರು ಅದರ ಬಿಲ್ಡರ್ ಅಥವಾ ಪ್ರಮೋಟರ್ ವಿರುದ್ಧ ಯಾವುದೇ ದೂರುಗಳನ್ನು ನೀಡಿದ್ದಲ್ಲಿ ಸರಕಾರಿ ಅಧಿಕಾರಿಗಳು ಅದಕ್ಕೆ ಸೂಕ್ತ ಸ್ಪಂದನೆಯನ್ನು ನೀಡಬೇಕು ಎಂದು ಕೋರ್ಟ್ ಆದೇಶ ನೀಡಿದೆ. ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಹಾಗೂ ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರ್ ಈ ಆದೇಶವನ್ನು ನೀಡಿದ್ದಾರೆ. ನಿಜಕ್ಕೂ ಇದು ಬಹಳ ಪ್ರಮುಖವಾದ ಆದೇಶ.
ಎಷ್ಟೋ ಬಾರಿ ಮೊದಲು ಕೊಟ್ಟ ಭರವಸೆ ಅಥವಾ ನಕ್ಷೆಗಿಂತ ಎಷ್ಟೋ ಕಳಪೆಯಾಗಿ ಫ್ಲಾಟುಗಳು ನಿರ್ಮಾಣವಾಗಿರುತ್ತದೆ. ಇನ್ನೊಂದು ಪ್ರಮುಖ ಅಂಶ ಮತ್ತೆ ಹೇಳುತ್ತೇನೆ. ಇದು ಬೆಂಗಳೂರಿನ ಸಿಟಿ ಫ್ಲಾಟ್ ಓನರ್ ವೆಲ್ ಫೇರ್ ಎಸೋಸಿಯೇಶನ್ ಅವರು ದಾಖಲಿಸಿದ ಕಂಪ್ಲೇಟ್ ಅನ್ನು ವಿಚಾರಣೆ ಮಾಡಿ ನಂತರ ಕೊಟ್ಟಿರುವ ತೀರ್ಪು ಆಗಿದ್ದರೂ ಕೂಡ ಇದು ಬಹಳ ದೂರಗಾಮಿ ಪರಿಣಾಮವನ್ನು ಬೀರಿದೆ. ಇದನ್ನು ನಾನು ಫ್ಲಾಟ್ ಮಾಲೀಕರ ಮತ್ತು ಬಿಲ್ಡರ್ ಅಥವಾ ಪ್ರಮೋಟರ್ಸ್ ನಡುವೆ ಆಗಿರುವ ಅಥವಾ ಆಗಲಿರುವ ತಿಕ್ಕಾಟಕ್ಕೆ ಸಂಬಂಧಪಟ್ಟಂತೆ ಬಹಳ ಪ್ರಮುಖವಾದ ಮೈಲಿಗಲ್ಲು ಎಂದೇ ಅಂದುಕೊಂಡಿದ್ದೇನೆ. ಆ ನಿಟ್ಟಿನಲ್ಲಿ ಜನಜಾಗೃತಿ ನಡೆಯಬೇಕು. ಖರೀದಿದಾರರು ಕಣ್ಣುಮುಚ್ಚಿ ಒಂದು ಬಿಲ್ಡರ್ ಅಥವಾ ಪ್ರಮೋಟರ್ಸ್ ಮೇಲೆ ವಿಶ್ವಾಸ ಇಟ್ಟು ಅವರ ವಸತಿ ಸಂಕೀರ್ಣದಲ್ಲಿ ಮನೆ ಖರೀದಿಸಬಾರದು. ಪ್ರಮೋಟರ್ಸ್ ಎಷ್ಟೇ ದೊಡ್ಡ ಕುಳ ಇರಲಿ ಅವರು ಖರೀದಿದಾರರ ಹಣದ ಮೇಲೆ ಮಾತ್ರ ಕಣ್ಣಿಟ್ಟಿರುತ್ತಾರೆ ವಿನ: ಅವರಿಗೆ ಬೇರೆ ಏನೂ ಪ್ರೀತಿ, ವಿಶ್ವಾಸ ಇರುವುದಿಲ್ಲ. ಒಬ್ಬ ಗ್ರಾಹಕ ಕಂಪ್ಲೀಶನ್ ಸರ್ಟಿಫೀಕೇಟ್ ಇರುವ ಫ್ಲಾಟ್ ಖರೀದಿಸುವುದಾದರೆ ಮಾತ್ರ ಅವನಿಗೆ ಬ್ಯಾಂಕಿನಲ್ಲಿ ಲೋನ್ ಸಿಗುತ್ತದೆ. ಆದರೆ ಅನೇಕ ಬಾರಿ ಏನಾಗುತ್ತದೆ ಎಂದರೆ ಗ್ರಾಹಕನಿಗೆ ತಾನು ಖರೀದಿಸುವ ಫ್ಲಾಟಿಗೆ ಅದರ ಬಿಲ್ಡರ್ ಲೋನ್ ವ್ಯವಸ್ಥೆ ಮಾಡಿಕೊಡುತ್ತಾರೆ. ಬ್ಯಾಂಕಿನ ಮ್ಯಾನೇಜರ್ ಕೂಡ ಅಂತಹ ಬಿಲ್ಡರ್ ಮಾರುವ ಫ್ಲಾಟಿನ ಗ್ರಾಹಕರಿಗೆ ಸುಲಭವಾಗಿ ಲೋನ್ ಕೊಡುತ್ತಾರೆ. ಇದರಿಂದ ಏನಾಗುತ್ತದೆ ಎಂದರೆ ಸಾಲಗೀಲ ಮಾಡಿ ಫ್ಲಾಟ್ ಖರೀದಿಸುವ ಮೇಲ್ ಮಧ್ಯಮ ವರ್ಗದವರು ಕೂಡ ಒಂದು ವಿಷಯವನ್ನು ನಂಬಿರುತ್ತಾರೆ, ಅದೇನೆಂದರೆ ವಸತಿ ಸಮುಚ್ಚಯದ ಎಲ್ಲಾ ದಾಖಲೆ ಪತ್ರಗಳು ಕೂಡ ಸರಿ ಇರುತ್ತವೆ ಎನ್ನುವುದು. ಆದರೆ ಅನೇಕ ಸಂದರ್ಭದಲ್ಲಿ ವಿವಿಧ ಕಾರಣಗಳಿಗೆ ಅಂತಹ ಫ್ಲಾಟುಗಳಿಗೆ ಕಂಪ್ಲೀಶನ್ ಸರ್ಟಿಫಿಕೇಟ್ ಸಿಕ್ಕಿರುವುದಿಲ್ಲ. ಮಂಗಳೂರಿನಲ್ಲಿ ಹೀಗೆ ಕಂಪ್ಲೀಶನ್ ಸರ್ಟಿಫಿಕೇಟ್ ಸಿಗದೇ ಜನರು ಫ್ಲಾಟ್ ಖರೀದಿಸಿರುವ 70% ವಸತಿ ಸಮುಚ್ಚಯಗಳು ಇವೆ. ಒಂದು ವಿಷಯ ನಿಮಗೆ ನೆನಪಿರಲಿ. ತಾತ್ಕಾಲಿಕ ಡೋರ್ ನಂಬ್ರ ಸಿಕ್ಕಿದೆ ಎಂದರೆ ಆ ಫ್ಲಾಟ್ ಕಂಪ್ಲೀಶನ್ ಸರ್ಟಿಫಿಕೇಟ್ ಪಡೆದುಕೊಂಡಿದೆ ಎಂದು ಅರ್ಥವಲ್ಲ. ಬ್ಯಾಂಕ್ ಮ್ಯಾನೇಜರ್ಸ್ ಪ್ಲಸ್ ಬಿಲ್ಡರ್ ಪ್ಲಸ್ ಪಾಲಿಕೆ ಭ್ರಷ್ಟ ನಗರ ಯೋಜನಾ ಅಧಿಕಾರಿಗಳ ಅಪವಿತ್ರ ಮೈತ್ರಿ ನಿಮ್ಮನ್ನು ಬಲೆಗೆ ಕೆಡವಿ ಬಿಟ್ಟಿರುತ್ತದೆ.
ಆರ್ ಬಿಐ ನಿಯಮಗಳ ಪ್ರಕಾರ ಒಂದು ಫ್ಲಾಟ್ ಗೆ ಕಟ್ಟಡ ಪ್ರವೇಶ ಅನುಮತಿ ಪತ್ರ ಮತ್ತು ಕಟ್ಟಡ ನಿರ್ಮಾಣ ಅನುಮತಿ ಪತ್ರ ಇದ್ದರೆ ಮಾತ್ರ ಅಂತಹ ವಸತಿ ಸಮುಚ್ಚಯದಲ್ಲಿ ಫ್ಲಾಟ್ ಖರೀದಿ ಮಾಡುವವರಿಗೆ ಲೋನ್ ಸೌಲಭ್ಯ ಕೊಡಬಹುದು. ಆದರೆ ಈಗ ಹಾಗೆ ಆಗುತ್ತಿಲ್ಲ. ಒಂದು ವೇಳೆ ನೀವು ಕಂಪ್ಲೀಶನ್ ಸರ್ಟಿಫಿಕೇಟ್ ಇಲ್ಲದ ಬಿಲ್ಡಿಂಗ್ ನಲ್ಲಿ ಖರೀದಿ ಮಾಡಿ ನಂತರ ನಿಯಮಾವಳಿಗಳು ಏನಾದರೂ ಹೆಚ್ಚು ಕಡಿಮೆ ಬಂದು ನಿಮ್ಮ ಕಟ್ಟಡವನ್ನು ಕೆಡವಬೇಕು ಎಂದು ಸೂಚನೆ ಬಂದರೆ ಅಥವಾ ನೀವು ದಂಡ ಕಟ್ಟಿ ಕಂಪ್ಲೀಶನ್ ಸರ್ಟಿಫೀಕೇಟ್ ಪಡೆಯಬೇಕೋ ಎಂದು ಬಂದರೆ ಆಗ ಏನು ಮಾಡುತ್ತೀರಿ. ಆದ್ದರಿಂದ ಎಷ್ಟೇ ಪ್ರತಿಷ್ಠಿತ ಬಿಲ್ಡರ್ ಆದರೂ ಅವರ ವಸತಿ ಸಮುಚ್ಚಯದಲ್ಲಿ ಮನೆ ಖರೀದಿಸುವವರಾದರೂ ಒಮ್ಮೆ ಯೋಚನೆ ಮಾಡಿ. ಮುಂದೆ ತೊಂದರೆಯಾದರೆ ಯಾವ ಬಿಲ್ಡರ್ ಕೂಡ ಬರುವುದಿಲ್ಲ!
Leave A Reply